ಹೊಮ್ಮುತಿದೆ ಮೂಡಣದಿ ಹೊಂಬೆಳಗರುಣಕಾಂತಿ;
ಓಡುತಿದೆ ಹಿಂಜರಿದು ತಿಮಿರದ ತಮೋಭ್ರಾಂತಿ;
ತುಂಬುತಿದೆ ತ್ರೈಭುವನಮಂ ಚೈತನ್ಯಶಾಂತಿ:
ಶ್ರೀರಾಮಕೃಷ್ಣ ಪ್ರಭೋ ತವ ಸುಪ್ರಭಾತಂ!


ತ್ರೇತೆಯೊಳ್ ಶ್ರೀರಾಮನೋಲವತರಿಸಿ ಬಂದೆ;
ದ್ವಾಪರದೊಳಾ ಕೃಷ್ಣ ಶ್ರೀರೂಪದಲಿ ನಿಂದೆ;
ಸರ್ವಧರ್ಮಾವತಾರಂ ಕಲಿಯುಗದಿ ಸಂದೆ:
ಶ್ರೀರಾಮಕೃಷ್ಣ ಪ್ರಭೋ ತವ ಸುಪ್ರಭಾತಂ!


ನಜರೇತಿನಲ್ಲಿ ಯೇಸುಸ್ವಾಮಿಯಾಗಿದ್ದೆ;
ನದಿಯದೊಳ್ ಶ್ರೀಕೃಷ್ಣ ಚೈತನ್ಯನಾಗಿದ್ದೆ:
ಮತ್ತೆ ಭಾರತದಲ್ಲಿ ನೀ ಮೈದೋರುತೆದ್ದೆ:
ಶ್ರೀರಾಮಕೃಷ್ಣ ಪ್ರಭೋ ತವ ಸುಪ್ರಭಾತಂ!


ನಿನ್ನಿಂದೆ ಪೃಥಿವಿಯಿಂದೋಡಿತು ಮತಭ್ರಾಂತಿ;
ನಿನ್ನಿಂದೆ ಮಾನವಂಗಾದುದು ಸಹನೆ ಶಾಂತಿ;
ನಿನ್ನಿಂದೆ ಅಧ್ಯಾತ್ಮವೈಜ್ಞಾನಿಕ ಕ್ರಾಂತಿ:
ಶ್ರೀರಾಮಕೃಷ್ಣ ಪ್ರಭೋ ತವ ಸುಪ್ರಭಾತಂ!


ಸಕಲ ತತ್ತ್ವದ ಸಾರ ಶ್ರೀಮೂರ್ತಿ ನೀನಾದೆ;
ಸರ್ವ ಮತಧರ್ಮ ಜೀವಜ್ಯೋತಿ ನೀನಾದೆ;
ಸರ್ವಾವತಾರ ಸಂಪೂರ್ಣ ವಿಭು ನೀನಾದೆ:
ಶ್ರೀರಾಮಕೃಷ್ಣ ಪ್ರಭೋ ತವ ಸುಪ್ರಭಾತಂ!


ಸ್ವಾಗತಿಸುತಿವೆ ಪಕ್ಷಿಛಂದಂ ನಮೋನಮಃ!
ಸ್ವಾಗತಿಸುತಿವೆ ಪುಷ್ಪವೃಂದಂ ನಮೋನಮಃ!
ಸ್ವಾಗತಿಸುತಿವೆ ಕೋಟಿ ಹೃದಯಂ ನಮೋನಮಃ!
ಶ್ರೀರಾಮಕೃಷ್ಣ ಪ್ರಭೋ ತವ ಸುಪ್ರಭಾತಂ!

೨೯ – ೧೧ – ೧೯೬೩