ಒಡೆಯನಡಿಗಳುಲಿಯ ನೀವು ಕೇಳಲಿಲ್ಲವೇ?

ಬರುತಲಿಹನು, ಬರುತಲಿಹನು, ಬರುತಲಿರುವನು!

ಕ್ಷಣ ಕ್ಷಣದೊಳು ಯುಗಯುಗದೊಳು
ದಿನದಿನದಲಿ ನಿಶೆನಿಶೆಯಲಿ
ಬರುತಲಿಹನು, ಬರುತಲಿಹನು, ಬರುತಲಿರುವನು!

ವಿವಿಧ ಭಾವಗಳಲಿ ಉಲಿದೆ ವಿವಿಧ ಗೀತೆಗಳನು ನಾನು:
ಎಲ್ಲರಿಂದೆ ಕಟ್ಟ ಕಡೆಗೆ ಬಂದುದೊಂದೆ ಪಲ್ಲವಿ:
ಬರುತಲಿಹನು, ಬರುತಲಿಹನು, ಬರುತಲಿರುವನು!

ಹೂವು ಬಿಸಿಲು ತುಂಬಿ ಬರುವ ಸುರುಚಿರ ವರ ಚೈತ್ರದಿ
ತಣ್ಣಿತೆಲರು ತೀಡಿನಲಿವ ಅಡವಿ ಮಲೆಯ ಹಾದಿಯಲಿ
ಬರುತಲಿಹನು, ಬರುತಲಿಹನು, ಬರುತಲಿರುವನು!

ಮಳೆಗರೆಯುವ ಕಾರಿರುಳಿನ ಕಗ್ಗತ್ತಲ ಘನಪಥದಲಿ
ಕುಡಿಮಿಂಚಿನ ಗುಡುಗುಡುಗುವ ಭೀಷಣ ಜಲಧರ ರಥದಲಿ
ಬರುತಲಿಹನು, ಬರುತಲಿಹನು, ಬರುತಲಿರುವನು!

ದುಃಖ ದುಃಖ ವೇಷದಲಿ, ನೊಂದ ಹೃದಯ ದೇಶದಲಿ
ಕೇಳುವೆಲ್ಲ ಘೋಷದಲಿ ಹುದುಗಿಹುದವನಡಿಯುಲಿ!
ಅವನ ಪಾದ ಪರುಷಮಣಿ ಸರ್ವ ಸುಖದ ಜೋತಿಗಣಿ!
ಬಿಸಿಲ್ಗೆ ಮಳೆಯ ತಂಪುಹನಿ ಅವನಲರಡಿ ಮೆಲುದನಿ!

ಒಡೆಯನಡಿಗಳುಲಿಯ ನೀವು ಕೇಳಲಿಲ್ಲವೇ?
ಬರುತಲಿಹನು, ಬರುತಲಿಹನು, ಬರುತಲಿರುವನು!

೧೪ – ೮ – ೧೯೩೧


* ರವೀಂದ್ರರ ಗೀತಾಂಜಲಿ – ೪೫