ಭವತಾರಿಣಿ ಜಗದಂಬೆಯ ಜಗನ್‌ಮಾತೃಲೀಲೆ

ಭುವನಶಿಶುವನೆದೆಗೆ ಒತ್ತಿ ದೀಕ್ಷೆ ನಿಂತವೋಲೆ
ಕ್ರಿಸ್ತಶಿಶುವನೆತ್ತಿಕೊಂಡ ತಾಯಿತನವೆ ಮೇರಿ
ನಿಂತಿಹಳದೊ ತೇರಿನಂತೆ ಕೃಪೆಯ ತವರ ತೋರಿ!

ತಳಿರ ಬೆರಳ ಮುದ್ದು ಕೈಯ ಚೆಲುವ ಕಂದ ಯೇಸು
“ತಾಯಿಯೆದೆಯನಪ್ಪಿಕೊಳಲು ಎಲ್ಲ ಅಹುದು ಲೇಸು;
ನಂಬು; ದಿವ್ಯ ನಿರ್ಭರತೆಗೆ ನಾನೆ ಅಮರಸಾಕ್ಷಿ!”
ಎಂಬ ವೇದವೊರೆವುವವನ ಅಮೃತ ತೃಪ್ತ ಅಕ್ಷಿ.

ಹಿಂದೆ ಗೋಕುಲದಲಿ ಅಮ್ಮ ಆ ಯಶೋದೆ ಇಂತೆ
ವಕ್ಷರಕ್ಷೆಯಾದಳಲ್ತೆ ಅಳರೆ ಕಂಸ ಚಿಂತೆ?
ಜಗದ್ ರಕ್ಷಕರಿಗೆ ರಕ್ಷೆ ಮೇರಿ ಮೇಣ್ ಯಶೋದೆ
ಇರಲು ನೀನು ರಾಮ ಕೃಷ್ಣ ಬುದ್ಧ ಕ್ರಿಸ್ತನಾದೆ!

ದಿವ್ಯಕೃಪೆಯ ಕೌಂಕುಳಲ್ಲಿ ದೀನ ಮರ್ತ್ಯಪ್ರಾರ್ಥನೆ
ಕುಳಿತು ಮುಗ್ಧಮಿರ್ಪವೊಲೀ ಬಾಲಕ್ರಿಸ್ತ ವರ್ತನೆ
ಲೋಕಲೋಕಗಳಿಗೆ ನೀಡುತಿಹುದು ಧೈರ್ಯ ಶಾಂತಿಯ,
ಒಲವು ಚೆಲುವು ಸೂಸುತಿರುವ ತನ್ನ ಕಣ್ಣ ಕಾಂತಿಯ!

“ಇಹಳು ತಾಯಿ; ಹೊರೆವುದವಳ ಹಾಲತೊಟ್ಟಿಲೆಂದು
ನಂಬಿ ಬಾಳು; ತುಂಬಿ ಬದುಕು; ಅವಳು ಪ್ರೇಮಸಿಂಧು!”
ಚಿತ್ರದೊಳಿಹ ಮುದ್ದು ಕೈಯೆ ವರದ ಹಸ್ತವಾಗಿ
ಶ್ರದ್ಧೆ ಅಭಯ ತರಲಿ, ಓ ಕಿಶೋರ ಕ್ರಿಸ್ತಯೋಗಿ!

೧೨ – ೨ – ೧೯೫೪


* ಒಂದು ಬಣ್ಣದ ಚಿತ್ರದಿಂದ ಪ್ರೇರಿತ.