ಪಸರಿಸಿದಾಗ ಬಗೆ ಮ[1]ನದೊಳ್ ಪೊ[2]ಸತಾಗೆ ನೆಗೞ್ಚಲರಿಯನಾ ರಚನೆಯೊಳೇಂ |

ಬಸನಂ ತನಗಿನತಱ ಬೇವಸಮೇಂ ಕವರ್ದರುಮೊಳರೆ ಕವಿಯಲ್ಲದರಂ ||೧೨||

ಸತ್ಕಾವ್ಯಪ್ರಶಂಸೆ

ಬಗೆಬಗೆದು ಕೇಳ್ದು ಬುಧರೊಲವೊಗೆದಿರೆ ಹೃದಯದೊಳೆ ತಾ[3]ಳ್ದ

ಮಣಿ-ಹಾರಂಬೋಲ್ |

ಸೊಗಯಿಸುವ ವಚನ-ವಿರಚನೆ ನೆಗೞ್ದುಂ ಭಾವಿಸುವೊಡದರ ಪೆಂಪತಿ ಸುಲಭಂ ||೧೩||

ಕುಕವಿಯ ಸ್ವರೂಪ

ನೆನೆನೆನೆದು ಪೆಱರ ಮಾತುಗಳನೆ ನೆಗೞ ರೆ ಕೃ[4]ತಿಯೊಳಿಡುವವಂ ನಗದ ಗು[5]ಹಾ-|

ಧ್ವನಿಯವೊಲನರ್ಥ-ವಚನಂ ತನಗಾಗಿಸಲಱಯನುಚಿತ-ವಾಕ್ಚತುರತೆಯಂ ||೧೪||

ಕವಿತಾರತಮ್ಯ

ಕುಱತಂತು ಪೆಱರ ಬಗೆಯರಂ ತೆ[6]ಱೆದಿರೆ ಪೆಱರ್ಗಱಪಲಾರ್ಪವಂ ಮಾತಱವಂ |

ಕಿಱದಱೊಳೆ ಪಿರಿದುಮರ್ಥಮನಱಪಲ್ ನೆಱೆವಾತನಾತನಿಂದಂ ಜಾಣಂ ||೧೫||

೧೨. ಯಾವನು ತನ್ನ ಮನಸ್ಸನ್ನು ತುಂಬಿಕೊಂಡು ಆಶಯ ಹೊಸದೆನಿಸುವಂತೆ ರಚನೆಗೈಯಲಾರನೋ ಅವನಿಗೆ ಆ ಕಾವ್ಯರಚನೆಯ ದಂದುಗವೇಕೆ? ಆ ಪರಿಯ ಕ್ಲೇಶವೇಕೆ? ಕವಿಯಲ್ಲದವರನ್ನು (ಕಂಡು) ಯಾರಾದರೂ ಸಿಡುಕುತ್ತಾರೆಯೆ?

೧೩. ಮತ್ತೆ ಮತ್ತೆ ಆಸಕ್ತಿಯಿಂದ ಕೇಳುವ ವಿದ್ವಾಂಸರ ಒಲವು ಉಕ್ಕುತ್ತಿರಲು, ಅವರು ಹೃದಯದಲ್ಲಿ ತಳೆದ ರತ್ನಹಾರದಂತೆ ಯಾವ ಕಾವ್ಯರಚನೆ ಸೊಗಯಿಸುವುದೋ ಅದು ಮಾತ್ರ ಶ್ಲಾಘ್ಯ. ವಿಚಾರ ಮಾಡಿದರೆ ಅದರ ಹಿರಿಮೆ ತುಂಬಾ ಸುಲಭಸಾದ್ಯ.

೧೪. ಬೇರೆ ಕವಿಗಳ ಮಾತುಗಳನ್ನೇ ನೆನೆನೆನೆದು ತನ್ನ ಕೃತಿಯಲ್ಲಿ ಬಳಸುವವನು ಪರ್ವತ-ಗುಹೆಯ ಮಾರ್ದನಿಯಂತೆ ಅರ್ಥಹೀನವಾದ ವಚನಗಳ ಕರ್ತನೆನಿಸುವವನು. ಯೋಗ್ಯವಾದ ವಾಕ್ಚಾತುರ್ಯವನ್ನು ಅವನು ತನ್ನದಾಗಿಸಿಕೊಳ್ಳಲಾರನು.

೧೫. ಒಬ್ಬರು ಮನಸ್ಸಿನಲ್ಲಿ ಮಾಡಿಕೊಂಡಂತೆಯೇ ಅವರ ಅಭಿಪ್ರಾಯವನ್ನು ಮತ್ತೊಬ್ಬರಿಗೆ ತೆರೆದು ತಿಳಿಸಬಲ್ಲವನು ‘ಮಾತರಿವ’ನೆನ್ನಬಹುದು. ಕಿರದರಲ್ಲಿಯೇ ಹಿರಿದಾದ ಅರ್ಥವನ್ನಡಗಿಸಿ ತಿಳಿಸಬಲ್ಲಾತನು ಅವನಿಗಿಂತಲೂ ಚದುರ.

ನುಡಿಯಂ ಛಂದದೊಳೊಂದಿರೆ ತೊಡರ್ಚಲಱವಾತನಾತನಿಂದಂ ಜಾಣಂ |

ತಡೆಯದೆ ಮಹಾಧ್ವ-ಕೃತಿಗಳನೊಡರಿಸಲಾರ್ಪಾತನೆಲ್ಲಱಂದಂ ಬಲ್ಲಂ ||೧೬||

ಮಾತಱವರ್ ಕೆಲಬರ್ ಜಗತೀ-ತಳ-ಗತ-ಮನುಜರೊಳಗೆ ಮಾತಱವವರೊಳ್ |

ನೀತಿವಿದರಮಳಕವಿತಾ-ನೀತಿಯುತರ್ ಕೆಲರೆ ಪರಮ-ಕವಿ-ವೃಷಭರ್ಕಳ್ ||೧೭||

ಕಾವ್ಯಪ್ರಯೋಜನಗಳು

ಪಾಪವಿದು ಪುಣ್ಯವಿದು ಹಿತ-ರೂಪಮಿದಹಿತ-ಪ್ರಕಾರಮಿದು ಸುಖಮಿದು ದುಃ- |

ಖೋಪಾತ್ತಮಿದೆಂದಱಪುಗುಮಾ ಪರಮ-ಕವಿ-ಪ್ರಧಾನರಾ ಕಾವ್ಯಂಗಳ್ ||೧೮||

ಲೌ[7]ಕಿಕ-ಸಾಮಯಿಕೋರು-ವಿವೇಕಮುಮಭ್ಯುದಯ-ಪರಮ-ನಿಃಶ್ರೇಯಸಮುಂ |

ಪ್ರಾಕಟಮಕ್ಕುಂ ವಿದಿತಾನೇಕ-ಕವೀಶ-ಪ್ರಯೋಗ-ಪದ-ಪದ್ಧತಿಯೊಳ್ ||೧೯||

ಅಧಿಕೃತ-ಸತ್ಪುರುಷಾರ್ಥ-ಪ್ರಧಾನ-ಧಮಾರ್ಥ-ಕಾಮ-ಮೋಕ್ಷಂಗಳವಾ |

ಬುಧ-ಜನ[8]-ವಿವಿಕ್ತ-ಕಾವ್ಯ-ಪ್ರಧಾರಿತಾರ್ಥಂಗಳಖಿಳ-ಭುವನ-ಹಿತಂಗಳ್ ||೨೦||

೧೬. ಛಂದೋಬಂಧದಲ್ಲಿ ನುಡಿಯನ್ನು ಅಳವಡಿಸಬಲ್ಲವನು ಆತನಿಂಗಿಂತಲೂ ಜಾಣ; ತಡೆಬಡೆಯಿಲ್ಲದೆ (ಲಕ್ಷಣಬದ್ಧವಾದ) ದೊಡ್ಡ ಮಾರ್ಗಕಾವ್ಯಗಳನ್ನು (=ಮಹಾಕಾವ್ಯಗಳನ್ನು) ವಿರಚಿತಸಬಲ್ಲಾತನು ಎಲ್ಲರಿಗಿಂತಲೂ ಬಲ್ಲಿದನು.

೧೭. ಈ ಜಗತ್ತಿನಲ್ಲಿ ಮನುಷ್ಯರಲ್ಲಿ ಮಾತರಿವವರು ಕೆಲವರು ಮಾತ್ರ; ಮಾತರಿವವರಲ್ಲಿಯೂ ನೀತಿಯನ್ನು ಬಲ್ಲವರಾಗಿ, ಕಾವ್ಯಲಕ್ಷಣವನ್ನೂ ತಿಳಿದವರಾಗಿರುವ ಕವಿಶ್ರೇಷ್ಠರು ಕೆಲವರೇ.

೧೮. ‘ಇದು ಪಾಪ, ಇದು ಪುಣ್ಯ; ಇದ ಹಿತದ ಸ್ವರೂಪ, ಇದು ಅಹಿತದ ಪರಿ; ಇದು ಸುಖ, ಇದು ದುಃಖಕಾರಿ, ಎಂದು ಆ ಪರಮ ಕವಿ-ಶ್ರೇಷ್ಠರ ಮಹಾ-ಕಾವ್ಯಗಳು ತಿಳಿಸಿಕೊಡುತ್ತವೆ.

೧೯. ಲೋಕ-ವ್ಯವಹಾರದ ಹಾಗು ಶಾಸ್ತ್ರಗಳ ವಿಷಯದಲ್ಲಿ ವಿವೇಕ, (ಜೀವನದಲ್ಲಿ) ಅಭ್ಯುದಯ ಹಾಗು ಪರಮ ಪುರುಷಾರ್ಥವಾದ ನಿಃಶ್ರೇಯಸ (=ಮೋಕ್ಷ)-ಇವೆಲ್ಲ ನಾನಾ ಕವೀಂದ್ರರ ಕಾವ್ಯಮಾರ್ಗದಲ್ಲಿ ಪ್ರಕಟವಾಗುವುವು.

೨೦. ಲೋಕಕ್ಕೆಲ್ಲ ಹಿತಕಾರಿಗಳಾದ ಪ್ರಸಿದ್ಧ ಪುರುಷಾರ್ಥಗಳೆಂದರೆ ಪ್ರಧಾನವಾಗಿರುವ ಧರ್ಮ, ಅರ್ಥ, ಕಾಮ ಮೋಕ್ಷಗಳು. ಅವೆಲ್ಲವೂ ವಿಬುಧರ ಕಾವ್ಯಗಳಿಂದ ಸುಸ್ಪಷ್ಟವಾಗಿ ತಿಳೀಯಬರುತ್ತವೆ.

ಲೋಕದೊಳದಱೆಂ ಕಾವ್ಯ[9]-ಸ್ವೀಕರಣೋದ್ಯುಕ್ತನಕ್ಕೆ ಕವಿ ತನ್ನಱವಂ- |

ತಾಕಲ್ಪಾಂತಸ್ಥಾಯಿ ಶ್ರೀ-ಕೀರ್ತಿ-ವಧೂ-ಪ್ರದಾನ-ವಲ್ಲಭನಕ್ಕುಂ ||೨೧||

ಕಾವ್ಯಲಕ್ಷಣ

ಕವಿ-ಭಾವ-ಕೃತಾನೇಕ-ಪ್ರವಿಭಾಗ-ವಿವಿಕ್ತ-ಸೂಕ್ತ-ಮಾರ್ಗಂ ಕಾವ್ಯಂ |

ಸವಿಶೇಷ-ಶಬ್ದ-ರಚನಂ ವಿವಿಧಾರ್ಥ-ವ್ಯಕ್ತಿ-ವರ್ತಿತಾಲಂಕಾರಂ ||೨೨||

ಕಾವ್ಯಪುರುಷನ ಶರೀರ ಮತ್ತು ಅಲಂಕಾರ

ನರ-ಲೋಕ-ಚಂದ್ರ-ಮತದಿಂ ಪರಮಾಲಂಕಾರಮುಂ ಶರೀರಮುಮೆಂದಿಂ-|

ತೆರಡಕ್ಕುಂ ಭೇದಂ ಬಹುಪರಿಕರಮಾ ಕಾವ್ಯ-ವಸ್ತುಪುರುಷಂಗೆಂದುಂ ||೨೩||

ಅವಱೊಳ್ ಶರೀರವೆಂಬುದು ಕವಿ-ಪ್ರಧಾನ-ಪ್ರಯೋಗ-ಪದ-ಪದ್ಧತಿಯೊಳ್ |

ದ್ವಿ[10]ವಿಧಮೆನಿಕ್ಕುಮದತಿಶಯ-ಧವಳೋಕ್ತ-ಕ್ರಮದೆ ಗದ್ಯ-ಪದ್ಯಾಖ್ಯಾತಂ ||೨೪||

ಗದ್ಯಕಾವ್ಯ

ಪದ-ಪಾದ-ವಿಯುತ-ನಿಯಮಾಸ್ಪದಮಲ್ಲದಳಂಕೃತಂ ಕ್ರಿಯಾ-ಕಾರಕದೊಳ್ |

ಪುದಿದರ್ಥ-ವ್ಯಕ್ತಿಯನೀವುದು ಗದ್ಯಮನೇಕರೂಪ-ಭೇದ-ವಿಭಕ್ತಂ ||೨೫||

೨೧. ಆದ್ದರಿಂದ ಲೋಕದಲ್ಲಿ ಕವಿಯು ತನ್ನ ಅರಿವಿಗನುಗುಣವಾಗಿ ಕಾವ್ಯ ರಚನೆಯ ಕಾರ್ಯವನ್ನು ಕೈಗೊಳ್ಳುವವನಾಗಬೇಕು. (ಅದರ ಮೂಲಕ) ಕಲ್ಪಾಂ ತರಕಾಲದವರೆಗೂ ಶಾಶ್ವತವಾದ ಕೀರ್ತಿವಧುವಿಗೆ ಅವನು ಮೆಚ್ಚಿನ ಕಾಂತನೆನಿಸುವನು.

೨೨. ಕವಿಯ ಅಭಿಪ್ರಾಯಭೇದದಿಂದ ನಾನಾ ಪ್ರತ್ಯೇಕ ಮಾರ್ಗಗಳಾಗಿ ಒಡೆದು ತೋರುವಂತಹ ಸೂಕ್ತಿಗಳನ್ನುಳ್ಳದ್ದು, ವಿಶೇಷತೆಯಿರುವ ಶಬ್ದಗಳಿಂದ ರಚಿತವಾದುದು ಮತ್ತು ವಿವಿಧವಾದ ಅರ್ಥಪ್ರಕಟನೆಯ ಪರಿಗಳಿಂದ ಸಾಲಂಕಾರವೆನಿಸುವದು ಯಾವದೋ ಅದೇ “ಕಾವ್ಯ”.

೨೩ ಕಾವ್ಯವಸ್ತುವೇ ಒಬ್ಬ ಪುರುಷ, ಅವನಿಗೆ ನೃಪತುಂಗನ ಮತಪ್ರಕಾರ ಅಂದಗೊಳಿಸುವ ‘ಅಲಂಕಾರ’ ಮತ್ತು (ಅಂದವಾಗಿಸಲ್ಪಡುವ) ‘ಶರೀರ’ ಎಂಬ ಎರಡು ಭಿನ್ನ ಅಂಶಗಳಿರುತ್ತವೆ; (ಮತ್ತೆ ಅವು) ಒಂದೊಂದೂ ಬಹುಪ್ರಕಾರವಾಗಿರುತ್ತವೆ.

೨೪. ಅವೆರಡರಲ್ಲಿ (ಮೆದಲನೆಯದಾದ) ಶರೀರವು ಮಹಾಕವಿಗಳ ಪ್ರಯೋಗ ಮಾರ್ಗದಲ್ಲಿ ನೃಪತುಂಗನ ಮತಾನುಸಾರ ಮತ್ತೆ ‘ಗದ್ಯ’, ‘ಪದ್ಯ’ ಎಂದು ಇಬ್ಬಗೆಯಾಗಿರುತ್ತದೆ.

೨೫. (ಛಂದಶ್ಯಾಸ್ತ್ರದಲ್ಲಿ ಹೇಳಿದ) ಪದ, ಪಾದಗಳ ನಿಯಮಗಳಿಗೆ ಒಳಗಾಗದಿದ್ದರೂ, ಅಲಂಕಾರಗಳಿಂದ ಕೂಡಿ, ಕ್ರಿಯೆಗಳು (ನೇರವಾಗಿ) ‘ಕಾರಕ’ಗಳೊಂದಿಗೆ (=ನಾಮ-ವಿಭಕ್ತ್ಯಂತ ಪದಗಳೊಂದಿಗೆ) ಅನ್ವಯಿಸುವಂತೆ ಇರುತ್ತ, ಅರ್ಥ ಕೊಡುವದೇ ‘ಗದ್ಯ’ (ಕಾವ್ಯ); ಮತ್ತೆ ಅದರಲ್ಲಿಯೂ ಅನೇಕ ಬಗೆಗಳಿರುತ್ತವೆ.

ಸದಮಳ-ಸಮ-ಸಂಸ್ಕೃತ-ಕಾವ್ಯದ ಹೃದಯಂ ಹ[11]ರ್ಷ-ಚರಿತ-ಕಾದಂಬರಿಗಳ್ |

ಮೊದಲಾಗಿ ನೆಗೞ್ದುವಿದಱೊಳ್ ಸದಳಂಕಾರಂಗಳಖಿಳ-ಕವಿ-ವಿದಿತಂಗಳ್ ||೨೬||

ಗದ್ಯಕಥೆ

ಮಿಗೆ ಕನ್ನಡಗಬ್ಬಂಗಳೊಳಗಣಿತ-ಗುಣ-ಗದ್ಯ-ಪದ್ಯ-ಸಮ್ಮಿಶ್ರಿತಮಂ |

ನಿಗದಿಸುವರ್ ಗದ್ಯ-ಕಥಾ-ಪ್ರಗೀತಿಯಿಂ ತಚ್ಚಿರಂತನಾಚಾರ್ಯರ್ಕಳ್ ||೨೭||

ಕವಿಪ್ರೌಢಿಮೆ

ಸಕಳ-ಕಳಾ-ಭಾಷಾ-ಲೌಕಿಕ-ಸಾ[12]ಮಯಿಕಾದಿ-ವರ್ಣನಾ-ನಿರ್ಣಿಕ್ತ-

ಪ್ರಕಟಿತರ-ವಸ್ತು-ವಿಸ್ತರ-ವಿಕಲ್ಪವಿದನಲ್ಲದಾಗದಾಗದು ಪೇೞಲ್ ||೨೮||

ಗದ್ಯಕವಿಗಳು

ವಿಮಳೋದಯ-ನಾಗಾರ್ಜುನ-ಸಮೇತ-ಜಯಬಂಧು-ದುರ್ವಿನೀತಾದಿಗಳೀ |

ಕ್ರಮದೊಳ್ ನೆ[13]ಗೞ್ಚೆ ಗದ್ಯಾಶ್ರಮ-ಪದ-ಗುರುತಾ-ಪ್ರತೀತಿಯಂ

ಕೈಕೊಂಡರ್ ||೨೯||

೨೬. ಶ್ರೇಷ್ಠವಾದ ಸಂಸ್ಕೃತದ ಗದ್ಯಕಾವ್ಯದ ಹೃದಯವೆನಿಸುವಂತೆ ‘ಹರ್ಷ ಚರಿತ’ ‘ಕಾದಂಬರಿ’ ಮುಂತಾದವು ಪ್ರಸಿದ್ಧವಾಗಿವೆ; ಈ ಗದ್ಯಕಾವ್ಯದಲ್ಲಿ ಒಳ್ಳೊಳ್ಳೆಯ ಅಲಂಕಾರಗಳು ತುಂಬಿರುವುದು ಕವಿಗಳಿಗೆ ಗೊತ್ತೇ ಇದೆ.

೨೭. ಹೆಚ್ಚಾಗಿ ಕನ್ನಡ ಕಾವ್ಯಗಳಲ್ಲಿ ಮಾತ್ರ ಅನೇಕ ಪರಿಯ ಗದ್ಯ-ಪದ್ಯಗಳ ಸಮ್ಮಿಶ್ರಣವನ್ನೇ “ಗದ್ಯಕಥೆ” ಎಂಬ ಪರಂಪರಾಗತ ಹೆಸರಿನಿಂದ ಪೂರ್ವಾ-ಚಾರ್ಯರು ಕರೆಯುತ್ತಾರೆ.

೨೮. ನಾನಾ ಕಲೆಗಳಲ್ಲಿ, ಭಾಷೆಗಳಲ್ಲಿ, ಲೋಕವಿದ್ಯೆಗಳಲ್ಲಿ, ಶಾಸ್ತ್ರಸಿದ್ಧಾಂತಗಳಲ್ಲಿ ವಿವರವಾಗಿ ಹೇಳಿ ನಿರ್ಣಯಿಸಿರುವ ಪ್ರಕಾರ ವಿಶದವಾದ ಎಲ್ಲ ವಸ್ತುಗಳನ್ನೂ ವಿಸ್ತಾರವಾಗಿ ಅರಿಯದವನು ಖಂಡಿತವಾಗಿಯೂ (ಕಾವ್ಯವನ್ನು) ರಚಿಸಲು ಹೊರಡಬಾರದು.

೨೯. ವಿಮಲೋದಯ (ಅಥವಾ ವಿಮಲ, ಉದಯ), ನಾಗಾರ್ಜುನ, ಜಯ ಬಂಧು, ದುರ್ವಿನೀತ-ಮುಂತಾದವರು ಈ ಗದ್ಯಕಾವ್ಯಮಾರ್ಗದಲ್ಲಿ ಕೃತಿರಚನೆ ಮಾಡಿ ಆ ಗದ್ಯದ ಆಶ್ರಮಗುರುಗಳು ಎಂದರೆ ಪೀಠಾಚಾರ್ಯರೆಂಬ ಗೌರವವನ್ನು ಗಳಿಸಿದರು.


[1] ಮನಮಂ ‘ಪಾ’ ಮತ್ತು ‘ಸೀ’ (ಬೆಂಗಳೂರು ಗೌವರ‍್ನಮೆಂಟ್ ಆರ್ಟ್ಸ್ ಕಾಲೇಜ್ ಕರ್ನಾಟಕ ಸಂಘ ಆವೃತ್ತಿ, ಸಂಪಾದಕರು-ಪ್ರೊ.ಎಂ.ವಿ. ಸೀತಾರಾಮಯ್ಯ, ೧೯೬೮).

[2] ಪೊಸತಾಗಿ ‘ಪಾ’.

[3] ತಾಳ್ದಿ ‘ಮ’.

[4] ಕೃತಿಯೊಳದುವರಂ ‘ಮ’, ಕೃತಿಯೊಳದು ವಲಂ (ತೀ.ನಂ. ಶ್ರೀ. ಅವರ ‘ಭಾರತೀಯ ಕಾವ್ಯಮೀಮಾಂಸೆ’ ಯಲ್ಲಿ ಸೂಚಿತ ಪಾಠ, ಪು.೪೪೩), ಕೃತಿಯೊಳಿಡುವನಂ ‘ಬ’.

[5] ಗೃಹಾ ‘ಅ’ ‘ಬ’.

[6] ಬರದಿರೆ ‘ಬ’.

[7] ಲವುಕಿಕಸಾಮೈಕೋ ‘ಬ’

[8] ಬುಧಜನವಾ ವಿವಿಕ್ತ ‘ಅ’

[9] ಶ್ರೀಕರಣೋದ್ಯಕ್ತ ‘ಪಾ’ ‘ಸೀ’.

[10] ವಿವಿಧ ‘ಅ’ ‘ಬ’.

[11] ಹರುಷ ‘ಅ’

[12] ಸಾಂವೈಂಕಾದಿ ‘ಬ’

[13] ನೆಗೞ್ತೆ ‘ಅ’ ‘ಬ’.