‘ವಧುವೆ ಬಾ ಇಲ್ಲಿ, ಈ ವರನ ಕೈ ಹಿಡಿದು
ಹತ್ತು ಮಕ್ಕಳ ಹಡೆದು, ಗಂಡನನ್ನು
ಹನ್ನೊಂದನೆಯ ಮಗು ಎಂದು ತಿಳಿದು ಬದುಕು’-
ಶತಮಾನಗಳಿಂದ ಬಂದದ್ದು ಈ ಮಾತು.

ಈಗಲೋ : ‘ವಧುವೆ ಬಾ ಇಲ್ಲಿ ; ಈ ವರನ
ಕೈ ಹಿಡಿದು ಎರಡೇ ಎರಡು, ಅಥವಾ
ಮೂರೇ ಮೂರು ಮಕ್ಕಳ ಹಡೆದು, ಗಂಡನನ್ನು
ಎಚ್ಚರದಿಂದ ಕಣ್ಣಿಟ್ಟು ಕಾಯ್ದುಕೋ.’

ಎಲ್ಲಿ ನೋಡಿದರಲ್ಲಿ, ರೈಲಿನಲ್ಲಿ, ಬಸ್ಸಿನಲ್ಲಿ,
ಗೋಡೆ ಗೋಡೆಗಳಲ್ಲಿ ಹಾಡಿನ ನಡುವೆ
ಮಾತಿನ ನಡುವೆ ‘ಎರಡು ಬೇಕು, ಮೂರು ಸಾಕು’
ಎಂಬ ಕೆಂಪು ತ್ರಿಕೋನದ ಬ್ರೇಕು.

ಈಗೀಗ ಸಾಕಷ್ಟು ಹರಿದಿದೆ ನೀರು ; ಒಳಪದರ
ತಕ್ಕಷ್ಟು ಸವೆದಿದೆ ; ವರ್ತಮಾನದ, ಮತ್ತೆ
ವಾಸ್ತವದ ಕಣ್ಣು ತೆರೆದಿದೆ.
*     *     *     *
ಪುತ್ರಕಾಮೇಷ್ಟಿ ಯಾಗದ ಹೊಗೆಯಿಂದ ದೇವರ
ಕೃಪೆಯನ್ನಿಳಿಸುವಾಸೆಗಳಿಲ್ಲ ;
ಪುತ್ರನೆಂಬ ಟಿಕೇಟಿನಿಂದ ಸ್ವರ್ಗದ ಗೇಟು
ತಾನಾಗಿ ತೆರೆಯುವುದೆಂಬ ಭ್ರಮೆಯಿಲ್ಲ ;
ಮಕ್ಕಳ ಫಲವ ಮಂತ್ರಿಸಿ ಕೊಡುವ ಋಷಿ-ಮುನಿಗಳನ್ನು
ಹುಡುಕುತ್ತ ಕಾಡು ದಾರಿಯ ತುಳಿವ ಹಂಗಿಲ್ಲ ;
ಮಕ್ಕಳಿಲ್ಲದ ಬಂಜೆ ಕೈ ಭಿಕ್ಷವನೊಲ್ಲೆನೆಂಬ
ಬೈರಾಗಿಗಳ ಬಡಿವಾರಕ್ಕೆ ಜಗ್ಗುವುದಿಲ್ಲ ;
ಅರಳಿ ಕಟ್ಟೆಯ ಸುತ್ತಿ, ತೀರ್ಥಗಳಲ್ಲಿ ತೊಯ್ದು
ಗಡಗಡ ನಡುಗಿ ನಿಲ್ಲುವ ಬಗೆಗೆ ಉತ್ಸಾಹವಿಲ್ಲ ;
ತೂಗು ತೊಟ್ಟಿಲವಾಗಿ, ಬೆಳ್ಳಿ ಬಟ್ಟಲವಾಗಿ, ಮನೆತುಂಬ
ಮಕ್ಕಳಿರಲೆಂಬ ಆಶೀರ್ವಾದಕ್ಕೆ ಪುರಸ್ಕಾರವಿಲ್ಲ ;
ಪುತ್ರದೋಹಳದ ವ್ಯಥೆಯನ್ನು ಕಥೆಯಾಗಿಸುವ
ಕವಿಯ ಕಾವ್ಯಕ್ಕೆ ಓದುಗರಿಲ್ಲ.

ಹೀಗೂ ಸಾಕಷ್ಟು ಹರಿದಿದೆ ನೀರು ; ಒಳ ಪದರ
ತಕ್ಕಷ್ಟು ಬದಲಾಗಿದೆ. ವರ್ತಮಾನದ ಮತ್ತೆ
ವಾಸ್ತವದ ಕಣ್ಣು ತೆರೆದಿದೆ.
*     *     *     *
ಓಹೋ ಬರುತ್ತಾರೆ
ಕುಟುಂಬ ಯೋಜನೆಯ ಉಪನ್ಯಾಸ ಕೊರೆಯುತ್ತಾರೆ.
ಯಾರಿಗೆ ಬೇಕು ಈ ವಿಚಾರ ಅಥವಾ ಪ್ರಚಾರ
ಈ ದರಿದ್ರ ದೇಶಕ್ಕಲ್ಲದೆ?
ಹುಟ್ಟಿದೊಬ್ಬೊಬ್ಬನೂ ಗಟ್ಟಿಮುಟ್ಟಾಗಿ ದುಡಿಯುವಂತಾಗ-
ಲೆನ್ನುವ ಬದಲು,
ಹುಟ್ಟುವುದೆ ಬೇಡ ಎನ್ನುವುದು ಯಾವ ವಿಚಾರ?
ನಮ್ಮ ಖಾಸಗಿಯ ಹಾಸಿಗೆಯ ಬಳಿಗೇ ಬಂದು
ನಿರ್ಲಜ್ಜವಾಗಿ ಸೂಚನೆ ಒಡಲು ನಿನಗೇನು ಅಧಿಕಾರ ?
(ಇಷ್ಟೊಂದು ತೀರಾ ಮೈಮೇಲೆ ಬರಬಾರದಪ್ಪ
ಘನ ಸರ್ಕಾರ)
ಹೋಗಯ್ಯ ಹೋಗು
ಈ ಅತಾರ್ಕಿಕ, ಅಧಾರ್ಮಿಕ, ಅರ್ಥಶಾಸ್ತ್ರದ
ಅನರ್ಥವಾದಕ್ಕೆ ನೇಣು ಹಾಕಿಕೊ ಹೋಗು.
ಹೀಗೂ ಸಾಕಷ್ಟು ಹರಿದಿದೆ ನೀರು ; ಇನ್ನೊಂದು
ಪದರವೂ ತೆರೆದಿದೆ.
*     *     *     *
ಬೇಡ ಅನ್ನುವುದಿಲ್ಲ ಮಗು ; ಬೇಕಾದದ್ದು ಎಷ್ಟು
ಎಂದು ಪ್ರಶ್ನಿಸುತ್ತಾರೆ.
ಸಂತಾನ ವಿರೋಧ ಖಂಡಿತ ಅಲ್ಲ, ಸಂತಾನ ನಿರೋಧ
ಎಂದು ಹೇಳುತ್ತಾರೆ.
ಹಾಗೆ ನೋಡಿದರೆ ಯಾರಿಗೆ ಬೇಡ ಈ
ಕುಟುಂಬಯೋಜನೆಯ ತತ್ವ ?
ಎಲ್ಲರಿಗೂ ಬೇಕು ; ನಮಗೆ ಮತ್ತು ನಿಮಗೆ.
ಬೇಕು ಕುಟುಂಬ ಯೋಜನೆಯ ತತ್ವ ಮಂತ್ರಿಗಳ ಸಂಖ್ಯೆಗೆ ;
ಪರದೇಶದಿಂದ ಪಡೆವ ಸಾಲಕ್ಕೆ ; ಕವಿ ಬರೆವ
ಕವಿತೆಗೆ ; ಆಡುವ ಮಾತಿಗೆ ; ಹರಿವ ಮನಸ್ಸಿಗೆ ;
ಕೊರೆವ ಉಪನ್ಯಾಸಕ್ಕೆ ; ಎಲ್ಲದಕ್ಕು ಬೇಕು
ಈ ನಿರೋಧದ ಬ್ರೇಕು.
*     *     *     *
ಇದು ನಿರಂತರ ಪ್ರವಾಹ
ಜೀವದ ದಾಹ-
ಈ ಪ್ರಕೃತಿಗೂ ಉಂಟು ನೂರಾರು ವಿಧಾನ :
ಮಳೆ ; ಬಿರುಗಾಳಿ ; ಭೂಕಂಪ ; ಪ್ರವಾಹ.
ಜರಡಿಯಾಡುತ್ತಲೇ ಇದ್ದಾಳೆ ಇವಳೂ.
ಆದರೂ ಈ ಸಂತಾನ ಪ್ರವಾಹದದಮ್ಯತೆಗೆ
ಅಣೆಕಟ್ಟು ಕಟ್ಟಿ
ಸುಪುಷ್ಟ, ಸುಫಲ ಬೆಳೆತೆಗೆವ ಕ್ರಮಬದ್ಧ ಯೋಜನೆಗೆ
ತತ್ಕಾಲಕ್ಕೆ ಜಯವಾಗಲಿ,
ಈ ದಿಕ್ಕಿನಲ್ಲಿ ಮಾತ್ರ ಸಮೃದ್ಧಿ
ಸದ್ಯಕ್ಕೆ ತಗ್ಗಲಿ.