ಹೆದರಬೇಡ, ನನ್ನ ದೇಹ;

ನೀನು ನನ್ನ ಪ್ರಾಣಗೇಹ.
ನಿನ್ನ ಕ್ಷೇಮ, ನಿನ್ನ ಸ್ನೇಹ
ತಪ್ಪಿ ನಡೆಯಲಾತ್ಮಗೇಯಕೆಲ್ಲ ವಿಕಸನ?
ನೀನೆ ಸಕಲ ಸಾಧನಗಳಿಗೆ ಮೊದಲ ಸಾಧನ!

ನಿನ್ನ ರಕ್ಷೆಗೆನಿತು ಬೇಕೊ
ನಿನ್ನ ಶಿಕ್ಷೆಗೆನಿತು ಸಾಕೊ
ಅನಿತೆ ಭಿಕ್ಷೆ ನಿನಗೆ ಇದೆಕೊ.
ಅದಕೆ ಮೀರಿ ಭೋಗವೇಕೊ ನಿನಗೆ, ಸೋದರ?
ನಿನಗಾಗಿಯೆ ನೀನು ಬದುಕೆ, ನೀ ವೃಕೋದರ!

ನಿನಗೆ ಭೋಗ ಬೇಡವೆಂದು
ನಾನು ಹೇಳುತ್ತಿಲ್ಲ, ಬಂಧು.
ಆಗಳೀಗ ಒಂದು ಸಾರಿ
ಉಂಡು ಸುಖಿಸು ಹೊಟ್ಟೆ ಮೀರಿ, ತಾನೆ ಒದಗಲು:
ನೀನೆ ಬೇಗಿ ಹುಡುಕ ಹೋದೆ, ನಿನಗೆ ಒದೆಗಳು!

೯ – ೩ – ೧೯೪೫