ಅಂಗಳದಲ್ಲಿ ಚೂಪಾದ ಕಟ್ಟಿಗೆಯ ತುಂಡಿನಿಂದ ಗೆರೆ ಕೊರೆಯಬೇಕು. ಆಟಕ್ಕೆ ಉಪಯೋಗಿಸುವದು ಮಾವಿ ಹಣ್ಣಿನ ಚಪ್ಪಟೆ ಗೊರಟು, ಹಂಚಿನ ತುಂಡು, ಇಲ್ಲವೆ ಆಣೆಕಾಯಿ(ಕಣ್ಣೆಕಾಯಿ) ಗಳಿಗೆ ಬೆಟ್ಟೆಯೆನ್ನುವರು, ಗೆರೆ ಮುಟ್ಟಬಾರದು.ಗೆರೆಯ ಮೇಲೆ ಬೆಟ್ಟೆ ಬೀಳಬಾರದು. ಒಂಟಿಕಾಲಲ್ಲಿ ಹಾರಿ ಮೆಟ್ಟಲಾಗದಷ್ಟು ದೂರ ಬೆಟ್ಟೆ ಸಿಡಿಯಬಾರದು. ಈ ಪ್ರಸಂಗಗಳಲ್ಲಿ ಆಟ ಬಿಡಬೇಕು. 

ಮೊದಲ ಹಂತದಲ್ಲಿ ಇದನ್ನು ಗೊರಟಾಟದಂತೆಯೇ ಆಡಬೇಕು ಒಂದನೆಯ ಮನೆಯಿಂದ ಪ್ರಾರಂಭಿಸಿ ನಾಲ್ಕನೆಯ ಮನೆಗೆ ತಂದು ಹೊರಗೆ ತೂರಿ ಮೆಟ್ಟಬೇಕು. ಎರಡನೆಯ ಹಂತಕ್ಕೆ ಜಾರುಗುಪ್ಪೆ ಯೆನ್ನುವರು. ಒಂದನೆಯ ಮನೆಯಲ್ಲಿ ಬೆಟ್ಟೆ ಚೆಲ್ಲಿ ಎಡಗಾಲಲ್ಲಿ ಮೆಟ್ಟುವರು. ಆಗ ಬಲಗಾಲು ಹೊರಗೇ ಇರಬೇಕು. ಬೆಟ್ಟೆಯನ್ನು ಎಡಗಾಲಿನಿಂದ ಮುಂದಿನ ಮನೆಗೆ ಸರಿಸಬೇಕು. ಬೆಟ್ಟೆ ಒಂದನೆಯ ಮನೆಯನ್ನು ದಾಟಿದ ಕೂಡಲೆ ಬಲಗಾಲನ್ನು ಅಲ್ಲಿಗೆ ತಂದು, ಎಡಗಾಲನ್ನು ಮುಂದಿನ ಮನೆಯಲ್ಲಿಯೂ ಬಲಗಾಲನ್ನು ಅದರ ಹಿಂದಿನ ಮನೆಯಲ್ಲಿಯೂ ಇಡಬೇಕು. ಒಂದೇ ಮನೆಯಲ್ಲಿ ಎರಡೂ ಕಾಲು ಇರಬಾರದು. ಈ ರೀತಿ ಬೆಟ್ಟೆ ಸರಿಸುತ್ತ ನಾಲ್ಕನೆಯ ಮನೆಯಿಂದ ಹೊರಗೆ ತಂದು ಮೆಟ್ಟಬೇಕು.

ಮೂರನೆಯ ಹಂತದಲ್ಲಿ ಕೆಪ್ಪೆ: ಒಂದನೆಯ ಮನೆಯಲ್ಲಿ ಬೆಟ್ಟೆ ತೂರಬೇಕು. ಎರಡೂ ಕಾಲಿನ ಪಾದಗಳನ್ನು ಒಂದಕ್ಕೊಂದು ಹತ್ತರ ಹತ್ತರ ಗಟ್ಟಿಯಾಗಿ ಜೋಡಿಸಿಕೊಂಡು ತುಸು ಹಾರಿ ಬೆಟ್ಟೆ ಮೆಟ್ಟಬೇಕು. ಅದೇ ಸ್ಥಿತಿಯಲ್ಲಿದ್ದುಕೊಂಡೆ ಬೆಟ್ಟೆಯನ್ನು ಹೊರಗೆ ತೂರಬೇಕು. ಕಾಲು ಬಿಟ್ಟು ಹೋದರೆ ಆಟ ಬಿಡಬೇಕು.

ನಾಲ್ಕನೆಯ ಹಂತಕ್ಕೆ ರಾಜಾ:ಎಡಗಾಲ ಮೇಲೆ ಬಲಗಾಲಿಟ್ಟು ಕೃಷ್ಣಭಂಗಿಯಲ್ಲಿ ನಿಂತುಕೊಳ್ಳಬೇಕು. ಬಲಗಾಲ ತುದಿ ನೆಲಕ್ಕೆ ತಾಗಬಾರದು.ಸ್ಥಿತಿ ಬದಲಾಯಿಸದೆ ಮೇಲಿನಂತೆ ಆಡಬೇಕು.

ಕೊನೆಯ ಹಂತ ಎಡಗಾಲು: ಗೊರಟಾಟದಂತೆ ಇಲ್ಲಿಯೂ ಕುಂಟುತ್ತ ಆಡಬೇಕು. ಆದರೆ ಎಡಗಾಲನ್ನು ಎಡಗೈಯಲ್ಲಿ ಹಿಡಿದು ಬೆಟ್ಟೆ ಮೆಟ್ಟುವುದನ್ನೂ ತೂರುವುದನ್ನೂ ಮಾಡಬೇಕು. ಹೀಗೆ ನಾಲ್ಕು ಮನೆಗಳನ್ನು ಆಡಬೇಕು. ಎಲ್ಲ ಹಂತವನ್ನೂ ಸರಿಯಾಗಿ ಆಡಿ ಮುಗಿಸಿದವ ಒಂದು ಮನೆ ಕಟ್ಟುತ್ತಾನೆ.