ಸಂಜೆಯಾಗಲು ತವಕಿಪುದು ಮನ

ದಕ್ಷಿಣೇಶ್ವರ ಯಾತ್ರೆಗೆ,
ಪರಮಹಂಸರ ತೀರ್ಥವಾಣಿಯ
ಪಂಚ ಅಮೃತದ ಪಾತ್ರೆಗೆ!

ಗುಪ್ತ ದಪ್ತರ ಬರೆಯುತಿರ್ಪ
ಮಹೇಂದ್ರಗುಪ್ತನ ನೋಡುವೆ;
ಪ್ರಶ್ನವರ್ಷದ ಕರೆಯುತಿರ್ಪ
ನರೇಂದ್ರವಾದವನಾಲಿಪೆ!

ಅತ್ತ ಕೇಶವಚಂದ್ರ ಸೇನನ
ಭಕ್ತಿ ನಮನವ ಕಾಣುವೆ;
ಇತ್ತ ಮತ್ತ ಗಿರೀಶಘೋಷನ
ಚಂದ್ರಚಿತ್ತದಿ ತೊಯ್ಯುವೆ!

ಸಂಜೆಯಾಗಲು ತವಕಿಪುದು ಮನ
ದಕ್ಷಿಣೇಶ್ವರ ಯಾತ್ರೆಗೆ,
ಪರಮಹಂಸರ ತೀರ್ಥವಾಣಿಯ
ಪಂಚ ಅಮೃತದ ಪಾತ್ರೆಗೆ!

೨೪ – ೧ – ೧೯೬೫