ಶ್ರೀ ಗುರುದೇವನಿಗೆರಗುವೆನು;
ಗುರು ಚರಣದಲಿ ನಾ ಕರಗುವೆನು!

ಸರ್ವಧರ್ಮಗಳ ವಾರಿಧಿಗೆ,
ಪುಣ್ಯದ ಸುರನದಿಗೆ,
ಬ್ರಹ್ಮಾನಂದ ಮಹೋದಧಿಗೆ,
ಶಾಂತಿಯ ಚಿರನಿಧಿಗೆ,
ಕತ್ತಲೆಯವನಿಗೆ
ಬೆಳಕಿತ್ತವನಿಗೆ
ಪರಮಹಂಸ ಗುರುದೇವನಿಗೆ!

ದಕ್ಷಿಣೇಶ್ವರದ ಗುಡಿಯಲ್ಲಿ
ತಿರು ತಾಯಡಿಯಲ್ಲಿ
ವರ ವಟವೃಕ್ಷದ ಬುಡದಲ್ಲಿ
ಗಂಗೆಯ ದಡದಲ್ಲಿ
ಬಂಧವನೊಡೆದ
ಮುಕ್ತಿಯ ಪಡೆದ
ರಾಮಕೃಷ್ಣ ಗುರುದೇವನಿಗೆ!

ಪರಮ ಪರಮಾವತಾರನಿಗೆ,
ಜಗದೋದ್ಧಾರನಿಗೆ;
ಶ್ರೀ ಜಗದಂಬೆಯ ಭಕ್ತನಿಗೆ,
ನಿತ್ಯ ವಿಮುಕ್ತನಿಗೆ;
ವರ ವೈರಾಗಿಗೆ,
ಪರಮತ್ಯಾಗಿಗೆ,
ಶ್ರೀ ಸಚ್ಚಿದಾನಂದಾತ್ಮನಿಗೆ!

ನನ್ನೆದೆಯಲಿ ಮನೆಮಾಡಿಹಗೆ,
ಕವಿತೆಯ ನೀಡಿಹಗೆ,
ಹರಿಹರ ರೂಪದ ಪಾವನಗೆ
ವಿಶ್ವವ ಕಾವನಿಗೆ;
ಯೋಗೀಶ್ವರನಿಗೆ,
ಜಗದೀಶ್ವರನಿಗೆ,
ಶ್ರೀ ರಾಮಕೃಷ್ಣ ದೇವನಿಗೆ!

೨೭ – ೪ – ೧೯೨೯