ಸಾಕು ಈ ಬಹೂದಕ:
ಆಗು ನೀ ಕುಟೀಚಕ,
ಓ ನನ್ನ ಮಾನಸಾ!
ಅಲ್ಲಿ ಇಲ್ಲಿ ಅಲೆದುದಾಯ್ತು
ಅವರ ಇವರ ಕಂಡುದಾಯ್ತು
ಅದನು ಇದನು ಓದಿಯಾಯ್ತು
ಹುಡುಕಿ ತಡಕಿ ನೋಡಿಯಾಯ್ತು!
ಓ ನನ್ನ ಮಾನಸಾ,
ಸಾಕು ಈ ಬಹೂದಕ:
ಆಗು ನೀ ಕುಟೀಚಕ!
ಸಹ್ಯ ಹೈಮ ಅದ್ರಿಗಳಲಿ
ಬದರಿಕಾ ಕಾಶಿಗಳಲಿ
ರಾಮೇಶ್ವರ ಪೂರಿಗಳಲಿ
ಜಾತ್ರೆಯಾಯ್ತು ತೊಳಲಿ ತೊಳಲಿ!
ಓ ನನ್ನ ಮಾನಸಾ,
ಸಾಕು ಈ ಬಹೂದಕ:
ಆಗು ನೀ ಕುಟೀಚಕ!
ಕ್ಷೇತ್ರ ಯಾವುದಾದರೇನು?
ತೀರ್ಥ ಯಾವುದಾದರೇನು?
ದೇವರಾವುದಾದರೇನು?
ಅದೇ ನೀನು, ಇದೇ ನಾನು!
ಓ ನನ್ನ ಮಾನಸಾ,
ಸಾಕು ಈ ಬಹೂದಕ:
ಆಗು ನೀ ಕುಟೀಚಕ!
ಎಲ್ಲೆಲ್ಲೂ ಇರುವ ನಿನ್ನ,
ಗುರುವಿನಡಿಯ ಗುಡಿಯ ನಿನ್ನ,
ಅಲ್ಲಿ ಇಲ್ಲಿ ಅರಸಿ, ನನ್ನ
ಚರಣಕಾಯ್ತು ಅರಿವ ಬನ್ನ!
ಓ ನನ್ನ ಮಾನಸಾ
ಸಾಕು ಈ ಬಹೂದಕ:
ಆಗು ನೀ ಕುಟೀಚಕ!
೨೪ – ೬ – ೧೯೬೫
* ಸಾಧಕರಲ್ಲಿ ಎರಡು ವಿಧ; ಕುಟೀಚಕ, ಬಹೂದಕ, ಸಾಧಕರಲ್ಲಿ ಕೆಲವರಿದಾರೆ, ಅವರು ಬಹಳವಾಗಿ ತೀರ್ಥಯಾತ್ರೆ ಮಾಡುತ್ತಾರೆ. ಅವರು ಒಂದೇ ಜಾಗದಲ್ಲಿ ಬಹಳ ಕಾಲ ಇರಲಾರರು; ಅವರು ಅನೇಕ ತೀರ್ಥಸ್ಥಾನಗಳ ನೀರನ್ನು ಕುಡಿಯಲೇಬೇಕು. ಅವರೇ ಬಹೂದಕರು. ತೀರ್ಥಸ್ಥಾನಗಳನ್ನೆಲ್ಲ ಸುತ್ತಿ ಸುತ್ತಿ ತುಷ್ಟರಾದಾಗ; ಅವರು ಯಾವುದಾದರೂ ಒಂದು ಪ್ರದೇಶದಲ್ಲಿ ಕುಟೀರವನ್ನು ಕಟ್ಟಿಕೊಂಡು ವಾಸಿಸಲಾರಂಭಿಸುತ್ತಾರೆ. ಬಳಿಕ ನಿಶ್ಚಿಂತರಾಗಿ, ಚೇಷ್ಟಾ ಶೂನ್ಯರಾಗಿ ಭಗವಚ್ಚಿಂತನೆ ಮಾಡಲಾರಂಭಿಸುತ್ತಾರೆ. ಅವರೇ ಕುಟೀಚಕರು.
– ‘ಶ್ರೀರಾಮಕೃಷ್ಣ ವಚನವೇದ’
Leave A Comment