ಮಣಿಯಲೆನ್ನ ಶಿರವು ನಿನ್ನ

ಚರಣಧೂಳಿತಲದಲಿ.
ನನ್ನ ಅಹಂಕಾರವೆಲ್ಲ
ಮುಳುಗಲಶ್ರುಜಲದಲಿ!

ನನಗೆ ನಾನೆ ಪೂಜೆಗೈಯೆ
ಸೊಡರನೆತ್ತಲು
ಬೆಳಕು ಬರುವ ಬದಲು ಅಯ್ಯೊ
ಬರಿಯ ಕತ್ತಲು!
ಅಹಂಕಾರದಂಧಕಾರ
ಮುತ್ತುತಿದೆ ಸುತ್ತಲು!

ನನ್ನ ನಾನೆ ಮೆರೆಯದಂತೆ
ನಾನು ಗೈವ ಕರ್ಮದಿ
ನಿನ್ನ ಇಚ್ಛೆ ಪೂರ್ಣವಾಗ –
ಲೆನ್ನ ಜೀವಧರ್ಮದಿ.

ತಳೆಯಲೆನ್ನ ಜ್ಞಾನ ನಿನ್ನ
ಚರಮಶಾಂತಿಯ;
ಬೆಳಗಲೆನ್ನ ಪ್ರಾಣ ನಿನ್ನ
ಪರಮಕಾಂತಿಯ.
ನನ್ನನಳಿಸು, ನೀನೆ ನೆಲಸು
ಹೃದಯಪದ್ಮದಲದಲಿ!

೧೯೩೦ – ೧೯೩೧


* ರವೀಂದ್ರರ ಕವನವೊಂದರ ಅನುವಾದ.