ನನ್ನ ನಾಡಿಗಳಲ್ಲಿ ದಿವಾರಾತ್ರಿಯೂ ಪ್ರವಹಿಸುತ್ತಿರುವ

ಪ್ರಾಣವಾಹಿನಿಯೆ ಜಗಜ್ಜೀವನದಲ್ಲಿಯೂ ಅಂತರ್ಗಾಮಿಯಾಗಿ
ಹರಿದು ನರ್ತಿಸುತ್ತಿದೆ.

ಅದೇ ಜೀವನವೇ ಭೂಮಿಯ ಮಣ್ಣುದೂಳಿನ ಕಣಕಣ
ದಲ್ಲಿ ಪ್ರವೇಶಿಸಿ ಅಸಂಖ್ಯ ಶ್ಯಾಮಲ ತೃಣದಲಗಳಾಗಿ ನಗೆದೋರಿ
ಚಿಮ್ಮುತ್ತಿದೆ; ಕುಸುಮ ಪಲ್ಲವಗಳ ತುಮುಲ ತರಂಗಗಳಲ್ಲಿ
ಹಿಲ್ಲೋಲ ಕಲ್ಲೋಲವಾಗುತ್ತಿದೆ.

ಅದೇ ಜೀವನವೇ ಸಂಸಾರಸಾಗರದ ಜನನ ಮರಣೋರ್ಮಿ
ಗಳಲ್ಲಿ ತೂಗುಯ್ಯಲೆಯಾಡಿ ಮೂಡಿ ಮುಳುಗುತ್ತಿದೆ.

ಆ ಜೀವನಗಂಗೆಯ ತೀರ್ಥಜಲದಲ್ಲಿ ಮಿಂದು ನನ್ನ
ಅಂಗಾಂಗಗಳೆಲ್ಲ ಪುನೀತವಾಗಿವೆ: ಯುಗಯುಗಾಂತರದ ಆ
ಜೀವನಸ್ರೋತವೆ ಇಂದು ಈ ಕ್ಷಣದಲ್ಲಿ ನನ್ನ ಧಮನಿಯಲ್ಲಿಯೂ
ಹೊಮ್ಮಿ ಚಿಮ್ಮುತ್ತಿರುವುದೆಂಬುದೆ ನನಗೆ ಹಿಗ್ಗು ಹೆಮ್ಮೆ.

೧೩ – ೪ – ೧೯೩೨