ಓಂ

ಮಂಗಳದ ತವರುಮನೆ ನೀಂ;
ಮಂಗಳಂಗೈ, ಗುರುದೇವನೆ.
ನನ್ನ ಹೇಮಾಂಗಿಯನು,
ನನ್ನ ಪ್ರೇಮಾಂಗಿಯನು,
ಕೃಪೆಯ ತೊಟ್ಟಿಲೊಳಿಟ್ಟು
ಕರುಣೆಯಲಿ ಕಾಪಿಟ್ಟು
ಮಂಗಳಂಗೆಯ್,
ಮಂಗಳಂಗೆಯ್,
ಮಂಗಳಂಗೆಯ್, ಗುರುದೇವನೆ!

ಕಾರಣವ ಕೊಡಲಾರೆ;
ನನ್ನ ಹೃದಯದ ತಾರೆ
ಎಂಬುದಲ್ಲದೆ ಬೇರೆ
ಕಾರಣವ ನಾನರಿಯೆ,
ಓ ನನ್ನ ಗುರುವೆ!
ಮಂಗಳದ ತವರುಮನೆ ನೀಂ;
ಮಂಗಳಂ ಮಾಡೆಮಗೆ, ಗುರುದೇವನೆ:
ಓಂ ಶಾಂತಿಃ ಶಾಂತಿಃ ಶಾಂತಿಃ!

೨೧ – ೨ – ೧೯೩೮