ಆಟಗಾರರು ಇತ್ತಂಡವಾಗಿ ಸಮಸಂಖ್ಯೆಯಲ್ಲಿರುವರು. ಆಟಗಾರರ ಸಂಖ್ಯೆಗನುಗುಣವಾಗಿ ಅಂಗಳದಲ್ಲಿ ಸಾಕಷ್ಟು ದೊಡ್ಡದಾದ ವರ್ತುಳ ರೇಖೆಯೆಳೆಯುವರು. ಒಂದು ಪಕ್ಷದವರೆಲ್ಲರೂ ಒಳಪ್ರವೇಶಿಸುವರು. ಇನ್ನೊಂದು ಪಕ್ಷದ ಒಬ್ಬನು ಕುಂಟುತ್ತ ಒಳ ಪ್ರವೇಶಿಸಿ ಒಳಗಿದ್ದವರನ್ನು ಮುಟ್ಟಲು ಯತ್ನಿಸುವನು. ಮುಟ್ಟುವವರು ಒಳಗೆ ಕಾಲೂರಬಾರದು, ಗೆರೆ ಮೆಟ್ಟಬಾರದು. ಮುಟ್ಟಿಸಿಕೊಳ್ಳುವವರು ಗೆರೆ ಮೆಟ್ಟಬಾರದು; ಗೆರೆಯ ಹೊರಗೆ ಹೋಗಬಾರದು. ಮುಟ್ಟಿಸಿಕೊಂಡವರು ಗೆರೆಯ ಹೊರಗೆ ಹೋಗಬೇಕು. ಮುಟ್ಟುವವರು ದಣಿದ ಕೂಡಲೆ ಹೊರಗೆ ಹೋಗುವರು. ಇನ್ನೊಬ್ಬರು ಮುಟ್ಟಲು ಬರುವರು. ಒಳಗಿನ ಎಲ್ಲರೂ ಮುಗಿದ ಮೇಲೆ ಹೊರಗಿದ್ದವರು ಒಳಸೇರುವರು, ಇನ್ನೊಂದು ಪಕ್ಷ ಮುಟ್ಟಲು ಬರುವದು. ಇಲ್ಲಿ ವೇಳೆಯ ನಿರ್ಬಂಧವಿಲ್ಲ. ಮುಟ್ಟಿಸಿಕೊಳ್ಳದ ಪಕ್ಷ ಗೆದ್ದಂತೆ ಎಂದು ನಿರ್ಧರಿಸುವರು. ಎರಡೂ ಪಕ್ಷದಲ್ಲಿಯೂ ಮುಟ್ಟುವವರು ತೀರಿದ ಮೇಲೆ, ಮುಟ್ಟಿಸಿಕೊಳ್ಳುವವರು ಉಳಿದರೆ ಆಟ ಸಮವಾಗುವದು.