ಈ ಮಾಯೆಯಿಂದೆನಗೆ ಬಿಡುತೆ ಬೇಕಮ್ಮಾ;

ಈ ದೈನ್ಯವಿನ್ನು ಸಾಕಮ್ಮಾ.
ಬೇವಿದನು ಬೆಲ್ಲವೆಂಬೀ ಭ್ರಾಂತಿಯಿಂದೀವರೆಗೆ
ಮೇದೆನಮ್ಮಾ, ಇನ್ನು ಸಾಕಮ್ಮಾ.

ನೀನೆ ಕೇವಲ ಶಕ್ತಿ; ನೀನೆ ಕೇವಲ ಮುಕ್ತಿ:
ನೀನನುಗ್ರಹಿಸಿದರೆ ಆವುದಸದಳವಮ್ಮಾ?
ಕಲ್ಲು ಕಡವರವಹುದು; ಕ್ರಿಮಿಯೆ ದೇವತೆಯಹುದು;
ಹೆಳವನಂಬುಧಿಯನುತ್ತರಿಸಬಹುದು.

ನಾನೆಂಬುದೇನಮ್ಮಾ? ಹಳುಹಪ್ಪಟೆಯ ತಮ್ಮ!
ನೀನೆತ್ತಿಕೊಳೆ ಮಣ್ಣು ಮಾಣಿಕ್ಯವಮ್ಮಾ.
ಪ್ರಾಣಿತ್ವದಡಿಯಲ್ಲಿ ದೇವತ್ವವುರುಳದೊಲು
ಮೊರೆಯಿಡುವ ಆತ್ಮಮಾನವನು ಪೊರೆಯಮ್ಮಾ!

೧೩ – ೬ – ೧೯೪೪