ಹಾಡಲು ನೀನೆನಗಾಣತಿಗೈಯೆ

ಹೆಮ್ಮೆ ಚಿಮ್ಮುವುದು ಮಮ ಹೃದಯದಲಿ;
ಕಣ್ಣುಗಳೆರಡನು ಕಂಬನಿ ತೊಯ್ಯೆ
ನೋಟ ನಿಲ್ಲುವುದು ತವ ವದನದಲಿ.
ಕಟುವೂ ಕಠಿನವದೆನ್ನಯ ಪ್ರಾಣದಿ
ಕರಗುವುದಾನಂದಾಮೃತ ಗಾನದಿ:
ನನ್ನಾರಾಧನೆ ಸಾಧನೆಗೆಲ್ಲ
ಗರಿ ಮೂಡುವುದಂಬುದ ಸದನದಲಿ.

ನಾನುಲಿಯಲು ನಿನಗದರಲಿ ಪ್ರೀತಿ;
ಉಲಿವುದೆ ಕವಿಯ ಉಪಾಸನೆ, ನೀತಿ.
ಬಲ್ಲೆನು ನಾನೀ ಗಾನದ ಬಲದೊಳೆ
ನಿಲ್ಲುವೆ ತವ ಸನ್ನಿಧಿಗೈತಂದು.
ಯಾರನು ಮುಟ್ಟಲು ಅರಿದೋ ಜ್ಞಾನದಿ
ಕಟ್ಟುವೆನವನನು ರಸಮಯ ಗಾನದಿ.
ಸ್ವರ – ಉನ್ಮಾದದಿ ಪರವಶನಾಗಿ
ಕರೆವೆನು ಗುರುದೇವನ ‘ಸಖ’ ನೆಂದು!

೧೦ – ೨ – ೧೯೩೪