ನಮಿಸುತೊಮ್ಮೆ ನಮಿಸುತೊಮ್ಮೆ

ನಮಿಸುತೊಮ್ಮೆ ನಿನಗೆ, ಪ್ರಭೂ,
ಎನ್ನ ಜೀವತೀರ್ಥವೆಲ್ಲ
ಧಾರೆ ಧಾರೆ ಧಾರೆಯಾಗಿ
ನಿನ್ನ ಚರಣಕಂಜದೆದೆಗೆ
ಬಾಷ್ಪದಂತೆ ಸುರಿಯಲಿ,
ತುಂಬಿ ಹರಿಯಲಿ!

ನಮಿಸುತೊಮ್ಮೆ ನಮಿಸುತೊಮ್ಮೆ
ನಮಿಸುತೊಮ್ಮೆ ನಿನಗೆ, ಪ್ರಭೂ,
ಸಲಿಲರಸದ ಭಾರದಿಂದೆ
ಮಣಿದು ಗಿರಿಯ ಬನದ ಮೇಲೆ
ಚಲಿಪ ಮಳೆಯ ಮುಗಿಲಿನಂತೆ
ಎನ್ನ ಮನವು ಬಾಗಲಿ,
ನಿನ್ನದಾಗಲಿ!

ನಮಿಸುತೊಮ್ಮೆ ನಮಿಸುತೊಮ್ಮೆ
ನಮಿಸುತೊಮ್ಮೆ ನಿನಗೆ, ಪ್ರಭೂ,
ಎನ್ನ ಗಾನ ಮಣಿಗಳೆಲ್ಲ
ವರ್ಣಗಳನು ಒಂದುಗೂಡಿ
ತಾನ ತಾನ ತಾನವಾಗಿ
ಮೌನವನಧಿಗಿಳಿಯಲಿ,
ಅನಂತಕಿಳಿಯಲಿ!

ನಮಿಸುತೊಮ್ಮೆ ನಮಿಸುತೊಮ್ಮೆ
ನಮಿಸುತೊಮ್ಮೆ ನಿನಗೆ, ಪ್ರಭೂ,
ಮನೆಯ ನೆನೆದು ಹಗಲು ಇರುಳು
ಹಾರುವಂಚೆವಿಂಡಿನಂತೆ
ಪ್ರಾಣಪಕ್ಷಿ ರೆಂಕೆಗೆದರಿ
ಅಪಾರದೆಡೆಗೆ ಹಾರಲಿ,
ನಿನ್ನ ಸೇರಲಿ!

೧೧ – ೨ – ೧೯೩೪


* ರವೀಂದ್ರರ ಗೀತಾಂಜಲಿ – ೧೦೩