೧
ಹೆಡೆಯೆತ್ತುವುದಯ್ ತುಳಿದರೆ ಹಾವು.
ಉಜ್ಜ್ವಲಿಸುವುದಯ್ ಕೆಣಕಲ್ ಬೆಂಕಿ,
ಪ್ರತಿರಣಿಸುವುದಯ್ ಮರುಭೂಮಿಯ ಬಾನ್
ಗರ್ಜಿಪ ಕೇಸರಿ ಕೋಪವ ತಾನ್:
೨
ಸೀಳಲ್ ತನ್ನನ್ ಸಿಡಿಲಿನ ಮಿಂಚು
ಮುಗಿಲೂ ಮಳೆಗರೆವುದು ಭೋರೆಂದು;
ಅಂತಃಕರಣವ ಕಡೆಯೆ ಮಹಾತ್ಮನು
ತನ್ನುತ್ತಮತನವನೆ ತೋರುವನು:
೩
ಕಣ್ ಮಂಜಾಗಲಿ, ಎದೆ ಬಲಗುಂದಲಿ,
ಕೆಳೆ ಕೈಬಿಡಲಿ,
ಒಲವೂ ಆಗಲಿ ವಿದ್ರೋಹಿ,
ಕೋಟಲೆ ಕೋಟಿಯ ತಂದೊಡ್ಡಲಿ ವಿಧಿ,
ಕಗ್ಗತ್ತಲೆ ಕವಿಯಲಿ ದಾರಿಯ ಕಟ್ಟಿ –
೪
ಸರ್ವಸೃಷ್ಟಿಯೂ ನಿನ್ನ ವಿನಾಶಕೆ
ಬದ್ಧಭ್ರುಕುಟಿಯಲಿ
ಸಂಚು ಹೂಡಿದರೂ ಏನಂತೆ,
ಓ ನನ್ನಾತ್ಮಾ,
ಅರಿ; ನೀನೆಂದೂ ಭವ್ಯ!
೫
ಮುಂದಕೆ ಮುಂದಕೆ ಮುಂದಕೆ ಮುಂದೆ
ಹಿಂದಕೆ ತಿರುಗದೆ, ಎಡ ಬಲ ನೋಡದೆ,
ಮುಂದೆ ಮುಂದೆ ಮುಂದೆ
ಗುರಿ ಕಣ್ಣಾಗಿರೆ ನುಗ್ಗಿಯೆ ನಡೆ ಮುಂದೆ!
೬
ಸುರನಲ್ಲ, ನರನಲ್ಲ, ಪಶುವಲ್ಲ ನಾನು;
ತನುವಲ್ಲ, ಮನವಲ್ಲ, ಗಂಡಲ್ಲ, ಹೆಣ್ಣಲ್ಲ.
ಬಾಯಿ ಮುಚ್ಚಿತೊ ವೇದ ಅಚ್ಚರಿಯ ಮೂರ್ಛೆಯಲಿ
ನನ್ನನರಿಯದೆ ಸೋತು; – ಸೋಹಮಸ್ಮಿ!
೭
ರವಿ ಶಶಿಗಳಿಗೆ ಮುನ್ನ, ಧರೆಗೆ ಮುನ್ನ,
ಉಲ್ಕೆಗಳಿಗೂ ಮುನ್ನ, ತಾರೆಗಳಿಗೂ ಮುನ್ನ,
ಕಾಲವಿನ್ನೂ ಕಣ್ಣು ತೆರೆಯಲಿಹ ಮುನ್ನ,
ಅಂದಿದ್ದೆ; ಇಂದಿಹೆನು;
ಇಹೆನಂತೆ ಮುಂದೆ ಎಂದೆಂದೂ!
೮
ಸುಂದರ ಪೃಥಿವಿ, ಪ್ರೋಜ್ವಲ ಸೂರ್ಯ,
ತಣ್ಗದಿರಿನ ಶಾಂತಿಯ ಚಂದ್ರ,
ತಾರಕಿತಾಕಾಶ,
ನಿಯತಿಯ ನಿಯಮದ ಬಂಧಿಗಳವಕೆ
ಬದುಕೆಲ್ಲಾ ಪಾಶ,
ಬಂಧನದಲ್ಲಿಯೆ ಅವರ ವಿನಾಶ.
೯
ಮಾನಸಮಾಯಾ ಸ್ವಪ್ನದ ಜಾಲ
ಸುತ್ತಿದೆ ಹಿಡಿದೆದೆ ಅವುಗಳನೆಲ್ಲ.
ಸೆರೆಬಿದ್ದಿವೆ ಚಿದ್ವೃತ್ತಿಯ ಓತಪ್ರೋತದಿ
ಸ್ವರ್ಗ, ನರಕ, ಭೂಮಿ, ಮೇಲು, ಕೀಳು ಎಲ್ಲ.
೧೦
ತಿಳಿ ನೀನ್; ಅದು ಬರಿ ಮೇಲಣ ಸಿಪ್ಪೆ: –
ಕಾಲ ದೇಶಗಳ ಕಾರ್ಯ ಕಾರಣಗಳ
ಮನೋ ಬುದ್ಧಿಗಳ ಮೀರಿಹ ನಾನು
ಈ ವಿಶ್ವಬ್ರಹ್ಮಾಂಡದ ಸಾಕ್ಷಿ!
೧೧
ಎರಡಲ್ಲ, ಬಹುವಲ್ಲ, ಇರುವುದು ಏಕ.
ನನ್ನೊಳೆ ಇಹವಾ ಅನೇಕ ಏಕ.
ದ್ವೇಷಿಸಲಾರೆ, ತ್ಯಜಿಸಲು ಒಲ್ಲೆ
ನನ್ನನು ನಾ:
ಒಲಿಯಲು ಮಾತ್ರವೆ ನಾ ಬಲ್ಲೆ!
೬ – ೩ – ೧೯೬೨
* ಸ್ವಾಮಿ ವಿವೇಕಾನಂದ ವಿರಚಿತದ ಅನುವಾದ
Leave A Comment