ಲೋಕದ ಪಾರಾವಾರದ ತೀರದಿ

ಸೇರಿದೆ ಶಿಶುಗಳ ಸಮ್ಮೇಲ:
ಅಂತವೆ ಇಲ್ಲದ ನೀಲಗಗನ ತಲ
ನಿಂತಿದೆ ನೆತ್ತಿಯ ಮೇಲೆ ಅಚಂಚಲ;
ನೊರೆ ನೊರೆ ಎದ್ದ ಸುನೀಲಾಂಬುಧಿ ಜಲ
ನರ್ತಿಸಿ ಮೊರೆವುದು ದಿನವೆಲ್ಲ.
ದಡದೊಳಿದೇನು ಮಹಾಕೋಲಾಹಲ? –
ಸೇರಿದೆ ಶಿಶುಗಳ ಸಮ್ಮೇಲ!

ನಲಿವರು ಮಳಲಲಿ ಮನೆಗಳ ಕಟ್ಟಿ,
ಚಿಪ್ಪುಗಳನು ತೆಗೆದೆಸೆದಾಡಿ.
ವಿಪುಲ ಸಮುದ್ರದ ನೀಲ ಸಲಿಲದಲಿ
ಲೀಲಾನಾವೆಯ ಬಿಡುವರು ತೇಲಿ;
ಮುದ್ದುಕೈಗಳಲಿ ತರಗೆಲೆಯೊಟ್ಟಿ
ಹೆಣೆವರು ತೆಪ್ಪಗಳನು ಮಾಡಿ.
ಲೋಕದ ಪಾರಾವಾರದ ತೀರದಿ
ಕುಣಿದಾಡುವರೆಳೆಯರು ಕೂಡಿ!

ಕಡಲೊಳಗೀಜಾಡಲು ಬರದವರಿಗೆ,
ಬಲೆ ಬೀಸುವುದೂ ತಿಳಿದಿಲ್ಲ
ಮುಳುಗುವರಿರುವರು ಮುತ್ತುಗಳರಸಿ;
ಬರುವುವು ಹಡಗುಗಳೈಸಿರಿವೆರಸಿ;
ಮಕ್ಕಳು ಕಲ್ಲಿನ ಹರಳನೆ ವರಿಸಿ
ಮಳಲಾಡುವರೈ ಹಗಲೆಲ್ಲ.
ಧನರತ್ನಗಳರಸಲು ಬರದವರಿಗೆ,
ಬಲೆ ಬೀಸುವುದೂ ತಿಳಿದಿಲ್ಲ!

ನೊರೆಗರೆದೇಳಲು ಕಡಲಿನ ತೆರೆನಗೆ
ಮಗುಳ್ನಗುವುದು ಸಾಗರವೇಲೆ.
ಶಿಶುಕರ್ಣದಿ ತೆರೆ ಭೀಷಣಗಾನದಿ
ಗಾಥೆಯ ರಚಿಪುದು ಚಂಚಲ ತಾನದಿ,
ತೊಟ್ಟಿಲ ತೂಗುತೆ ತಾಯಿ ಸುಮಾನದಿ
ಹಾಡುವ ಜೋಗುಳದುಲಿವೋಲೆ.
ಸಾಗರ ನರ್ತಿಸೆ ಶಿಶುಗಳ ಲೀಲೆಗೆ
ನಗೆಬೀರುವುದಂಬುಧಿ ವೇಲೆ!

ಲೋಕದ ಪಾರಾವಾರದ ತೀರದಿ
ಸೇರಿದೆ ಶಿಶುಗಳ ಸಮ್ಮೇಲ:
ಮುಂಗಾರ್ಗರೆಯುವುದಂಬರ ತಲದಲಿ,
ನೌಕೆ ಮುಳುಗುವುದು ದೂರ ಸಲಿಲದಲಿ,
ಮರಣದ ದೂತರು ಬಹರೆಡಬಲದಲಿ,
ನಿಲ್ಲದೆ ಮೆರೆವುದು ಶಿಶುಲೀಲಾ!
ಲೋಕದ ಪಾರಾವಾರದ ತೀರದಿ
ಅದೊ ಹಸುಳೆಗಳ ಮಹಾಮೇಲ!

೮ – ೧೦ – ೧೯೩೧


* ರವೀಂದ್ರರ ಗೀತಾಂಜಲಿ – ೬೦