ಕುಂತೀಭೋಜ ಹೇಳಿದ, “ಏನಿದ್ದರೇನು ಶೂರಸೇನ, ಮಕ್ಕಳಿಲ್ಲದ ನನ್ನಂಥವನ ಬದುಕು ಬರೀಶೂನ್ಯ, ಅರ್ಥಹೀನ”.

“ನೀವು ಅಷ್ಟು ಹತಾಶರಾಗಬಾರದು ಭಾವ. ನಿಮ್ಮಂಥ ಸಜ್ಜನರ ಬದುಕಿಗೆ ಅರ್ಥವಿಲ್ಲವೆಂದರೆ ಬೇರೆ ಯಾರ ಬದುಕಿಗೆ ಅರ್ಥ ಇದೆ?”

“ನನಗೆ ಸಂತಾನವಾಗುವ ಸಂಭವ ಇನ್ನು ಇಲ್ಲ ಶೂರಸೇನ. ಹೋಗಲಿ ಬೇರೆಯೊಂದು ಮಗುವನ್ನಾದರೂ ನನ್ನದು ಎನ್ನುವಂತೆ ಸಾಕುವ ಅವಕಾಶವಿದ್ದಿದ್ದರೆ! ಆಗ ನಾನು ಹೀಘೆ ಕೊರಗುತ್ತಿರಲಿಲ್ಲ.”

“ನಿಜವಾಗಿ!”

“ಖಂಡಿತ, ಮಗು ನನ್ನದೇ ಆಗಬೇಕೆಂದಿಲ್ಲ. ಆರಂಭದಿಂದ ಒಂದು ಮಗುವನ್ನು ಪ್ರೀತಿ ಅಂತಃಕರಣ ಎರೆದು ಬೆಳೆಸುವ ಪುಣ್ಯ ನನಗಿಲ್ಲದೆ ಹೋಯಿತಲ್ಲ ಎಂದಷ್ಟೆ ನನ್ನ ಕೊರಗು.”

‘ಇಗೋ ಭಾವ ಹಾಗಿದ್ದರೆ ನನ್ನ ಮಾತು ಕೇಳಿ. ನನಗೆ ಮಕ್ಕಳಾದರೆ ಮೊದಲ ಮಗುವನ್ನು ನಿಮಗೆ ಕೊಟ್ಟು ಬಿಡುತ್ತೇನೆ.”

“ಛೆ, ಛೇ, ನನ್ನ ದುಃಖ ನಿವಾರಿಸುವುದಕ್ಕಾಗಿ ನೀನು ಹೀಗೆ ತ್ಯಾಗ ಮಾಡಿಕೊಳ್ಳುವುದು…..”

“ಹಾಗೆನ್ನಬೇಡಿ ಭಾವ. ನನ್ನ ಮಗು ನನ್ನ ಮನೆಯಲ್ಲಿ ಪಡೆಯುವ ಲಕ್ಷ್ಯ, ಪ್ರೀತಿಗಳಿಗೆ ಕಡಿಮೆಯಿಲ್ಲದ ಲಕ್ಷ್ಯ ಪ್ರೀತಿಗಳನ್ನು ನಿಮ್ಮಲ್ಲಿ ಪಡೆಯುತ್ತದೆ. ಇದು ನನಗೆ ಖಂಡಿತವಾಗಿ ಗೊತ್ತು.”

ಮಗಳು ಕುಂತಿ

ಇದಾದ ಸ್ವಲ್ಪ ಕಾಲಕ್ಕೆ ಶೂರಸೇನನಿಗೆ ಒಬ್ಬ ಮಗಳು ಹುಟ್ಟಿದಳು. ಮಗುವಿಗೆ ಪೃಥೆಯೆಂದು ನಾಮಕರಣ ಮಾಡಿದರು. ಶೂರಸೇನ ಭಾವನಿಗೆ ಕೊಟ್ಟ ಮಾತನ್ನು ಮರೆಯಲಿಲ್ಲ. ಒಂದು ಉತ್ಸವ ಏರ್ಪಡಿಸಿ ಮಗುವನ್ನು ಕುಂತೀಭೋಜನಿಗೆ ದತ್ತು ಕೊಟ್ಟ.

ಕುಂತೀಭೋಜ ಶೂರಸೇನನ ಅತ್ತೆಯ ಮಗ. ಅವನಿಗೆ ಬಹಳ ಆತ್ಮೀಯನಾದ ನೆಂಟ. ಬೇರೆ ಏನೆಲ್ಲ ವೈಭವ ಇದ್ದರೂ ಮಕ್ಕಳಿಲ್ಲದ ಕೊರಗು ಅವನನ್ನು ಬಾಧಿಸುತ್ತಿತ್ತು. ಈಗ ಆ ಕೊರಗೆ ನೀಗಿತು. ಮನೆಗೆ ಬಂದ ಮಗುವನ್ನು ಕುಂತೀಭೋಜ ಸಂಭ್ರಮದಿಂದ ಸ್ವಾಗತಿಸಿದ; ತನ್ನ ಸ್ವಂತ ಮಗಳಿಗಿಂತ ಹೆಚ್ಚೆನ್ನುವಂತೆ ಸಾಕಿದ. ರಾಜಕುಮಾರಿಗೆ ಅಗತ್ಯವಾದ ಎಲ್ಲ ಶಿಕ್ಷಣವನ್ನೂ ಅವಳಿಗೆ ಕೊಟ್ಟ ಕುಂತೀಭೋಜನ ಮಗಳು ಎನ್ನಿಸಿಕೊಂಡಿದ್ದರಿಂದ ಅವಳಿಗೆ ಕುಂತಿ ಎಂಬ ಹೆಸರು ಬಂತು.

ಕುಂತಿ ತುಂಬ ರೂಪವತಿ. ನೋಡಲು ಎರಡು ಕಣ್ಣು ಸಾಲದು ಎನ್ನಿಸುವಂಥ ತೇಜಸ್ವಿನಿ. ಅಲ್ಲದೆ ಚಿಕ್ಕ ವಯಸ್ಸಿನಿಂದಲೂ ಬಹಳ ಸಹನಶೀಲೆ. ಗುರುಹಿರಿಯರು ಎಂದರೆ ತುಂಬ ಗೌರವ ಭಕ್ತಿ.

ದೂರ್ವಾಸರ ಅನುಗ್ರಹ

ಒಂದು ಸಲ ದೂರ್ವಾಸ ಋಷಿ ಕುಂತೀಭೋಜನ ಮನೆಗೆ ಬಂದರು. ದೂರ್ವಾಸರು ಶ್ರೇಷ್ಠ ತಪಸ್ವಿಗಳಲ್ಲಿ ಒಬ್ಬರು. ಜನಕ್ಕೆ ಅವರ ವಿಷಯದಲ್ಲಿ ಎಷ್ಟು ಗೌರವ ಭಕ್ತಿ ಇದ್ದವು ಎಂದರೆ ಎಲ್ಲರೂ ಅವರನ್ನು ಶಿವನ ಅವತಾರ ಎಂದು ಭಾವಿಸುತ್ತಿದ್ದರು. ಹಾಗೆಯೇ ಜನರಿಗೆ ಅವರ ವಿಷಯದಲ್ಲಿ ಭಯವೂ ಇತ್ತು. ಅವರು ಇತರರ ಧರ್ಮಬುದ್ಧಿಯನ್ನು ಪರೀಕ್ಷಿಸುವ ಸ್ವಭಾವದವರು. ಧರ್ಮಿಷ್ಟರೆಂದು ಕಂಡವರನ್ನು ಅನುಗ್ರಹಿಸುತ್ತಿದ್ದರು. ಇಲ್ಲದಿದ್ದರೆ ಕೋಪಗೊಂಡು ಶಾಪ ಕೊಟ್ಟುಬಿಡುತ್ತಿದ್ದರು.

ಅಷ್ಟು ದೊಡ್ಡ ಋಷಿ ತಮ್ಮ ಮನೆಗೆ ಬಂದದ್ದಕ್ಕೆ ಕುಂತೀಭೋಜನಿಗೆ ಆನಂದವಾಯಿತು. ಕೆಲವು ದಿನ ತಮ್ಮ ಮನೆಯಲ್ಲಿ ಇದ್ದು ಹೋಗಬೇಕೆಂದು ದೂರ್ವಾಸರನ್ನು ಕೇಳಿಕೊಂಡ. ದೂರ್ವಾಸರು ಒಪ್ಪಿದರು. ಅವರ ಪರಿಚಾರಿಕೆಗೆ ಕುಂತೀಭೋಜ ಮಗಳನ್ನೇ ನೇಮಿಸಿದ. ಹಿರಿಯರ ಆಶೀರ್ವಾದ ಅನುಗ್ರಹಗಳನ್ನು ಅವಳು ಸಂಪಾದಿಸಿಕೊಳ್ಳಲೆಂದು ಹಾಗೆ ಮಾಡಿದ. ದೂರ್ವಾಸರ ಜಪ, ತಪ, ಪೂಜೆ ಮೊದಲಾದ ಕೆಲಸಗಳಿಗೆ ಸಾಮಗ್ರಿಗಳನ್ನು ಅಣಿ ಮಾಡಿಕೊಡುವ ಕೆಲಸ ಕುಂತಿಯ ಪಾಲಿಗೆ ಬಂತು.

ಕುಂತಿ ಬೆಳಗಿನ ಝಾವದಲ್ಲಿ ಏಳುವಳು. ಅವರ ಸ್ನಾನಕ್ಕೆ ಅಣಿ ಮಾಡುವಳು. ದೇವರ ಪೂಜೆಗೆ ಬೇಕಾದ ಉಪಕರಣಗಳನ್ನು ಬೆಳಗಿ ಸಿದ್ಧ ಮಾಡುವಳು. ಪೂಜೆಗೆ ಹೂ ಬಿಡಿಸುವಳು. ದೂರ್ವಾಸರು ಪೂಜೆ ಮಾಡುವಗ ಅದನ್ನು ನೋಡುತ್ತ, ಕೇಳುತ್ತ ಕೂರುವಳು. ಕುಂತಿ ಇನ್ನೂ ಚಿಕ್ಕ ಹುಡುಗಿ. ಆದರೂ ಕೆಲಸಗಳನ್ನೆಲ್ಲ ಪ್ರೀತಿಯಿಂದ ಶ್ರದ್ದೆಯಿಂದ ಮಾಡುವಳು. ದೂರ್ವಾಸರು ಮನುಷ್ಯರೂಪದಲ್ಲಿ ಓಡಾಡುವ ದೇವರು ಎಂದು ಅವಳ ನಂಬಿಕೆ.

ತಮ್ಮ ಕೆಲಸ ಕಾರ್ಯಗಳನ್ನು ಮಾಡಿಕೊಡುವ ವಿಷಯದಲ್ಲಿ ಕುಂತಿಗೆ ಇದ್ದ ಉತ್ಸಾಹ ಶ್ರದ್ಧೆಗಳನ್ನು ದೂರ್ವಾಸರು ಮೆಚ್ಚಿದರು. ಅಷ್ಟು ಚಿಕ್ಕ ಹುಡುಗಿ, ರಾಜಕುಮಾರಿ, ಆದರೂ ಎಷ್ಟು ವಿನಯ, ಓರಣ, ಒಪ್ಪ! ಒಮ್ಮೆ ಅವಳಿಗೆ ಹೇಳಿದರು:

“ನೀನು ಇಷ್ಟು ಚಿಕ್ಕವಯಸ್ಸಿನ ಹುಡುಗಿ. ಆದರೂ ಕೆಲಸಗಳನ್ನು ಬಹಳ ಒಪ್ಪವಾಗಿ ಮಾಡುತ್ತೀಯೆ”

“ಹಾಗಾದರೆ ನಿಮಗೆ ನನ್ನ ಕೆಲಸ ಹಿಡಿಸಿತೆ?”

“ಇಷ್ಟು ಚಿಕ್ಕ ಹುಡುಗಿ ಆದರೂ ಕೆಲಸಗಳನ್ನು ಬಹಳ ಒಪ್ಪವಾಗಿ ಮಾಡುತ್ತೀಯೆ”

“ಅದಕ್ಕಾಗಿ ಎಷ್ಟು ಕಷ್ಟಪಡುತ್ತೀಯಲ್ಲೆ ತಾಯಿ!”

“ಅದರಲ್ಲಿ ಕಷ್ಟ ಎಲ್ಲಿದೆ ಗುರುಗಳೆ? ನಿಮ್ಮಂಥ ಹಿರಿಯರ ಸೇವೆ ಮಾಡುವ ಅವಕಾಶ ಸಿಕ್ಕಿತಲ್ಲ ಅಂತ ಆನಂದ ಇದೆ.”

ದೂರ್ವಾಸರು ಈ ಹುಡುಗಿಯ ಭವಿಷ್ಯ ಸುಖಮಯವಾಗಲಿ ದೇವರೆ ಎಂದು ಚಿಂತಿಸಿದರು. ಹೆಣ್ಣಿನ ಜನ್ಮ ಸುಖಕರವಾಗಿ ಇರಬೇಕಾದರೆ ಒಳ್ಳೆಯ ಗಂಡ, ಮಕ್ಕಳು ಎಲ್ಲ ಅಗತ್ಯ. ಮಕ್ಕಳು ಮರಿಯಾಗಿಲ್ಲವೆಂದು ಎಷ್ಟೋ ಜನ ರಾಣಿಯರು ಸಹ ಸಂಕಟಕ್ಕೆ ತುತ್ತಾದದ್ದು ದೂರ್ವಾಸರಿಗೆ ಗೊತ್ತು. ಕುಂತಿಗೆ ಅಂಥ ಯಾವ ಆಪತ್ತೂ ಅಕಸ್ಮಾತ್ತಾಗಿಯೂ ಬರಬಾರದು. ಹೀಗೆ ಯೋಚಿಸಿ ದೂರ್ವಾಸರು ಕುಂತಿಯನ್ನು ಹತ್ತಿರ ಕರೆದು ಹೇಳಿದರು.

“ಇಗೋ ಮಗು, ನಿನಗೆ ಐದು ಮಂತ್ರಗಳನ್ನು ಉಪದೇಶ ಮಾಡುತ್ತೇನೆ. ಇವನ್ನು ಭಕ್ತಿಯಿಂದ ಧರಿಸು. ನೀನು ಯಾವ ದೇವತೆಯನ್ನು ಸ್ಮರಿಸಿ ಈ ಮಂತ್ರಗಳನ್ನು ಬಳಸುತ್ತೀಯೋ ಆ ದೇವತೆಯಂಥ ಸತ್ತ್ವ ತೇಜಸ್ಸು ಇರುವ ಮಗ ನಿನಗೆ ಹುಟ್ಟುತ್ತಾನೆ. ವಿವಾಹವಾದ ಮೇಲೆ ನಿನ್ನ ಆಪತ್ತಿನ ಕಾಲಕ್ಕೆ ಇದನ್ನು ಬಳಸಿಕೋ.”

“ಆಗಲಿ ಗುರುಗಳೆ.”

“ಬೇಕೆನಿಸಿದರೆ ಇದನ್ನು ನೀನು ಬೇರೆಯವರಿಗೂ ಕೊಡಬಹುದು.”

“ಆಗಲಿ.”

“ಇದನ್ನು ಸಮಯ ಬಂದಾಗ ನಿನ್ನ ಗಂಡನಿಗಲ್ಲದೆ ಬೇರೆ ಯಾರಿಗೂ ಹೇಳಬೇಡ.”

“ಆಗಲಿ.”

ಎಂತಹ ಅಚಾತುರ್ಯವಾಯಿತು!

ಕೆಲವು ದಿನಗಳಿದ್ದು ದೂರ್ವಾಸರು ಅಲ್ಲಿಂದ ಹೊರಟು ಹೋದರು. ದೂರ್ವಾಸರು ತನಗೆ ಮಂತ್ರ ಉಪದೇಶ ಮಾಡಿದ ವಿಷಯವನ್ನು ಕುಂತಿ ಯಾರಿಗೂ ತಿಳಿಸಲಿಲ್ಲ. ಆದರೆ ಅಷ್ಟು ಮಹತ್ತ್ವದ ವಿಷಯವನ್ನು ರಹಸ್ಯವಾಗಿ ಇಟ್ಟುಕೊಳ್ಳುವುದು ಯಾರಿಗೂ ಕಷ್ಟ ಅವಳೋ ಇನ್ನೂ ಹುಡುಗಿ ಬೇರೆ. ಆ ವಯಸ್ಸಿಗೆ ಎಲ್ಲ ವಿಷಯಗಳಲ್ಲೂ ತುಂಬ ಕುತೂಹಲ ಇರುವುದು ಸಹಜ. ಇದರಿಂದ ಅವಳ ತಲೆ ತುಂಬ ಇದೇ ವಿಷಯ ತುಂಬಿಕೊಂಡಿತು. ದೇವತೆಗಳಂಥ ತೇಜಸ್ವಿಗಳಾದ ಮಕ್ಕಳು ತನಗೆ ಹುಟ್ಟುವರೆಂಬ ವಿಷಯ ಸಾಮಾನ್ಯವೆ? ದೂರ್ವಾಸರ ಈ ಮಾತು ನಿಜವೆ? ಪರೀಕ್ಷಿಸಿದರೆ ಹೇಗೆ? ಇಂಥ ಯೋಚನೆ ದಿನೇ ದಿನೇ ಬಲವಾಯಿತು. ಇದನ್ನು ಮಾಡಿ ನೋಡಿಬಿಡಲು ಕುಂತಿ ನಿಶ್ಚಯಿಸಿದಳು.

ಒಮ್ಮೆ ಕುಂತಿ ಗಂಗಾತೀರಕ್ಕೆ ಗುಟ್ಟಾಗಿ ಹೋದಳು. ದೂರ್ವಾಸ ಋಷಿಗಳು ಹೇಳಿದ ವಿಧಿಗಳನ್ನು ಆಚರಿಸಿ ಸೂರ್ಯದೇವನನ್ನು ನೆನೆದು ಮಗುವನ್ನು ಬಯಸಿದಳು. ಇದರ ಫಲವಾಗಿ ಅವಳಿಗೆ ಒಂದು ಗಂಡು ಮಗು ಜನಿಸಿತು. ಆ ಮಗು ಮರಿಸೂರ್ಯನೋ ಎಂಬಷ್ಟು ತೇಜಶಾಲಿಯಾಗಿತ್ತು. ದಷ್ಟಪುಷ್ಪವಾದ ತುಂಬಿದ ಮೈಯ ಮಗು. ಕುಂತಿಗೆ ಮಗುವನ್ನು ನೋಡಿ ಸಂತೋಷ; ಅದರ ಹತ್ತು ಪಟ್ಟು ಭಯ. ತಾನು ಎಂಥ ಅವಿವೇಕ ಮಾಡಿಕೊಂಡೆ ಎಂದು ಅವಳಿಗೆ ಈಗ ಗೊತ್ತಾಯಿತು. ದೂರ್ವಾಸರು ತನಗೆ ಮಂತ್ರ ಕೊಟ್ಟಿದ್ದು ಮುಂದೆ ಗಂಡನಿಂದ ಮಕ್ಕಳಾಗದೆ ಹೋದಲ್ಲಿ ಮಕ್ಕಳನ್ನು ಪಡೆಯಲಿ ಎಂದು; ತಾನೋ ಮದುವೆ ಆಗುವುದಕ್ಕೆ ಮುಂಚೆಯೇ ಅದನ್ನು ಬಳಸಿ ಮಗುವನ್ನು ಪಡೆದು ಬಿಟ್ಟಿದ್ದಾಳೆ. ಜನಕ್ಕೆ ಇದು ತಿಳಿದರೆ ತನ್ನನ್ನು ನಿಂದಿಸುತ್ತಾರೆ. ಈಗ ಇದರಿಂದ ತನ್ನನ್ನು ಹೆತ್ತವರಿಗೆ ಸಾಕಿದವರಿಗೆ ಎಲ್ಲರಿಗೂ ಕೆಟ್ಟ ಮಾತು ಬರುತ್ತದೆ.

ಗಂಗೆಯಲ್ಲಿ ಮಗು

ಈ ಯೋಚನೆ ಬರುತ್ತಿದ್ದಂತೆಯೇ ಕುಂತಿ ತಲ್ಲಣಿಸಿ ಹೋದಳು. ಅವಳು ಆ ಮಗುವನ್ನು ಇಟ್ಟುಕೊಳ್ಳುವಂತೆಯೂ ಇಲ್ಲ. ಬಿಡುವಂಥೆಯೂ ಇಲ್ಲ. ಕಡೆಗೆ ಕುಂತಿ ಧೈರ್ಯ ತಂದುಕೊಂಡು ಕಷ್ಟದಿಂದ ಪಾರಾಗುವ ಒಂದು ಹಂಚಿಕೆ ಹೂಡಿದಳು. ಒಂದು ದೊಡ್ಡ ಬುಟ್ಟಿ ತರಿಸಿ ಅದರಲ್ಲಿ ಅನೇಕ ರತ್ನಾಭರಣಗಳನ್ನು ಇಟ್ಟಳು; ಒಂದು ಪುಟ್ಟ ಹಾಸಿಗೆಯಲ್ಲಿ ಮಗುವನ್ನು ಇಟ್ಟು ಅದಕ್ಕೆ ವಸ್ತ್ರ ಹೊದಿಸಿದಳು. ಬುಟ್ಟಿ ತೇಲಿ ಹೋಗಿ ಸ್ವಲ್ಪ ಹೊತ್ತಿನಲ್ಲೇ ಯಾರ ಕೈಗಾದರೂ ಸಿಗುತ್ತದೆ. ಅಂಥ ಮಗುವನ್ನು ಯಾರು ಬಿಟ್ಟು ಹೋಗುತ್ತಾರೆ? ಬುಟ್ಟಿಯಲ್ಲಿ ರತ್ನಾಭರಣಗಳು ಬೇರೆ ಇವೆ. ಮಗು ಬಡವರಿಗೆ ಸಿಕ್ಕರೆ ಆ ರತ್ನಾಭರಣಗಳಿಂದ ಅವರ ಬಡತನ ಹೋಗುತ್ತದೆ. ಹೀಗೆ ಯೋಚಿಸಿ ಮಗುವನ್ನು ನದಿಯಲ್ಲಿ ತೇಲಿಬಿಟ್ಟು ಕುಂತಿ ಮನೆಗೆ ಹಿಂತಿರುಗಿದಳು. ಆ ಮಗು ಅಧಿರಥ ಎಂಬ ಬೆಸ್ತರವನಿಗೆ ಸಿಕ್ಕಿತು.

ಮುಂದೆ ಇದೇ ಮಗುವೇ ಬೆಳೆದು ‘ದಾನಶೂರ ಕರ್ಣ’ ಎಂಬ ಹೆಸರನ್ನು ಪಡೆಯಿತು.

ಪಾಂಡುವಿನ ರಾಣಿ

ಕುಂತಿ ಬೆಳೆದು ದೊಡ್ಡವಳಾದಳು. ಅವಳ ಚೆಲುವು ಗುಣ ಎರಡೂ ಎಲ್ಲರ ಕಿವಿ ಮುಟ್ಟಿತು. ಅನೇಕ ಜನ ರಾಜಕುಮಾರರು ಅವಳನ್ನು ಮದುವೆಯಾಗಬೇಕೆಂದು ಆಸೆ ಪಟ್ಟರು. ಕುಂತೀಭೋಜನಿಗೆ ತನ್ನ ಮಗಳು ಎಲ್ಲದರಲ್ಲೂ ಅನುರೂಪನಾದ ಪತಿಯನ್ನು ಪಡೆಯಬೇಕೆಂದು ಆಸೆ. ಅವನು ಅದಕ್ಕಾಗಿ ಒಂದು ಸ್ವಯಂವರವನ್ನು ಏರ್ಪಡಿಸಿದ. ತನಗೆ ಯಾರು ಬೇಕೋ ಅವರನ್ನು ಕುಂತಿಯೇ ವರಿಸಲಿ ಎಂದು ಈ ಏರ್ಪಾಟು ಮಾಡಿದ.

ಇಷ್ಟು ಹೊತ್ತಿಗೆ ಹಸ್ತಿನಾವತಿಯ ಚಂದ್ರವಂಶದ ರಾಜಕುಮಾರರಲ್ಲಿ ಒಬ್ಬನಾದ ಪಾಂಡುವಿನ ಕೀರ್ತಿ ಎಲ್ಲ ಕಡೆ ಹರಡಿತ್ತು. ಧೃತರಾಷ್ಟ್ರ ಮತ್ತು ಪಾಂಡು ಇಬ್ಬರೂ ಅಣ್ಣತಮ್ಮಂದಿರು. ಧೃತರಾಷ್ಟ್ರ ಹುಟ್ಟು ಕುರುಡ. ಅವನೇ ಹಸ್ತಿನಾವತಿಯ ದೊರೆ. ತಮ್ಮನಾದ ಪಾಂಡು ಸೇನಾಧಿ ಪತಿಯಾಗಿದ್ದ. ಅಣ್ಣ ಕುರುಡನಾದ್ದರಿಂದ ತಾನೇ ಅಣ್ಣನ ಪರವಾಗಿ ರಾಜ್ಯಭಾರವನ್ನು ನಿರ್ವಹಿಸುತ್ತಿದ್ದ. ಅಲ್ಲದೆ ಅವರಿಬ್ಬರಿಗೂ ಅಜ್ಜನಾದ ಭೀಷ್ಮ ರಾಜಕಾರ್ಯಗಳಲ್ಲಿ ಸಹಾಯ ಮಾಡುತ್ತಿದ್ದ. ಪಾಂಡು ಮಹಾಪರಾಕ್ರಮಿ. ನಾಲ್ಕು ದಿಕ್ಕುಗಳಲ್ಲಿದ್ದ ದೇಶಗಳ ಮೇಲೂ ವಿಜಯಯಾತ್ರೆ ನಡೆಸಿ ಕೌರವ ಸಾಮ್ರಾಜ್ಯವನ್ನು ವಿಸ್ತಾರವಾಗಿ ಮಾಡಿದ್ದ. ಎಲ್ಲರ ಬಾಯಲ್ಲೂ ಪಾಂಡುವಿನ ಪರಾಕ್ರಮದ್ದೇ ಮಾತು.

ಪಾಂಡುವಿನ ಶೌರ್ಯದ ಮಾತು ಕುಂತಿಯ ಕಿವಿಗೂ ಬಿದ್ದಿತ್ತು. ಅವಳು ಅವನನ್ನೇ ಮದುವೆಯಾಗಬೇಕೆಂದು ಮನಸ್ಸಿನಲ್ಲಿ ನಿಶ್ಚಯಕ್ಕೂ ಬಂದಿದ್ದಳು. ಸ್ವಯಂವರದ ದಿನ ಬೇರೆ ಬೇರೆ ದೇಶದ ಅನೇಕ ರಾಜಕುಮಾರರು ಸ್ವಯಂವರ ಮಂಟಪಕ್ಕೆ ಬಂದಿದ್ದರು. ಕೈಯಲ್ಲಿ ವರಣಮಾಲಿಕೆ ಹಿಡಿದ ಕುಂತಿ ಮಂಟಪಕ್ಕೆ ಬಂದು ನಿಂತಳು. ಅಷ್ಟು ಜನ ರಾಜಕುಮಾರರಲ್ಲಿ ಪಾಂಡು ತನ್ನ ಸಿಂಹಗಾಂಭೀರ್ಯ, ದರ್ಪ, ವಿಶಾಲವಕ್ಷ, ಅಸಾಧಾರಣ ತೇಜಸ್ಸಿನಿಂದ ಎದ್ದು ಕಾಣುತ್ತಿದ್ದ. ಕುಂತಿ ನೇರವಾಗಿ ಅವನ ಬಳಿಗೇ ನಡೆದು ಕೊರಳಿಗೆ ಮಾಲಿಕೆ ಹಾಕಿದಳು. ಕುಂತಿಯ ಚೆಲುವು ಪಾಂಡುವಿನ ಶೌರ್ಯ ಎರಡೂ ಒಂದಕ್ಕೊಂದು ಅನುರೂಪವಾದದ್ದೆಂದು ಎಲ್ಲರೂ ಅದನ್ನು ಮೆಚ್ಚಿದರು. ಬಂದ ರಾಜರೆಲ್ಲ ಅವರ ವಿವಾಹವನ್ನು ಮುಗಿಸಿಕೊಟ್ಟು ತೆರಳಿದರು.

ಸವತಿ ತಂಗಿಯೇ

ಕುಂತಿಯನ್ನು ವಿವಾಹವಾದ ಸ್ವಲ್ಪ ಕಾಲದ ನಂತರ ಭೀಷ್ಮ ಪಾಂಡುವಿಗೆ ಮತ್ತೊಂದು ವಿವಾಹವನ್ನು ಯೋಚಿಸಿದ. ಮದ್ರದೇಶವನ್ನು ಆಳುತ್ತಿದ್ದ ಶಲ್ಯ ಮಹಾರಾಜನಿಗೆ ಒಬ್ಬಳು ತಂಗಿಯಿದ್ದಳು. ಅವಳ ಹೆಸರು ಮಾದ್ರಿ. ಮಾದ್ರಿಯ ಸೌಂದರ್ಯ ಲೋಕಪ್ರಸಿದ್ಧವಾಗಿತ್ತು. ಬಲೋತ್ಸಾಹ ಸಂಪನ್ನನಾದ ಪಾಂಡುವಿಗೆ ಅವಳು ಹೆಂಡತಿಯಾಗಬೇಕೆಂದು ಭೀಷ್ಮನ ಆಸೆಯಿತ್ತು. ಭೀಷ್ಮ ಶಲ್ಯನಿಗೆ ಹೇರಳವಾದ ಕನ್ಯಾಶುಲ್ಕವನ್ನು ಕೊಟ್ಟು ಮಾದ್ರಿಯನ್ನು ಕರೆತಂದು ಪಾಂಡುವಿಗೆ ವಿವಾಹ ಮಾಡಿದ.

ಕುಂತಿ ಸವತಿಯಾದ ಮಾದ್ರಿಯನ್ನು ತನ್ನ ಪ್ರತಿಸ್ಪರ್ಧಿ ಎನ್ನುವಂತೆ ನೋಡಲಿಲ್ಲ. ಒಡಹುಟ್ಟಿದ ತಂಗಿಯಂತೆ ಅಕ್ಕರೆಯಿಂದ ನಡೆಸಿಕೊಂಡಳು. ಮಾದ್ರಿಯೂ ಕುಂತಿಯಷ್ಟೇ ಗುಣವಂತೆ, ರೂಪವತಿ. ಕುಂತಿಯ ಪ್ರೀತಿ ವಿಶ್ವಾಸಗಳಿಗೆ ಮಾದ್ರಿ ಮಾರುಹೋದಳು. ಸವತಿಯರು ಎಣ್ಣೆ ಸೀಗೆಕಾಯಿಯಂತೆ ಸಿಡಿದು ಬಾಳದೆ ಹಾಲು ಸಕ್ಕರೆಯಂತೆ ಬೆರೆತರು.

ಸಂಸಾರದ ನೆಮ್ಮದಿ ಪಾಂಡುವಿಗೆ ಇನ್ನಷ್ಟು ಉತ್ಸಾಹ ಲವಲವಿಕೆಗಳನ್ನು ತಂದುಕೊಟ್ಟವು. ಅವನು ಸೈನ್ಯದೊಡನೆ ಚೈತ್ರಯಾತ್ರೆ ಹೊರಟ. ದಶಾರ್ಣ, ದೀರ್ಘ, ಕಾಶಿ, ಸುಂಹ, ವಿದೇಹ ಮತ್ತು ಪುಂಡ್ರರಾಜರೆಲ್ಲರನ್ನೂ ಗೆದ್ದ. ಆಗಿನ ಪ್ರಸಿದ್ಧ ರಾಜರನ್ನೆಲ್ಲ ಸೋಲಿಸಿ ಕಪ್ಪಕಾಣಿಕೆ ಪಡೆದ. ಅವನ ಕೀರ್ತಿ ಇಡೀ ಭರತಖಂಡದಲ್ಲಿ ಹರಡಿತು.

ಪಾಂಡುವಿಗೆ ಶಾಪ

ಒಮ್ಮೆ ಪಾಂಡು ಬೇಟೆಗೆಂದು ಕಾಡಿಗೆ ಹೋಗಿದ್ದ. ಅವನ ಜೊತೆ ಕುಂತಿ ಮಾದ್ರಿಯರೂ, ದೊಡ್ಡ ರಾಜ ಪರಿವಾರವೂ ಹೋಗಿತ್ತು. ಕಾಡಿನಲ್ಲಿ ಒಂದು ಗಂಡು ಜಿಂಕೆ ಮತ್ತು ಹೆಣ್ಣು ಜಿಂಕೆ ಅನ್ಯೋನ್ಯವಾಗಿ ಒಟ್ಟಿಗಿದ್ದ ಗಳಿಗೆಯಲ್ಲಿ ಪಾಂಡು ಅವುಗಳ ಮೇಲೆ ಬಾಣ ಪ್ರಯೋಗ ಮಾಡಿದ. ಅವು ಜಿಂಕೆಗಳಲ್ಲ. ಕಿಂದಮನೆಂಬ ಋಷಿ ತನ್ನ ಪತ್ನಿಯೊಡನೆ ಆ ಕಾಡಿನಲ್ಲಿ ವಿಹಾರಕ್ಕಾಗಿ ಬಂದಿದ್ದ; ಮೃಗರೂಪದಲ್ಲಿ ತನ್ನ ಹೆಂಡತಿಯ ಜೊತೆ ಸಂತೋಷವಾಗಿದ್ದ ಕಾಲದಲ್ಲಿ ತಿಳಿಯದೆ ಪಾಂಡು ಅವರನ್ನು ಘಾತಿಸಿಬಿಟ್ಟ. ಆ ಏಟಿಗೆ ಅವು ತತ್ತರಿಸಿ ವಿಲವಿಲ ಒದ್ದಾಡಿ ಪ್ರಾಣಬಿಟ್ಟವು. ಸಾಯುವ ಮುಂಚೆ ಗಂಡು ಜಿಂಕೆ ಮನುಷ್ಯರಂತೆ ಮಾತಾಡುತ್ತ ಪಾಂಡುವಿನ ಕ್ರೌರ್ಯವನ್ನು ಮೂದಲಿಸಿತು: “ಎಲೋ ಪಾಂಡು ನೀನು ಎಂಥ ದೊಡ್ಡ ವಂಶದಲ್ಲಿ ಹುಟ್ಟಿದವನು. ಆದರೂ ಏಕೆ ಹೀಗೆ ವಿವೇಕ ಕಳೆದುಕೊಂಡೆ? ಕಾಡಿನಲ್ಲಿ ತಮ್ಮ ಪಾಡಿಗೆ ತಾವು ಇರುವ ಪ್ರಾಣಿಗಳನ್ನು ಹೀಗೆ ಕೊಲ್ಲಬಹುದೆ? ಅದೂ ಅವು ಪ್ರೀತಿಯಿಂದ ಒಂದುಗೂಡಿರುವ ಗಳಿಗೆಯಲ್ಲಿ ಹೀಗೆ ಕೊಲ್ಲುವವನ ಕ್ರೌರ್ಯ ಎಷ್ಟಿರಬಹುದು? ಅನುಭವಿಸಿದಲ್ಲದೆ ನಿನ್ನಂಥವರಿಗೆ ಇದು ತಿಳಿಯುವುದಿಲ್ಲ. ನೀನೀ ಪತ್ನಿಯನ್ನು ಆಸೆಯಿಂದ ಮುಟ್ಟಿದ ಗಳಿಗೆಯಲ್ಲಿ ಸಾಯುವಂತಾಗಲಿ.” ಹೀಗೆ ಶಾಪ ಕೊಟ್ಟ ಆ ಜಿಂಕೆ ಕಣ್ಣುಮುಚ್ಚಿತು.

ತಾನು ಮಾಡಿದ ಕೆಲಸ ಎಷ್ಟು ನೀಚವಾದದ್ದು ಎಂದು ಪಾಂಡುವಿಗೆ ತಿಳಿಯಿತು. ತನ್ನ ಪಾಪದ ಅರಿವಿನಿಂದ ಮನಸ್ಸು ಕುಗ್ಗಿಹೋಯಿತು. ಜೊತೆಗೆ ಋಷಿಯ ಶಾಪ ಬೇರೆ.

ನಿಮ್ಮನ್ನು ಬಿಟ್ಟಿರಲಾರೆವು

ಖಿನ್ನನಾದ ಪಾಂಡು ಕುಂತಿಯ ಕಡೆ ತಿರುಗಿ ಹೇಳಿದ:

“ನಾನು ಎಂಥ ಕೀಳು ಕೆಲಸ ಮಾಡಿಬಿಟ್ಟೆ ಕುಂತಿ!”

“ಆದರೆ ಅದನ್ನು ನೀವು ಬುದ್ಧಿಪೂರ್ವಕ ಮಾಡಿದ್ದಲ್ಲ ಅಲ್ಲವೆ? ಆ ಜಿಂಕೆಗಳು ಜಿಂಕೆಗಳಲ್ಲ ಮನುಷ್ಯರು ಎಂದು ನಿಮಗೆ ಹೇಗೆ ಗೊತ್ತಾಗಬೇಕು?”

“ಆದರೂ ತಮ್ಮ ಪಾಡಿಗೆ ತಾವು ಇದ್ದ ಜಿಂಕೆಗಳನ್ನು ನಾನು ಕೊಲ್ಲಬಾರದಾಗಿತ್ತು ಕುಂತಿ. ಜನಗಳಿಗೆ ತೊಂದರೆ ಕೊಡುವ ಕ್ರೂರಮೃಗಗಳನ್ನು ಕೊಲ್ಲುವುದು ತಪ್ಪಲ್ಲ. ಅದರಲ್ಲಿಯೂ ಅವು ಸುಖವಾಗಿದ್ದ ಗಳಿಗೆಯಲ್ಲಿ ಹಾಗೆ ಮಾಡಿದ್ದು….”

“ಈಗ ಆದದ್ದು ಆಯಿತು. ಮಿಂಚಿದ್ದಕ್ಕೆ ಚಿಂತಿಸಿ ಫಲವಿಲ್ಲ. ನೀವು ಹೀಗೆ ಉತ್ಸಾಹಹೀನರಾಗಿ ಬಿಟ್ಟರೆ ಹೇಗೆ?”

“ಇನ್ನು ನಾನು ರಾಜ್ಯಕ್ಕೆ ತಿರುಗಿ ಬರಲಾರೆ”

“ಇದೇನು ಇಂಥ ಯೋಚನೆ ಮಾಡುತ್ತಿದ್ದೀ?ರಿ? ಮೊದಲು ಇದನ್ನು ಮನಸ್ಸಿನಿಂದ ದೂರತಳ್ಳಿ.”

“ಇಲ್ಲ ಕುಂತಿ. ನಾನು ರಾಜ್ಯಕ್ಕೆ ಬಂದರೂ ಸುಖವಾಗಿ ಬಾಳಲಾರೆ. ನನ್ನ ಪ್ರಾಣ ಸಮಾನರಾದ ಪತ್ನಿಯರನ್ನು ಇನ್ನು ಮುಟ್ಟುವಂತಿಲ್ಲ. ಮಕ್ಕಳ ಭಾಗ್ಯವೆನ್ನುವುದು ನನ್ನ ಪಾಲಿಗೆ ಇನ್ನು ಕನಸು.”

“ಆದರೂ ರಾಜ್ಯಪಾಲನೆ ನಿಮಗೆ ಕರ್ತವ್ಯವಲ್ಲವೆ?”

“ರಾಜ್ಯಕ್ಕೆ ಮರಳುವುದೆಂದರೆ ಮತ್ತೆ ಮೊದಲಿನ ಜೀವನಕ್ಕೆ ಮರಳಿದಂತೆ. ಐಶ್ವರ್ಯ, ಅಧಿಕಾರ, ಅರಮನೆಯ ಸುಖಜೀವನ ಇವೆಲ್ಲ ಭೋಗವೇ. ಇವುಗಳ ಮಧ್ಯೆ ಇದ್ದಾಗ ನಾನು ಋಷಿ ಶಾಪವನ್ನು ಗಮನಿಸದೆ ನಿಮ್ಮ ಸಹವಾಸ ಬಯಸಬಹುದು. ಆಗ ನನಗೆ ಮರಣ ಶತಸ್ಸಿದ್ಧ. ಅಲ್ಲದೆ ಇನ್ನೂ ಒಂದು ವಿಷಯ.”

“ಏನು?”

“ಮಾಡಿದ ತಪ್ಪಿಗೆ ಪ್ರಾಯಶ್ಚಿತ್ತ ಮಾಡಿಕೊಳ್ಳಬೇಕು. ಅಧಿಕಾರ ತ್ಯಾಗ ಅಂಥ ಪ್ರಾಯಶ್ಚಿತ್ತ. ಇನ್ನು ನಾನು ಕಾಡಿನಲ್ಲಿಯೇ ಉಳಿಯುತ್ತೇನೆ. ನಾರುಮಡಿ ಉಟ್ಟು, ಗೆಡ್ಡೆ ಗೆಣಸು ತಿಂದು ಬಾಳುತ್ತೇನೆ. ನನ್ನ ತಪ್ಪಿಗೆ ಪಶ್ಚಾತ್ತಾಪ ಪಡುತ್ತ, ಪ್ರಾಣಿದಯೆಯ ಹಿರಿಮೆಯನ್ನು ಚಿಂತಿಸುತ್ತ ಋಷಿಯಂತೆ ಬಾಳುತ್ತೇನೆ. ನೀವು ರಾಜ್ಯಕ್ಕೆ ಮರಳಿ ಇದನ್ನು ಹಿರಿಯರಿಗೆ ತಿಳಿಸಿ.”

“ಇಂಥ ಮಾತು ಹೇಳಬಹುದೆ ಮಹಾರಾಜ?”

“ಏಕೆ ಕುಂತಿ?”

“ನಿಮ್ಮನ್ನು ಬಿಟ್ಟು ನಾವು ಮಾತ್ರ ರಾಜ್ಯದಲ್ಲಿ ಇರಬಲ್ಲೆವೆ?”

“ಅದರಲ್ಲಿ ತಪ್ಪೇನಿದೆ ಕುಂತಿ? ನನ್ನ ತಪ್ಪಿಗೆ ನೀವು ಕಷ್ಟ ಅನುಭವಿಸಬಾರದು.”

“ಚೆನ್ನಾಗಿ ಹೇಳಿದಿರಿ ಪ್ರಭು! ನಿಮ್ಮನ್ನು ಇಲ್ಲಿ ಬಿಟ್ಟು ನಾವು ಅರಮನೆಯಲ್ಲಿ ಬಾಳುವುದಕ್ಕಿಂತಲೂ ಘೋರವಾದ ಕಷ್ಟ ನಮಗೆ ಯಾವುದಿದೆ? ನಿಮ್ಮನ್ನು ಬಿಟ್ಟು ಒಂದು ಕ್ಷಣವಾದರೂ ನಾವು ಇರಲಾರೆವು”

“ಹೀಗೆ ಪಟ್ಟು ಹಿಡಿಯಬೇಡ ಕುಂತಿ.”

“ನಾನು ಎಂದೂ ತಮ್ಮ ಮಾತಿಗೆ ಎದುರು ಆಡಿದವಳಲ್ಲ. ಆದರೆ ಇವತ್ತು ಮಾತ್ರ ನಿಮ್ಮ ಮಾತನ್ನು ಒಪ್ಪುವುದಿಲ್ಲ. ನಿಮ್ಮ ಸಹವಾಸ, ಸೇವೆಗಿಂತ ದೊಡ್ಡದು ನನಗೆ ಯಾವುದೂ ಇಲ್ಲ.”

“ಹೆಂಡತಿಯರ ಜೊತೆ ಇದ್ದರೆ ನನ್ನಲ್ಲಿ ಸಂತೋಷದ ಅಪೇಕ್ಷೆ ಹುಟ್ಟಬಹುದು.”

“ಅದಕ್ಕೆ ನಾನು ಅವಕಾಶ ಕೊಡುವುದಿಲ್ಲ ಮಹಾರಾಜ. ನಿಮ್ಮೊಡನೆ ನಾನು ಮಾದ್ರಿ ಇಬ್ಬರೂ ತಪಸ್ಸು ಮಾಡಿಕೊಂಡು ಇರುತ್ತೇವೆ. ಈ ಬಗ್ಗೆ ನೀವು ನಿಶ್ಚಿಂತೆಯಾಗಿ ಇರಿ.” 

“ನನ್ನ ಕರ್ತವ್ಯ ಮುಗಿಯಿತು. ಇನ್ನು ಕಾಡಿನಲ್ಲಿ ತಪಸ್ಸು ಮಾಡಿ ನನ್ನ ಗಂಡನಿರುವ ಲೋಕಕ್ಕೆ ಹೋಗುತ್ತೇನೆ.”

 ಐವರು ಪಾಂಡವರು

 

ಮಾದ್ರಿಯೂ ಕುಂತಿಯ ಮಾತನ್ನೇ ಅನುಮೋದಿಸಿದಳು. ಅವರು ತಮ್ಮೊಡನೆ ಬಂದ ಪರಿವಾರವನ್ನು ಊರಿಗೆ ಕಳಿಸಿದರು. ನಡಸೆದ ವಿಷಯವನ್ನೆಲ್ಲ ಅವರ ಮೂಲಕ ಭೀಷ್ಮನಿಗೂ ಧೃತರಾಷ್ಟ್ರನಿಗೂ ಹೇಳಿ ಕಳಿಸಿದರು. ಅದನ್ನು ಕೇಳಿ ಎಲ್ಲರಿಗೂ ದುಃಖ ತಳಮಳವಾಯಿತಾದರೂ ಯಾರೂ ಏನೂ ಮಾಡುವಂತಿರಲಿಲ್ಲ.

ಕುಂತಿ ತನ್ನ ಪತಿಯಂತೆಯೇ ಅರಮನೆಯ ಭೋಗಗಳನ್ನೆಲ್ಲ ತ್ಯಜಿಸಿದಳು. ತಾನು ತೊಟ್ಟಿದ್ದ ಬೆಲೆಬಾಳುವ ವಸ್ತ್ರ ಒಡವೆಗಳನ್ನು ತೆಗೆದು ಹಾಕಿದಳು. ಅವುಗಳ ಬದಲು ನಾರುಮಡಿ ಚರ್ಮಗಳನ್ನು ತೊಟ್ಟಳು. ಹಣ್ಣು ಹಂಪಲು ಗೆಡ್ಡೆ ಗೆಣಸುಗಳನ್ನು ತಿಂದು ಕಾಲಯಾಪನೆ ಮಾಡತೊಡಗಿದಳು. ಚಳಿ-ಮಳೆ-ಗಾಳಿ-ಬಿಸಿಲೆನ್ನದೆ ಹಸಿವು ನೀರಡಿಕೆಯನ್ನು ಅಷ್ಟಾಗಿ ಲಕ್ಷಿಸದೆ ಪತಿಯೊಡನೆ ತಪಸ್ಸಿಗೆ ಸದೃಶವಾದ ಜೀವನ ನಡೆಸಿದಳು. ಮಾದ್ರಿ ಸಹ ಎಲ್ಲದರಲ್ಲೂ ಅಕ್ಕನನ್ನು ಅನುಸರಿಸಿದಳು.

ಋಷಿಗಳ ರೀತಿ ಜೀವನ ನಡೆಸುತ್ತ ಪಾಂಡು ಹರ್ಷಚಿತ್ತನಾಗಿ ಕಾಡಿನಲ್ಲಿ ಇದ್ದುಬಿಟ್ಟ. ಕುಂತಿ, ಮಾದ್ರಿಯವರೂ ಅವನ ಸೇವೆ ಮಾಡಿಕೊಂಡು ಸುಖವಾಗಿಯೇ ಇದ್ದರು. ಆದರೆ ಪಾಂಡುವಿನ ಮನಸ್ಸನ್ನು ಒಂದು ಕೊರಗು ಒಳಗೊಳಗೇ ಬಾಧಿಸುತ್ತಿತ್ತು. ಅವನಿಗೆ ಮಕ್ಕಳಿರಲಿಲ್ಲ. ಮಕ್ಕಳಿಲ್ಲದವನಿಗೆ ಸ್ವರ್ಗ ಇಲ್ಲ ಎಂದು ಧರ್ಮಗ್ರಂಥಗಳಲ್ಲಿ ಹೇಳಿದೆ. ಇದನ್ನು ನೆನೆಸಿಕೊಂಡಾಗಲೆಲ್ಲ ಪಾಂಡುವಿಗೆ ತುಂಬ ದುಃಖವುಂಟಾಗುತ್ತಿತ್ತು. ಬರಬರುತ್ತ ಈ ದುಃಖ ದೊಡ್ಡದಾಗಿ ಬೆಳೆದು ಅವನ ಮನಸ್ಸಿನ ನೆಮ್ಮದಿಗೇ ಭಂಗ ಬಂತು. ಕುಂತಿಗೆ ತನ್ನ ಗಂಡ ಏನೋ ದುಃಖದಲ್ಲಿ ಇದ್ದಾನೆ ಎನ್ನುವ ಅನುಮಾನ ಬಂತು. ಅವಳು ಒಮ್ಮೆ ಗಂಡನನ್ನು ಕೇಳಿದಳು.

“ಈಚೆಗೆ ಸದಾ ಏನೋ ಯೋಚಿಸುವಂತೆ ಇರುತ್ತೀಯಲ್ಲ ಮಹಾರಾಜ, ಏನದು?”

“ಏನೂ ಇಲ್ಲ ಕುಂತಿ.”

“ನನ್ನೆದುರು ಮುಚ್ಚಿಡಬೇಡಿ ಮಹಾರಾಜ. ನೀವು ಸದಾ ಏನೋ ಯೋಚಿಸುತ್ತ ಕೊರುಗುತ್ತಿದ್ದೀರಿ. ನಮ್ಮ ನಡವಳಿಕೆಗಳಲ್ಲಿ ಏನಾದರೂ ದೋಷ ಕಂಡಿತೆ ಮಹಾರಾಜ?”

“ಛೆ, ಛೆ. ನಿನ್ನಂಥ ಸಾಧ್ವಿಯನ್ನು ಪಡೆದ ನಾನು ಧನ್ಯ ಎಂದುಕೊಂಡಿದ್ದೇನೆ.”

“ಹಾಗಾದರೆ ನೀವು ಚಿಂತಿಸುವುದು ಏನನ್ನು?”

“ಮಕ್ಕಳಿಲ್ಲದವರಿಗೆ ಸದ್ಗಿತಿಯಿಲ್ಲ ಎಂದು ಶಾಸ್ತ್ರದಲ್ಲಿ ಹೇಳಿದೆ. ನಾನು ಸಂತಾನವಿಲ್ಲದೆ ಸಾಯುವಂತಾಯಿತಲ್ಲ!”

ಕುಂತಿಗೆ ಆಗ ದೂರ್ವಾಸರು ತನಗೆ ಉಪದೇಶಿಸಿದ ಮಂತ್ರಗಳ ನೆನಪು ಬಂತು. ಕನ್ಯೆಯಾಗಿದ್ದಾಗ ತನಗೆ ಮಗು ಹುಟ್ಟಿದ್ದ ವಿಷಯವನ್ನು ಬಿಟ್ಟು ಉಳಿದ ಎಲ್ಲವನ್ನೂ ಅವಳು ಗಂಡನಿಗೆ ತಿಳಿಸಿದಳು. ಕತ್ತಲು ಕವಿದಿದ್ದ ಪಾಂಡುವಿನ ಮನಸ್ಸಿನಲ್ಲಿ ಬೆಳಕು ಮಿಂಚಿತು; ತಾನು ಸಂತಾನಹೀನನಾಗಿ ಬಾಳಬೇಕಾಗಿಲ್ಲ ಎಂದು  ತಿಳಿದು ಹಿಡಿಸಲಾರದಷ್ಟು ಸಂತೋಷವಾಯಿತು. ದೂರ್ವಾಸರು ನೀಡಿದ ಮಂತ್ರದ ಬಲದಿಂದ ಮಕ್ಕಳನ್ನು ಪಡೆಯಲು ಅವನು ಕುಂತಿಗೆ ಒತ್ತಾಯ ಮಾಡಿದ. ಕುಂತಿ ಕೇಳಿದಳು: “ದೂರ್ವಾಸರು ಕೊಟ್ಟ ಮಂತ್ರದಿಂದ ಯಾವ ದೇವತೆಯನ್ನು ಬೇಕಾದರೂ ಕರೆಯಬಹುದು. ಅಂಥ ದೇವತೆಯ ಅನುಗ್ರಹದಿಂದ ನನಗೆ ಒಂದು ಮಗುವಾಗುತ್ತದೆ. ಯಾವ ದೇವತೆಯನ್ನು ಕರೆಯಲಿ ಮಹಾರಾಜ?”

“ಕುಂತಿ, ದೇವತೆಗಳಲ್ಲೆಲ್ಲ ತುಂಬ ಪುಣ್ಯಪ್ರಭಾವ ಇರುವವನು ಯಮಧರ್ಮ. ಅವನು ನ್ಯಾಯಧರ್ಮಗಳ ಪ್ರತಿರೂಪ. ಅವನಿಂದ ಮಗನನ್ನು ಪಡೆದರೆ ನಮ್ಮಲ್ಲಿ ಅಧರ್ಮ ಸೇರುವುದಿಲ್ಲ. ಆದ್ದರಿಂದ ಅವನನ್ನು ಕರೆ.”

ಕುಂತಿ ಮಂತ್ರವನ್ನು ಜಪಿಸಿ, ಧರ್ಮನನ್ನು ಆಹ್ವಾನಿಸಿದಳು. ಅವನ ಯೋಗಮೂರ್ತಿಯನ್ನು ಸೇರಿ ಯುಧಿಷ್ಠಿರ ಎಂಬ ಮಗನನ್ನು ಪಡೆದಳು. ಅವನೇ ಮುಂದೆ ಧರ್ಮರಾಯ ಎಂದು ಹೆಸರಾದ.

ಪಾಂಡುವಿಗೆ ತಾನು ಪುತ್ರವಂಶನಾದೆನೆಂದು ಬಹಳ ಹಿಗ್ಗು. ಅವನಿಗೆ ಇನ್ನಷ್ಟು ಮಕ್ಕಳು ಬೇಕೆನಿಸಿತು. ಅವನ ಅಪೇಕ್ಷೆಯಂತೆ ಕುಂತಿ ವಾಯು ಮತ್ತು ಇಂದ್ರರನ್ನು ಮಂತ್ರದಿಂದ ಆಹ್ವಾನಿಸಿ ಭೀಮ, ಅರ್ಜುನ ಎಂಬ ಇಬ್ಬರು ಮಹಾಶೂರರಾದ ಮಕ್ಕಳನ್ನು ಪಡೆದಳು ಮತ್ತೂ ಒಂದು ಮಗುವನ್ನು ಪಡೆಯುವಂತೆ ಪಾಂಡು ಒತ್ತಾಯ ಮಾಡಿದಾಗ ಕುಂತಿ ಒಪ್ಪಲಿಲ್ಲ. ‘ನಮಗೆ ಮಕ್ಕಳು ಇರಲಿಲ್ಲ. ಆದ್ದರಿಂದ ಈ ಮಂತ್ರಗಳ ಸಹಾಯದಿಂದ ಸಂತಾನ ಪಡೆಯುವುದು ಆಪದ್ಧರ್ಮವಾಗಿತ್ತು. ನನಗೆ ಇಷ್ಟು ಮಕ್ಕಳು ಸಾಕು” ಎಂದಳು.

ಕುಂತಿಗೆ ಮಕ್ಕಳಾದದ್ದನ್ನು ಕಂಡು ಮಾದ್ರಿ ತನಗೂ ಮಕ್ಕಳಾಗಿದ್ದರೆ ಎಂದು ಆಸೆಪಟ್ಟಳು. ಇದನ್ನು ಒಂದು ಸಲ ಪಾಂಡುವಿನ ಹತ್ತಿರ ಹೇಳಿಕೊಂಡಳು. ಕುಂತಿಗೆ ಇದು ತಿಳಿಯಿತು. ಮಾದ್ರಿ ಕುಂತಿಯ ಸವತಿ. ಸವತಿಯ ವಿಷಯದಲ್ಲಿ ಉದಾರವಾಗಿ ನಡೆದುಕೊಳ್ಳುವ ಹೆಣ್ಣು ತೀರಾ ಅಪರೂಪ. ಕುಂತಿ ಅಂಥ ಅಪರೂಪದ ಸ್ತ್ರೀ. ಅವಳು ಮಾದ್ರಿಗೂ ಆ ಮಂತ್ರವನ್ನು ಉಪದೇಶಿಸಿದಳು. ಮಾದ್ರಿ ಅಶ್ವಿನೀ ದೇವತೆಗಳನ್ನು  ಆಹ್ವಾನಿಸಿ ನಕುಲ,ಸಹದೇವ ಎಂಬ ಇಬ್ಬರು ಮಕ್ಕಳನ್ನು ಪಡೆದಳು. ಈ ಐದು ಮಂದಿ ಪಾಂಡವರು ಎನ್ನಿಸಿಕೊಂಡರು.

ಪಾಂಡುಮಾದ್ರಿ ಇನ್ನಿಲ್ಲ

ಪಾಂಡು ಕುಂತಿ ಮಾದ್ರಿಯರು ಮಕ್ಕಳ ಆಟಪಾಟಗಳಲ್ಲಿ ತಮ್ಮ ಉಳಿದ ಕೊರತೆಗಳನ್ನು ಮರೆಯುತ್ತಾ ಸಂತೋಷದಿಂದ ಇದ್ದರು. ಹೀಗಿರುವಾಗ ಒಂದು ಸಲ ಪಾಂಡು ಅಕಸ್ಮಾತ್ತಾಗಿ, ಋಷಿ ಶಾಪವನ್ನು ಯೋಚಿಸದೆ ಮಾದ್ರಿಯನ್ನು ಬಯಸಿದನು. ಪರಿಣಾಮವಾಗಿ ಕಿಂದಮ ಋಷಿಯ ಶಾಪ ಫಲಿಸಿ ತೀರಿಕೊಂಡನು.

ಇದೆಲ್ಲ ಇದ್ದಕ್ಕಿದ್ದಂತೆ ನಡೆದು ಹೋಯಿತು. ಇಂಥ ಯಾವ ಪ್ರಸಂಗಕ್ಕೂ ಅವಕಾಶವಾಗಬಾರದು ಎಂದು ಕುಂತಿ ಎಚ್ಚರಿಕೆಯಿಂದ ಇದ್ದರೂ ಅದು ಆಗಿಯೇ ಹೋಯಿತು. ಗಂಡನನ್ನು ಕಳೆದುಕೊಂಡ ಕುಂತಿಮಾದ್ರಿಯರ ಶೋಕ ಹೇಳತೀರದು. ಅಲ್ಲಿದ್ದ ಋಷಿಗಳೆಲ್ಲ ಬಂದು ಅವರಿಗೆ ಸಮಾಧಾನ ಹೇಳಿದರು. ಕುಂತಿ ಗಂಡನ ಜೊತೆ ಸಹಗಮನ ಮಾಡುವುದಾಗಿ ನಿರ್ಧಾರ ಮಾಡಿದಳು. ಆದರೆ ಮಾದ್ರಿ ಅದಕ್ಕೆ ಒಪ್ಪಲಿಲ್ಲ. “ಒಂದು ರೀತಿಯಲ್ಲಿ ಪಾಂಡುವಿನ ಮರಣಕ್ಕೆ ನಾನೂ ಕಾರಣ. ಆದ್ದರಿಂದ ನಾನೇ ಅವನ ಜೊತೆ ಪರಲೋಕಕ್ಕೆ ಹೋಗುತ್ತೇನೆ. ನಮ್ಮ ಮಕ್ಕಳನ್ನು ಕಾಪಾಡಿಕೊಳ್ಳಲು ಯಾರಾದರೂ ಒಬ್ಬರು ಉಳಿಯಬೇಕು. ನೀನು ಮಕ್ಕಳನ್ನು ನನಗಿಂತ ಚೆನ್ನಾಗಿ ನೋಡಿಕೊಳ್ಳಬಲ್ಲೆ. ಅವರ ಜವಾಬ್ದಾರಿಯನ್ನು ನಿನಗೆ ಬಿಟ್ಟು ಹೋಗುತ್ತಿದ್ದೇನೆ.” ಎಂದು ಹೇಳಿ ಉರಿಯುತ್ತಿರುವ ಚಿತೆ ಏರಿ ಪತಿಯೊಡನೆ ಸಹಗಮನ ಮಾಡಿದಳು.

ಮಕ್ಕಳಿಗಾಗಿ ಹಿಂದಕ್ಕೆ

ಈಗ ಕುಂತಿಗೆ ಒದಗಿದ ಸ್ಥಿತಿ ಎಂಥ ಧೈರ್ಯಶಾಲಿಗೂ ಮಂಕು ಕವಿಸುವಂಥದು. ಕೈ ಹಿಡಿದ ಗಂಡ, ತಂಗಿಯಂತಿದ್ದ ಮಾದ್ರಿ ಇಬ್ಬರನ್ನೂ ಕಳೆದುಕೊಂಡು ಅವಳು ಈಗ ಏಕಾಕಿ. ಇರುವುದೋ ಒಂದು ಕಾಡಿನನಲ್ಲಿ ಜೊತೆಗೆ ಐದು ಜನ ಮಕ್ಕಳು. ಅದೂ ಎಳೆ ಬಾಲಕರು. ಆ ಎಳೆಯರನ್ನು ದೊಡ್ಡವರನ್ನಾಗಿ ಬೆಳೆಸಬೇಕು; ಕ್ಷತ್ರಿಯ ಕುಲಕ್ಕೆ ಯೋಗ್ಯವಾದ ಶಿಕ್ಷಣ ಕೊಡಿಸಬೇಕು. ವಂಶದ ಹಿರಿಮೆಗೆ ತಕ್ಕವರಾಗಿ ಬಾಳುವಂತೆ ಮಾಡಬೇಕು. ಇಂಥ ಹೊತ್ತಿನಲ್ಲಿ ಅಲ್ಲಿದ್ದ ಋಷಿಗಳು ಅವಳ ಸಹಾಯಕ್ಕೆ ಬಂದರು. “ತಾಯಿ, ನೀನು ಚಿಂತಿಸಬೇಡ. ಇನ್ನು ನೀನು ಈ ಕಾಡಿನಲ್ಲಿ ಇರುವುದು ಕಷ್ಟ. ಹಸ್ತಿನಾವತಿಗೆ ಹೋಗೋಣ. ನಾವೆಲ್ಲ ನಿನ್ನ ಜೊತೆಗೆ ಬರುತ್ತೇವೆ. ನಿನ್ನನ್ನು ಭೀಷ್ಮಾದಿಗಳಿಗೆ ಒಪ್ಪಿಸಿ ಹಿಂತಿರುಗುತ್ತೇವೆ.” ಹೀಗೆ ಹೇಳಿ ಋಷಿಗಳು ಕುಂತಿಯನ್ನೂ ಮಕ್ಕಳನ್ನೂ ಭೀಷ್ಮನ ಲ್ಲಿಗೆ ಕರೆತಂದು ಒಪ್ಪಿಸಿದರು.

ಅಲ್ಲಿಂದ ಮುಂದೆ ಭೀಷ್ಮನೇ ತಂದೆ ಇಲ್ಲದ ಪಾಂಡವರಿಗೆ ಶಿಕ್ಷಕನಾದ. ಪಾಂಡವರು ದಾಯಾದಿಗಳಾದ ಕೌರವರ ಜೊತೆಯಲ್ಲಿ ದ್ರೋಣಾಚಾರ್ಯರ ಬಳಿ ಶಿಕ್ಷಣ ಪಡೆದರು. ಭೀಮನು ಗದಾಯುದ್ಧದಲ್ಲಿಯೂ, ಅರ್ಜುನನು ಬಾಣವಿದ್ಯೆಯಲ್ಲಿಯೂ ಅಸಾಧ್ಯಶೂರರು ಎನಿಸಿಕೊಂಡರು.

ವಿಧಿಯ ಕ್ರೌರ್ಯ

ಒಮ್ಮೆ ದ್ರೋಣಾಚಾರ್ಯರು ತಮ್ಮ ಶಿಷ್ಯರ ವಿದ್ಯಾಕೌಶಲವನ್ನು ಹಸ್ತಿನಾವತಿಯ ಪ್ರಜೆಗಳೆದುರು ಪ್ರದಶಿಸಲು ಒಂದು ಅಸ್ತ್ರ ಪ್ರದರ್ಶನವನ್ನು ಏರ್ಪಡಿಸಿದರು. ದುರ್ಯೋಧನ, ಭೀಮ, ಅರ್ಜುನ ಮೊದಲಾಗಿ ಎಲ್ಲ ರಾಜಕುಮಾರರೂ ತಮ್ಮ ತಮ್ಮ ವಿದ್ಯೆಯನ್ನು ಜನ ಮೆಚ್ಚುವಂತೆ ಪ್ರದರ್ಶಿಸಿದರು.

ಆ ಹೊತ್ತಿಗೆ ಅಲ್ಲಿಗೆ ಕರ್ಣ ಬಂದ. ಅವನು ಕುಂತಿಯ ಮಗ; ವಿವಾಹಕ್ಕೆ ಮೊದಲೇ ಅವಳಲ್ಲಿ ಹುಟ್ಟಿದವನು. ಜನಕ್ಕೆ ಆ ಸಂಗತಿ ತಿಳಿದರೆ ತನಗೆ ಅಪಖ್ಯಾತಿ ಬಂದೀತೆಂಬ ಭಯದಿಂದ ಕುಂತಿ ಆ ಮಗುವನ್ನು ಗಂಗೆಯಲ್ಲಿ ತೇಲಿ ಬಿಟ್ಟಿದ್ದಳು. ಅದು ಅಧಿರಥ ಎಂಬ ಬೆಸ್ತನ ಕೈಗೆ ಸಿಕ್ಕಿತು; ಕರ್ಣ ಎಂಬ ಹೆಸರು ಪಡೆದು ಬೆಳೆಯಿತು. ಕರ್ಣ ಪರಶುರಾಮರ ಬಳಿ ಧನುರ್ವಿದ್ಯೆಯನ್ನು ಅಭ್ಯಾಸ ಮಾಡಿ ಒಳ್ಳೆಯ ಬಿಲ್ಲುಗಾರ ಎನ್ನಿಸಿಕೊಂಡಿದ್ದ. ಪ್ರದರ್ಶನ ನೋಡಲು ಅವನೂ ಬಂದಿದ್ದ. ಜನ ಅರ್ಜುನನ ಬಾಣ ವಿದ್ಯೆಗೆ ಮಾರುಹೋದದ್ದನ್ನು ಕಂಡು ಅವನಿಗೆ ಆಶ್ಚರ್ಯವಾಯಿತು. “ಅದೇನೂ ಅಂಥ ಕಷ್ಟದ ಕೆಲಸವಲ್ಲ, ನಾನೂ ಮಾಡಿ ತೋರಿಸಬಲ್ಲೆ” ಎಂದು ಸವಾಲು ಹಾಕಿ ರಂಗಸ್ಥಳಕ್ಕೆ ಬಂದು ನಿಂತ. ಅವರಿಬ್ಬರಿಗೂ ಯುದ್ಧ ನಡೆದು ಯಾರು ಹೆಚ್ಚು ಶೂರರು ಎಂದು ತೀರ್ಮಾನಿಸುವಂತೆ ಅವನು ದ್ರೋಣನನ್ನು ಕೇಳಿದ.

ಕರ್ಣ ಬಂದದ್ದನ್ನು ನೋಡಿದಾಗಲೇ ಕುಂತಿಗೆ ಏನೋ ಕಳವಳ ಉಂಟಾಗಿತ್ತು. ಅವನು ತೊಟ್ಟ ಕವಚ ಕುಂಡಲ ನೋಡಿದಾಗ ಅದು ತನ್ನ ಮಗನೇ ಎಂದು ತಿಳಿದು ಹೋಯಿತು. ಅರ್ಜುನ ತಮ್ಮ ಎಂದು ತಿಳಿಯದೆ ಕರ್ಣ ಅವನ ಜೊತೆಗೇ ಯುದ್ಧಕ್ಕೆ ನಿಂತಿದ್ದನ್ನು ಕಂಡು ಕುಂತಿ ಕಂಗಾಲಾದಳು; “ದೇವರೇ ಈ ಅನಾಹುತ ತಪ್ಪಿಸು” ಎಂದು ಮನಸ್ಸಿನಲ್ಲೇ ಮೊರೆಯಿಟ್ಟಳು. ಇಷ್ಟು ದಿನ ರಹಸ್ಯವಾಗಿ ಇಟ್ಟಿದ್ದನ್ನು ಈಗ ಹೇಳುವಂತಿಲ್ಲ. ಹೇಳದೆ ಅವರಿಗೆ ತಾವು ಅಣ್ಣ-ತಮ್ಮ ಎಂದು ತಿಳಿಯುವಂತಿಲ್ಲ. ತಾಯಿಯಾದವಳಿಗೆ ಬರಬಹುದಾದ ಅತಿ ದೊಡ್ಡ ವಿಪತ್ತು ಅವಳಿಗೆ ಈಗ ಬಂದುಹೋಯಿತು. ಮುಂದೆ ಏನಾಗಬಹುದೆಂದು ಕಲ್ಪಿಸಿಕೊಂಡೇ ಅವಳು ಮೂರ್ಛೆ ಹೋದಳು. ಆದರೆ ಆಗಲೆ ಕತ್ತಲೆಯಾಗುತ್ತ ಬಂದಿದ್ದರಿಂದ ಅದೃಷ್ಟವಶಾತ್‌ ಆ ಯುದ್ಧ ನಡೆಯಲಿಲ್ಲ.

ಕಾಡಿನಲ್ಲಿ ಸೊಸೆ

ಧೃತರಾಷ್ಟ್ರನ ಮಕ್ಕಳು ಕೌರವರೆಂದೂ, ಕುಂತಿಯ ಮಕ್ಕಳು ಪಾಂಡವರೆಂದೂ ಪ್ರಸಿದ್ಧರಾದರು. ದಾಯಾದಿಗಳಾದರೂ ಅವರ ಶೀಲ ಸ್ವಭಾವಗಳಲ್ಲಿ ಪರ್ವತದಷ್ಟು ಅಂತರವಿತ್ತು. ಕೌರವರು ದುಷ್ಟರು, ಅನ್ಯಾಯಕ್ಕೆ ಹೇಸದವರು.ಪಾಂಡವರು ಧರ್ಮಾತ್ಮರು, ಸತ್ಯಸಂಧರು ಮತ್ತು ಶೀಲವಂತರು. ಪಾಂಡವರ ಒಳ್ಳೆಯತನಕ್ಕೆ ಕುಂತಿ ಅವರನ್ನು ಸಾಕಿದ ರೀತಿಯೂ ಒಂದು ಕಾರಣ. ಮಕ್ಕಳು ಅಷ್ಟು ಒಳ್ಳೆಯವರಾಗಿದ್ದರೂ ಕುಂತಿ ಅವರು ಕಷ್ಟಪಡುವುದನ್ನು ಕಾಣಬೇಕಾಯಿತು. ಆದರೆ ಅವಳು ಎಂದೂ ಎದೆಗುಂದಲಿಲ್ಲ. ಅನ್ಯಾಯಕ್ಕೆ ಹೊಂದಿ ಕೊಂಡಾದರೂ ಸುಖಪಡುವಂತೆ ಎಂದೂ ಮಕ್ಕಳನ್ನು ಪ್ರಚೋದಿಸಲಿಲ್ಲ. ಪಾಂಡವರ ಏಳಿಗೆ ಕೌರವರಿಗೆ ಸಹಿಸಲಿಲ್ಲ. ದುರ್ಯೋಧನನಿಗಂತೂ ಭೀಮನನ್ನು ಕಂಡರೆ ದ್ವೇಷ. ಭೀಮನನ್ನು ಕೊಲ್ಲಲೂ ಎಷ್ಟೋ ಬಾರಿ ಪ್ರಯತ್ನಿಸಿದ. ಪಾಂಡವರೆಲ್ಲ ನಾಶವಾದರೆ ನಾನೇ ರಾಜ್ಯಕ್ಕೆ ಒಡೆಯನಾಗಬಹುದು ಎಂದು ಆಸೆ ಅವನಿಗೆ. ತನ್ನ ಮಕ್ಕಳಿಗೆ ಕೌರವರು ಕೊಟ್ಟ ಕಷ್ಟವನ್ನೆಲ್ಲ ನೋಡಿಕೊಂಡು ಸುಮ್ಮನಿರಬೇಕಾಯಿತು ಕುಂತಿ.

ದುರ್ಯೋಧನ ತಂದೆ ಧೃತರಾಷ್ಟ್ರನಿಗೆ ಒಂದು ಸಲಹೆ ಕೊಟ್ಟು ಒಪ್ಪಿಸಿದ. ಪಾಂಡವರನ್ನು ವಾರಣಾವತ ಎಂಬಲ್ಲಿಗೆ ಕಳುಹಿಸು ಎಂದ. ಅಲ್ಲಿ ಪಾಂಡವರು ವಾಸ ಮಾಡಲು ಒಂದು ಅರಮನೆಯನ್ನು ಕಟ್ಟಿಸಿದ. ಅದು ಅರಗಿನ ಮನೆ, ಬೆಂಕಿ ತಗುಲಿದರೆ ಕಣ್ಣು ಮುಚ್ಚಿ ತೆರೆಯುವುದರಲ್ಲಿ ಸುಟ್ಟು ಹೋಗುವುದು.

ಕೌರವರು ಪಾಂಡವರನ್ನು ಅರಗಿನ ಮನೆಯಲ್ಲಿ ಸುಟ್ಟು ಬಿಡಲು ಸಂಚು ಮಾಡಿದರು. ಪಾಂಡವರು ತಾಯಿಯ ಜೊತೆ ಅಲ್ಲಿಂದ ಪಾರಾಗಿ ಬರುತ್ತಿರುವಾಗ ಭೀಮ ಹಿಡಿಂಬನೆಂಬ ರಾಕ್ಷಸನನ್ನು ಕೊಂದ. ಅವನ ತಂಗಿ ಹಿಡಿಂಬೆ ಭೀಮನನ್ನು ಮದುವೆಯಾಗುವುದಾಗಿ ಪಟ್ಟು ಹಿಡಿದಳು. ಭೀಮನೇ ತನ್ನ ಪತಿ ಎಂದು ಅವಳು ಮನಸ್ಸಿನಲ್ಲಿ ನಿಶ್ಚಯಿಸಿಕೊಂಡಿದ್ದಳು. ಭೀಮ ಮೊದಮೊದಲು ಅದಕ್ಕೆ ಒಪ್ಪಲಿಲ್ಲ; ಚೆಲುವಾಗಿದ್ದರೂ ಅವಳು ಮಾಯಾವಿನಿ ಎಂದು ಅವನಿಗೆ ಶಂಕೆ. ಹಿಡಿಂಬೆ ಕುಂತಿಯಲ್ಲಿ ತನ್ನ ಅಂತರಂಗವನ್ನು ತೋಡಿಕೊಂಡಳು. “ಭೀಮ ತನ್ನ ಪತಿ ಎನ್ನುವ ತೀರ್ಮಾನಕ್ಕೆ ಬಂದಿದ್ದೇನೆ. ಅವನನ್ನು ಬಿಟ್ಟು ನನಗೆ ಬೇರೆ ದೈವವಿಲ್ಲ. ಅವನೋ ನನ್ನನ್ನು ತಿರಸ್ಕರಿಸುತ್ತಿದ್ದಾನೆ. ಹೆಣ್ಣಿನ ಕಷ್ಟ ನಿನಗೆ ತಿಳಿಯದೆ ತಾಯಿ? ನನ್ನನ್ನು ಪರಿಗ್ರಹಿಸುವಂತೆ ಹೇಳು” ಎಂದು ಬೇಡಿಕೊಂಡಳು. ಕುಂತಿಯ ಮನಸ್ಸು ಕರಗಿತು. ಹಿಡಿಂಬೆಯ ಪ್ರಾಮಾಣಿಕ ಪ್ರೀತಿ ಮನಸ್ಸನ್ನು ತಟ್ಟಿತು. ಅವಳನ್ನು ವಿವಾಹವಾಗಲು ಭೀಮನಿಗೆ ತಿಳಿಸಿದಳು. ರಾಕ್ಷಸ ಕುಲದವಳೆಂದು ಶಂಕಿಸದೆ ಅವಳನ್ನು ತನ್ನ ಸೊಸೆಯನ್ನಾಗಿ ಮಾಡಿಕೊಂಡಳು.

ಬಕಾಸುರ

ಪಾಂಡವರು ಏಕಚಕ್ರನಗರದಲ್ಲಿ ಇದ್ದಾಗ ಒಬ್ಬ ಬ್ರಾಹ್ಮಣನ ಮನೆಯಲ್ಲಿ ವೇಷ ಮರೆಸಿಕೊಂಡು ವಾಸಿಸುತ್ತಿದ್ದರು. ಆ ಊರಿನ ಹೊರಗೆ ಇದ್ದ ಬೆಟ್ಟದ ಮೇಲೆ ಬಕಾಸುರ ಎಂಬ ಭಯಂಕರ ರಾಕ್ಷಸನಿದ್ದ. ಅವನಿಗೆ ಊರಿನವರು ದಿನವೂ ಬಂದು ಬಂಡಿ ಅನ್ನ ಮತ್ತು ಒಬ್ಬ ಮನುಷ್ಯನನ್ನು ಆಹಾರವಾಗಿ ಸರದಿ ಪ್ರಕಾರ ಕಳಿಸಬೇಕಾಗಿತ್ತು. ಇಲ್ಲದಿದ್ದರೆ ಒಟ್ಟಿಗೆ ಊರನ್ನೇ ಕಬಳಿಸಿ ಬಿಡುತ್ತೇನೆ ಎಂದು ಅಲ್ಲಿಯ ಜನರಿಗೆ ಬೆದರಿಕೆ ಹಾಕಿದ್ದ. ಒಂದು ಸಲ ಪಾಂಡವರಿಗೆ ಮನೆ ಕೊಟ್ಟಿದ್ದ ಬ್ರಾಹ್ಮಣನ ಸರದಿ ಬಂತು. ಬಕಾಸುರನಿಗೆ ಆಹಾರವಾಗಿ ಅವನು ಯಾರನ್ನೂ ಕಳಿಸುವಂತಿರಲಿಲ್ಲ. ಅವನೇ ಹೋಗಬೇಕು. ಹಾಗೆ ಮಾಡಿದರೆ ಆ ಕುಟುಂಬಕ್ಕೆ ದಿಕ್ಕು ಯಾರು? ಇಂಥ ಸಂಕಟಕ್ಕೆ ಸಿಕ್ಕು ಅವನ ಸಂಸಾರದವರೆಲ್ಲ ದುಃಖಿಸುತ್ತ ಕುಳಿತಿದ್ದಾಗ ಕುಂತಿ ಅಲ್ಲಿಗೆ ಬಂದಳು; ಬ್ರಾಹ್ಮಣನನ್ನು ಸಮಾಧಾನ ಮಾಡಿದಳು. “ನನಗೆ ಐದು ಜನ ಮಕ್ಕಳಿದ್ದಾರೆ. ಅವರಲ್ಲಿ ಒಬ್ಬನನ್ನು ನಿನ್ನ ಬದಲು ರಾಕ್ಷಸನಿಗೆ ಆಹಾರವಾಗಿ ಕಳಿಸುತ್ತೇನೆ, ಯೋಚಿಸಬೇಡ” ಎಂದಳು. ಬ್ರಾಹ್ಮಣ ಇದಕ್ಕೆ ಮೊದಲು ಒಪ್ಪಲಿಲ್ಲ. “ನನ್ನ ಬದಲು ಇನ್ನೊಬ್ಬ ಸಾಯಲಿ ಎನ್ನುವುದು ಅಧರ್ಮ. ಇದಕ್ಕೆ ನಾನು ಒಪ್ಪುವುದಿಲ್ಲ ತಾಯಿ” ಎಂದನು. ಆದರೆ ಕುಂತಿ “ನೀನು ಹಾಗೆ ಯೋಚಿಸಬೇಡ, ನನ್ನ ಮಗ ಶೂರ, ಮಂತ್ರಸಿದ್ಧಿ ಇರುವವನು. ಅವನು ರಾಕ್ಷಸನನ್ನು ಕೊಂದು ಬರುತ್ತಾನೆ” ಎಂದು ಅವನನ್ನು ಒಪ್ಪಿಸಿದಳು; ಭೀಮನನ್ನು ಆಹಾರವಾಗಿ ರಾಕ್ಷಸನ ಹತ್ತಿರಕ್ಕೆ ಕಳಿಸಿಕೊಟ್ಟಳು. ಭೀಮನ ಬಲದಲ್ಲಿ ಅವಳಿಗೆ ನಂಬಿಕೆ ಇತ್ತು. ಬಕಾಸುರನನ್ನು ಅವನು ಚಚ್ಚಿ ಹಾಕುತ್ತಾನೆ ಎಂದು ಗೊತ್ತಿತ್ತು. ಭೀಮ ಹಾಗೇ ಮಾಡಿದ. ಬಕಾಸುರನನ್ನು ಕೊಂದು ಇಡೀ ಊರನ್ನು ಸಾವಿನ ದವಡೆಯಿಂದ ಕಾಪಾಡಿದ. ಎಷ್ಟೇ ಧೈರ್ಯವಿದ್ದರೂ ಸಾಮಾನ್ಯರು ಯಾರು ತಾನೇ ಮಕ್ಕಳನ್ನು ರಾಕ್ಷಸನ ಜೊತೆ ಯುದ್ಧಕ್ಕೆ ಕಳಿಸುತ್ತಾರೆ? ಆದರೆ ಕುಂತಿ ಧೀರೆ. ಬೇರೆಯವರ ಕಷ್ಟ ಕಂಡರೆ ಅವಳ ಮನಸ್ಸು ಕರಗಿ ನೀರಾಗುತ್ತಿತ್ತು. ತಮಗೆ ಸಂಕಟ ಬಂದರೂ ಸರಿಯೇ ಬೇರೆಯವರನ್ನು ರಕ್ಷಿಸಬೇಕು ಎನ್ನುವ ಧರ್ಮಬುದ್ಧಿ ಅವಳಲ್ಲಿ ತುಂಬ ಇತ್ತು. ಅವಳಿಂದಾಗಿ ಆ  ಊರಿಗೆ ರಾಕ್ಷಸನ ಭೀತಿ ತಪ್ಪಿತು.

ಸೊಸೆಯಾಗಿ ದ್ರೌಪದಿ

ಪಾಂಡವರು ಅರಗಿನ ಮನೆಯಿಂದ ಪಾರಾಗಿ ಬಂದ ಮೇಲೆ ಸ್ವಲ್ಪ ಕಾಲ ಬ್ರಾಹ್ಮಣರ ವೇಷದಲ್ಲಿದ್ದು ಭಿಕ್ಷೆ ತಂದು ಜೀವನ ಮಾಡುತ್ತಿದ್ದರು. ಆಗ ಅರ್ಜುನ ಮತ್ಸ್ಯ ಯಂತ್ರವನ್ನು ಭೇದಿಸಿ ದ್ರೌಪದಿಯನ್ನು ಸ್ವಯಂವರದಲ್ಲಿ ಗೆದ್ದ. ಪಾಂಡವರೆಲ್ಲ ದ್ರೌಪದಿಯ ಜೊತೆಯಲ್ಲಿ ಮನೆಗೆ ಬಂದರು. ಮನೆಯ ಒಳಗೆ ಬರುತ್ತಿದ್ದಂತೆಯೇ ಹಾಸ್ಯಕ್ಕಾಗಿ “ಅಮ್ಮಾ, ಇವತ್ತು ಒಂದು ಭಾರಿ ಭಿಕ್ಷೆಯನ್ನೇ ಸಂಪಾದಿಸಿ ತಂದಿದ್ದೇವೆ” ಎಂದು ಕೂಗಿ ಕೇಳಿದರು. ಒಳಗಿದ್ದ ಕುಂತಿಗೆ  ಈ ಮಾತಿನ ಅರ್ಥ ಸರಿಯಾಗಿ ಗೊತ್ತಾಗಲಿಲ್ಲ. “ಎಲ್ಲರೂ ಅದನ್ನು ಸಮನಾಗಿ ಹಂಚಿಕೊಳ್ಳಿ” ಎಂದು ಕುಂತಿ ಇದ್ದಲ್ಲಿಂದಲೇ ಉತ್ತರ ಕೊಟ್ಟಳು. ಹೊರಗೆ ಬಂದು ನೋಡಿದಾಗಲೇ ಅವಳಿಗೆ ಪಾಂಡವರು ಹೇಳಿದ ಭಿಕ್ಷೆ ದ್ರೌಪದಿ ಎಂದು ಗೊತ್ತಾದುದು. ಎಂಥ ಅಚಾತುರ್ಯದ ಮಾತನ್ನು ಆಡಿದೆನಲ್ಲ ಎಂದು ಕುಂತಿ ವ್ಯಸನಪಟ್ಟಳು. ಆದರೆ ಕುಂತಿಯಂಥ ಸಾಧ್ವಿಯ ಮಾತು ಸುಳ್ಳಾಗಬಾರದಲ್ಲ! ಅದಕ್ಕಾಗಿ ಐದು ಜನ ಪಾಂಡವರೂ ದ್ರೌಪದಿಯನ್ನು ವಿವಾಹವಾದರು. ತಾಯಿಯ ಮಾತೆಂದರೆ ಅವರಿಗೆ ವೇದವಾಕ್ಯ.

ಮಕ್ಕಳು ಕಾಡಿಗೆ

ಕುಂತಿ ವೀರನಾದ ರಾಜನೊಬ್ಬನ ಮಗಳು. ಮತ್ತೊಬ್ಬ  ಪರಾಕ್ರಮಿ ರಾಜನ ಕೈ ಹಿಡಿದಳು. ಸುಖ ಕಂಡದ್ದು ಸ್ವಲ್ಪ ಕಾಲವೇ. ಅನಂತರ ಪಾಂಡು ಶಾಪಕ್ಕೆ ತುತ್ತಾದ. ಕುಂತಿ ತಪಸ್ವಿನಿಯಂತೆ ಬಾಳಿದಳು. ಪಾಂಡು ತೀರಿಕೊಂಡ ಮೇಲೆ ಧೃತರಾಷ್ಟ್ರನ ಮನೆಯಲ್ಲಿ ನಿಂತಳು. ಮಕ್ಕಳು ದೊಡ್ಡವರಾದರು, ಇನ್ನು ಅವರೊಡನೆ ಸುಖವಾಗಿರಬಹುದು ಎನ್ನುವ ಹೊತ್ತಿಗೆ ಕೌರವರ ದ್ವೇಷಕ್ಕೆ ಅವರು ಸಿಕ್ಕರು. ವೇಷ ಮರೆಸಿಕೊಂಡು ಬದುಕಬೇಕಾಯಿತು. ಅವರು ದ್ರೌಪದಿಯನ್ನು ಮದುವೆಯಾದ ಮೇಲೆ ಧೃತರಾಷ್ಟ್ರ ಅವರನ್ನು ಕರೆಸಿ, ಖಾಂಡವಪ್ರಸ್ಥ ಎಂಬ ಭಾಗವನ್ನು ಅವರಿಗೆ ಕೊಟ್ಟ. ಅವರು ಅದನ್ನೇ ಅಭಿವೃದ್ಧಿಗೆ ತಂದರು. ಇಂದ್ರಪ್ರಸ್ಥ ಎಂಬ ಸುಂದರವಾದ ನಗರವನ್ನು ಕಟ್ಟಿಸಿರು. ಅನೇಕ ರಾಜರನ್ನು ಸೋಲಿಸಿ ರಾಜಸೂಯ ಎಂಬ ಯಾಗ ಮಾಡಿದರು.

ಕುಂತಿ ಈ ವರ್ಷಗಳಲ್ಲೆ ಮತ್ತ ಸುಖ ಕಂಡದ್ದು.

ರಾಜಸೂಯದ ನಂತರ ದುರ್ಯೋಧನನ ಹೊಟ್ಟೆ ಕಿಚ್ಚು ಭುಗಿಲೆದ್ದಿತು. ಪಾಂಡವರ ವೈಭವವನ್ನು ಕಂಡು ದುಃಖ ತಡೆಯಲಾಗಲಿಲ್ಲ. ಯುಧಿಷ್ಠಿರನಿಗೆ ಪಗಡೆ ಆಟ ಎಂದರೆ ಪ್ರಾಣ. ಅವನನ್ನು ಆಟಕ್ಕೆ ಕರೆದು ಸೋಲಿಸಿ ರಾಜ್ಯವನ್ನು ಕಿತ್ತುಕೊಳ್ಳುವ ಆಸೆ ಅವನಿಗೆ. ಮೊದಲ ಸಲ ಪಗಡೆ ಆಟದಲ್ಲಿ ಯುಧಿಷ್ಟಿರ. ಸೋತಾಗ ತುಂಬಿದ ಸಭೆಯಲ್ಲಿ ಪಾಂಡವರಿಗೆ, ದ್ರೌಪದಿಗೆ ಮಾಡಬಾರದ ಅಪಮಾನ ಮಾಡಿದ. ಆದರೆ ಭೀಷ್ಮರು, ಧೃತರಾಷ್ಟ್ರ ಹೇಳಿದ ನಂತರ ರಾಜ್ಯವನ್ನು ಹಿಂದಕ್ಕೆ ಕೊಡಬೇಕಾಯಿತು. ಮತ್ತೆ ಪಗಡೆಯಾಟದಲ್ಲಿ ಯುಧಿಷ್ಟಿರ ಸೋತ. ಈ ಬಾರಿ ಅವನೂ ತಮ್ಮಂದಿರೂ ರಾಜ್ಯವನ್ನು ಬಿಡಬೇಕಾಯಿತು. ಹನ್ನೆರಡು ವರ್ಷಗಳನ್ನು ಕಾಡಿನಲ್ಲಿ, ಅನಂತರ ಒಂದು ವರ್ಷವನ್ನು ಯಾರಿಗೂ ತಿಳಿಯದಂತೆ ಕಳೆಯಲು ಪಾಂಡವರು ಹೊರಟರು.

ಆಗ ಅವರು ಕುಂತಿಯನ್ನು ತಮಗೆ ಆಪ್ತನಾದ ವಿದುರನ ಮನೆಯಲ್ಲಿ ಬಿಟ್ಟು ಅವಳಿಗೆ ನಮಸ್ಕರಿಸಿ ಹೊರಟರು. ಆಗ ಕುಂತಿಯ ನಿರಾತಂಕದ ಕಾಲ ಮುಗಿದೇ ಹೋಯಿತು. ಮತ್ತೆ ಅವಳಿಗೆ ಕಷ್ಟ, ಚಿಂತೆ. ಈಗ ಮಕ್ಕಳೂ ಹತ್ತಿರ ಇಲ್ಲ. ಅವಳು ಒಬ್ಬಳೇ-ಪರರ ಆಶ್ರಯದಲ್ಲಿ, ಕೌರವರ ಸಮೀಪ!

ಮಕ್ಕಳನ್ನು ಸೊಸೆಯನ್ನು ಸತ್ಯಪಾಲನೆಗಾಗಿ ಕಾಡಿಗೆ ಕಳಿಸಿಕೊಟ್ಟ ಕುಂತಿ ಅವರು ಬರುವವರೆಗೂ ಬೆಂಕಿಯ ಹಾಸಿನ ಮೇಲೆ ನಿಂತವರಂತೆ ಕಾತರತೆಯಿಂದ ಕಾದಳು.

ಹದಿಮೂರು ವರ್ಷ ಹೀಗೆ ಸಂಕಟವನ್ನನುಭವಿಸುತ್ತ ಬಾಳಿದಳು ಕುಂತಿ.

ತನ್ನ ಮಕ್ಕಳಲ್ಲೆ ಯುದ್ಧ!

ಮುಂದೆ ಪಾಂಡವರಿಗೆ ಮತ್ತು ಕೌರವರಿಗೆ ಯುದ್ಧ ನಿಶ್ಚಯವಾಯಿತು. ಕರ್ಣ ಕೌರವರ ಪಕ್ಷದಲ್ಲಿ ಇದ್ದ. ಪಾಂಡವರನ್ನು ಯುದ್ಧದಲ್ಲಿ ಕೊಲ್ಲುವುದಾಗಿ ಪ್ರತಿಜ್ಞೆ ಮಾಡಿದ್ದ. ಅಣ್ಣ ತಮ್ಮಂದರೇ ತಿಳಯದೆ ಪರಸ್ಪರ ಕೊಲ್ಲಲು ಸಿದ್ಧರಾಗಿರುವುದನ್ನು ಕಂಡು ಕುಂತಿ ತತ್ತರಿಸಿ ಹೋದಳು. ಇಬ್ಬರೂ ತನ್ನ ಮಕ್ಕಳೇ, ಯಾರಿಗೆ ಅಪಾಯವಾದರೂ ಅನಾಹುತ. ಏನಾದರೂ ಮಾಡಿ ಕರ್ಣ ಪಾಂಡವರ ಕಡೆ ಸೇರುವಂತೆ ಮಾಡಬೇಕೆಂದು ಯೋಚಿಸಿದಳು. ಅದಕ್ಕಾಗತಿ ತಾನೇ ಹೋಗಿ ಅವನನ್ನು ಕಂಡಳು. ಅವನಿಗೆ ಎಲ್ಲ ವಿಷಯ ತಿಳಿಸಿ ತಮ್ಮಂದಿರ ಜೊತೆ ಸೇರುವಂತೆ ಒತ್ತಾಯ ಮಾಡಿದಳು. ಕರ್ಣ ಒಪ್ಪಲಿಲ್ಲ. “ನಾನು ಅರ್ಜುನನ್ನು ಬಿಟ್ಟು ಉಳಿದ ಪಾಂಡವರನ್ನು ಕೊಲ್ಲುವುದಿಲ್ಲ. ತೊಟ್ಟ ಬಾಣ ತೊಡುವುದಿಲ್ಲ. ನಿನ್ನ ಸಲುವಾಗಿ ಇಷ್ಟು ಮಾತು ಕೊಟ್ಟಿದ್ದೇನೆ. ನಾನು ಯುದ್ಧದಲ್ಲಿ ಕೌರವರ ಜೊತೆಯೇ ಇರುವವನು” ಎಂದು ಹೇಳಿಬಿಟ್ಟ.

ಭಾರವಾದ ಹೃದಯದಿಂದ ಹಿಂದಿರುಗಿದಳು ಕುಂತಿ. ಯುದ್ಧವಾಗುತ್ತದೆ. ಒಬ್ಬ ಮಗನಾದರೂ ಸಾಯುತ್ತಾನೆ, ತಾನು ತಪ್ಪಿಸುವಂತಿಲ್ಲ! 

ಕುಂತಿ ಕರ್ಣನಿಗೆ ತಮ್ಮಂದಿರನ್ನು ಸೇರುವಂತೆ ಒತ್ತಾಯ ಮಾಡಿದಳು.

ತಾಯಿಯ ಪ್ರೀತಿ

ಯುದ್ಧ ನಡೆದು ಕೌರವರು ಸತ್ತು ಪಾಂಡವರು ಗೆದ್ದರು. ಯುದ್ಧದಲ್ಲಿ ಮಡಿದ ಎಲ್ಲ ಬಂಧುಗಳಿಗೂ ಪಾಂಡವರು ತರ್ಪಣ ಕೊಟ್ಟರು. ಕರ್ಣನೂ ತಮ್ಮ ಬಂಧು ಎಂದು ಅವರಿಗೆ ತಿಳಿಯದು. ಅವನು ಬೆಸ್ತರವನಾದ ಅಧಿ ರಥನ ಮಗ ಎಂದೇ ಅವರು ತಿಳಿದಿದ್ದರು. ಆಗ ಮಾತ್ರ ಕುಂತಿಗೆ ತಡೆಯಲಾಗಲಿಲ್ಲ. ಧರ್ಮರಾಯನ ಬಳಿಗೆ ಬಂದು ‘ಮಗೂ ಕರ್ಣನಿಗೂ ತರ್ಪಣ ಕೊಡಬೇಕು’ ಎಂದಳು. ಪಾಂಡವರಿಗೆಲ್ಲ ಇದನ್ನು ಕೇಳಿ ಆಶ್ಚರ್ಯ. ‘ಏಕಮ್ಮ ಕರ್ಣನೇನು ನಮ್ಮ ಬಂಧುವೇ?’ ಎಂದು ಧರ್ಮರಾಯನು ಕೇಳಿದ. ಕುಂತಿಯ ದುಃಖ ಕಡಲಾಗಿ ಹರಿಯಿತು.  ಕರ್ಣ ಅವರ ಅಣ್ಣನೆನ್ನುವುದನ್ನು ಆಗ ತಿಳಿಸಲೇಬೇಕಾಯಿತು. ತನ್ನ ಮಗನನ್ನು ಮಗ ಎಂದು ಒಪ್ಪಿಕೊಳ್ಳಲು ಮನಸ್ಸಿನಲ್ಲಿಯೇ ಎಷ್ಟು ಸಲ ಹೋರಾಟ ನಡೆಸಿದ್ದಳೋ! ಹಿರಿಯರ ಭಯ, ಸಮಾಜದ ಭಯ ಇವುಗಳಿಂದ ಅದು ಸಾಧ್ಯವಾಗಿರಲಿಲ್ಲ. ತನ್ನ ಮಗುವಿಗೆ ಪರಲೋಕದಲ್ಲಿಯೂ ಸದ್ಗತಿ ಸಿಗುವುದಿಲ್ಲ ಎಂಬ ಭಯ ಬಂದೊಡನೆ ಉಳಿದುದೆಲ್ಲ ಹಿಂದೆ ಸರಿದು ತಾಯಿಯ ಪ್ರೀತಿ ಗೆದ್ದಿತು. ಎಲ್ಲ ಭೀತಿಯನ್ನೂ ಗೆದ್ದು ಇಷ್ಟು ದಿನಗಳ ರಹಸ್ಯವನ್ನು ಬಯಲು ಮಾಡಿಬಿಟ್ಟಳು.

ಕುಂತಿ ಕಾಡಿಗೆ

ಕೌರವರನ್ನು ಗೆದ್ದು ಪಾಂಡವರು ರಾಜ್ಯವನ್ನು ಪಡೆದುಕೊಂಡರು. ಸ್ವಲ್ಪ ದಿನಗಳಲ್ಲಿಯೇ ಧೃತರಾಷ್ಟ್ರ ಮತ್ತು ಗಾಂಧಾರಿಯರು ಕಾಡಿಗೆ ಹೋಗಿ ತಪಸ್ಸು ಮಾಡಿ ತಮ್ಮ ಉಳಿದ ಆಯುಷ್ಯ ಕಳೆಯಲು ನಿಶ್ಚಯಿಸಿದರು. ಕುಂತಿಯೂ ಅವರ ಜೊತೆ ಹೊರಟಳು. ಇಷ್ಟು ದಿನ ಪಡಬಾರದ ಕಷ್ಟಪಟ್ಟು ಈಗ ತಮ್ಮ ತಾಯಿ ಕಾಡಿಗೆ ಹೊರಟದ್ದು ಕಂಡು ಪಾಂಡವರ ದುಃಖ ಕಟ್ಟೆಯೊಡೆಯಿತು. ಧರ್ಮರಾಯ ಹೇಳಿದ: “ಇದೇನಮ್ಮ, ನೀನೂ ಕಾಡಿಗೆ ಹೊರಟುನಿಂತೆ? ಅಪ್ಪ ತೀರಿಕೊಂಡಾಗಿನಿಂದ ನೀನು ಎದುರಿಸಿದ ಕಷ್ಟಕ್ಕೆ ಲೆಕ್ಕವಿದೆಯೇ? ಈಗ ತಾನೆ ರಾಜ್ಯ ನಮ್ಮ ಕೈಗೆ ಬಂದಿದೆ. ನಿನ್ನನ್ನು ನಾಲ್ಕು ದಿನ ಸುಖವಾಗಿ ಇಟ್ಟುಕೊಳ್ಳುವ ಆಸೆಯಿಂದಿದ್ದೇವೆ. ನೀನು ಹೋಗಕೂಡದು. ಒಂದು ವೇಳೆ ನೀನು ಹಟದಿಂದ ಹೊರಟರೆ ನಾವೂ ಕಾಡಿಗೆ ಬಂದು ಬಿಡುತ್ತೇವೆ.” ಆದರೆ ಕುಂತಿ ತನ್ನ ನಿಶ್ಚಯ ಕದಲಿಸಲಿಲ್ಲ. ‘ನಾನು ಇನ್ನು ಸೌಖ್ಯಪಟ್ಟು ಆಗಬೇಕಾದದ್ದೇನು? ಪತಿಯಾದ ಪಾಂಡು ನನಗೆ ಸಮಸ್ತ ಸೌಖ್ಯವನ್ನೂ ಕೊಟ್ಟ ಅವನೊಡನೆ ರಾಜಭೋಗ ಅನುಭವಿಸಿದೆ; ಸೋಮಪಾನ ಮಾಡಿದೆ; ದಾನ ಧರ್ಮ ಮಾಡಿದೆ. ಅವನು ತೀರಿ ಕೊಂಡಾಗ, ನೀವು ಇನ್ನೂ ಮಕ್ಕಳು. ನಿಮ್ಮನ್ನು ದೊಡ್ಡವರನ್ನಾಗಿ ಮಾಡಿ ಸುಖದ ದಿನಗಳು ಬರುವವರೆಗೆ ನಿಮ್ಮನ್ನು ಕಾಯುವುದು ನನ್ನ ಕರ್ತವ್ಯವಾಗಿತ್ತು. ಆದ್ದರಿಂದ ಇದ್ದೆ. ಅದು ಮುಗಿಯಿತು. ಇನ್ನು ಕಾಡಿನಲ್ಲಿ ತಪಸ್ಸು ಮಾಡಿ ನನ್ನ ಗಂಡನಿರುವ ಲೋಕಕ್ಕೆ ಹೋಗುತ್ತೇನೆ. ಅಲ್ಲಿ ಅವನನ್ನು ಕೂಡಿ ಸುಖವಾಗಿರುತ್ತೇನೆ.”  ಹೀಗೆ ಹೇಳಿ ಕುಂತಿ ತಡೆದರೂ ನಿಲ್ಲದೆ ಕಾಡಿಗೆ ನಡೆದೇ ಬಿಟ್ಟಳು. ತನ್ನ ಮಕ್ಕಳಿಗೆ ಅನ್ಯಾಯ ಮಾಡಿದ ಧೃತರಾಷ್ಟ್ರ-ಗಾಂಧಾರಿಯರನ್ನು ನೋಡಿಕೊಳ್ಳುತ್ತ ಭಗವಂತನ ಧ್ಯಾನದಲ್ಲಿ ದಿನಗಳನ್ನು ಕಳೆದಳು.

ಅಗ್ನಿಪರೀಕ್ಷೆಯಲ್ಲಿ ಅಪ್ಪಟ ಚಿನ್ನ

ಪಾಂಡವರು ಆಗಾಗ ಕಾಡಿಗೆ ಹೋಗಿ ತಾಯಿಯನ್ನು ನೋಡಿ ಬರುತ್ತಿದ್ದರು. ಒಮ್ಮೆ ಧೃತರಾಷ್ಟ್ರ ಗಾಂಧಾರಿ ಕುಂತಿಯರು ಕಾಡಿನಲ್ಲಿ ಸಂಚರಿಸುತ್ತಿದ್ದಾಗ ಕಾಡ್ಗಿಚ್ಚಿಗೆ ಸಿಕ್ಕಿ ಸುಟ್ಟುಹೋದರು. ಅನಂತರ ಈ ವಿಷಯ ಪಾಂಡವರಿಗೆ ತಿಳಿಯಿತು. ಅವರ ದುಃಖಕ್ಕೆ ಕೊನೆಯೇ ಇಲ್ಲವಾಯಿತು. ಎಳೆಯರಾಗಿದ್ದಾಗಿನಿಂದ ರಾಜರಾಗುವವರೆಗೆ ತಮ್ಮ ಪಾಲಿನ ರಕ್ಷಕಶಕ್ತಿಯಂತೆ ಮೈಗಾವಲಾಗಿ ನಿಂತ ತಾಯಿಯ ಜೀವನವನ್ನು ನೆನೆದು ಅವರ ಕಣ್ಣು ನೀರಿನಿಂದ ತುಂಬಿತು.

ಮಾದ್ರಿ ಉರಿದು ಮುಗಿದಳು. ಆದರೆ ಕುಂತಿ ಇದ್ದು ಉರಿದಳು. ಅವಳು ಪಟ್ಟ ಕಷ್ಟ ಅಷ್ಟಿಷ್ಟಲ್ಲ. ಎಷ್ಟೇ ಕಷ್ಟ ಬಂದರೂ ಕುಂತಿ ಮಕ್ಕಳ ಸಲುವಾಗಿ ಅದನ್ನು ಸಹಿಸಿ ಬಾಳಿದಳು. ಶೂರಸೇನನ ಪುತ್ರಿಯಾಗಿ, ಕುಂತೀಭೋಜನದಂಥ ಮಹಾರಾಜನ ಪ್ರೀತಿಯ ಸಾಕು ಮಗಳಾಗಿ, ಪಾಂಡುವಿನಂಥ ಪರಾಕ್ರಮಿಯ ಕೈ ಹಿಡಿದು ಚಂದ್ರವಂಶದ ಸೊಸೆಯಾಗಿ ದೇವತೆಗಳಂಥ ಮಕ್ಕಳನ್ನು ಪಡೆದ ಅವಲು ನಡೆಸಬೇಕಾಗಿದ್ದ ಬಾಳು ಎಷ್ಟು ವೈಭವಪೂರ್ಣವಾದದ್ದು! ಆದರೆ ವಿಧಿ ಹೆಣ್ಣಿನ ಸಹನೆಯನ್ನೇ ಪರೀಕ್ಷಿಸಿತೋ ಎಂಬಂತೆ ಅವಳಲಿಗೆ ಕಷ್ಟ ಕೊಟ್ಟಿತು.  ಆ ಕಷ್ಟದ ಅಗ್ನಿ ಪರೀಕ್ಷೆಯಲ್ಲಿ ಕುಂತಿ ಅಪ್ಪಟ ಚಿನ್ನವಾಗಿ ಹೊರಬಂದಳು; ಸಹನೆ ಮಾತೃವಾತ್ಸಲ್ಯಗಳ ಪ್ರತೀಕವಾದಳು.