ಸೋಲು, ಸೋಲು, ಸೋಲು, ಸೋಲು!

ಗೆಲುವ ಕಾಣೆ; ಸಾವೆ ಮೇಲು!
ತೇಲು, ತೇಲು, ತೇಲು, ತೇಲು –
ಓ ಜೀವವೆ, ತರಗಿನೋಲು!
ಸುರಿಯುತಿಹುದು ಬಿದಿಯ ಮಳೆ,
ಹರಿಯುತಿಹುದು ಬಾಳ ಹೊಳೆ;
ಬೀಸಿ ಬಂದು ಬಿರುಸುಗಾಳಿ
ಆತ್ಮಗಳನು ಕೊಚ್ಚಿ ತೇಲಿ
ಶೂನ್ಯದೆಡೆಗೆ ತರುಬುತಿದೆ!
ಕರುಣೆಯಿಲ್ಲದುರುಬುತಿದೆ!
ಸೋಲು, ಸೋಲು, ಸೋಲು, ಸೋಲು!
ಗೆಲುವ ಕಾಣೆ; ಸಾವೆ ಮೇಲು!
ತೇಲು, ತೇಲು, ತೇಲು, ತೇಲು,
ಓ ಜೀವವೆ, ತರಗಿನೋಲು!

೧೨ – ೮ – ೧೯೩೧