ಜಗದಮ್ಮನಿರಬಹುದು:

ಗೊತ್ತೆ ನನಗೇನು?
ನನಗೆ ಗೊತ್ತಿಹುದೊಂದೆ:
ನನ್ನಮ್ಮ ನೀನು!

ನಿನಗೆ ನಾನೊಬ್ಬನೆಯೆ
ಏಕೈಕ ಪುತ್ರ:
ನಿನ್ನ ಸಂಪೂರ್ಣವೂ, –
ಮತ್ತಾರಿಗಿಲ್ಲವೆನೆ,
ಮತ್ತಾರು ಇಲ್ಲ ಎನೆ, –
ಮೀಸಲೆನಗೊಬ್ಬನಿಗೆ
ಏಕಮಾತ್ರ!

ಲೋಕಕಿರುವುದು ನೀನು
ಮತ್ತು ನಾನು;
ವಿಶ್ವವಿರುವುದು ನಿನಗೆ
ಮತ್ತು ನನಗೆ!
ಪೂರ್ಣೆ ನೀ; ಪೂರ್ಣ ನಾ.
ನಿನ್ನ ಪೂರ್ಣವು ನನಗೆ,
ನನ್ನ ಪೂರ್ಣವು ನಿನಗೆ,
ಅನ್ಯವೆಂಬುದೆ ಇಲ್ಲ
ಒಂದು ಚೂರ್ಣ:
ನನ್ನೆಲ್ಲ ಕಣಕದಲಿ
ನೀನೆ ಹೂರ್ಣ!

ಆ ಅವಳು ಈ ಇವಳು
ಆ ಅವನು ಈ ಇವನು
ನನ್ನಂತೆ ಅಂದರೂ
ಅದೂ ಪೂರ್ಣಸತ್ಯ!
ಪೂರ್ಣತ್ವ ವಿಶ್ವದಲಿ
ಪೂರ್ಣತಾ ದೃಷ್ಟಿಯಲಿ
ಅಂಶವೆಯೆ ಮಿಥ್ಯಾ:
ಅಂಶದಲಿ ಪೂರ್ಣವೂ ಪೂರ್ಣ!
ಪೂರ್ಣದಲಿ ಅಂಶವೂ ಪೂರ್ಣ!

೨೬ – ೮ – ೧೯೬೫