“ಗೌರವದಿ ಬಳಿ ಸಾರು,

ನಮಿಸಿ ಮೇಲೇರು:
ಅಲ್ಲೊ ಇದು ಬರಿ ಕಾರು;
ಇದು ಚಿನ್ಮಯದ ತೇರು:
ಮನ್ಮಾತೆಯೂರು!” –

ಯಂತ್ರರೂಪಿಣಿಯಾಗಿ
ಮಂತ್ರಮಯಿ ತಾನು
ಬಂದ ತಂತ್ರಕೆ ಕೋಳು
ಹೋಗುವೆಯ ನೀನು?
ವೇಷಮಾತ್ರಕೆ ಮೋಸ
ಹೋಗೆನಯ್ ನಾನು! –

ಎಂತೊ ಏನೋ ಅಂತೂ
ಮಿಡಿಯುತಿಹುದಿಂತು
ನನ್ನೆದೆಯ ತಂತು,
ತರ್ಕಬುದ್ಧಿಯ ಮೇರೆ ಮೀರಿ ನಿಂತು!

೨೫ – ೨ – ೧೯೫೧