“ದೇಶ ನೋಡು ಕೋಶ ಓದು” ಎಂಬ ನಾಣ್ಣುಡಿಯಂತೆ
ಮನುಷ್ಯನ ಜೀವನ ಓದಿನಿಂದ ಮಾತ್ರ ಪರಿಪೂರ್ಣವಾಗದೆ
ಅನೇಕ ವೈವಿಧ್ಯಮಯ ಸ್ಥಳಗಳಿಗೆ ಭೇಟಿ ನೀಡಿ ಪಡೆದುಕೊಳ್ಳುವ
ನೈಜ ಅನುಭವದಿಂದ ಮಾತ್ರ ಜೀವನ ಸಾರ್ಥಕವಾಗುತ್ತದೆ.

ಧಾರವಾಡ ಜಿಲ್ಲೆಯ ಮಧ್ಯದಲ್ಲಿ ಬರುವ ಕುಂದಗೋಳ ತಲೂಕು ಪ್ರದಕ್ಷಿಣಾನುಕ್ರಮವಾಗಿ ಹುಬ್ಬಳ್ಳಿ, ನವಲಗುಂದ, ಶಿರಹಟ್ಟಿ, ಸವಣೂರ, ಶಿಗ್ಗಾಂವಿ ಮತ್ತು ಕಲಘಟಗಿ ತಾಲೂಕುಗಳ ಎಲ್ಲೆಗಳಿಂದ ಸುತ್ತುವರೆದಿದೆ. ೧೫’-೧೫’ ಉತ್ತರ ಅಕ್ಷಾಂಶ ಮತ್ತು ೭೫’-೧೫’ ಪೂರ್ವ ರೇಖಾಂಶಗಳ ನಡುವೆ ಬರುವುದು. ೫೬ ಗ್ರಾಮಗಳನ್ನೊಳಗೊಂಡು ಒಟ್ಟು ೬೪೮.೬ ಚ.ಕಿ.ಮೀ. ವಿಸ್ತೀರ್ಣ ಹೊಂದಿದೆ. ಪ್ರಾಗೈತಿಹಾಸಿಕ ಕಾಲಕ್ಕೆ ಸಂಬಂಧಿಸಿದ ನೆಲೆಗಳು ತಾಲೂಕಿನಲ್ಲಿ ಕಂಡು ಬರದಿದ್ದರೂ ಇತಿಹಾಸ ಕಾಲಕ್ಕೆ ಸಂಬಂಧಿಸಿದ ರಾಷ್ಟ್ರಕೂಟ, ಚಾಲುಕ್ಯ, ಕಳಚೂರಿ, ದೇವಗಿರಿ ಯಾದವರ, ವಿಜಯನಗರ ಅರಸರ ಮತ್ತು ಗೋವಾ ಕದಂಬರ ೬೦ ಶಾಸನಗಳು ದೊರೆತಿವೆ. ಆ ಕಾಲದಲ್ಲಿ ನಿರ್ಮಾಣವಾದ ದೇವಾಲಯಗಳು ಇಲ್ಲಿ ನೆಲೆಗೊಂಡಿವೆ. ಬಾಸವೂರು (ಹಾವೇರಿ) ೧೪೦, ಬೆಳ್ವೊಲು (ಲಕ್ಕುಂಡಿ) ೩೦೦, ಪುಲಗೇರಿ (ಲಕ್ಷ್ಮೇಶ್ವರ) ೩೦೦, ಪಾನುಂಗಲ್ಲು (ಹಾನಗಲ್ಲ) ೫೦೦ ಪ್ರಾಂತ್ಯಗಳ ಆಡಳಿತದಲ್ಲಿದ್ದ ಕುಂದಗೋಳವು ಬ್ರಿಟೀಷ್‌ಆಳ್ವಿಕೆಯಲ್ಲಿ ಜಮಖಂಡಿ ಸಂಸ್ಥಾನಕ್ಕೊಳಪಟ್ಟು ೧೯೪೮ ರಲ್ಲಿ ಧಾರವಾಡ ಜಿಲ್ಲೆಯಲ್ಲಿ ಸಮಾವೇಶವಾಯಿತು.

“ಚಿಣ್ಣರ ಧಾರವಾಡ ದರ್ಶನ” ಎಂಬ ಶೀರ್ಷಿಕೆಯಡಿ ಹೊರಬರುತ್ತಿರುವ ಈ ಸಾಹಿತ್ಯವು ವಿದ್ಯಾರ್ಥಿಗಳಿಗೆ ಕುಂದಗೋಳ ತಾಲೂಕಾ ದರ್ಶನವನ್ನು ನೀಡುವ ಮೂಲಕ ಉಚಿತ ಶೈಕ್ಷಣಿಕ ಪ್ರವಾಸ ಕಾರ್ಯಕ್ರಮಕ್ಕೆ ಹಾಗೂ ನಮ್ಮ ಪ್ರಾದೇಶಿಕ ಪ್ರದೇಶದ ಪ್ರಾಚೀನತೆ, ಕಲೆ, ಸಂಸ್ಕೃತಿ, ಸಾಮಾಜಿಕ, ಧಾರ್ಮಿಕ, ಐತಿಹಾಸಿಕ ಮೌಲ್ಯವನ್ನು ಅರಿಯುವುದರೊಂದಿಗೆ ಸಹಬಾಳ್ವೆ ನಾಡು ನುಡಿ, ಸ್ವಾಭಾವಿಕ ಸನ್ನಿವೇಶಗಳ ವೀಕ್ಷಣೆಯಿಂದಾಗಿ ಮಗುವಿನ ವ್ಯಕ್ತಿತ್ವದ ವಿಕಾಸವನ್ನುಂಟು ಮಾಡುವ ಪ್ರವಾಸ ಕೈಪಿಡಿಯ ಸಮೀಕ್ಷಾ ವರದಿಯನ್ನು ಶಿಕ್ಷಕರ ಹಾಗೂ ಸಾರ್ವಜನಿಕರ ಸಹಕಾರದೊಂದಿಗೆ ಸಂಗ್ರಹಿಸಿ ಸಚಿತ್ರದೊಂದಿಗೆ ತಮ್ಮ ಕೈಗಿಡುತ್ತಿದ್ದೇವೆ.

 

ಕುಂದಗೋಳ

ಶ್ರೀ ಶಂಭೋಲಿಂಗೇಶ್ವರ ದೇವಾಲಯ, ಕುಂದಗೋಳ

 

ಸಂಶಿ

ಶ್ರೀ ಸಿದ್ದೇಶ್ವರ ದೇವಾಲಯ ಸಂಶಿ

ಧಾರವಾಡ ಜಿಲ್ಲೆಯ ಕುಂದಗೋಳ ತಾಲೂಕಿನ ಮಧ್ಯಭಾಗದಲ್ಲಿ ಬರುವ ತಾಲೂಕಿನ ಅತಿದೊಡ್ಡ ಗ್ರಾಮ ಸಂಶಿ (ತಾಪಸಿ) ಕುಂದಗೋಳದಿಂದ ೧೦ ಕಿ.ಮೀ. ಅಂತರದಲ್ಲಿದೆ. ಬಯಲು ಸೀಮೆಯ ನಾಡಾದದ ಸಂಶಿ ಕಪ್ಪು (ಎರಿ) ಮಣ್ಣಿನ ಭೂಮಿಯನ್ನು ಹೊಂದಿದ್ದು ಹತ್ತಿ, ಗೋಧಿ, ಜೋಳ, ಹೆಸರು, ಕಡಲೆ, ಕುಸುಬಿ, ಶೇಂಗಾ, ಮುಂತಾದ ಬೆಳೆಗಳನ್ನು ಬೆಳೆಯುವರು. ವ್ಯವಸಾಯವೇ ಮೂಲ ಉದ್ಯೋಗವಾಗಿದೆ. ಜಿಲ್ಲಾ ಸ್ಥಳದಿಂದ ೫೦ ಕಿ.ಮೀ. ಅಂತರದಲ್ಲಿದೆ. ೨೦೦೧ ರ ಗಣತಿ ಪ್ರಕಾರ ೧೨೨೭೯ ಜನಸಂರ್ಖಯೆಯನ್ನು ಹೊಂದಿದೆ. ಪುರಾಣ ಪ್ರಸಿದ್ಧವಾದ ತಾಪಸಿಪುರ, ಸಾಹಸಪುರ ಎಂಬ ನಾಮಾಕಿಂತದಿಂದ ಕೂಡಿದ ಸಂಶಿ ಗ್ರಾಮವು ಮಹಾಭಾರತ ಕಾಲದ ಪಾಂಡವರು ಈ ಮಾರ್ಗವಾಗಿ ವೀರಾಠ ನಗರಕ್ಕೆ (ಹಾನಗಲ್‌) ಹೋದ ವದಂತಿ ಇದ್ದು ಇಲ್ಲಿ ಕ್ರಿ.ಶ. ೧೨ನೇ ಶತಮಾನದ ಚಾಲುಕ್ಯ ಅರಸರ ಇಮ್ಮಡಿ ಸೋಮೇಶ್ವರ ೬ ನೇ ವಿಕ್ರಮಾದಿತ್ಯ ಹಾಗೂ ೨ನೇ ಜಕದೇಕಮಲ್ಲರ ಕಾಲದಲ್ಲಿ ಜಕ್ಕಣರಿಂದ ನಿರ್ಮಿತವಾದ ಚಾಲುಕ್ಯ ಶೈಲಿಯ ಶ್ರೀ ಸಿದ್ದೇಶ್ವರ ದೇವಾಲಯವು ಇದ್ದು ಹಾಗೂ ಅದೇ ಕಾಲದ ನಾಲ್ಕು ಶಿಲಾ ಶಾಸನಗಳು ಶ್ರೀ ಶಂಕರಲಿಂಗ ದೇವಾಲಯ ಕಂಡುಬರುತ್ತವೆ. ಜಮಖಂಡಿ ಸಂಸ್ಥಾನಕ್ಕೆ ಒಳಪಟ್ಟ ಸಂಶಿಯು ಪೂರ್ವ ಕಾಲದಿಂದಲೂ ೪ ಬಣಗಳಿದ್ದವು. ಅವು ಯಾವುವೆಂದರೆ ೧ ಹಾರುಬಣ ೨ ಹಿರೇಬಣ ೩ ಚಿಕ್ಕ ಬಣ ೪ ಮುಡಸಿ ಬಣ. ಹಾರುಬಣ ಮತ್ತು ಚಿಕ್ಕ ಬಣ ಇವೆರೆಡು ಬಣಗಳ ಪ್ರಮುಖರು ಬ್ರಾಹ್ಮಣ ಸಮಾಜಕ್ಕೆ ಸೇರಿದವರು. ಇನ್ನುಳಿದ ಹಿರೇಬಣ ಹಾಗೂ ಮುಡಸಿಬಣ ಇವು ಲಿಂಗಾಯತ ಪ್ರಮುಖರ ಬಣಗಳು. ಈ ನಾಲ್ವರಿಗೆ ಒಂದೊಂದು ನಿಟ್ಟಿನಲ್ಲಿ ಆ ಹಾದ್ದಿನ ಜಮೀನುಗಳಿರುತ್ತವೆ. ಸಂಶಿಯಲ್ಲಿ ಬ್ರಹ್ಮಾನಂದ ಆಶ್ರಮ ಹಾಗೂ ಶ್ರೀ ಶಿರಹಟ್ಟಿ ಫಕ್ಕಿರೇಶ್ವರರ ಶಾಖಾ ಮಠ, ಸಿದ್ದೇಶ್ವರ ಮಠ ಹಾಗೂ ಸಿದ್ದಾರೂಢ ಮಠ, ಶಂಕರ ಲಿಂಗ ದೇವಾಲಯ ಅಲ್ಲದೇ ಅನೇಕ ದೇವಾಲಯಗಳಿಂದ ಕೂಡಿದ ಧಾರ್ಮಿಕ ಸ್ಥಳವಾಗಿದೆ. ಬ್ರಹ್ಮಾನಂದ ಆಶ್ರಮದ ಮಾದರಿಯ ದೇವಾಲಯಗಳು ರಭಕವಿ, ಬನಹಟ್ಟಿ, ತೇಲಸಂಗ, ಹಾಗೂ ರಾಯಾಪುರದಲ್ಲಿವೆ. ಇಂದು ಸಂಶಿಯು ಅನೇಕ ಸರ್ಕಾರಿ ಶಾಲೆಗಳು, ಫಕ್ಕಿರೇಶ್ವರ ಸಂಸ್ಥಾನದ ಪ್ರೌಢಶಾಲೆ, ಬ್ರಹ್ಮಾನಂದ ಸಂಸ್ಥೆಯ ಶಲೆಗಳು, ಕೆ.ಎಲ್‌.ಇ. ಸಂಸ್ಥೆಯ ಕಾಲೇಜುಗಳಿಂದ ಕೂಡಿದ ಶೈಕ್ಷಣಿಕ ತವರೂರಾಗಿದೆ.

ಶ್ರೀ ಗ್ರಾಮದೇವಿ ದ್ಯಾಮವ್ವ ದೇವಿಯ ದೇವಾಲಯ

ಶ್ರೀ ಎನ್‌. ಬಸವರಾಜ

ಧಾರವಾಡ ಜಿಲ್ಲೆಯ ಕುಂದಗೋಳ ತಾಲೂಕಿನ ದಕ್ಷಿಣಕ್ಕೆ ಬರುವ ಗುಡಗೇರಿಯು ತಾಲೂಕಾ ಸ್ಥಳದಿಂದ ೨೦ ಕಿ.ಮೀ. ಅಂತರದಲ್ಲಿದೆ. ಜಿಲ್ಲಾ ಸ್ಥಳದಿಂದ ೪೦ ಕಿ.ಮೀ. ಅಂತರದಲ್ಲಿದ್ದ ಬಯಲು ಸೀಮೆಯ ಫಲವತ್ತಾದ ಕಪ್ಪು (ಎರಿ) ಮಣ್ಣಿನಿಂದ ಕೂಡಿದ ಭೂಮಿಯಲ್ಲಿ ಗೋಧಿ, ಜೋಳ, ಶೇಂಗಾ ಮೆಣಸಿನಕಾಯಿ, ಹತ್ತಿ, ಕಡಲೆ, ಕುಸುಬಿ, ಬಳ್ಳೊಳ್ಳಿ ಮುಂತಾದ ಬೆಳೆಗಳನ್ನು ಬೆಳೆಯುತ್ತಾರೆ. ೨೦೦೧ ರ ಜನಗಣತಿ ಪ್ರಕಾರ ೯೮೦೯ ಜನಸಂಖ್ಯೆಯನ್ನು ಹೊಂದಿದ್ದು ಕುಂದಗೋಳ ತಾಲೂಕಿನ ದೊಡ್ಡ ಗ್ರಾಮವಾಗಿದೆ.

ಗ್ರಾಮದ ನಾಮದ ಹಿನ್ನೆಲೆಯಲ್ಲಿ ವಿಶೇಷತೆ ಎಂದರೆ ಗುಡಿಗಳ ಸಂಖ್ಯೆ ಹೆಚ್ಚಾಗಿದ್ದು ಗುಡಿಗಳ ಪುರ (ಗುಡಿಗಳ ಊರು) “ಗುಡಿಪುರ”ವೇ ಮುಂದೆ ಗುಡಗೇರಿಯಾಯಿತು ಎಂದು ಗ್ರಾಮದ ಜನತೆಯ ಅಭಿಪ್ರಾಯ.

ಐತಿಹಾಸಿಕವಾಗಿ ಕ್ರಿ.ಶ. ೯೦೦ ವರ್ಷಗಳ ಹಿಮದಿನ ೧೨ನೇ ಶತಮಾನದ ಚಾಲುಕ್ಯ ದೊರೆಗಳ ಕಾಲದಲ್ಲಿ ಗಾವುಂಡ, ಸಾಮಂತರಿಂದ ನಿರ್ಮಾಣಗೊಂಡ ಮಹಾವೀರ ತೀರ್ಥಂಕರ ಜೈನ ಮಂದಿರವಿದೆ. ಪುರಾತನ ಕಾಲದ ಜ್ಞಾನ ಕೇಂದರ ಕಲ್ಮಠವು ಚಾಲುಕ್ಯ ವಾಸ್ತುಶೈಲಿಯ ಮಠವಾಗಿದ್ದು ಕೀರ್ತನ, ಪುರಾಣ, ಹರಿಕಥೆ, ಸಂಗೀತ ಕಚೇರಿಗಳಿಗೆ ವಿಶೇಷತೆ ಪಡೆದಿದೆ.

ಪವಾಡಗಳಿಗೆ ಸಾಕ್ಷಿಯಾದ ಸಂಗಮೇಶ್ವರ ಮಠ, ಗೋವಿಂದ ಭಟ್ಟರು ಹಾಗೂ ಕರ್ನಾಟಕದ ಕಬೀರರೆನಿಸಿದ ಶ್ರೀ ಶರೀಫ ಶಿವಯೋಗಿಗಳು ನಡೆದಾಡಿ ಪವಾಡವನ್ನು ಮಾಡಿದಂತ ಜಾಗೃತ ಗ್ರಾಮದೇವತೆ ದ್ಯಾಮವ್ವಳ ನೆಲೆಬೀಡು ವಿಜಯದಶಮಿಯ ಉತ್ಸವದಲ್ಲಿ ಮೈಸೂರ ದಸರಾ ಉತ್ಸವವನ್ನು ನೆನಪಿಸುತ್ತದೆ.

ಬುಧಗಾಂವ ಸಂಸ್ಥಾನಕ್ಕೆ ಸೇರಿದ ಗುಡಗೇರಿ ಇಂದು ರಂಗ ಕಲಾತಪಸ್ವಿ, ನಾಟಕಕಾರ, “ರೈತನ ಮಕ್ಕಳು” ಚಲನಚಿತ್ರದ ನಿರ್ಮಾಪಕ ಪಾತ್ರದಾರಿ ದೇಶದ ಹಲವಾರು ರಾಜ್ಯದಲ್ಲಿ ರಂಗಕಲೆಯನ್ನು ಉಳಿಸಿ ಬೆಳೆಸಿದ ಸಂಗಮೇಶ್ವರ ನಾಟ್ಯ ಸಂಘದ ನಿರ್ಮಾಪಕ ಗುಬ್ಬಿ ವೀರಣ್ಣ ಪ್ರಶಸ್ತಿ ವಿಜೇತ ದೆಹಲಿ ಕೆಂಪು ಕೋಟೆಯಲ್ಲಿ ಕರ್ನಾಟಕದ ಕನ್ನಡ ಭಾಷೆಯ ನಾಟಕವನ್ನಾಡಿ ಖ್ಯಾತಿಯನ್ನು ಪಡೆದ ಶ್ರೀ ಎನ್‌. ಬಸವರಾಜರವರ ತವರೂರು ಗುಡಗೇರಿ ಕಲೆ, ಸಂಸ್ಕೃತಿಗಳ ನೆಲೆಬೀಡಾಗಿ ಶೈಕ್ಷಣಿಕ ಸಾಧನೆಯ ಮುಂಚೂಣಿಯಲ್ಲಿ ಗುರುತಿಸಿಕೊಂಡು ಪ್ರಾಚೀನ ಭವ್ಯ ಕಟ್ಟಡಗಳು ಗಾಂಧಿ ಮಂದಿರ ಮುಂತಾದ ಮಠ, ಮಂದಿರ, ಮಸೀದಿಗಳು ಪ್ರೇಕ್ಷಣೀಯ ಸ್ಥಳಗಳ ಊರಾಗಿದೆ.

 

ಯಲಿವಾಳ

ಶ್ರೀ ವೀರಭದ್ರೇಶ್ವರ ದೇವಾಲಯ

ಗಾನಗಂಧರ್ವ ಶ್ರೀ ಪಂ. ಬಸವರಾಜ ರಾಜಗುರು

ಧಾರವಾಡ ಜಿಲ್ಲೆಯ ಕುಂದಗೋಳ ತಾಲೂಕಿನ ನೈರುತ್ಯಕ್ಕೆ ಬರುವ ಯಲಿವಾಳವು ತಾಲೂಕಾ ಸ್ಥಳದಿಂದ ೧೦ ಕಿ.ಮೀ. ಅಂತರದಲ್ಲಿದೆ ಜಿಲ್ಲಾ ಸ್ಥಳದಿಂದ ೪೪ ಕಿ.ಮೀ. ಅಂತರದಲ್ಲಿದ್ದು ಕಪ್ಪು (ಎರಿ) ಮಣ್ಣಿನ ಪ್ರದೇಶವಾಗಿದ್ದು ಪ್ರಮುಖವಾಗಿ ಮೆಣಸಿನಕಾಯಿ, ಹತ್ತಿ, ಗೋಧಿ, ಶೇಂಗಾ, ಜೋಳ, ಸೋಯಾಭಿನ, ಮುಂತಾದ ಬೆಳೆಗಳನ್ನು ಬೆಳೆಯುವ ಈ ನಾಡಿನ ಮೂಲ ಉದ್ಯೋಗ ವ್ಯವಸಾಯವೇ ಆಗಿದ್ದು ೨೦೦೧ ರ ಜನಗಣತಿ ಪ್ರಕಾರ ಜನಸಂಖ್ಯೆ ೫೦೭೨ ನ್ನು ಹೊಂದಿದೆ. ಯಲಿವಾಳ ಗ್ರಾಮನಾಮದ ಹಿನ್ನಲೆ ವಿಧವಿಧದಲ್ಲಿ ಹೇಳಲ್ಪಡುತ್ತದೆ. ಶಾಸನದ ಪ್ರಕಾರ ಎಲೆಯ+ಪೊಳಲ>ಎಲೆವೊಳಲ್‌>ಎಲೆವಾಳಲ್‌ಯಲಿವಾಳದ ಇಂದಿನ ರೂಪವೇ ಎಲಿವಾಳ ಎಲಿವಾಳಲ್‌ಎಂದರೆ ಎಲೆಯನ್ನು ಬೆಳೆಯುವ ಪ್ರದೇಶ ಎಂದರ್ಥ. ಈ ಗ್ರಾಮದ ಸುತ್ತ ಮುತ್ತ ಪ್ರಾಚೀನ ಕಾಲದಲ್ಲಿ ವಿಳೆದೆಲೆ ಸಮೃದ್ಧವಾಗಿ ಬೆಳೆಯುತ್ತಿದ್ದಿರಬಹುದು ಎಂದು ಹೇಳುವ ಅಭಿಪ್ರಾಯ ಮೇಲಿನ ಹೇಳಿಕೆಗೆ ಪುಷ್ಠಿ ನೀಡುತ್ತದೆ.

ಧಾರವಾಡ ಜಿಲ್ಲೆಯಲ್ಲಿಯೇ ಹೆಸರುವಾಸಿಯಾದ ಸಂಗೀತ ಕಲಾವಿದರನ್ನು ನಾಟಕ ಕಲಾವಿದರನ್ನು ನಾಡಿಗೆ ನೀಡಿದ ಕೀರ್ತಿ ಕುಂದಗೋಳ ತಾಲೂಕಿನ ಕಂಪು ಪೆಂಪಿನ ನಾಡಾದ ಯಲಿವಾಳಕ್ಕೆ ಸಲ್ಲುತ್ತದೆ. ಇಂತಹ ನಾಡಿನಲ್ಲಿ ಜನ್ಮವೆತ್ತಿ ರಾಜ್ಯಾದ್ಯಾಂತ ರಂಗಕಲೆಗೆ ಕೀರ್ತಿತಂದ ಕಲಾತಪಸ್ವಿ ಶ್ರೀ ಯಲಿವಾಳ ಸಿದ್ದಯ್ಯನವರು ಹಾಗೂ ಸಂಗೀತ ಕ್ಷೇತ್ರದಲ್ಲಿ ಘನವೆತ್ತವರಾದ ಗಾನಗಂಧರ್ವ ಶ್ರೀ ಪಂಡಿತ ಬಸವರಾಜ ರಾಜಗುರುರವರು ಈ ಪುಣ್ಯಭೂಮಿಯಲ್ಲಿ ಜನ್ಮವೆತ್ತಿದವರು.

ಈ ಗ್ರಾಮದಲ್ಲಿ ಸುಮಾರು ನಾಲ್ಕನೇ ಶತಮಾನದ ಕುರುಹು ಕಂಡುಬರುತ್ತದೆ. ಸ್ವಾತಂತ್ರ‍್ಯ ಪೂರ್ವದ ಆಡಳಿತದಲ್ಲಿ ಈ ಗ್ರಾಮ ಜಮಖಂಡಿ ಸಂಸ್ಥಾನಿಕ ಆಳ್ವಿಕೆಗೆ ಒಳಪಟ್ಟಿತ್ತು.

ಯಲಿವಾಳ ಗ್ರಾಮದಲ್ಲಿ ಗ್ರಾಮಾಂತರ ಶಿಕ್ಷಣ ಸಂಸ್ಥೆ ಸರಕಾರಿ ಶಾಲೆಗಳು, ಆರೋಗ್ಯ ಕೇಂದ್ರಗಳನ್ನು ಹೊಂದಿದೆ. ಅಲ್ಲದೇ ಶ್ರೀ ವೀರಭದ್ರೇಶ್ವರ ದೇವಾಲಯ, ಮಾರುತಿ ದೇವಾಲಯ, ಸಿದ್ದಾರೂಢ ಶಾಖಾ ಮಠ, ಮುಂತಾದ ಮಠ, ಮಂದಿರ, ಮಸೀದಿಗಳನ್ನೊಳಗೊಂಡ ಪ್ರೇಕ್ಷಣೀಯ ಸ್ಥಳವಾಗಿದೆ.

 

ಮುಕ್ತಿ ಮಂದಿರ

ಧಾರವಾಡ ಜಿಲ್ಲೆಯ ಪಕ್ಕದ ಜಿಲ್ಲೆಯಾದ ಗದಗ ಜಿಲ್ಲೆಯ ಶಿರಹಟ್‌ಇಟ ತಾಲೂಕಿನ ಮುಕ್ತಿಮಂದಿರವು ಲಕ್ಷ್ಮೇಶ್ವರ (ಪುಲಗೇರಿ) ಪಕ್ಕದಲ್ಲಿದ್ದು ಕುಂದಗೋಳ ತಾಲೂಕಾ ಸ್ಥಳದಿಂದ ೩೦ ಕಿ.ಮೀ. ಅಂತರದಲ್ಲಿದ್ದು ಧಾರವಾಡ ಜಿಲ್ಲಾ ಸ್ಥಳದಿಂದ ೭೦ ಕಿ.ಮೀ. ಅಂತರದಲ್ಲಿ ಬರುವ ಮುಕ್ತಿಮಂದಿರವು ಗುಡ್ಡ ಬೆಟ್ಟಗಳ ನಡುವೆ ಸೃಷ್ಠಿಗೊಂಡ ಮುಕ್ತಿಕ್ಷೇತ್ರವೇ ಈ ಮುಕ್ತಿಮಂದಿರ.

ವೀರಶೈವ ಧರ್ಮ ಸಂಸ್ಥಾಪಕರಾದ ಶ್ರೀಜಗದ್ಗುರು ರೇಣುಕಾದಿ ಪಂಚಾಚಾರ್ಯರ ಗುರು ಪರಂಪರೆಗೆ ಒಳಪಟ್ಟ ಬಾಳೇಹೊನ್ನೂರಿನ ಶ್ರೀರಂಭಾಪುರಿ ಜಗದ್ಗುರು ಪೀಠದ ಲಿಂಗೈಕ್ಯ ಶ್ರೀ ಶ್ರೀ ಶ್ರೀ ೧೦೦೮ ಜಗದ್ಗುರು ವೀರ ಗಂಗಾಧರ ಮಹಾಸ್ವಾಮಿಗಳ ಕತೃತ್ವ ಶಕ್ತಿಯಿಂದಾಗಿ ಭಕ್ತರ ಅಭಿಲಾಶೆಗೆ ಪೂರಕವಾಗಿ ನೆಲೆನಿಂತ ಮುಕ್ತಿಮಂದಿರವು ಇಂದು ಪೂಜ್ಯರ ಕತ್ರುಗದ್ದಿಗೆ ಮಂಟಪ, ಪೂಜಾ ಮಂಟಪ, ದೇವ ಮಂಟಪ, ಯಾತ್ರಿಧಾಮ, ಉದ್ಯಾನವನ, ಡಿ.ಇ.ಡಿ.ಕಾಲೇಜು, ತ್ರೀಕೋಟಿ ಲಿಂಗದ ಪೂರ್ವಭಾವಿ ಸ್ಥಳ, ಶತಮಾನೋತ್ಸವದ ಭವ್ಯ ಮಂಟಪ ಪೂಜ್ಯರ ಕಾರ್ಯವೈಖರಿಯ ಸ್ಮಾರಕಗಳು ಪ್ರವಾಸಿಗರ ಕಣ್ಮನ ಸೆಳೆಯುವಂತೆ ನೆಲೆನಿಂತ ಮುಕ್ತಿಮಂದಿರವು ಶ್ರೇಷ್ಠ ಪ್ರೇಕ್ಷಣೀಯ ಸ್ಥಳವಾಗಿದ್ದು ಯಾತ್ರಿಯ ಬದುಕನ್ನು ಸಾರ್ಥಕಗೊಳಿಸುವ ಧಾರ್ಮಿಕ ಕ್ಷೇತ್ರವಾಗಿದೆ.

 

ಶಿಶುವಿನಹಾಳ

ಧಾರವಾಡ ಜಿಲ್ಲೆಯ ಪಕ್ಕದ ಜಿಲ್ಲೆಯಾದ ಹಾವೇರಿ ಜಿಲ್ಲೆಯ ಶಿಗ್ಗಾಂವ ತಾಲೂಕಿನ ಶಿಶುವಿನಹಾಳವು ಕುಂದಗೋಳ ತಾಲೂಕಾ ಸ್ಥಳದಿಂದ ೩೦ ಕಿ.ಮೀ. ಅಂತರದಲ್ಲಿದ್ದು ಜಿಲ್ಲಾ ಸ್ಥಳದಿಂದ ೭೦ ಕಿ.ಮೀ. ದೂರದಲ್ಲಿರುವ ಗ್ರಾಮವು ಕೆಂಪು ಮಿಶ್ರಿತ ಮಣ್ಣಿನ ಭೂಪ್ರದೇಶದಲ್ಲಿ ಕೃಷಿ ಪ್ರಧಾನ ಉದ್ಯೋಗಕ್ಕೊಳಪಟ್ಟ ಪ್ರಮುಖ ಬೆಳೆಗಳಾದ ಗೋಧಿ, ಜೋಳ, ಹತ್ತಿ, ಶೇಂಗಾ, ಮುಂತಾದ ಬೆಳೆಗಳನ್ನು ಬೆಳೆಯುತ್ತಾರೆ. ೨೦೦೧ ರ ಜನಗಣತಿಯ ಪ್ರಕಾರ ಸುಮಾರು ೧೨೦೦ ಜನಸಂಖ್ಯೆಯುಳ್ಳ ಶಿಶುವಿನಹಾಳ ಗ್ರಾಮದ ದಕ್ಷಿಣಕ್ಕಿರುವ ಕರ್ನಾಟಕದ ಕಭೀರರೆಂದೇ ಖ್ಯಾತಿಯನ್ನು ಪಡೆದ ಸೂಫಿ ಸಂತ ಶ್ರೀ ಶರೀಫ ಶಿವಯೋಗಿಗಳು ಹಾಗೂ ಗುರುವರ್ಯ ಕಳಸದ ಶ್ರೀಗುರು ಗೋವಿಂದ ಭಟ್ಟರ ಗದ್ದುಗೆಯನ್ನು ಒಳಗೊಂಡ ಭವ್ಯ ಕಲ್ಯಾಣಮಂಟಪ ಉದ್ಯಾನವನ ಪ್ರಸಾದ ನಿಲಯ ಶೈಕ್ಷಣಿಕ ಸಂಸ್ಥೆಗಳನ್ನೊಳಗೊಂಡ ಉತ್ತರ ಕರ್ನಾಟಕದ ಪ್ರಮುಖ ಪ್ರೇಕ್ಷಣೀಯ ಸ್ಥಳವಾಗಿದೆ. ಅಲ್ಲದೇ ಸುತ್ತ ಮುತ್ತ ಇರುವ ಬಸವಣ್ಣ ದೇವಾಲಯ, ಮುಂತಾದವು ಪ್ರಾಚೀನತೆಗೆ ಹೆಸರು ಪಡೆದಿದ್ದು ಪ್ರತಿ ವರ್ಷ ಶಿವರಾತ್ರಿ ಅಮವಾಸೆ ನಂತರದಲ್ಲಿ ಜರುಗುವ ಶರೀಫರ ಜಾತ್ರ ಮಹೋತ್ಸವವು ಅವಿಸ್ಮರಣೀಯ ಹಿಂದು-ಮುಸ್ಲೀಂ ಬಾಂಧವ್ಯದ ಉತ್ಸವವಾಗಿದೆ.