ಓ ನನ್ನ ಜೀವನದ ಜೀವನವೆ, ನಿಚ್ಚಮುಂ
ನಿನ್ನ ಮೆಯ್ ಸೋಂಕಿರುವುದೆನ್ನನೆಂದು
ತಿಳಿದಿರುವೆನದಕಾಗಿ ನನ್ನೊಡಲನೇಗಳುಂ
ಮಿಂದು ನಿನಗಾಗಿ ಮಡಿಮೀಸಲಿಡುವೆ.
ನನ್ನ ಚಿತ್ತದಿ ತಿಳಿವುದೀವಿಗೆಯ ಹೊತ್ತಿಸಿದ
ನನ್ನಿ ನೀನೆಂದರಿತೆನದಕಾಗಿ ನಾ
ನನ್ನ ಮನದಿಂದೆಲ್ಲ ಮಿಥ್ಯೆಯನು ಹೊರದೂಡಿ
ಸತ್ಯಾರ್ಚನೆಗೆ ಸಮೆವೆ ತೈಲಾರ್ಚಿಯಂ.
ನನ್ನೆದೆಯ ಗುಡಿಯೆ ನಿನ್ನಡಿಗೆ ಮಣೆಯೆಂದರಿತು
ಗುಡಿಸುವೆನು ಕೇಡನೊಲುಮೆಯನು ಮುಡಿಸಿ;
ನೀನುಸಿರಿಗುಸಿರೆಂದರಿತು ನಡೆವೆನೇಗಳುಂ
ನಿಚ್ಚ ಬಾಳೊಳು ನೀನೆ ಬಿಚ್ಚುವಂತೆ.
೧೦ – ೧೦ – ೧೯೪೩
* ರವೀಂದ್ರರ ಗೀತಾಂಜಲಿ – ೪
Leave A Comment