ನೀನಿದನು ಎಂದು ಕಲಿಯುವೆ, ಹೇಳು, ಸಂನ್ಯಾಸಿ?

ವಾದವೂ ಜಗದಂತೆ ಮಾಯೆ ಎಂದು;
ತರ್ಕಯುಕ್ತಿಗಳೆಲ್ಲ ಬಯಕೆಯ ಮರಿಗಳೆಂದು;
ತರ್ಕಕಿಂತಲು ಬಾಳು ಹಿರಿಯದೆಂದು;
ಜ್ಞಾನವಜ್ಞಾನವನು ಅಳೆಯುವ ಅಳತೆ ಎಂದು;
ಸತ್ಯಕ್ಕೆ ಮಿಥ್ಯೆಯೂ ಸತ್ಯವೆಂದು;
ವಿಭಜಿಸಲು ಮಳೆಬಿಲ್ಲು ಅಸುವುಳಿದ ಶವವೆಂದು;
ಅನುಭವವೆ ಆತ್ಮಕ್ಕೆ ಸಾಕ್ಷಿ ಎಂದು!

ಕತ್ತಲೆಯ ಮನೆಯಲ್ಲಿ ಕಣ್ಮುಚ್ಚಿ ಕಾಂಬೆಯೇನು?
ಎದೆಯ ರಸವನು ಬತ್ತಿಸಲು ನನ್ನಿ ಹೊಳೆವುದೇನು?
ಶಿವಶಿವಾ, ಇಲ್ಲದುದನರಸಿ ಇರುವುದನು ತೊರೆದು
ಮೋಸ ಹೋಗುತಲಿಹನು: ಇವನನುದ್ಧರಿಸು ಪೊರೆದು!

೫ – ೩ – ೧೯೩೧