ಶತ – ಪಥ, ಶತ – ಪಥ, ಶತ – ಪಥ,

ಅತ್ತಿಂದಿತ್ತ ಇತ್ತಿಂದತ್ತ
ಹಿಂದೆ ಮುಂದೆ, ಹಿಂದೆ ಮುಂದೆ, ಹಿಂದೆ ಮುಂದೆ
ತಿರುಗುತ್ತಿದ್ದನು ಪೂಜಾರಿ:
ಅತ್ತಿಂದಿತ್ತ – ಕಾಲಿ!
ಇತ್ತಿಂದತ್ತ – ಕಾಪಾಲಿ!
ಕಾಳಿ, ಶಿವ; ಕಾಳಿ, ಶಿವ; ಕಾಳಿ, ಶಿವ!
ಶಿವ, ಕಾಳಿ; ಶಿವ, ಕಾಳಿ; ಶಿವ, ಕಾಳಿ!
ಬೆಚ್ಚಿ ಬಿದ್ದನು ಮಥುರಬಾಬು:
“ಏನಚ್ಚರಿ! ಏನಚ್ಚರಿ! ಏನದ್ಭುತ! ಇದು ನಿಜವೆ!
ಎಚ್ಚತ್ತಿರುವೆನೊ? ಕನಸೊ ನನಸೊ ಕಣಸೊ?”

ಕಣ್ಣುಜ್ಜಿಕೊಂಡನು ರಾಣಿ ರಾಸಮಣಿಯ ಅಳಿಯ;
ನಿಟ್ಟಿಸಿದನು ಮತ್ತೆ.
ಕನಸಲ್ಲ, ಕನಸಲ್ಲ, ಎಚ್ಚತ್ತಿಹನೈಸೆ!
ಕಾಣುತ್ತಿದೆ ಹರಿಯುತ್ತಿಹಳದೊ ಮಂದಾಕಿನಿ ಗಂಗೆ;
ಪಂಚವಟಿಯ ಕುಟಜಗಳದೊ, ಉಲಿಯುತ್ತಿವೆ ಹಕ್ಕಿ;
ಇದೆ ದಕ್ಷಿಣೇಶ್ವರ ಕಾಳಿಯ ಗುಡಿ;
ಇದಿರಿಗೆ ಕಾಣುತ್ತಿದೆ ಶಿವದೇವಾಲಯ ಪಂಕ್ತಿ.
‘ಎಚ್ಚತ್ತಿಹೆ; ಎಚ್ಚತ್ತಿಹೆ; ದಿಟ, ಕನಸಲ್ಲ!’
ದಿಟ್ಟಿಸಿದನು ಮತ್ತೆ.

ಶತ – ಪಥ, ಶತ – ಪಥ, ಶತ – ಪಥ,
ಅತ್ತಿಂದಿತ್ತ ಇತ್ತಿಂದತ್ತ
ನಡೆಯುತ್ತಿರುವನು ಪೂಜಾರಿ:
ನಡೆದರೆ ಇತ್ತಿಂದತ್ತ – ಅದೊ ಕಂಡಳು ಕಾಳಿ!
ನಡೆದರೆ ಅತ್ತಿಂದಿತ್ತ – ಅದೊ ಕಂಡನು ಕಾಪಾಲಿ!
ಶಿವ, ಕಾಳಿ; ಶಿವ, ಕಾಳಿ; ಶಿವ, ಕಾಳಿ;
ಕಾಳಿ, ಶಿವ; ಕಾಳಿ, ಶಿವ; ಕಾಳಿ, ಶಿವ!
ತನ್ನ ಸೌದಧಿ ಕುಳಿತು ರಾಣಿ ರಾಸಮಣಿಯ ಅಳಿಯ
ನೋಡಿದನಾ ಅದ್ಭುತವ:
ಚರ್ಮಾಂಬರ, ಶ್ವೇತಭಸ್ಮಧರ, ಫಣಿಸುಂದರ, ಚಂದ್ರಶೇಖರ,
ಇತ್ತಿಂದತ್ತ!
ಭವತಾರಿಣಿ, ನರಮುಂಡಮಾಲಿನಿ, ಕಾಳಮೇಘವರ್ಣನಿ, ಜಗಜ್ಜನನಿ,
ಅತ್ತಿಂದಿತ್ತ!
ದಿಗ್ಗನೆದ್ದನು ಮಥುರಬಾಬು:
ಮರೆತನು ತಾ ರಾಸಮಣಿಯ ಅಳಿಯನೆಂದು;
ಮರೆತನು ತಾ ದಕ್ಷಿಣೇಶ್ವರದೊಡೆಯನೆಂದು;
ಮರೆತನು ತಾ ವಂಗದೇಶದ ಸುಪ್ರತಿಷ್ಠ ಶ್ರೀಮಂತನೆಂದು!
ದಿಗ್ಗನೆದ್ದೋಡಿದನು ಪೂಜಾರಿಯೆಡೆಗೆ;
ದಿಂಡುರುಳಿ ಕಾಲ್ವಿಡಿದು ತೊದಲಿದನು ಬಿಕ್ಕಿ ಬಿಕ್ಕಿ:
“ದೇವದೇವ ಹೇ ಮಹಾದೇವ!
ಹೇ ಜಗನ್ಮಾತೆ ಚಿನ್ಮಯೀ!….”

“ಏನಿದೇನಿದು ನೀನು ಮಾಡುತ್ತಿರುವುದು,
ರಾಣಿ ಅಳಿಯ ತಾನಾಗಿ?
ಏಳು, ಬೇಗೇಳು, ಕಂಡರೇನೆನ್ನುವರು ಜನ?
ಸಣ್ಣ ಭಟ್ಟಾಚಾರಿ ಮಾಟಮಾಡಿಹನೆಂಬರು!
ಏಳು, ಬೇಗೇಳು!”

“ಇಲ್ಲ, ಇನ್ನು ನೀವೆನ್ನ ವಂಚಿಸಲಾರಿರಿ;
ನಾ ಕಂಡೆನೆಲ್ಲವನು ಮರೆಯಿಂದ:
ನೀವೆ ಶಿವ, ನೀವೆ ಕಾಳಿ;
ಇತ್ತಿಂದತ್ತ ನಡೆದಾಗ ಕಾಳಿ;
ಅತ್ತಿಂದಿತ್ತ ನಡೆದಾಗ ಶಿವ!
ಕಂಡು ನಾ ಧನ್ಯನಾದೆ.”

“ಏನ ಕಂಡೆಯೊ ನೀನು ನಾನೇನ ಬಲ್ಲೆ?
ಎಲ್ಲವೂ ಜಗದಂಬೆ ತಾಯಿಯಾ ಲೀಲೆ!
ಏಳು ಬೇಗೇಳೇಳು!”

ಅಭಿಷೇಕಿಸಿತು ಮಹಾದೇವನಡಿಗಳಂ
ಶ್ರೀಮಂತ ಧನ್ಯಬಾಷ್ಪ!
ಹರಸಿತ್ತು ಭಕ್ತಶ್ರೀಮಂತನಂ
ಭವತಾರಿಣಿಯ ಕೃಪಾಹಸ್ತಪುಷ್ಪ!

೧೯ – ೭ – ೧೯೫೯


* ಮಥುರಾನಾಥನು ಪರಮಹಂಸರಲ್ಲಿ ಕಂಡ ಕಾಣ್ಕೆ.