ಸ್ವಾಗತಂ ಕೌಸಲೆಯ ಕಂದಂಗೆ!

ಜಯಮಕ್ಕೆ ಶ್ರೀರಾಮಚಂದ್ರಂಗೆ!

ಸ್ವಾಗತಂ ಮುನಿವರರ ಶಿಷ್ಯಂಗೆ,
ಜಯಮಕ್ಕೆ ಮುನಿಸತಿಯ ಪೊರೆದಂಗೆ!
ಸ್ವಾಗತಂ ಹರಧನುವ ಮುರಿದಂಗೆ,
ಜಯಮಕ್ಕೆ ಜಾನಕಿಯನೊಲಿದಂಗೆ!….

ಮಂಗಳಂ ಗಿರಿವನಪ್ರಿಯಮೂರ್ತಿಗೆ,
ಮಂಗಳಂ ರವಿವಂಶ ಸತ್ಕೀರ್ತಿಗೆ!
ಮಂಗಳಂ ತ್ಯಾಗೀಶಶೀಲಂಗೆ,
ಮಂಗಳಂ ಯೋಗೀಶಪಾಲಂಗೆ!….

ಸ್ವಾಗತಂ ಮೈಥಿಲೀ ಲೋಲಂಗೆ,
ಜಯಮಕ್ಕೆ ದಶಕಂಠ ಕಾಲಂಗೆ!
ಸ್ವಾಗತಂ ಸತ್ಯಾವತಾರಂಗೆ,
ಜಯಮಕ್ಕೆ ನಿತ್ಯಾವತಾರಂಗೆ!….

ಸ್ವಾಗತಂ ದಶರಥ ಕುಮಾರಂಗೆ,
ಜಯಮಕ್ಕೆ ಜಗದೋದ್ಧಾರಂಗೆ!
ಮಂಗಳಂ ರಘುರಾಮಚಂದ್ರಂಗೆ,
ಮಂಗಳಂ ಶ್ರೀರಾಮಚಂದ್ರಂಗೆ!….

ಗೆಲಮಕ್ಕೆ ತಿರೆಗಿಂದು ಬಂದಂಗೆ,
ಗೆಲಮಕ್ಕೆ ಕೌಸಲೆಯ ಕಂದಂಗೆ!
ಗೆಲಮಕ್ಕೆ ನಮ್ಮೆದೆಗೆ ಬಂದಂಗೆ,
ಗೆಲಮಕ್ಕೆ ನಮ್ಮಿದಿರೆ ನಿಂದಂಗೆ!….

ಮಂಗಳಂ ಕತ್ತಲೆಯ ಕೊಂದಂಗೆ,
ಮಂಗಳಂ ಮುಂಬೆಳಕ ತಂದಂಗೆ!
ಮಂಗಳಂ ಮನೆಮನೆ ಅಯೋಧ್ಯಂಗೆ,
ಮಂಗಳಂ ಸಹೃದಯ ಸುವೇದ್ಯಂಗೆ!….

೨೩ – ೩ – ೧೯೫೩


* ಶ್ರೀರಾಮನವಮಿಯ ದಿನ ಮಕ್ಕಳು ಸಾಮೂಹಿಕವಾಗಿ ಹಾಡುವ ಸ್ವಾಗತಗೀತೆ.