ಅರಣ್ಯವಾಸಿ ಸಮುದಾಯಗಳಿಗೆ ಆತ್ಮ ವಿಶ್ವಾಸದಿಂದ ಬದುಕುವ ಮಾನವೀಯ ವಾತಾವರಣವನ್ನು ನಿರ್ಮಿಸುವ ಅಗತ್ಯವಿದೆ. ಪರಂಪರೆಯಿಂದ ಸಾಗುವಳಿ ಮಾಡಿಕೊಂಡು ಬಂದ ಅವರ ಭೂಮಿಯನ್ನು ಹಾಗೂ ಪರಂಪರೆಯಿಂದ ಅವರೇ ರಕ್ಷಿಸಿಕೊಂಡು ಬಂದ ಅವರ ಅರಣ್ಯವನ್ನು ಅವರಿಂದ ಬೇರ್ಪಡಿಸಬಾರದು. ಭೂಮಿ ಮತ್ತು ಅರಣ್ಯವೆಂಬ ಕುಣಬಿಯರ ಅಭಿವೃದ್ಧಿಮೂಲ ಸಂಗತಿಗಳನ್ನು ಗಂಭೀರವಾಗಿ ತೆಗೆದುಕೊಳ್ಳಬೇಕಾಗಿದೆ. ಅಂದರೆ ಅವರು ನಂಬಿದ ಬದುಕಿನ ಮೂಲಕವೇ ಅವರನ್ನು ಸದೃಢಗೊಳಿಸಬೇಕಾದ ಅಗತ್ಯವಿದೆ.

ಪಂಚವಾರ್ಷಿಕ ಯೋಜನೆಗಳ ಮೂಲಕ ನಾವು ಕೈಗೊಂಡ ದೊಡ್ಡದೊಡ್ಡ ಅಣೆಕಟ್ಟುಗಳ ನಿರ್ಮಾಣ, ವಿದ್ಯುತ್‌ ಯೋಜನೆಗಳು, ರಾಷ್ಟೀಯ ಉದ್ಯಾನಗಳು, ಸಂರಕ್ಷಿತ ಅರಣ್ಯ ಯೋಜನೆಗಳು ಮಾತ್ರ ನಮ್ಮ ಅಭಿವೃದ್ಧಿಯ ದ್ಯೋತಕಗಳಾಗಿ ಇಂದು ಕಾಣುತ್ತಿವೆ. ಇಂಥ ದೊಡ್ಡ ಯೋಜನೆಗಳಿಗೆ ವಿನಿಯೋಗಿಸಿ ಉಳಿದ ಹಣವನ್ನು ಧನಸಹಾಯದ ಸ್ವರೂಪದಲ್ಲಿ ಬಡವರಿಗೆ, ಹಿಂದುಳಿದವರಿಗೆ, ದಲಿತರಿಗೆ, ಬುಡಕಟ್ಟುಗಳಿಗೆ ಹಂಚುವ ಮೂಲಕ ಸಾಮಾಜಿಕ ಹಾಗೂ ಆರ್ಥಿಕ ನ್ಯಾಯವನ್ನು ನೀಡುವ ಸಾಂಪ್ರದಾಯಿಕ ಅಭಿವೃದ್ಧಿ ಚಿಂತನೆ ಸ್ವಾತಂತ್ರ್ಯಾನಂತರದ ನಮ್ಮ ಎಲ್ಲ ಸರ್ಕಾರಗಳಲ್ಲಿಯೂ ಕಂಡು ಬರುತ್ತಿದೆ. ಆದರೆ ದೊಡ್ಡ ಸಮುದಾಯಗಳ ಒಳಿತಿನ ಅಥವಾ ದೇಶದ ಹಿತದೃಷ್ಟಿಯ ಬೃಹತ್‌ ಯೋಜನೆಗಳನ್ನು ಜಾರಿಗೊಳಿಸುವ ಭರದಲ್ಲಿ ಸಣ್ಣ ಸಮುದಾಯಗಳ ಆತ್ಮಸ್ಥೈರ್ಯವನ್ನು ನಾಶ ಮಾಡುವ ಕೆಲಸವಾಗಬಾರದು. ಅಭಿವೃದ್ಧಿ ಎಂಬುದು ಏಕಮುಖವಾಗಬಾರದು.

ನಮ್ಮ ದೇಶದ ಅರಣ್ಯವಾಸಿ, ಅಲೆಮಾರಿ ಮತ್ತು ಬುಡಕಟ್ಟು ಸುಮುದಾಯಗಳನ್ನು ಕೇವಲ ದುಡಿಯುವವರು, ಕೂಲಿಕಾರರು ಅಥವಾ ಭಿಕ್ಷುಕರು ಎಂದು ಪರಿಗಣಿಸಲಾಯಿತೇ ಹೊರತು ಅವರು ಕೂಡ ಉತ್ಪಾದಕರು ಎಂಬ ದೃಷ್ಟಿಯಿಂದ ನೋಡಲೇ ಇಲ್ಲ. ಆಧುನಿಕ ಅಭಿವೃದ್ಧಿ ಪರಂಪರೆಯಲ್ಲಿ ಅವರು ಒಂದು ‘ಹೊರೆ’ಯಾಗಿ ಪರಿಣಮಿಸಿದುದು ದುರಂತ. ನಮ್ಮ ಸ್ವಾತಂತ್ರ್ಯೋತ್ತರ ಆಡಳಿತ ಅರಣ್ಯವನ್ನು ಒಂದು ಉತ್ಪಾದನಾ ಕ್ಷೇತ್ರ ಎಂದು ಪರಿಗಣಿಸಿತು. ಆದರೆ ಸಾವಿರಾರು ವರ್ಷಗಳಿಂದ ಆ ಅರಣ್ಯವನ್ನು ಕಾಪಾಡಿಕೊಂಡು ಬಂದಿದ್ದ ಅದರೊಳಗಿನ ಪರಂಪರಾಗತ ಜ್ಞಾನವನ್ನು ರೂಢಿಸಿಕೊಂಡಿದ್ದ ನಿವಾಸಿಗಳನ್ನು ಅರಣ್ಯಕ್ಕೆ ಮಾರಕ ಎಂದು ಭಾವಿಸಿತಲ್ಲದೆ, ಅವರನ್ನು ಅರಣ್ಯದಿಂದ ಓಡಿಸುವ ಪ್ರಯತ್ನಗಳನ್ನು ಮಾಡಲಾಯಿತು. ಆದರೆ ಆಧುನಿಕ ವ್ಯವಸ್ಥೆ ಒಂದು ವಿಚಾರವನ್ನು ಅರ್ಥ ಮಾಡಿಕೊಳ್ಳಬೇಕಾಗಿತ್ತು. ಅದೇನೆಂದರೆ ಏಕಕಾಲದಲ್ಲಿ ಅರಣ್ಯದ ಪಾಲಕರೂ ಉತ್ಪಾದಕರೂ ಆಗಿದ್ದ ಗಿರಿಜನರನ್ನು ಕಡೆಗಣಿಸಿದ್ದೇ ಅರಣ್ಯ ನಾಶಕ್ಕೆ ಕಾರಣ. ನಮ್ಮ ಆಧುನಿಕ ವ್ಯವಸ್ಥೆಯ ಬ್ರಹ್ಮಾಂಡ ಭ್ರಷ್ಟತೆ ಅರಣ್ಯವನ್ನು ಬಲಿತೆಗೆದುಕೊಂಡಿತೇ ವಿನಹ ಅರಣ್ಯವಾಸಿಗಳು ಅದಕ್ಕೆ ಕಾರಣರಾಗಿರಲಿಲ್ಲ. ಇಂಥ ಅಧಿಕಾರಶಾಹಿ ನೀತಿಗಳಿಂದ ನಾವು ಕಳೆದುಕೊಂಡದ್ದು ಕೇವಲ ಅರಣ್ಯವನ್ನಲ್ಲ. ಆ ಅರಣ್ಯವನ್ನು ಕುರಿತಾದ ಒಂದು ಜ್ಞಾನ ಪರಂಪರೆಯನ್ನು, ನಮ್ಮ ಪಶ್ಚಿಮ ಘಟ್ಟಗಳು ಮತ್ತು ಕರಾವಳಿಯ ಉದ್ದಕ್ಕೆ ಹಬ್ಬಿ ಹರಡಿದ್ದ ಆ ನಿಬಿಡಾರಣ್ಯದಲ್ಲಿ ಅದೆಷ್ಟು ಬಗೆಯ ಔಷಧಿ ಸಸ್ಯಗಳಿದ್ದವು. ಅದೆಷ್ಟು ಬಗೆಯ ಜೀವರಾಶಿಗಳಿದ್ದವು. ಆ ಇಡೀ ಜೀವಜಾಲದ ಅರಿವಿದ್ದ, ಅರಣ್ಯದ ವಿಜ್ಞಾನ ಗೊತ್ತಿದ್ದ ಗಿರಿಜನರನ್ನು ಸಕ್ರಿಯವಾಗಿ ಬಳಸಿಕೊಂಡಿದ್ದರೆ ಆ ಅರಣ್ಯವೂ ಇರುತ್ತಿತ್ತು. ಆ ಜ್ಞಾನ ಸಂಪತ್ತೂ ಇರುತ್ತಿತ್ತು.

ನನ್ನ ಕ್ಷೇತ್ರಕಾರ್ಯದ ಅನುಭವ ಹಾಗೂ ಅವರೊಡನೆ ಇದ್ದ ಒಡನಾಟದ ಹಿನ್ನೆಲೆಯಲ್ಲಿ ಕೆಲವು ಸಲಹೆಗಳನ್ನು ನೀಡುವುದು ನನ್ನ ಕರ್ತವ್ಯವಾಗಿದೆ. ಅವು ಈ ಕೆಳಗಿನಂತಿವೆ. :

ಸಲಹೆಗಳು :

೦೧. ಕುಣಬಿ ಸಮುದಾಯ ಎಲ್ಲ ದೃಷ್ಟಿಯಿಂದಲೂ ಅಧಿಕೃತ ಬುಡಕಟ್ಟಿನ ಸರ್ವ ಲಕ್ಷಣಗಳನ್ನೂ ಹೊಂದಿರುವುದರಿಂದ ಅವರನ್ನು ಪರಿಶಿಷ್ಟ ವರ್ಗಕ್ಕೆ ಸೇರಿಸುವ ಕ್ರಮ ಕೈಗೊಳ್ಳಬೇಕು.

೦೨. ಕುಣಬಿಯರಿಗೆ ಭೂಮಿ ಮತ್ತು ಅರಣ್ಯ ಬೇರೆ ಬೇರೆಯಲ್ಲ, ಇವೆರಡನ್ನೂ ಪ್ರತ್ಯೇಕಿಸಿ ನೋಡದೆ ಸಮಸ್ಯೆಗಳನ್ನು ಬಗೆಹರಿಸಬೇಕು.

೦೩. ಕುಮರಿ – ಬೇಸಾಯ ಮಾಡುತ್ತಿರುವ ಅರ್ಥಾತ್‌ ‘ಒತ್ತೂವರಿ’ ಎಂದು ಸರ್ಕಾರ ಹೇಳುತ್ತಿರುವ ಭೂಮಿಯನ್ನು ತಕ್ಷಣವೇ ಸಕ್ರಮಗೊಳಿಸುವ ಕ್ರಮ ಕೈಗೊಳ್ಳಬೇಕು.

೦೪. ಭೂಮಿಯಿಂದ ವಂಚಿತರಾಗುವವರಿಗೆ ರೆವಿನ್ಯೂ ಭೂಮಿಯನ್ನಾದರೂ ನೀಡುವ ಕಾರ್ಯ ಜರೂರಾಗಿ ಆಗಬೇಕು.

೦೫. ಅರಣ್ಯ ಉತ್ಪನ್ನಗಳನ್ನು ಸಂಗ್ರಹಿಸುವ ಸ್ವಾತಂತ್ರ್ಯವನ್ನು ಪುನಃ ಜಾರಿಗೆ ತರಬೇಕು. ಹಾಗೆ ಸಂಗ್ರಹಿಸಿದ ಉತ್ಪನ್ನಗಳನ್ನು ನ್ಯಾಯಯುತ ಮಾರಾಟಕ್ಕಾಗಿ ಅವರಲ್ಲೇ ಸಹಕಾರ ಸಂಘಗಳನ್ನು ಸ್ಥಾಪಿಸಬೇಕು.

೦೬. ಕುಣಬಿಯರಿಗೇ ಮೀಸಲಾದ ವಿಶೇಷ ಪಂಚಾಯಿತಿಗಳ ರಚನೆಯಾಗಬೇಕು. ಅಲ್ಲಿ ಅವರದೇ ಆಡಳಿತದ ಮೂಲಕ ಅವರನ್ನು ಅವರೇ ಆಳಿಕೊಳ್ಳುವ ವ್ಯವಸ್ಥೆ ಆಗಬೇಕು. ಪ್ರತಿಯೊಂದು ಪಂಚಾಯಿತಿಗೆ ಒಂದು ಸಹಕಾರ ಸಂಘ ಇರುವಂತೆ ನೋಡಿಕೊಳ್ಳಬೇಕು.

೦೭. ಪ್ರತಿಯೊಂದು ಗ್ರಾಮಕ್ಕೆ (ಸೀಮಿತ ಪ್ರದೇಶವೇ ಅವರ ಕುಳಾವಿ) ಒಂದು ಶಾಲೆ ಮತ್ತು ಅಂಗನವಾಡಿಗಳನ್ನು ತೆರೆಯಬೇಕು. ಕಲಿಕೆಯ ಅರಿವು ಮೂಡಿಸುವ ದೃಷ್ಟಿಯಿಂದ ಕನ್ನಡದ ಜೊತೆಗೆ ಕೊಂಕಣಿ ಗೊತ್ತಿರುವ ಶಿಕ್ಷಕರನ್ನು ನೇಮಿಸಬೇಕು.

೦೮. ಬುಡಕಟ್ಟು ಪ್ರದೇಶಗಳ ಶಾಲೆಗಳು ಸರಿಯಾಗಿ ನಡೆಯುವಂತೆ ಮಾಡಲು ಮತ್ತು ಸೌಲಭ್ಯಗಳನ್ನು ಕಲ್ಪಿಸಲು ಒಂದು ವಿಶೇಷ ಜಾಗೃತ ಸಮಿತಿಯನ್ನು ರಚಿಸಬೇಕು.

೦೯. ಆಶ್ರಮ ಶಾಲೆಗಳ ಸಂಖ್ಯೆ ಹೆಚ್ಚಿಸಬೇಕು. ಈ ಶಾಲೆಗಳಲ್ಲಿ ಅಕ್ಷರ ಕಲಿಕೆಯ ಜೊತೆಗೆ ಸಮುದಾಯದ ಜ್ಞಾನ ಪರಂಪರೆಗಳ ಭೋಧನೆಗಳನ್ನು ಮಾಡುವಂತಿರಬೇಕು.

೧೦. ಆಧುನಿಕತೆ ವೈಪರೀತ್ಯಗಳಿಂದಾಗಿ ಕೀಳರಿಮೆಗೆ ಒಳಗಾದ ಅವರ ಪರಂಪರೆಯ ಆಹಾರ, ಆರೋಗ್ಯ ಪದ್ಧತಿ, ನ್ಯಾಯ ಪದ್ಧತಿ, ಸ್ಥಳೀಯ ಆಡಳಿತ ವ್ಯವಸ್ಥೆ, ನಿಸರ್ಗ ಮತ್ತು ಅರಣ್ಯದ ಬಗೆಗಿನ ಜ್ಞಾನ ಮುಂತಾಗಿ ಅವರ ಆರೋಗ್ಯಕರ ಮೌಲ್ಯಗಳನ್ನು ಗುರುತಿಸುವಂಥ ಜ್ಞಾನ ಪರಂಪರೆಗಳು ಸಂಶೋಧನೆ ಹಾಗೂ ಅವುಗಳ ಪುನರ್ ಸ್ಥಾಪನೆಯ ಕಾರ್ಯ ಆಗಬೇಕು.

೧೧. ಕುಣಬಿ ಸಮುದಾಯದ ಸಾಂಸ್ಕೃತಿಕ ಪರಂಪರೆಯ ರಕ್ಷಣೆಗೆ ಕ್ರಮ ಕೈಗೊಳ್ಳಬೇಕು. ಅವರ ಭಾಷೆ, ಸಾಹಿತ್ಯ, ಹಬ್ಬಾಚರಣೆಗಳು, ಆಹಾರ ಪದ್ಧತಿ, ಪ್ರಕೃತಿ ಆರಾಧನೆ ಮುಂತಾದ ಆರೋಗ್ಯಕರ ಸಂಪ್ರದಾಯಗಳ ದಾಖಲಾತಿ ಆಗಬೇಕು.

೧೨. ಸರ್ಕಾರ ಕುಣಬಿಯರಿಗಾಗಿಯೇ ಅವರ ವೃತ್ತಿಪರತೆಯನ್ನು ಆಧರಿಸಿ ಕೆಲವು ವಿಶೇಷ ಅಭಿವೃದ್ಧಿ ಯೋಜನೆಗಳನ್ನು ರೂಪಿಸಬೇಕು. ಅವರ ಕೃಷಿ, ಅರಣ್ಯ ಉತ್ಪನ್ನಗಳು, ಕರಕುಶಲತೆ, ಮುಂತಾದ ಯೋಜನೆಗಳನ್ನು ಜಾರಿಗೊಳಿಸಬೇಕು. ಸರ್ಕಾರ ಅವರಿಗಾಗಿ ರೂಪಿಸುವ ಯೋಜನೆಗಳನ್ನು ಅವರ ಮಧ್ಯೆಯೇ ಅಧ್ಯಯನ ಮಾಡಿ ರೂಪಿಸಬೇಕು. ಅವುಗಳ ಸಾಧಕ ಬಾದಕಗಳನ್ನು ಕಾಯ್ದುನೋಡಿ, ಮರುಪರಿಶೀಲನೆಗೆ ಒಳಪಡಿಸಿ ಅಂತಿಮವಾಗಿ ಜಾರಿಗೆ ತರಬೇಕು ಹಾಗೂ ತಾಳ್ಮೆಯಿಂದ ರೂಪಿಸಿದ ಯೋಜನೆಗಳು ಅವರನ್ನು ಆರ್ಥಿಕವಾಗಿ ಮುಖ್ಯ ಪ್ರವಾಹಕ್ಕೂ ಸಾಂಸ್ಕೃತಿಕವಾಗಿ ಅವರ ಅನನ್ಯತೆಯ ರಕ್ಷಣೆಗೂ ಪೂರಕವಾಗಿರುವಂತೆ ಎಚ್ಚರವಹಿಸಿಬೇಕು.

೧೩. ಕುಡಿಯುವ ನೀರು, ನೈರ್ಮಲ್ಯ, ಆರೋಗ್ಯ, ವಸತಿ ಮುಂತಾದ ಸಾರ್ವಜನಿಕ ಯೋಜನೆಗಳ ಪ್ರಾಮಾಣಿಕ ಅನುಷ್ಠಾನ ಆಗಬೇಕು. ಈ ನಿಟ್ಟಿನಲ್ಲಿ ಜನ ಪ್ರತಿನಿಧಿಗಳಿಗೆ ತರಬೇತಿ ನೀಡಬೇಕು.

೧೪. ರೂಪಿಸಿದ ಯೋಜನೆಗಳನ್ನು ಅನುಷ್ಠಾನಕ್ಕೆ ತರುವ ಹಂತವೇ ಬಹುಮುಖ್ಯ. ಈ ಹಿನ್ನಲೆಯಲ್ಲಿ ಯೋಜನೆಗಳ ಅನುಷ್ಠಾನದ ಮೌಲ್ಯಮಾಪನ ಪ್ರತಿ ವರ್ಷ ನಡೆಯಬೇಕು.

೧೫. ಬಹುಸಂಖ್ಯಾತರಿಂದ, ಭೂಮಾಲಿಕರಿಂದ ಹಾಗೂ ಅಧಿಕಾರಶಾಹಿ ಧೋರಣೆಯಿಂದ ಅರಣ್ಯವಾಸಿಗಳನ್ನು ರಕ್ಷಿಸುವ ಸೂಕ್ತ ಕಾನೂನುಗಳ ರಚನೆಯಾಗಬೇಕು.