ಅಂಗಳದಲ್ಲಿ ನಿಂತು ಒಂದನೆಯ ಮನೆಗೆ ಒಂದನೆಯ ಮನೆಗೆ ಬೆಟ್ಟೆ ಚೆಲ್ಲಬೇಕು. ಬೆಟ್ಟೆ ಇರುವ ಮನೆಯನ್ನು ಮೆಟ್ಟದೆ ಎರಡನೆಯ ಮನೆಗೆ ಹಾರಬೇಕು. ಹಾರಿದಾಗ ಎರಡನೆಯ ಮನೆಯಲ್ಲಿ ಒಂದು ಕಾಲು ಮಾತ್ರ ನೆಲಕ್ಕಿರಬೇಕು. ಮುಂದಿನ ಮನೆಗಳಿಗೆ ಕುಂಟುತ್ತಹೋಗಿ, ಬೆಟ್ಟೆ ಚೆಲ್ಲಿದ ಎದುರು ಮನೆಗೆ ಬಂದು, ಬೆಟ್ಟೆಯನ್ನು ಕೈಯಲ್ಲಿ ಹೆಕ್ಕಿ, ಅಂಗಳಕ್ಕೆ ಬಂದು ಕಾಲೂರಬೇಕು. ಹೀಗೆ ಒಂದರ ನಂತರ ಇನ್ನೊಂದರಂತೆ ಹದಿನಾರು ಮನೆಗಳನ್ನೂ ಆಡಬೇಕು. ಒಂಬತ್ತರಿಂದ ಹದಿನಾರು ಮನೆಗಳ ಬೆಟ್ಟಿಯನ್ನು ಬಲಗಡೆಯ ಸಾಲಿನ ಮನೆಗಳಿಂದ ಎತ್ತಬೇಕು.

ಎರಡನೆಯ ಹಂತದಲ್ಲಿ ಬೇರೆ ಬೇರೆ ಅಂಗಗಳ ಮೇಲೆ ಬೆಟ್ಟೆ ಇತ್ತು, ಮನೆಗಳನ್ನು ಸುತ್ತಬೇಕು.

೧.ಎತ್ತಿನ ಕಾಲಿನ ಕಿಡಕಣಿ (ಕಿರಿ) ಬೊಟ್ಟಿಗೆ ಸಿಕ್ಕಿಸಿ ಒಂದನೆಯ ಮನೆಯಿಂದ ಕುಂಟುತ್ತ ನಡೆದು ಅಂಗಳಕ್ಕೆ ಬರುವುದು.

೨.ಬೆಟ್ಟೆಯನ್ನು ಎಡಗಾಲ ಮೇಲಿಟ್ಟು, ಎರಡು ಕಾಲನ್ನು ಊರಿ ನಡೆಯುತ್ತಾ ಹೋಗುವದು.

೨.ಮುರ್ ಮುಷ್ಠಿಯಿಂದ ಬಲಗೈ ಮುಷ್ಠಿಕಟ್ಟಿ, ಹೆಬ್ಬೆರಳ ಹತ್ತಿರ ಇಟ್ಟು, ಕುಂಟುತ್ತಾ ತಿರುಗುವದು.

೪.ಬಂಗೈ (ಮರಚ್ ಕೈ) ಮೇಲೆ ಬೆಟ್ಟೆ ಇಟ್ಟು

೫.ತೋಳ್ ಗೆಂಟಿನ ಮೇಲೆ ಇಟ್ಟು

೬.ತಲೆಯಮೇಲೆ ಇಟ್ಟು ಇಟ್ಟು ಮೂರುಬಾರಿ ತಿರುಗಬೇಕು. ಆಗ ಹಲ್ಲು ಕಾಣಿಸಿದರೆ ಔಟು.

೭.ಬಲಗಣ್ಣಿನ ಮೇಲೆ ಇಟ್ಟು ಸುತ್ತಾಡಬೇಕು.

ಪ್ರತಿ ಬಾರಿಯೂ ಎಲ್ಲ ಮನೆಗಳನ್ನು ಅಪ್ರದಕ್ಷಣೆಯಾಗಿ ಸುತ್ತಿ, ಅಂಗಳಕ್ಕೆ ಬರಬೇಕು. ಕೊನೆಯ ಕ್ರಿಯೆಯಲ್ಲಿ ಕಣ್ಣು ಮುಚ್ಚಿ ನಡೆಯಬೇಕಾದ್ದರಿಂದ ಆಟಗಾರ ’ಎಮಡಾ’ ಎಂದು ಕೇಳುತ್ತ ನಡೆಯುವನು. ಅವನ ಪಕ್ಷದವರು ’ನಾ’ ಎನ್ನುವರು: ಅಂದರೆ ’ಗೆರೆ ಮುಟ್ಟಲಿಲ್ಲ’ ಎಂದಂತೆ. ಆಟಗಾರ ಗೆರೆ ಮುಟ್ಟಿದರೆ ಔಟು. ಬೆಟ್ಟೆ ಕೆಳಗೆ ಬಿದ್ದರೆ ಆಡುವಾಗ ಗೆರೆಯ ಮೇಲೆ ಬಿದ್ದರೆ, ಹಾರಲಾಗುವುದಷ್ಟು ದೂರ ಬೆಟ್ಟೆ ಸಿಡಿದರೆ, ಗಡಿರೇಖೆಯ ಆಚೆ ಬಿದ್ದರೆ ಆಟ ಬಿಡಬೇಕು. ಎಂಟನೆಯ ಮನೆಗೆ ಅಜ್ಜಿ ಮನೆಯನ್ನುವರು. ಅಜ್ಜಿ ಮನೆಯಲ್ಲಿ ಯಾವ ಪಕ್ಷದವರಾದರೂ ಕಾಲೂರಿ ನಿಲ್ಲಬಹುದು. ಈ ಮನೆಯನ್ನು ಯಾರೂ ಕಟ್ಟಬಾರದು, ಎಲ್ಲ ಮನೆಯನ್ನು ಆಡಿದ ಮೇಲೆ, ಆಟದ ಮನೆಯೆಡೆ ಬೆನ್ನು ಮಾಡಿ, ಅಂಗಳದಲ್ಲಿ ನಿಂತು ಬಯಲಿನೆಡೆ ಬೆಟ್ಟೆ ಒಗೆಯಬೇಕು. ಸರಿಯಾಗಿ ಬಯಲಿನಲ್ಲಿಯೇ ಬಿದ್ದರೆ ಒಂದು ಮನೆ ಕಟ್ಟಬಹುದು.