ಇದ್ದಕಿದ್ದಂತೆ

ತಮಗೆ ತಾವೆ
ನನ್ನ ಕೈ ಮುಗಿಯುತ್ತವೆ!
ಅದ್ಭುತಕೆ ಆಶ್ಚರ್ಯಕೆ ದಣಿದವೋಲಂತೆ
ನನ್ನ ಹಣೆ ಮಣಿಯುತ್ತದೆ!
ನನ್ನ ಶಿರವೊ ಅಮಲೇರಿದಂತೆ ಬಾಗಿ ಬಾಗಿ ನೆಲಕ್ಕೆರಗುತ್ತದೆ!
ನನ್ನ ಚೇತನ ಸಮಸ್ತವೂ ದಿವ್ಯಗೌರವಭಾರಕ್ಕೆ ಸೋತು ಜೋತು
ಪಾದ ಪಾತಾಳದೆಡೆಗೆ ಕುಸಿದು ಬೀಳುತ್ತದೆ!
ಪೂಜೆಗೆ ಪೊತ್ತಿಸಿದ ಕರ್ಪೂರಪರ್ವತ ಶಿಖರದಂತೆ
ನನ್ನ ಭಕ್ತಿಯ ಭವ್ಯಜ್ವಾಲೆ
ಲೋಕಲೋಕಗಳಾಚೆಯಾಕಾಶಕೇರಿ
ಕೈಲಾಸಗಳೆ ಕರಗುತ್ತವೆ,
ಮರ್ತ್ಯಕೆ ಧವಳ ಭಾಗೀರಥಿಯರವತರಿಸುವಂತೆ!
ರೋಮಾಂಚವನನುಭವಿಸುವ ಈ ಬದ್ಧ ಜೀವಕ್ಕೆ
ಕೃಪೆದೋರುತ್ತದೆ ಭಾವಬುದ್ಧಸಮಾಧಿ!

ಶ್ರೀಮಾತೆಯೊ ಸುಂದರಿ, ಸಮೀಪ ಷೋಡಶಿ;
ಶ್ರೀಗುರು ನವಯೌವನದಲಿ ಕಾಲಿಟ್ಟಿದ್ದಾ
ಹೊಂಬಣ್ಣದ ಮನ್ಮಥಮೂರ್ತಿ!
ಒಂದೆ ಮಂಚದಲಿ, ಮಲಗಿದರಂತೆ,
ಒಂದೆ ಹಾಸಿನಲಿ, ಪಕ್ಕಪಕ್ಕದಲಿ,
ಜ್ವಾಲಾಮುಖಿಯಾ ಲಾವಾಗ್ನಿಯ ಮಧ್ಯೆ
ಮಾಡಿದರಂತೆ ತಣ್ಣಗೆ ನಿದ್ದೆ!……..
ಮೈ ಸೋಂಕಿದರೂ ಸುಡಲಿಲ್ಲ.
ಸುಡುವಾ ಮಾತಿರಲಿ, ಬೇಗೆಯ ಸುಳಿವೂ ಇಲ್ಲ!

ಕಡೆಗೊಂದಿನಿತಾದರು ಮೈ ಬೆವರೂ ಇಲ್ಲ!
ಉದ್ವೇಗವೂ ಇಲ್ಲ;
ಪ್ರಯತ್ನವೂ ಇಲ್ಲ;
ಸಾಹಸಗೀಹಸದಾ ಕೆಚ್ಚೂ ಇನಿತಿಲ್ಲ!
ಹಸುಳೆಗಳೆರಡು ಒಂದೆ ತೊಟ್ಟಿಲಲಿ
ನಿದ್ದೆ ಮಾಳ್ಪವೊಲು ಇದ್ದರೊಟ್ಟಿನಲಿ……..
ದಿನವೊಂದೇ?
ದಿನವೆರಡೇ?
ಎಂಟು ತಿಂಗಳಂತೆಂಟು ತಿಂಗಳೂ!……..

ಇದುವರೆಗಿನ ಜಗದದ್ಭುತ ಕೋಟಿ ಪವಾಡಗಳೆಲ್ಲ
ನಾಚಿ ತಲೆತಗ್ಗಿಸಿ ಮೈಗರೆಯುವಂತಾಯ್ತಲಾ!
ಶ್ರೀಮಾತೆಗೊ? ಶ್ರೀಗುರುವಿಗೊ? ಯಾರಿಗೆ ಬೆರಗಾಗಲಿ ನಾನು? ..!!
ಓಂ! ನಮೋ ನಮೋ ನಮಃ! ಓಂ!

೧೨ – ೯ – ೧೯೬೧