ಜನನಿಯೇ, ವರುಷವೇಳರ ಹಿಂದೆ ನೀನಗಲಿ

ಹೋದೆ; ಕಣ್ಮರೆಯಾದೆ. ನಾನಂದು ಸುರಿಯದಾ
ಕಂಬನಿಗಳೆಲ್ಲವೂ ಹಿರಿಯ ಹೊಳೆಯಾಗಿಂದು
ನನ್ನೆದೆಯ ನೊಂದ ದಡಗಳ ಕೊಚ್ಚಿ ಹರಿಯುತಿದೆ.
ನೀನು ಮಡಿದಂದು ನಾನದ್ವೈತದರ್ಶನದ
ಮದಿರೆಯಲಿ ಮುಳುಗಿದ್ದೆ: ನನ್ನ ಕಿರುಬಾಳಿನಲಿ
ನನ್ನದಲ್ಲದ ಹಿರಿಯ ಶಕ್ತಿಯೊಂದಿರುತಿತ್ತು.
ವಿಶ್ವವೆಲ್ಲವು ಮಾಯೆ; ಜೀವರೆಂಬುವರೆಲ್ಲ
ಸುಳ್ಳಿನಲಿ ಕೆತ್ತಿರುವ ಗುಳ್ಳೆಗಳು; ಶಿವನಾನು;
ಎಂಬ ತತ್ತ್ವದ ಮತ್ತಿನಲಿ ನೀನು, ಯಾರೆದೆಯ
ಹಾಲುಂಡು ಬದುಕಿದೆನೊ ಆ ನೀನು ಮಡಿದುದನು
ಹುಲ್ಲೆಂದು ಬಗೆದೆ. ನನ್ನಾ ತಂಗಿಯರು ಬಂದು
ನನ್ನೆದುರು ನಿಂತು ಕಂಬನಿಗರೆದು ಗೋಳಿಡಲು
ಅವರನಾಲಿಂಗಿಸುತೆ ಸಂತವಿಡುವುದನುಳಿದು
ಗದರಿದೆನು ಕರುಣೆಯಿಲ್ಲದ ಕಠಿಣವಾಣಿಯಲಿ.
ಶಿವಶಿವಾ, ಅವರಿರ್ವರೂ ನನ್ನ ಬೆನ್ನುಗಡೆ
ಬಂದು ನನ್ನಯ ಕಣ್ಣ ಮುಂಗಡೆಯೆ ತೆರಳಿದರು!
ನಿಡುಸುಯ್ದು ಪ್ರಾರ್ಥಿಸಿದೆ; ಕಂಬನಿಗರೆಯಲಿಲ್ಲ.
ಅದರಿಂದೆ ನಾಂ ಜಗದ ರಂಗದಲಿ ಏಕಾಂಗಿ:
ತಂದೆ ತಾಯಿಗಳಿಲ್ಲ; ಅಣ್ಣನಿರಲೇ ಇಲ್ಲ;
ಇದ್ದ ತಂಗಿಯರಿಲ್ಲ: ಸಾಧು ಸಂಗದೊಳಿಂದು
ಏಕಾಂಗಿ: ಆಗಿಹೆನು ನಿಜವಾಗಿ ಅದ್ವೈತಿ!

ಇಂದು ಈ ಬೈಗಿನಲಿ, ಈ ಬಯಲು ಹಸುರಿನಲಿ,
ಹುಟ್ಟಿದೂರಿಗೆ ದೂರದೀ ರಾಜಧಾನಿಯಲಿ,
ನೀರವದ ನಿರ್ಜನದ ಗಂಭೀರ ಶಾಂತಿಯಲಿ,
ಚಿತ್ತದಲಿ ಮರಳಿ ಮೂಡಿದ ಕಳೆದ ಕಾಲದಾ
ಚಿತ್ರಭಿತ್ತಿಯಲಿ ಹೊಳೆಹೊಳೆದು ಮೈದೋರುತಿದೆ

ಮತ್ತೆ ನಿನ್ನಾ ಮೂರ್ತಿ! ಮೊಗದಲ್ಲಿ ಮುಗುಳುನಗೆ;
ಕಣ್ಗಳಲಿ ಚಿರಶಾಂತಿ; ಕೈಯೆತ್ತಿ ಹರಸುತಿಹೆ
ನಿನ್ನ ಮುದ್ದಿನ ಶಿಶುವ! ಹರಸು ಓ ಹರಸಮ್ಮಾ,
ನೀನೆನಗೆ ಶುಭದ ಆಶೀರ್ವಾದ ಮೂರ್ತಿಯೌ:
ನಿನ್ನಡಿಗೆ ಇದೊ ಮಣಿದು ಬೀಳುವೆನು! ನನ್ನೊಳಿಹ
ಶಕ್ತಿಯುಕ್ತಿಗಳೆಲ್ಲ ನಿನ್ನ ಪದತೀರ್ಥದಲಿ
ಭಕ್ತಿಬಿಂದುಗಳಾಗಿ ಸಂಗಮಿಸಲಿ!

೩೦ – ೧೦ – ೧೯೩೧