ಎಲ್ಲದರಲಿ ಎಲ್ಲವಿದೆ:

ಬಲ್ಲವರಿಗೆ ಬೆಲ್ಲವಿದೆ!
ಹನಿಯೊಡಲಲಿ ಸಾಗರವಿದೆ;
ಹುಡಿಯಲಿ ಕುಲಪರ್ವತವಿದೆ.
ನಿಮಿಷದಿ ಕಲ್ಪಾಂತರವಿದೆ;
ಕಿಡಿಯಲಿ ಬ್ರಹ್ಮಾಂಡವಿದೆ.
ಹಿಂದಿನದಲಿ ಮುಂದೆಯಿದೆ;
ಇಂದಿನದಲಿ ನಿನ್ನೆಯಿದೆ.

ನನ್ನಾತ್ಮದಿ ಜಗದೊಡಲಿದೆ;
ಜಗದಾತ್ಮದಿ ನನ್ನೊಡಲಿದೆ.
ಎಲ್ಲದರಲಿ ಎಲ್ಲವಿದೆ;
ಬಲ್ಲವರಿಗೆ ಬೆಲ್ಲವಿದೆ!

೧೬ – ೧೨ – ೧೯೩೧