ಅಂಗಳದಲ್ಲಿ ಹೀಗೆ ಗೆರೆ ಎಳೆದು ಬೆಟ್ಟೆಯಿಂದ ಆಡುತ್ತಾರೆ. ಗಡಿ ರೇಖೆಗಳಿಗೆ ಮೂಕೆ ಗೆರೆ ಎನ್ನುತ್ತಾರೆ. ನಿಯಮಗಳೆಲ್ಲ “ಗುಯ್ಟಾಟದಂತೆ. ಐದನೆಯ ಮನೆ ಗುಯ್ಟಾಟದಲ್ಲಿ ಬಾವಿಯಿದ್ದಂತೆ. ಆಡುವವನ ಬೆಟ್ಟೆ ಇಲ್ಲಿ ಬಿದ್ದರೆ ಆಡಿದ ಮನೆಯಷ್ಟೇ ಅಲ್ಲ ಕಟ್ಟಿದ ಮನೆಯೂ ಹೋಗುತ್ತದೆ. ಅವನು ಆಟ ಬಿಡುವನು. ಅವನ ಪಕ್ಷದವರು ಹೊಸದಾಗಿ ಆಟ ಪ್ರಾರಂಭಿಸುವರು. ಐದನೆಯ ಮನೆಗೆ ಬುಳಬುಳಿಯೆಂದೂ ಜೆಬ್ಲಿ ಅಥವಾ ಸಾಮ್ರಾಜ್ಯವೆಂದೂ ಹೇಳುತ್ತಾರೆ. ಎಲ್ಲ ಮನೆ ಕಟ್ಟಿ ಆದ ಮೇಲೆ ಸಾಮ್ರಾಜ್ಯ ಕಟ್ಟಬೇಕು. ಬೆಟ್ಟೆ ಚೆಲ್ಲುವಾಗ ನೆಟ್ಟಗೆ ನಿಂತಿರಬೇಕು. ಇಲ್ಲೆ ಮನೆ ಕಟ್ಟುವಾಗಲೆಲ್ಲ ಬಲಗಾಲ ಹೆಬ್ಬರಳಿಗೆ ಬೆಟ್ಟೆ ಸಿಕ್ಕಿಸಿ, ಕಣ್ಣು ಮುಚ್ಚಿ ಅಂಗಳಕ್ಕೆ ಹೊಡೆಯಬೇಕು. ಕಣ್ಮುಚ್ಚುಗ್ರಾಣಿಯನ್ನು ಕೆಲವರು ಕಟ್ಟುತ್ತಾರೆ.