ಪ್ರಥಮ ಕುಸುಮವಿದನರ್ಪಿಸುವೆ ನಿನಗೆ;

ನಾ ನಟ್ಟು ನೀರ್ವೊಯ್ದು ಸಾಕಿದೀ ಸಂಪಗೆಯ
ಪ್ರಥಮ ಕುಸುಮವಿದನರ್ಪಿಸುವೆ ನಿನಗೆ.
ಮೇದಿನಿಯೊಳಿದೆ ಮೊದಲ ಹೂವಲ್ಲವಾದರೂ
ಮೀರುತಾಮೋದದಲಿ ಬೇರೆ ಹೂವಿದ್ದರೂ
ನಿನ್ನಡಿಯೊಳೆನಿತೊ ಹೂ ರಾಶಿಬಿದ್ದಿದ್ದರೂ
ನನ್ನದೆಂದಿದನೊಪ್ಪಿಸುವೆ ನಿನಗೆ, ಓ ಗುರುವೆ!
ಪೂರ್ವದಲಿ ಕೋಟಿಜನರೊಲಿದಿದ್ದರೇನಂತೆ
ಹೊಚ್ಚಹೊಸತಲ್ಲವೇನಿಂದುಮಾ ಬೇಟದ ಚಿಂತೆ?
ಪ್ರೇಮವದು ಪ್ರಾಚೀನವಾದರೇನಾ ಕಾಂತೆ
ನವೋನವ್ಯ ನೈವೇದ್ಯವಹಳಲ್ತೆ, ಹೇ ಗುರುವೆ?
ನಿನ್ನ ದೃಷ್ಟಿಗೆ ಹಳೆಯದೆನ್ನ ಭಾವಕೆ ಹೊಸತು;
ಹೊಚ್ಚಹೊಸ ಹೂವಿದನು ಮೆಚ್ಚಿಕೊಳ್ಳಯ್, ದೇವ.
ಹೆಮ್ಮೆಯಿಂದೊಪ್ಪಿಸುವೆ: ನಂಬಿ ನಾನರ್ಪಿಸುವೆ;
ನಿನ್ನದಾದೊಡಮೆನ್ನದೆಂದೀವೆನಯ್, ಗುರುವೆ.
ಪ್ರಥಮ ಕುಸುಮವಿದನರ್ಪಿಸುವೆ ನಿನಗೆ;
ನಾ ನಟ್ಟು ನೀರ್ವೊಯ್ದು ಸಾಕಿದೀ ಸಂಪಗೆಯ
ಪ್ರಥಮ ಕುಸುಮವಿದನರ್ಪಿಸುವೆ ನಿನಗೆ!

೧೪ – ೧೦ – ೧೯೩೮


* ಸಂಪಗೆಯ ಗಿಡದಲ್ಲಿ ಬಿಟ್ಟ ಮೊದಲನೆಯ ಹೂವನ್ನು ಶ್ರೀಗುರುವಿಗೆ ಅರ್ಪಿಸಿ ಬರೆದುದು.