ಎಲ್ಲವನು ಬಿಟ್ಟ ಮೇಲೆಲ್ಲ ದೊರಕುವುದಂತೆ:
ಸಾಧನೆಯ ತುದಿಯಲ್ಲಿ ಸಿದ್ಧಿಯಂತೆ!
ಕಣ್ಣು ಮುಚ್ಚಿದ ಮೇಲೆ ಕಣ್ಣು ಕಾಣುವುದಂತೆ;
ನಾನಳಿದ ಮೇಲೆನಗೆ ಮುಕ್ತಿಯಂತೆ!
ನಿನ್ನ ಕಂಡರು ಮೊದಲು ‘ಕಾಣೆ’ ಎನಬೇಕಂತೆ;
ತರುವಾಯ ಕಂಡರೂ ಕಾಣೆನಂತೆ!
ನಿನ್ನ ಹೆಸರನು ಮೊದಲು ನುಡಿಯದಿರಬೇಕಂತೆ;
ತರುವಾಯ ನಾ ನುಡಿಯಲಾರೆನಂತೆ!
ಮೀನು ನೀರನು ಕುಡಿಯೆ ಕಡಲಿನಲಿ ಹುಡುಕಬೇಕೆ?
ಹಕ್ಕಿ ಗಾಳಿಯನೆಳೆಯೆ ಬಾನಿನಲಿ ತೊಳಲಬೇಕೆ?
ನಾನು ನಿನ್ನನು ಪಡೆಯೆ ಗುಡಿಗಳಲಿ ತಡವಬೇಕೆ?
ಜೀವ ದೇವನ ಹಿಡಿಯೆ ಶಾಸ್ತ್ರಗಳ ಬೇಡಬೇಕು?

೧೨ – ೪ – ೧೯೩೦