ಧಿಮಿ ಧಿಮಿ ಧಿಮಿ ಕುಣಿ ಕುಣಿ ಕುಣಿ:

ಸಹಸ್ರಾರವರಳಲಿ!
ಶತ ಶತ ಶತ ಗತಜನ್ಮದ
ಸಂಸ್ಕಾರಗಳುರುಳಲಿ!
ಹೇ ದುರ್ಗೆ, ಹೇ ಕಾಳಿ,
ಕೃಪಾಶೂಲಿ, ಶಿರೋಮಾಲಿ,
ಚಿತ್ತದಲಿ ಹೃದಯದಲಿ
ಆತ್ಮಶ್ರದ್ಧೆ ಬೆಳಗಲಿ:
ಸುಖ, ದುಃಖ, ಕಷ್ಟ, ಕ್ಲೇಶ,
ಲಾಭ, ನಷ್ಟ, ಸೃಷ್ಟಿ, ನಾಶ,
ಆs ಶಾs ನಿರಾs ಶಾs
ಎಲ್ಲ ನಿನ್ನ ಪದನ್ಯಾಸ
ಎಂಬ ಬೋಧೆ ತೊಳಗಲಿ!
ಧಿಮಿ ಧಿಮಿ ಧಿಮಿ ಕುಣಿ ಕುಣಿ ಕುಣಿ:
ಸಹಸ್ರಾರವರಳಲಿ!
ಶತ ಶತ ಶತ ಗತಜನ್ಮದ
ಸಂಸ್ಕಾರಗಳುರುಳಲಿ!

೪ – ೧೦ – ೧೯೪೪