ರೋಮರೋಮದಿ ನಿಮಿರೆ ಭಾವವಿದ್ಯುತ್ತು
ತುಳುಕಿ ಕಣ್ಣಿಂ ಪರಿಯೆ ಬಾಷ್ಪಭಾಗೀರಥಿ
ಕೇಳಿದಳು ಹುಚ್ಚು ಪೂಜಾರಿಯ ದಿವ್ಯಪೂಜೆಯ ಕಥೆಯ
ಮಥುರಬಾಬುವಿನತ್ತೆ, ರಾಸಮಣಿ, ರಾಣಿ:
“ನನ್ನೆಲ್ಲ ಚಿನ್ನ ಇಂದು ಚಿನ್ಮಯವಾಯ್ತು!
ಚಿದ್ಘನವಾಯ್ತು ನಾ ಕಟ್ಟಿಸಿದ ಕಲ್ಲುಮಣ್ಣು!
ಅಗಣ್ಯವಾಯ್ತು ನನ್ನ ಹಿರಿಯರ ಪುಣ್ಯದೇಳ್ಗೆ!
ದಕ್ಷೀಣೇಶ್ವರವಾಯ್ತು ಇನ್ನು ಲೋಕಕ್ಕೆ ಕಣ್ಣು!
ಕೃಪೆಯಾಗಿ
ಭಗವಂತನವತರಿಸಿದನು ಭಾರತದ ಬಾಳ್ಗೆ!
ಕೃತಕೃತ್ಯಳಾದೆ, ನಾ ಧನ್ಯಳಾದೆ!
ಲೋಕಕ್ಕೆ, ದೂರದೇಶದ ಕಂಡು ಕೇಳದ ಜನಕೆ,
ನಾ ಮಾನ್ಯಳಾದೆ, ಗುರುಪಾದ ಧೂಳಿಯಾದೆ!”


ನಡೆದು ಬಂದಳು ರಾಣಿ ಮಂದಾಕಿನಿಯ ತೀರ್ಥಕ್ಕೆ.
ಮಿಂದಳುಟ್ಟಳು ಗಂಗೆ ಹೆಮ್ಮೆಪಡುವಂತೆ.
ಕೆಳದಿಯರು ಸೇವಕರು ಅಧಿಕಾರಿಗಳು ದಾರಿತೋರೆ
ಭವತಾರಿಣಿಯ ಬಳಿಗೆ ಭಕ್ತೆ ನಡೆದಳು ಮೆಟ್ಟಲೇರಿ.
ಪರಮಹಂಸರ ಪೂಜೆ ಸಾಗುತ್ತಿದ್ದುದ ಕಂಡು
ದೂರದಿಂ ಕೈಮುಗಿದುಕೊಂಡೆ, ಭಾವದಿಂ ತತ್ತರಿಸಿ,
ತೇಲಿದಂದದಿ ನಡೆದು ಮಣಿದಳು ಮಹೇಶ್ವರಿಯ ಚರಣತಲಕೆ.


ದೇಗುಲವ ತುಂಬಿತ್ತು ನಾಗಸ್ವರದಿಂಚರ;
ಜೇಗಟೆಯ ನಾದಕೆ ಪ್ರಕಂಪಿಸಿತ್ತು ವಾಯುಮಂಡಲ;
ಗೋಡೆ ಗೋಡೆಗಳಿಂದೆ ಅನುರಣಿತವಾಗಿ
ಮೊಳಗಿತ್ತು ಘಂಟಾಮಹಾಧ್ವನಿ.
ಹೂವಿನ, ಗಂಧದ, ಧೂಪದ ಪರಿಮಳ
ದೈವಿಕ ಎಂಬಂತಿತ್ತು.

ಎಲ್ಲ ಅವತಾರಗಳೂ ಒಂದಾಗುತಲ್ಲಿ ನೆರೆದು
ನೋಡುತಿದ್ದರು ಆ ದಿವ್ಯ ಪೂಜೆಯನು.
ದೇವಿ ಭವತಾರಿಣಿಯೊಳೆಲ್ಲರೂ ಉದ್ಭವಿಸಿ
ಸ್ವೀಕರಿಸುತಿದ್ದರಾ ದಿವ್ಯಪೂಜೆಯನು.
ಪಂಚವಟಿ ವಟವೃಕ್ಷವಾಸಿ
ಆ ವೃಕ್ಷಭೈರವ ಕೂಡ ಬಾಗಿ ಕೈಮುಗಿದಿದ್ದನಲ್ಲಿ.
ಆ ಪೂಜೆಯಿಂದೆದ್ದ ಶಕ್ತಿರ್ಜ್ಯೋತಿ
ಲೋಕ ಲೋಕಾಂತರದ ಸಂದುಗೊಂದುಗಳಲ್ಲಿ
ಹೃದಯ ಹೃದಯಸ್ತರದ ಗುಹಾಂತರಾಳದಲ್ಲಿ
ಕತ್ತಲೆಯ ಕತ್ತರಿಸೆ ತನ್ನ ದಿವ್ಯಹಸ್ತವನೆತ್ತಿ
ಐರಾವತದ ಅಮೃತಮಯ ಚಾಮೀಕರದ ಕರದ
ಕಿರಣಚಾಮರವ ಬೀಸುತಿತ್ತು.


ಪೂಜೆಯಂತ್ಯದಲಿ ರಾಣಿ ರಾಸಮಣಿ
ತನ್ನ ಬಯಕೆಯನರುಹೆ ಭಕ್ತಿ ವಿನಯದಲಿ,
ದೇವದುರ್ಲಭ ದಿವ್ಯ ಕಂಠದಿಂದೇಳ ತೊಡಗಿದುವು
ಭಕ್ತಿಗೀತಾ ಶ್ವೇತಸುಂದರ ಕಪೋತಗಳು
ವಿವಿಧ ರಾಗದ ಭಾವಮಯ ಗರಿಯ ಬಣ್ಣಗೆದರಿ!
ಹಾಡಿದನು ಭಕ್ತ;
ಆಲಿಸಿದಳಾ ಭಕ್ತೆ;
ಇಬ್ಬರಾನಂದವನು ಸವಿದಳಾ ಸಚ್ಚಿದಾನಂದೆ.


ಇದೇನಿದೇನು?
ಬೆಚ್ಚಿದರು ಅಲ್ಲಿ ಸುತ್ತಮುತ್ತಲು ನೆರೆದ
ದೇವಾಲಯದ ಕಾರ್ಯಕರ್ತರುಗಳೆಲ್ಲ?
ಇದ್ದಕಿದ್ದಂತೆ
ಹಾಡ ನಿಲ್ಲಿಸಿ ಪರಮಹಂಸರು ಕಿನಿಸಿ ಗೊಣಗಿದರು:
“ಇಲ್ಲಿಯೂ ಅದೆ ಯೋಚನೆ!
ಮೂರು ಹೊತ್ತೂ ಮೊಕದ್ದಮೆ!”
‘ಮಾರುಕಟ್ಟೆಯ ಮಾಡುವಿರ ನನ್ನ ತಂದೆಯ ಮನೆಯ?’
ಎಂದು ಶತಮಾನಗಳ ಹಿಂದೊಮ್ಮೆ
ದೇಗುಲದಿ ಬೇಹಾರಿಗಳನೆಳ್ಬಟ್ಟಿದುದನಿಂದು
ಪುನರಭಿನಯಿಸುವಂತೆ,
ತಟ್ಟಿದರು ಕೆನ್ನೆಗೊಂದೆಚ್ಚರಿಕೆಯನಾ ರಾಣಿಗೆ!
“ಹಿಡಿದು ಕೊಳ್ಳಿರೊ ಹಿಡಿದುಕೊಳ್ಳಿ,
ಹುಚ್ಚು ಪೂಜಾರಿಯನು!”
“ರಾಣಿಗವಮಾನವಾಯ್ತಲಾ!”
“ಹಾಳು ಭಟ್ಟಾಚಾರಿ!”.
“ತಳ್ಳಿರವನನು ದೇವಮಂದಿರದಾಚೆ!”
ಎನುತೆ ನಾನಾ ಮಂದಿ ನುಗ್ಗಿತಾ ಕಡೆಗೆ.


ಇಂತಿಂತಿಂತು
ಕ್ಷುಬ್ಧಗೊಂಡಿರಲಲ್ಲಿ ನೆನೆದರೆಲ್ಲರೂ, –
ತಣ್ಣಗಿದ್ದವರೆಂದರಿಬ್ಬರೆ:
ಏಟುಕೊಟ್ಟಾ ಭಕ್ತ, ಏಟುತಿಂದಾ ರಾಣಿ!
ಏನನಾಹುತ ನಡೆಯಲಿಲ್ಲೆಂಬಂತೆ ರಾಣಿ
“ಭಟ್ಟಾಚಾರ್ಯರಾವ ತಪ್ಪನು ಮಾಡಿದವರಲ್ಲ.”
ಎಂದು ತೋರುತಾ ಭವತಾರಿಣಿಯ ನಗುವ ಮೂರ್ತಿಯನು,
ಮುಂದುವರಿದಳು ಮತ್ತೆ ಗಂಭೀರಧ್ವನಿಯಿಂದೆ
“ನನ್ನ ತಪ್ಪಿಗೆ ಶಿಕ್ಷೆ ವಿಧಿಸಿದಳು ತಾಯಿ.
ನಡೆಯಿರಾಚೆ!
ನೀವವರ ಮುಟ್ಟಿದರೆ ಕೆಟ್ಟೀರಿ!”
ರಾಣಿಯಾಜ್ಞೆಗೆ ಹೆದರಿ ಹಿಂಜರಿದರೆಲ್ಲರೂ
ನಡೆದ ಘಟನೆಗೆ ಬಿಲ್ಲು ಬೆರಗಾಗಿ:
ಮತ್ತೆ
ಹಾಡ ತೊಡಗಿದನು ಭಕ್ತ, ದಿವ್ಯೋನ್ಮತ್ತ.
ಮತ್ತೆ
ಆಲಿಸಿದಳಾ ಭಕ್ತೆ, ಭಾವೋನ್ಮತ್ತೆ;
ಇಬ್ಬರಾನಂದವನು ಸವಿದು ವಾತ್ಸಲ್ಯಚಿತ್ತೆ,
ಜಗದಂಬೆ,
ಆನಂದಮಯಿಯಾದಳಾ ದೇವಿ ಸಚ್ಚಿದಾನಂದೆ!

೨ – ೭ – ೧೯೫೯