ರಾಮಾಯಣದ ಕುಂಭಕರ್ಣನು ನಿದ್ರೆಯಿಂದಾಗಿಯೇ ಪ್ರಖ್ಯಾತ. ಆರು ತಿಂಗಳುಗಳ ಕಾಲ ನಿದ್ರಿಸುವ ಈತನ ಪಾತ್ರದ ಕಲ್ಪನೆ ವಿಶೇಷವಾದುದು. ವಾಸ್ತವದಲ್ಲಿ ಮನುಷ್ಯನು ದೀರ್ಘ ನಿದ್ರೆಯನ್ನು ಮಾಡುವುದು ಅಸಾಧ್ಯವೆಂದು ವಿಜ್ಞಾನಿಗಳು ಭಾವಿಸಿದ್ದಾರೆ. ಆದರೂ ರಷ್ಯಾದ ನಿದ್ರಾಸುಂದರಿಯ ಕತೆ, ರಿಪ್‌ವಾನ್ ವಿಂಕಲ್ ಕಥೆ ರಮ್ಯ ರೋಚಕ. ರಿಪ್‌ವಾನ್‌ವಿಂಕಲ್ ೨೦ ವರ್ಷಗಳ ಸುದೀರ್ಘ ನಿದ್ರೆ ಮಾಡಿ ಎದ್ದಾಗ ಪ್ರಪಂಚವೇ ಬದಲಾಗಿತ್ತಂತೆ. ಆತನೂ ಬಿಳಿಗಡ್ಡದ ಅಜ್ಜನಾಗಿದ್ದನಂತೆ. ಕಥೆಗಾರರ ಊಹೆಗೆ ಪ್ರಕೃತಿಯ ಯಾವುದೋ ಬಲವಾದ ಸಾಮ್ಯ ಇದ್ದೇ ಇರುತ್ತದೆ. ಆದರೂ ಹಸಿವು ಎನ್ನುವುದು ಇರುವಲ್ಲಿಯವರೆಗೆ ದೀರ್ಘ ನಿದ್ರೆ ಸಾಧ್ಯವಿಲ್ಲವೆಂಬುದು ವಿಜ್ಞಾನಿಗಳ ವಾದ. ನಮ್ಮ ಹಿಂದಿನ ಋಷಿಮುನಿಗಳು ದೇವರನ್ನು ಒಲಿಸಿಕೊಳ್ಳಲು, ಮೋಕ್ಷ ಹೊಂದಲು ತಪ್ಪಸ್ಸನ್ನು ಮಾಡುವವರು ಮಾಡುತ್ತಿದ್ದ ಯೋಗನಿದ್ರೆ ಯಾವ ರೀತಿಯದಿರಬಹುದು?

ಆದರೆ ದೀರ್ಘನಿದ್ರೆಗೆ ಒಳಗಾಗುವ ಅನೇಕ ಜೀವಿಗಳಿವೆ. ಅವುಗಳಲ್ಲಿ ಹಿಮಾಲಯದ ಅಳಿಲುಗಳು, ಒಂದು ಜಾತಿಯ ಮರಗಪ್ಪೆ, ಬಾವಲಿಗಳು, ಮುಳ್ಳುಹಂದಿ, ಕಾಡುಕೋಳಿ, ಹ್ಯಾಮ್‌ಸ್ಟರ್‍ಸ್, ಮೀನುಗಳು, ಕೀಟಗಳು, ಹಕ್ಕಿಗಳು ಹಾಗೂ ಚಿಟ್ಟೆಗಳ ಕೆಲವು ಪ್ರಭೇದಗಳು ದೀರ್ಘ ನಿದ್ರೆಗೆ ಒಳಗಾಗುತ್ತವೆ. ಯಾವುದೇ ಜೀವಿಗಳ ಚಲನವಲನಕ್ಕೆ-ಚಟುವಟಿಕೆ-ಕ್ರಿಯಾಶಿಲತೆಗೆ ಶಕ್ತಿ ಬರಬೇಕು. ಅದಕ್ಕಾಗಿ ಆಹಾರ ಬೇಕು. ಅಂದರೆ ಹಸಿವು ಎಂಬ ಸೂಚನೆಯನ್ನು ದೇಹ ಕೊಡುತ್ತದೆ. ಆಗ ಆಹಾರ ಸೇವನೆಯೆಂಬ ಚಟುವಟಿಕೆಯ ಮೂಲಕ ಶಕ್ತಿ ಸಂಚಯವಾಗುತ್ತದೆ. ಹೆಚ್ಚಾದ ಆಹಾರವೂ ದೇಹದೊಳಗೆ ಕೊಬ್ಬಿನರೂಪದಲ್ಲಿ ಸಂಗ್ರಹವಾಗುತ್ತದೆ. ಪಚನವಾಗದೇ ಉಳಿದದ್ದು ಮಾತ್ರ ಮಲರೂಪದಲ್ಲಿ ಹೊರಹೋಗುತ್ತದೆ. ಕೃಷಿ ಮಾಡಿದ ಜೀವಿಗಳು ಅಂದಂದಿನ ಆಹಾರವನ್ನು ಅಂದಂದೇ ಸೇವಿಸುವುಸು ಸಾಮಾನ್ಯ. ಕೆಲವು ಜೀವಿಗಳು ಆಹಾರವನ್ನು ಆಪತ್ತಿಗೆ, ಮಳೆಗಾಲಕ್ಕೆ, ಚಳಿಗಾಲಕ್ಕೆ ಸಂಗ್ರಹಿಸಿಡುತ್ತವೆ. ಎಲ್ಲಾ ಜೀವಿಗಳಿಗೂ ಬೇಸಿಗೆಯಲ್ಲಿ ಆಹಾರ ಯಥೇಚ್ಚವಾಗಿ ಸಿಗುತ್ತದೆ. ಆದರೆ ಉಳಿದ ಕಾಲಗಳಲ್ಲಿ ಕಡಿಮೆ. ಅದರಲ್ಲೂ ಸಸ್ಯಾಹಾರಿಗಳಿಗೆ ಈ ಸಮಸ್ಯೆ ಹೆಚ್ಚು. ಜೇನುಗಳು, ಇರುವೆಗಳು ಮಳೆಗಾಲಕ್ಕೆ ಆಹಾರ ಶೇಖರಣೆ ಮಾಡುತ್ತವೆ. ಮೊಲಗಳು, ಅಳಿಲುಗಳು, ಕರಡಿಗಳು, ಚಳಿಗಾಲಕ್ಕೆ ಆಹಾರ ಶೇಖರಣೆ ಮಾಡುತ್ತವೆ. ಅನೇಕ ಹಕ್ಕಿಗಳು, ಪ್ರಾಣಿಗಳು ತೀವ್ರವಾದ ಚಳಿ ಪ್ರದೇಶದಿಂದ ಖಂಡಾಂತರ, ದೇಶಾಂತರ ವಲಸೆ ಹೋಗುತ್ತವೆ. ಇದೆಲ್ಲಾ ಸಾಧ್ಯವಿಲ್ಲದ ಕೆಲವು ಜೀವಿಗಳು ಚಳಿಗಾಲದಲ್ಲಿ ದೀರ್ಘನಿದ್ರೆ ಮಾಡುವ ಕಾರಣ ಇದನ್ನು ಶೀತ ನಿದ್ರೆ ಎಂದೂ ಸಹ ಕರೆಯುತ್ತಾರೆ.

ಚಳಿಗಾಲದಲ್ಲಿ ಹೆಚ್ಚಳವಾದ ಆಹಾರದ ಕೊರತೆಯನ್ನು ಮನಗೊಂಡ ಈ ಜೀವಿಗಳು ಸೂಕ್ತ ಪ್ರದೇಶವನ್ನು ಆಯ್ದುಕೊಳ್ಳುತ್ತವೆ. ನಿರ್ದಿಷ್ಠ ಭಂಗಿಯಲ್ಲಿ ಅಂದರೆ ತಾಯಿಯ ಗರ್ಭಾವಸ್ಥೆಯಲ್ಲಿ ಇದ್ದ ಭಂಗಿಯಲ್ಲಿ ದೀರ್ಘನಿದ್ರೆಗೆ ತೊಡಗುತ್ತವೆ. ಇವುಗಳ ಹೃದಯಬಡಿತ ಅತ್ಯಂತ ಕಡಿಮೆಯಾಗುತ್ತದೆ. ರಕ್ತಚಲನೆ ನಿಂತೇಹೊದಷ್ಟು ಕಡಿಮೆಯಾಗುತ್ತದೆ. ಇವೂ ವಾತಾವರಣದೊಂದಿಗೆ ತಣ್ಣಗಾಗುತ್ತಾ ಹೋಗುತ್ತವೆ. ಆದರೆ ಮಂಜುಗಡ್ಡೆಯಂತೆ ಇವುಗಳ ದೇಹದೊಳಗೆ ಶೇಖರವಾಗಿದ್ದ ಕೊಬ್ಬು ಇವುಗಳ ಶಕ್ತಿಗೆ, ಜೀವಚೈತನ್ಯಕ್ಕೆ ಕಾರಣವಾಗುತ್ತದೆ.

ಹವಾಮಾನ ತಾಪ ಏರಿದಾಗ ಹೃದಯಬಡಿತ ಹೆಚ್ಚುತ್ತದೆ. ಉಸಿರಾಟ ವೇಗಗೊಳ್ಳುತ್ತದೆ. ರಕ್ತಚಲನೆ ಚುರುಕುಗೊಳ್ಳುತ್ತದೆ. ದೇಹವೂ ಬಿಸಿಯಾಗುತ್ತದೆ. ನಿದ್ರೆಯಿಂದ ಎದ್ದು ಆಹಾರ ಹುಡುಕಲು ಹೊರಡುತ್ತದೆ. ಆಗ ಮತ್ತೆ ಬೇಸಿಗೆ ಬಂದ ಕಾರಣ ಆಹಾರ ಸುಲಭ ಲಭ್ಯ. ವಿಜ್ಞಾನಿಗಳು ಈ ದೀರ್ಘನಿದ್ರೆಯ ಸಾಧ್ಯತೆಗಳನ್ನು ಇನ್ನಷ್ಟು ಅಧ್ಯಯನ ಮಾಡುತ್ತಿದ್ದಾರೆ. ಬಾಹ್ಯಾಕಾಶ ಯಾತ್ರೆಯಲ್ಲಿ ಸುದೀರ್ಘ ನಿದ್ರೆಗೆ ಅಳವಡಿಸಿ ಭೂಮಿಯನ್ನು, ಸೌರಮಂಡಲವನ್ನು ದಾಟಿ ಹೋಗಲು ಸಾಧ್ಯವೇ ?

ಮತ್ತೊಂದು ನಕ್ಷತ್ರಮಂಡಲಕ್ಕೆ ಹೋಗಿ ಅಲ್ಲಿಯ ಭೂಮಿಯಂತಹ ವಾತವರಣವಿರುವ ಪ್ರದೇಶದಲ್ಲಿ ಮತ್ತೆ ಎಚ್ಚರಗೊಳಿಸುವಂತೆ ಮಾಡಲು ಸಾಧ್ಯವೇ? ಇದು ಸುದೀರ್ಘಾಲೊಚನೆ ಎನ್ನುವಿರಾ?

ಜಕಣಾಚಾರಿಯ ಕಥೆಯೊಂದಿಗೆ ಇದನ್ನು ಪೂರೈಸುತ್ತೇನೆ. ಬೇಲೂರು, ಹಳೆಬೀಡಿನ ಅದ್ಭುತ ದೇವಾಲಯಗಳನ್ನು ಕೆತ್ತಿದ ಮಹಾನ್ ಶಿಲ್ಪಿ ಜಕಣಾಚಾರಿ. ಕೊನೆಯದಾಗಿ ಬೇಲೂರಿನ ಚೆನ್ನಕೇಶವನ ವಿಗ್ರಹವನ್ನು ಕೆತ್ತುತ್ತಾನೆ. ಪ್ರತಿಪ್ಠಾಪನೆಯ ಸಮಯದಲ್ಲಿ ಜಕಣಾಚಾರಿಯ ಮಗ ಡಂಕಣಾಚಾರಿ ಅಲ್ಲಿಗೆ ಬರುತ್ತಾನೆ. ಚೆನ್ನಕೇಶವನ ವಿಗ್ರಹದಲ್ಲಿ ದೋಷವಿದೆ ಎಂದು ಆರೋಪಿಸುತ್ತಾನೆ. ಜಕಣಾಚಾರಿ ಅದನ್ನು ನಿರಾಕರಿಸುತ್ತಾನೆ. ಅಷ್ಟೇ ಅಲ್ಲ, ಹಾಗೆ ದೋಷವಿದೆ ಎಂದಾದರೆ ತನ್ನ ಕೈಗಳನ್ನು ಕತ್ತರಿಸಿಕೊಳ್ಳುವುದಾಗಿ ಸವಾಲು ಹಾಕುತ್ತಾನೆ. ಆಗ ಡಂಕಣಾಚಾರಿಯು ಚಾಣ ಹಾಗೂ ಸುತ್ತಿಗೆಯಿಂದ ವಿಗ್ರಹದ ಹೊಕ್ಕಳಿಗೆ ಪೆಟ್ಟು ಕೊಟ್ಟಾಗ ಹೊಕ್ಕಳಿನ ಭಾಗ ಸೀಳುತ್ತದೆ. ಅದರೊಳಗೆ ಸುಪ್ತ ನಿದ್ರಾವಸ್ಥೆಯಲ್ಲಿದ್ದ ಕಪ್ಪೆಯೊಂದು ಎಚ್ಚೆತ್ತು ಹೊರಗೆ ಹಾರುತ್ತದೆ. ಇತ್ತ ಜಕಣಾಚಾರಿಯು ತನ್ನ ಕೈಗಳೆರಡನ್ನು ಕತ್ತರಿಸಿಕೊಂಡಿರುತ್ತಾನೆ.

ಕಪ್ಪೆಯು ಎಷ್ಟು ಕಾಲದಿಂದ ನಿದ್ರಾವಸ್ಥೆಯಲ್ಲಿತ್ತು? ವಿಗ್ರಹ ಕೆತ್ತುವಾಗ ತಿಳಿಯಲಿಲ್ಲವೇಕೆ? ಕಪ್ಪೆ ನಿದ್ರಾವಸ್ಥೆಗೆ ತೆರೆಳಿದ ಮೇಲೆ ಆ ಕಲ್ಲು ರೂಪುಗೊಂಡಿತ್ತೆ? ಕಥೆಯ ಭಾವಾವೇಶದಲ್ಲಿ ವಿಜ್ಞಾನಕ್ಕೆ, ತರ್ಕಕ್ಕೆ ಅವಕಾಶವೆಲ್ಲಿ?

ಕೊನೆಗೊಂದು ಪ್ರಶ್ನೆ ; ನಮ್ಮ ದೇಹದಲ್ಲಿ ಮೊದಲು ನಿದ್ದೆ ಮಾಡುವ ಅಂಗಗಳು ಯಾವುವು? ಕೊನೆಯಲ್ಲಿ ನಿದ್ದೆ ಮಾಡುವ ಅಂಗ ಯಾವುದು ?

ಕೈ ಕಾಲುಗಳು ಮೊದಲು ನಿದ್ರಿಸುತ್ತವೆ. ಕಿವಿ ಕಡೆಯಲ್ಲಿ ಮಲಗುತ್ತದೆ. ಆದರೆ ಮೊದಲು ಎಚ್ಚರಗೊಳ್ಳುವುದು ಕಿವಿ. ಕೊನೆಯಲ್ಲಿ ಎಚ್ಚರಗೊಳ್ಳುವ ಅಂಗ ಯಾವುದು ಗೊತ್ತೆ ? ಕಣ್ಣು!!