ಈವೊತ್ತೊಂದು ದಿನ

ಸುಮ್ಮನಿದ್ದು ಬಿಡು, ಮನ!
ಏನಾದರು ಮಾಡಲಿ ಆಳು;
ಎಲ್ಲಾದರು ಆಗಲಿ ಹಾಳು:
ಈವೊತ್ತೊಂದು ದಿನ
ಸುಮ್ಮನಿದ್ದು ಬಿಡು, ಮನ!

ಉದ್ಯಾನ ದಾರಿಯನು
ಎಂತು ಗುಡಿಸಿಹರೆಂದು
ನೋಡಬೇಡ;
ಗುಡಿಸಿದ್ದರೂ, ಇಲ್ಲಿ
ಏಕೆ ಕಸ?
ಎಂಬ ಪ್ರಶ್ನೆಯ ಗೋಜೆ
ನಿನಗೆ ಬೇಡ!

ಕೊಟ್ಟಿಗೆಯ ಆಕಳಿಗೆ
ಹುಲ್ಲು ತಂದರೆ? – ಎಂದು
ಕೇಳಬೇಡ;
ಒಗೆದ ಬಟ್ಟೆಯೊಳೇಕೆ
ಇಷ್ಟು ಕೊಳೆ? ಎಂದೇನು
ಕೇಳಬೇಡ;
ಮೈ ತೊಳೆದರೇನಂತೆ?
ಬಿಟ್ಟರೇನಂತೆ?
ನಾಯ ಮೆಯ್ಯನು ಮೂಸಿ
ನೋಡಬೇಡ!

ಈವೊತ್ತೊಂದು ದಿನ,
ದಮ್ಮಯ್ಯ, ಓ ಮನ,
ಗಟ್ಟಿ ಮನಸನು ಮಾಡಿ,
ಗುರುಪಾದವನು ನೆನೆದು, ಕೂಡಿ,
ಸುಖವಾಗಿರು!
ಎಲ್ಲಕೂ ಮಿಗಿಲಾಗಿ
ಸುಮ್‌ಮ್‌ಮ್ಮನಿರು!!

೨೭ – ೬ – ೧೯೫೯