ಜೀವನವನಿತುಂ ಜಪವೆನಗಾಗಿರೆ

ಜಪಗಿಪ ಗಿಪಮಣಿ ಮಾಲೆಯದೇಕೆ?
ಸುಂದರ ಜಗ ಶಿವಮಂದಿರವಾಗಿರೆ
ಅಂಧತೆ ಕವಿದಿಹ ದೇಗುಲವೇಕೆ?

ಮೌನದ ತಿಮಿರವೆ ತೀವ್ರ ವಿರಾಗಿಗೆ
ಸಾಧನ ಮಾರ್ಗವದಾಗಿರಲೇನು?
ಸುರಸಂಗೀತವೆ ವರರಸಯೋಗಿಗೆ
ಮುಕ್ತಿಯ ಹೃದಯವು: ರಸಋಷಿ ನಾನು!

ಮುಕ್ತಿಯ ಗೆಲ್ಲಲು ಗಾನದ ನೆರವಿರೆ
ಕವಿಕಲಪಿಕನಿಗೆ ಮೌನವದೇಕೆ?
ಬಯಲಿನ ಬನಗಳ ಬಿಡುಗಡೆ ತಾನಿರೆ
ಪಂಜರ ಬಂಧನ ಕವಿಶುಕಗೇಕೆ?

ಕಂಗಳ ಸುಂದರ ಪೂಜೆಯ ಮಾಡುವೆ
ಶಿವ ನವಸೃಷ್ಟಿಯ ದೇಸಿಯ ನೋಡಿ;
ಜಿಹ್ವೆಯ ಮಂಜುಳ ಜಪವನು ಮಾಡುವೆ
ನವನವ ಕವಿತಾವೇದವ ಹಾಡಿ.

ದೇಹದ ದೇಗುಲದಿಂದ್ರಿಯ ದ್ವಾರವ
ಎಂದಿಗು ಮುಚ್ಚೆನು; ತೆರೆದಿಹೆ ನಾನು:
ಗಾಳಿಯ ರೂಪದಿ ಬೆಳಕಿನ ರೂಪದಿ
ದಿನ ದಿನ ಶಿವ ಸಂಚರಿಪನು ತಾನು!

೧೦ – ೧೦ – ೧೯೨೯