ಕುಳಿತಿದ್ದರಿಬ್ಬರೂ ಭಗವತಿಯ ಹತ್ತಿರ

ಕಾರ್ತಿಕೇಯ, ಗಣೇಶ.
ಕೈಲಾಸದೆತ್ತರ
ಬೀರಿತ್ತು ಮಂದಹಾಸ!
ಭಗವತಿಯ ಕೊರಳಲ್ಲಿ ಝಗಝಗಿಸುತಿತ್ತು
ಕೋಟಿ ನಕ್ಷತ್ರಗಳ ಮೂದಲಿಪ ರತ್ನಹಾರ.
ತಾಯಳ್ಕರೆಯ ಕಂದರಿಬ್ಬರೂ, ವಿಘ್ನೇಶ, ಸ್ಕಂದ,
ನೋಡಿದ್ದರದನು ಬೆರಗಿನಾಶೆಯಿಂದ!
ಅದನರಿತು ನಕ್ಕು ನುಡಿದಳು ತಾಯಿ
“ನಿಮ್ಮಿಬ್ಬರಲಿ ಯಾರು ಈ ಬ್ರಹ್ಮಾಂಡವನು ಸುತ್ತಿ
ಮೊದಲು ಬರುವಿರೊ ಅವರಿಗೀ ಹಾರ!”

ಕೇಳಿದನೊ ಇಲ್ಲವೊ ಹೊರಟೆಬಿಟ್ಟನಾ ಕಾರ್ತಿಕೇಯ
ಕ್ಷಣವೊಂದನೂ ಕಳೆಯಲೊಲ್ಲದೆಯೆ
ನವಿಲನಾ ತನ್ನ ಶೀಘ್ರವಾಹನವನೇರಿ.
ತಮ್ಮ ಹೋದುದ ಕಂಡು ಇಲಿದೇರನಾ ಗಣಪ
ಮೆಲ್ಲನೆದ್ದನು; ಸಾವಕಾಶದಲಿ; ಅವಸರದ ಸುಳಿವಿಲ್ಲ.
ಆನೆಹೊಟ್ಟೆಯ ಹೊತ್ತು ದಪ್ಪದಪ್ಪನೆ ಹೆಜ್ಜೆಯಿಟ್ಟು
ಜಗದಂಬೆಯಂ ಪ್ರದಕ್ಷಿಣವಂದು,
ಸಾಷ್ಟಾಂಗವೆರಗಿ,
ತಾಯ ಚರಣದೆಡೆ ಹಾಕಿದನು ಪದ್ಮಾಸನ!
ವಿದ್ಯಾಧಿದೇವ ವಿಘ್ನೇಶನಿಗೆ ತಿಳಿಯದೇನು
ಅಮ್ಮನುದರದೊಳಿಹುದು ಈ ಬ್ರಹ್ಮಾಂಡವೆಂದು?

ದೇವಿ ಸುಪ್ರಸನ್ನೆ
ಕಂದನಾ ಸೊಂಡಿಲಿಗೆ ಮುತ್ತುಕೊಟ್ಟು
ತೊಡಿಸಿದಳು ತನ್ನ ಕಂಠಹಾರವನವನ ಕಂಠಸರಿ ಮೆರೆಯೆ.
ಬ್ರಹ್ಮಾಂಡವನು ಸುತ್ತಿ ಬಹಳ ಹೊತ್ತಿನಮೇಲೆ
ಅಮ್ಮನೆಡೆಗೈತಂದ ಕಾರ್ತಿಕೇಯ
ಬರ್ಹಿವೇಗವನಿಳಿದು ನೋಡುತಾನೆ:
ಅಮ್ಮನಾ ಹಾರವನು ಕೊರಳೊಳಗೆ ಧರಿಸಿ
ಅಣ್ಣನಾಗಲೆ ದಿಮ್ಮನೆಯೆ ಕುಳಿತಿದಾನೆ!
ಅರೆಕರುಬೊ! ಅರೆನಗೆಯೊ?
ಪೆಚ್ಚಾಗಿ ಮೊಳಗಿದನು ತನ್ನೊಳಗೆ ತಾನೆ
ಮೂದಲಿಸುವಂತೆ:
“ಆನೆ!
ಕುಳಿತೆ ಇದಾನೆ!”

೧೮ – ೩ – ೧೯೬೨