ಗುರುವಿನೆಡೆಗೆ ಕರೆದ ಗುರುವೆ,
ನನ್ನ ಜೀವ ದೇವತರುವೆ,
ನಿಮ್ಮನೆಂತು, ಹೇಳಿ, ಮರೆವೆ?
ನೆ ನೆ ವೆ
ಕೃತಜ್ಞತೆಯೊಳನುದಿನ!
ಮಾನ್ಯರಲ್ಲಿ ಪರಮ ಮಾನ್ಯ;
ಸಾಮಾನ್ಯರಲಿ ಸಾಮಾನ್ಯ;
ನಿಮ್ಮ ಕೃಪೆಯೊಳಾದೆ ಧನ್ಯ.
ನಿ ಮ್ಮ
ನೆನೆವುದೆನಗೆ ಪೂಜನ!
ಸತಿಯನೊಲಿದು ನಿಮ್ಮ ನೆನೆವೆ;
ಸುತರ ನಲಿಸಿ ನಿಮ್ಮ ನೆನೆವೆ;
ಕೃತಿಯನೋದಿ ನಿಮ್ಮ ನೆನೆವೆ;
ನಿ ಮ್ಮ
ನೆನೆವುದಾತ್ಮಸಾಧನೆ!
ಅಹೈತುಕೀ ಕೃಪಾಸಿಂಧು,
ನಿಷ್ಕಾರಣ ಆತ್ಮ ಬಂಧು,
ಅಂದಿನಂತೆ ಇಂದು ಮುಂದು
ಎಂದೆಂದೂ ಇರಲಿ ನನಗೆ
ನಿ ಮ್ಮ
ಮೈತ್ರಿಯ ಅನುಮೋದನೆ!
೯ – ೧ – ೧೯೬೦
* ಸ್ವಾಮಿ ಸಿದ್ಧೇಶ್ವರಾನಂದರನ್ನು ನೆನೆದು.
Leave A Comment