ಕರ್ನಾಟಕದಲ್ಲಿ ಐವತ್ತು ಬಗೆಯ ಬುಡಕಟ್ಟು ಸಮುದಾಯಗಳಿವೆ ಎಂದು ಸರ್ಕಾರಿ ವರದಿಗಳು ಹೇಳುತ್ತವೆ. ಬ್ರಿಟೀಷ್‌ರ ಕಾಲದಿಂದ ನಡೆದು ಬಂದ ವರದಿಗಳ ಆಧಾರದಲ್ಲಿಯೇ ಐವತ್ತು ಸಮುದಾಯಗಳ ಪಟ್ಟಿಯನ್ನು ಸಿದ್ಧಪಡಿಸಲಾಗಿದೆಯೇ ಹೊರತು. ಸ್ವಾತಂತ್ರ್ಯಾ ನಂತರದಲ್ಲಿ ಸಮಗ್ರವಾದ ಹಾಗೂ ವೈಜ್ಞಾನಿಕವಾದ ಸಮೀಕ್ಷೆ ನಡದೇ ಇಲ್ಲ. ಈ ಕೊರತೆಯಿಂದಾಗಿಯೇ ಕೆಲವು ಇಲ್ಲದ ಹಾಗೂ ಅರ್ಹವಲ್ಲದ ಸಮುದಾಯಗಳೂ ಸರ್ಕಾರಿ ಪಟ್ಟಿಯಲ್ಲಿ ಸೇರಿವೆ. ಕೆಲವು ಬುಡಕಟ್ಟುಗಳ ಹೆಸರುಗಳು ಎರಡು ಮೂರು ರೀತಿಯಲ್ಲಿ ಬಳಕೆಯಲ್ಲಿದ್ದು ಅವುಗಳನ್ನು ಲೆಕ್ಕಕ್ಕೆ ಸೇರಿಸಲಾಗಿದೆ. ಸೂಕ್ತ ಅಧ್ಯಯನ ಮತ್ತು ಸಮಗ್ರ ಸಮೀಕ್ಷೆಯ ಕೊರತೆಯ ಕಾರಣದಿಂದ ನಿಜವಾಗಿಯೂ ಬುಡಕಟ್ಟು ಲಕ್ಷಣಗಳುಳ್ಳ ಹಾಗೂ ಪರಂಪರೆಯಿಂದ ವಿಶಿಷ್ಟ ಜೀವನ ನಡೆಸಿಕೊಂಡು ಬಂದ ಕೆಲವು ಅಧಿಕೃತ ಬುಡಕಟ್ಟು ಸಮುದಾಯಗಳು ಇನ್ನೂ ‘ಸರ್ಕಾರಿ ಬುಡಕಟ್ಟು’ ಗಳಾಗುವ ಭಾಗ್ಯ ಪಡೆದಿಲ್ಲ. ಅಂಥ ವಂಚಿತ ಬುಡಕಟ್ಟಿನಲ್ಲಿ ‘ಕುಣಬಿ’ ಸಮುದಾಯವೂ ಒಂದು ಇಷ್ಟಾಗಿಯೂ ಕರ್ನಾಟಕದಲ್ಲಿ ಸಮುಆರು ೩೫ ರಿಂದ ೪೦ ಅಧಿಕೃತ ಬುಡಕಟ್ಟುಗಳನ್ನು ನಾವು ಗುರುತಿಸಲು ಸಾಧ್ಯವಿದೆ. ದಕ್ಷಿಣದ ಚಾಮರಾಜ ನಗರದಿಂದ ಹಿಡಿದು ಉತ್ತರದ ಜೋಯಿಡಾವರೆಗೆ ಹಬ್ಬಿರುವ ಸಹ್ಯಾದ್ರಿಯ ಸಾಲಿನಲ್ಲಿ, ಪಶ್ಚಿಮ ಭಾಗದ ಉದ್ದಕ್ಕೂ ಚಾಚಿ ನಿಂತ ಸಮುದ್ರದ ತಪ್ಪಲಿನಲ್ಲಿ. ನದಿಮುಖದ ಭೂಮಿಯಲ್ಲಿ ಹತ್ತಾರು ಬಗೆಯ ಬುಡಕಟ್ಟುಗಳು ವಾಸವಾಗಿವೆ.

ಶಿರಾಡಿ, ಚಾರ್ಮಾಡಿ, ನಾಗೋಡಿ, ಆಗುಂಬೆ, ಅರಬೈಲ್‌, ನಾಗವಳ್ಳಿ, ಗೇರುಸೊಪ್ಪ, ದೇವಿಮನೆ ಮುಂತಾದ ಘಟ್ಟ ಪ್ರದೇಶಗಳು; ಕಾವೇರಿ, ಚಂದ್ರಗಿರಿ, ಬರಪೊಳೆ, ನೇತ್ರಾವತಿ, ಸೀತಾ, ಗಂಗಾವಳಿ, ಶರಾವತಿ, ಬೇಡ್ತಿ, ಅಘನಾಶಿನಿ, ಕಾಳಿ, ಮುಂತಾದ ನದಿಗಳು; ಈ ಎಲ್ಲವನ್ನೂ ಒಳಗೊಂಡ ಕರ್ನಾಟಕದ ಪಶ್ಚಿಮ ಘಟ್ಟಗಳು ಹಾಗೂ ಕರಾವಳಿಯ ನಡುವಿನ ವೈವಿಧ್ಯಮಯ ಭೂಪ್ರದೇಶಗಳಾದ ಕೊಡಗು, ಚಿಕ್ಕಮಗಳೂರು, ಶಿವಮೊಗ್ಗ, ದಕ್ಷಿಣ ಕನ್ನಡ ಹಾಗೂ ಉತ್ತರ ಕನ್ನಡ ಜಿಲ್ಲೆಗಳಲ್ಲಿ ಕಂಡುಬರುವ ಸೋಲಿಗರು, ಯರವರು, ಕಡಬಿಯರು, ಕಾಡು ಕುರುಬರು, ಗೊಂಡರು, ಕುಣಬಿಯರು, ಹಸಲರು, ಸಿದ್ಧಿಯರು, ಗೌಳಿಗರು, ಹಾಲಕ್ಕಿ ಒಕ್ಕಲಿಗರು, ಕೊರಗರು, ಮಲೆ ಕುಡಿಯರು, ಮೇರರು, ಮನ್ಸರು, ಮತ್ತು ಭೈರರು ಮುಂತಾದಂತೆ ಹತ್ತು ಹಲವು ರೀತಿಯ ಬುಡಕಟ್ಟುಗಳು ತಮ್ಮದೇ ಅದ ಜೀವನ ಕ್ರಮದಲ್ಲಿ ಇಂದೂ ಬುದುಕು ಸಾಗಿಸುತ್ತಿದ್ದಾರೆ. ಈ ಬುಡಕಟ್ಟುಗಳಲ್ಲಿ ಕೂಡ ಎರಡು ವರ್ಗಗಳನ್ನು ಗುರುತಿಸಬಹುದು. ಅನಾದಿ ಕಾಲದಿಂದ ಸಹ್ಯಾದ್ರಿಯ ಆಜುಬಾಜಿನಲ್ಲಿ ವಾಸವಿದ್ದ ಮೂಲ ನಿವಾಸಿಗಳದ್ದು ಒಂದು ವರ್ಗವಾದರೆ, ನಾನಾ ಕಾರಣಗಳಿಗಾಗಿ ಬೇರೆ ಬೇರೆ ಪ್ರದೇಶಗಳಿಂದ ವಲಸೆ ಬಂದು ನೆಲೆ ನಿಂತ ಜನವರ್ಗಗಳೂ ಇಲ್ಲಿವೆ. ಆಹಾರ ಸಂಗ್ರಹಣೆ, ಬೇಟೆ, ಹೈನುಗಾರಿಕೆ, ಕುಮರಿ ಕೃಷಿ, ಕೂಲಿ, ಕಸೂತಿ ಹಾಗೂ ಕುಶಲಕಲೆ ಇವರು ಜೀವನೋಪಾಯಕ್ಕಾಗಿ ಆರಿಸಿಕೊಂಡ ಮಾರ್ಗಗಳು. ಕನ್ನಡವಲ್ಲದೆ ಕೊಡವ, ಯರವ, ತುಳು, ಕೊಂಕಣಿ, ಮರಾಠಿ ಇವರ ಮಾತೃಭಾಷೆಗಳಾಗಿವೆ, ಭಾಷೆಗಳ ಸಮ್ಮಿಶ್ರ ಬಳಕೆಯಿಂದಾಗಿ ಉಪಭಾಷೆಗಳೂ ಸೃಷ್ಟಿಯಾಗಿವೆ.

ನಿತ್ಯ ಹರಿದ್ವರ್ಣದ ಕಾಡುಗಳೆನಿಸಿದ ಪಶ್ಚಿಮ ಘಟ್ಟದ ಅರಣ್ಯಗಳು ಪ್ರಪಂಚದಲ್ಲಿಯೇ ಅಪರೂಪದ ಸಸ್ಯರಾಶಿಗಳನ್ನು ಪಡೆದವಾಗಿದ್ದು ಜೀವ ಜಗತ್ತಿನ ಎಲ್ಲ ವಿಸ್ಮಯಗಳನ್ನು ಪ್ರತಿಬಿಂಬಿಸುವ ತಾಣಗಳಾಗಿವೆ. ಹೊನ್ನೆ, ನಂದಿ, ಸಾಗಡೆ, ತಡಸಲು, ನೇರಳೆ, ಜಂಬೆ, ಬೂರಗ, ಮಾಕಾಳಿ, ದೂಪ, ಧೂಮ, ಹಲಸು, ಹೆಬ್ಬಲಸು, ಸಳ್ಳೆ, ಸಾತಿ ಮುಂತಾದಂತೆ ನೂರಾರು ರೀತಿಯ ಭೀಮಕಾಯದ ಮರಗಳು ಪಶ್ಚಿಮಘಟ್ಟದ ಸಮೃದ್ಧಿಗೆ ಸಾಕ್ಷಿಯಾಗಿವೆ. ಭೂಮ್ಯಾಕಾಶಗಳನ್ನು ಒಂದು ಮಾಡಿ ಸೂರ್ಯಕಿರಣಗಳನ್ನು ನುಂಗಿ ಭೂಮಿಯನ್ನು ತಣ್ಣಗಿಟ್ಟು ಅದರಲ್ಲಿ ಮತ್ತೆ ನಾನಾ ವಿಧವಾದ ಅಣಬೆ ಆರ್ಕಿಡ್‌ಗಳು ಬೆಳೆಯಲು ಸಹಕಾರಿಯಾಗಿ ಜೊತೆಗೇ ಬಿದಿರು, ಬೆತ್ತ ಹಾಗೂ ಹತ್ತಾರು ಬಗೆಯ ಬಳ್ಳಿಗಳು ಹಬ್ಬಿ ಹೆಣೆದುಕೊಂಡಿವೆ. ಅಡಿಕೆ, ತೆಂಗು, ಬೈನೆ ಈಚಲು ಮುಂತಾದ ಸಸ್ಯಗಳಲ್ಲದೆ, ಕಾಫಿ, ಟೀ, ಏಲಕ್ಕಿ, ಲವಂಗ, ಮೆಣಸು, ಕೋಕೋ ಹಾಗೂ ಕಿತ್ತಳೆಗಳಂಥ ವಾಣಿಜ್ಯ ಬೆಳಗಳಾಗಿ ಪರಿವರ್ತಿತವಾದ ದುಡ್ಡಿನ ಗಿಡಗಳೂ ಸಮೃದ್ಧಿಯಾಗಿವೆ.

ಒಂದು ಕಾಲಕ್ಕೆ ತಮ್ಮ ಕುಲ ಹಾಗೂ ಪಂಗಡಗಳಿಗೆ ಗಿಡ ಮರಗಳ ಹೆಸರನ್ನೇ ಇಟ್ಟುಕೊಂಡು ಅವುಗಳ ಮೂಲಕವೇ ತಮ್ಮ ಅಸ್ತಿತ್ವನ್ನು ಗುರುತಿಸಿಕೊಂಡ ಹತ್ತಾರು ಬುಡಕಟ್ಟುಗಳು ಇಂದಿಗೂ ಆ ಸಂಪ್ರದಾಯವನ್ನು ಅನುಸರಿಸುತ್ತಿವೆ. ದೇವರ ಹೆಸರಿನಲ್ಲಿ ಮೀಸಲಿಟ್ಟ ಕಾಡುಗಳು ಇಂದಿಗೂ ದೇವರ ಕಾಡುಗಳಾಗಿ ಉಳಿದು ಬಂದಿರುವುದನ್ನು ನಾವು ನೋಡುತ್ತಿದ್ದೇವೆ. ಮೀಸಲಲ್ಲದ ಕಾಡಿನಲ್ಲೂ ಒಂದು ಮರ ಕಡಿಯಬೇಕಾದ ಪ್ರಸಂಗ ಬಂದರೆ ಅದನ್ನು ಪೂಜಿಸಿ ಅತ್ಯಂತ ಗೌರವದಿಂದ ಮರಗಳನ್ನು ಕಡಿಯುತ್ತಿದ್ದ ಬುಡಕಟ್ಟುಗಳ ಮೌಲ್ಯ ಆದರ್ಶಪ್ರಾಯ.

ಬುಡಕಟ್ಟುಗಳಿಗೆ ಸ್ವಂತ ಆಸ್ತಿಯ ಕಲ್ಪನೆ ಇರಲಿಲ್ಲ. ತೀರಾ ಮೊದಲಿಗೆ ಆಹಾರ ಸಂಗ್ರಹಣೆ ಮತ್ತು ಬೇಟೆಯಿಂದ ಹೊಟ್ಟೆ ಹೊರೆದುಕೊಳ್ಳುತ್ತಿದ್ದ ಇವರು ಕೃಷಿಯ ಅನ್ವೇಷಣೆಯ ನಂತರ ಕೂಡ ಒಂದೆಡೆ ನಿಂತು ಒಂದೇ ಭೂಮಿಯನ್ನು ನಂಬಿ ಬದಕಿದವರಲ್ಲ. ಇವರು ‘ಕುಮರಿ’ ಬೇಸಾಯ ಮಾಡುತ್ತಾ ಜಾಗದಿಂದ ಜಾಗಕ್ಕೆ ಸ್ಥಳಾಂತರವಾಗುತ್ತಿದ್ದರು. ಅಂದರೆ ಕಾಡೊಳಗಿನ ಒಂದೆರಡು ಎಕರೆಯಷ್ಟು ಭೂಮಿಯನ್ನು ಹಸನು ಮಾಡಿ ಬಿತ್ತನೆ ಮಾಡುವ ಪದ್ಧತಿ. ಈ ಕುಮರಿ ಬೇಸಾಯದ ಎರಡು ಮುಖ್ಯ ಲಕ್ಷಣಗಳೆಂದರೆ ನೇಗಿಲನ್ನು ಬಳಸದೆ ಗುದ್ದಲಿಯಿಂದ ಮಾತ್ರ ಅಗೆದು ಅಬಾದು ಮಾಡುವುದು ಹಾಗೂ ನಿರ್ದಿಷ್ಟ ಪ್ರದೇಶದಲ್ಲಿ ಮೂರು ಸಲಕ್ಕಿಂತ ಹೆಚ್ಚಿನ ಬಾರಿಗೆ ಬೆಳೆ ತೆಗೆಯದೆ ಮುಂದಿನ ಪ್ರದೇಶಕ್ಕೆ ಹೋಗುತ್ತಿದ್ದುದ್ದು. ನೇಗಿಲಿನ ಉಪಯೋಗವಿರಲಿಲ್ಲ ಎಂದರೆ ಕೃಷಿ ಭೂಮಿಯ ವಿಸ್ತರಣೆ ಕೂಡ ಇರಲಿಲ್ಲ ಎಂದೇ ಅರ್ಥ. ಬ್ರಿಟಿಷರ ಆಗಮನದ ನಂತರದಲ್ಲಿ ಕಬ್ಬಿಣದ ನೇಗಿಲ ‘ಗುಳ’ ಎಷ್ಟರಮಟ್ಟಿಗೆ ಕೃಷಿ ಭೂಮಿಯ ವಿಸ್ತರಣೆ ಮಾಡಿತು ಎಂಬುದು ನಮಗೆಲ್ಲ ಗೊತ್ತೇ ಇದೆ. ಯಾವುದೇ ಭೂಮಿಯಲ್ಲಿ ಕಾಡು ಕಡಿದರೂ ಅನಂತರ ಅದರ ಪಾಡಿಗೆ ಅದನ್ನು ಏಳು ವರ್ಷ ಬಿಟ್ಟರೆ ಮತ್ತದೇ ಕಾಡು ಆವರಿಸಿಕೊಳ್ಳುತ್ತದೆ. ಇದನ್ನು ತಿಳಿದಿದ್ದ ಈ ಜನರು ‘ಖಾಯಂ ಕೃಷಿ’ ಭೂಮಿಯ ಬದಲಾಗಿ ‘ಕುಮರಿ ಕೃಷಿ’ ಯನ್ನು ಅವಲಂಬಿಸಿ ಆ ಮೂಲಕ ಕಾಡಿಗೆ ಯಾವುದೇ ಅಪಾಯವೂ ಒದಗದಂತೆ ಸಮತೋಲನ ಕಾಪಾಡಿಕೊಂಡು ಬರುತ್ತಿದ್ದರು. ಹೀಗೆ ಇಡೀ ಕಾಡು ತಮ್ಮದು ಎಂಬ ಮನೋವೈಶಾಲ್ಯದಿಂದ ಬಾಳುವ ಮೂಲಕ ಅದರ ಅಸ್ತಿತ್ವಕ್ಕೆ ಧಕ್ಕೆ ಬರದಂತೆ ಬದುಕಿದ ಇವರನ್ನು ಅತಿಕ್ರಮಿಸಿ ಕಾಡು ಮತ್ತು ಭೂಮಿ ‘ನನ್ನದು’ ಎಂಬ ಅಹಂಕಾರದಿಂದ ಗುತ್ತಿಗೆ ಹಿಡಿದ ನಾಗರಿಕ ಮನುಷ್ಯ ಮುಂದೇನು ಮಾಡಿದ ಎಂಬುದನ್ನು ಈಗ ನೋಡೋಣ.

ಯಾವಾಗ ವಾಸ್ಕೋಡಿಗಾಮ ಮಶ್ಚಿಮ ಕರಾವಳಿಯ ಕಲ್ಲಿಕೋಟೆಯಲ್ಲಿ ಕಾಲಿಟ್ಟನೋ ಅಂದಿನಿಂದಲೇ ಪಶ್ಚಿಮಘಟ್ಟದ ಕಾಡುಗಳಲ್ಲಿನ ಅರ್ಥವ್ಯವಸ್ಥೆ ರೂಪುಗೊಳ್ಳತೊಡಗಿತು ಅಥವಾ ಚುರುಕುಗೊಳ್ಳತೊಡಗಿತು. ಇಂಡಿಯಾದ ಸಾಂಬಾರ ಪದಾರ್ಥಗಳ ಆಸೆಯಿಂದ ಬರತೊಡಗಿದ ಯುರೋಪಿಯನ್ನರು ತಮ್ಮ ವಸಾಹತುಗಳನ್ನು ಸ್ಥಾಪಿಸಿ ಆ ಮೂಲಕ ತಮ್ಮ ಆರ್ಥಿಕ ಹಿಡಿತವನ್ನು ಸ್ಥಾಪಿಸಿಕೊಳ್ಳಲು ಹೋರಾಡಿದ ಕಥೆ ನಮಗೆಲ್ಲ ಗೊತ್ತೇ ಇದೆ. ಅಂದರೆ ಈ ವಸಾಹತುಗಳ ತೀವ್ರ ವ್ಯಾಪಾರದ ಚಟುವಟಿಕೆಗಳ ನಡುವೆಯೇ ಪಶ್ಚಿಮ ಘಟ್ಟದ ಕಾಡುಗಳು ತೋಟಗಳಾಗಿ ಪರಿವರ್ತಿತವಾಗುತ್ತಿದ್ದವು ಎಂಬುದನ್ನು ಇಲ್ಲಿ ಮುಖ್ಯವಾಗಿ ಗಮನಿಸಬೇಕು.

ಇಂಥ ಸಂಕ್ರಮಣಾವಸ್ಥೆಯ ಆರ್ಥಿಕ ಚಟುವಟಿಕೆಗಳ ಸಂದರ್ಭದಲ್ಲಿಯೇ ಮಲೆನಾಡಿನ ಕೆಲವು ಆಯಕಟ್ಟಿನ ಜಾಗಗಳಿಗೆ ಭೂಮಾಲಿಕರು ಬರತೊಡಗಿದ್ದು ಅಥವಾ ಯುರೋಪಿಯನ್ನರ ಹಿಂದೆ ಬಂದು ಭೂಮಾಲಿಕರಾದದ್ದು. ಈ ತೆರನಾಗಿ ಯಾವಾಗ ‘ವ್ಯವಹಾರಿಗಳು’ ಮಲೆನಾಡಿಗೆ ಕಾಲಿಟ್ಟರೋ ಆಗಿನಿಂದಲೇ ಗಿರಿಜನರ ಸ್ವಚ್ಛಂದ ಜೀವನ ಅಸ್ಥಿರವಾಗತೊಡಗಿದ್ದು. ನಮ್ಮ ಆಧುನಿಕ ವಸಾಹತುಶಾಹಿ ಎಂದು ಕರೆಯಬಹುದಾದ ನಮ್ಮ ಅರಣ್ಯ ಇಲಾಖೆಯ ಈಗಿನ ಚಟುವಟಿಕೆಗಳಿಗೆ ಪೂರ್ವದಲ್ಲಿ ನಡೆದ ಈ ಯುರೋಪಿಯನ್‌ ವಸಾಹತುಶಾಹಿಯ ಪ್ರಭಾವವನ್ನು ನಾವು ಅರ್ಥಮಾಡಿಕೊಳ್ಳದೆ ಇವತ್ತಿನ ಗಿರಿಜನರ ಬದುಕನ್ನು ಅರ್ಥಮಾಡಿಕೊಳ್ಳಲು ಸಾಧ್ಯವಿಲ್ಲ.

ಗಿರಿಜನರ ಈ ಅಸ್ಥಿರತೆಯ ಭೀತಿ ನಿಜವಾಗತೊಡಗಿದ್ದು ಬ್ರಿಟಿಷರ ಕಾಲದಲ್ಲಿ. ಭಾರತದ ವ್ಯಾಪಾರ ವ್ಯವಹಾರದ ಏಕಸ್ವಾಮ್ಯವನ್ನು ಸ್ಥಾಪಿಸಿದ ಬ್ರಿಟಿಷರು ರಾಜಕೀಯವಾಗಿ ಭಾರತದಲ್ಲಿ ಅಧಿಕಾರ ಹಿಡಿದುದರ ಜೊತೆಗೇ ತಮ್ಮ ಮೂಲೋದ್ದೇಶವಾದ ಸಾಂಬಾರ ಪದಾರ್ಥಗಳ ರಫ್ತಿಗೂ ಹೆಚ್ಚು ಗಮನಕೊಟ್ಟರು. ಇದರ ಪರಿಣಾಮವಾಗಿ ಕಾಡುಗಳು ಕಾಫಿ, ಟೀ, ಏಲಕ್ಕಿ, ಮೆಣಸು, ಕೋಕಾ ಹಾಗೂ ರಬ್ಬರ್ ತೋಟಗಳಾಗಿ ಪರಿವರ್ತಿತಗೊಳ್ಳತೊಡಗಿದವು. ಆದರೆ ಹೀಗೆ ಪರಿವರ್ತಿತಗೊಂಡ ತೋಟಗಳ ಇಡಿ ಮಾಲಿಕತ್ವವನ್ನು ಬ್ರಿಟೀಷರೇ ವಹಿಸಿಕೊಳ್ಳಲು ಸಾಧ್ಯವಿರಲಿಲ್ಲ. ಕೆಲವು ಭಾಗಗಳಲ್ಲಿ ಅವರೇ ತೋಟದ ಮಾಲಿಕರಾಗಿಯೂ ಇದ್ದುದು ನಿಜವಾದರೂ ಹಲವಾರು ತೋಟಗಳಿಗೆ ನಮ್ಮರೇ (ಅಂದರೆ ಮೇಲ್ವರ್ಗದವರು ಸುಶೀಕ್ಷಿತರು ಮತ್ತು ವಿದ್ಯಾವಂತರೆನ್ನಿಸಿಕೊಂಡು ಬ್ರಿಟಿಷರ ಆಡಳಿತಕ್ಕೆ ಸಹಕಾರಿಯಾದ ನಮ್ಮವರು) ಮಾಲಿಕರಾದರು. ಹೀಗೆ ಪರಿವರ್ತಿತಗೊಂಡು ಕೊಪ್ತಗಳಾದರು ತೋಟಗಳಲ್ಲಿ ದುಡಿಯುತ್ತಿದ್ದ ಅಮಾಯಕರಾದ ಗಿರಿಜನರು ಮಾತ್ರ ತೊತ್ತುಗಳಾದರು ಹೀಗಾಗಿ ಭೂಮಿಯ ಸ್ವಾಧೀನವನ್ನು ಕೆಲವೇ ಕೆಲವರಿಗೆ ಒಪ್ಪಿಸುವ ಮೂಲಕ ಅದೇ ನೆಲದ ಮೂಲನಿವಾಸಿಗಳನ್ನು ಅತಂತ್ರರನ್ನಾಗಿಸುವ ತಂತ್ರ ಬ್ರಿಟೀಷರ ಕಾಲದಲ್ಲಿ ನಡೆಯಿತು. ಈ ತಂತ್ರ ಅವರಿಗೆ ಎರಡು ರೀತಿಯ ಪ್ರಯೋಜನಕ್ಕೆ ಬಂತು. ಹೀಗೆ ಕೆಲವರನ್ನೇ ಭೂ ಒಡೆಯರನ್ನಾಗಿ ಮಾಡುವ ಮೂಲಕ ಅವರನ್ನು ತಮ್ಮ ಹಿಡಿತದಲ್ಲಿಟ್ಟಕೊಂಡು ಕಾಡಿನ ಸ್ವಾಮ್ಯವನ್ನು ತಾವೇ ಹೊಂದುವುದು ಮೊದಲನೆಯ ಉದ್ದೇಶವಾದರೆ, ಆ ಮೂಲಕ ಭೂಮಿಯಿಂದ ಬೇರ್ಪಡಿಸಿ, ಕೂಲಿಯಾಳುಗಳನ್ನಾಗಿ ಪರಿವರ್ತಿಸಿದ ಗಿರಿಜನರು ಮತಾಂತರಕ್ಕೆ ಒಪ್ಪಿಸಿ, ಒಪ್ಪಿದವರಿಗೆ ಭೂಮಿ ನೀಡುತ್ತೇವೆ ಎಂಬ ಭರವನೆ ನೀಡಿ ಅವರಲ್ಲಿ ಭ್ರಮೆಯನ್ನು ತುಂಬುವ ಕೆಲಸವೂ ನಡೆಯಿತು.

ಅಭಿವೃದ್ಧಿ ಎಂದರೆ ಬಹುದೊಡ್ಡ ಕಾರ್ಖಾನೆಗಳ ಸ್ಥಾಪನೆ, ಬೃಹತ್‌ ಅಣೆಕಟ್ಟುಗಳ ನಿರ್ಮಾಣ, ಬಂದರು ಮತ್ತು ಗಣಿಗಳ ಏಳಿಗೆ ಎಂದೇ ಭಾವಿಸಿರುವ ನಾವು ಅಮೇರಿಕಾ, ಜಪಾನ್‌ ಮುಂತಾದ ದೇಶಗಳನ್ನು ನೋಡಿ ಅನುಕರಿಸುವ ಸಾಹಸಕ್ಕೆ ಕೈಹಾಕುತ್ತಿದ್ದೇವೆ. ನಮ್ಮ ದೇಶದಲ್ಲಿ ಆದಿಯಿಂದಲೂ ಇದ್ದ ಕೆರೆಕುಂಟೆಗಳ ತಂತ್ರಜ್ಞಾನವಾಗಲೀ, ಗುಡಿಕೈಗಾರಿಕೆಗಳಾಗಲೀ ಈಗ ನಮಗೆ ಮೋಹಕವಲ್ಲ. ಅಣೆಕಟ್ಟೆ ಇಲ್ಲದೆಯೇ ನದಿಯಿಂದ ನೀರು ತರುತ್ತಿದ್ದ ವಿಜಯನಗರ ರಾಯಕಾಲುವೆಗಳು ನಮ್ಮ ನೆನಪಿನಲ್ಲೂ ಇಲ್ಲ; ಏಕಾಏಕಿ ಸಾವಿರಾರು ಟಿ. ಎಂ. ಸಿ. ನೀರು ಸಂಗ್ರವಾಗಬೇಕು. ಅದರ ಹಿಂದೆ ಸುಂದರ ಉದ್ಯಾನಗಳು ತಲೆ ಎತ್ತಬೇಕು. ಅವು ಪ್ರವಾಸಿತಾಣಗಳಾಗಿ ಅಭಿವೃದ್ಧಿ ಹೊಂದಬೇಕು ಇತ್ಯಾದಿ ಅನೇಕ ಮೋಹಕ ಯೋಜನೆಗಳು ನಮ್ಮ ತಲೆಯಲ್ಲಿ ಬರುತ್ತವೆಯೇ ಹೊರತು ಅಣೆಕಟ್ಟೆ ನಿರ್ಮಾಣದಿಂದ ನಲುಗುವ ಜೀವಗಳ ಗತಿಯೇನು ಹಾಗೂ ಆ ಮೂಲಕ ಆಗುವ ಪರಿಸರ ಅಸಮತೋಲನದ ಪರಿಣಾಮಗಳೇನು ಎಂಬ ಬಗ್ಗೆ ತಲೆ ಕೆಡಿಸಿಕೊಳ್ಳುವುದೇ ಇಲ್ಲ. ಈ ಸಂದರ್ಭದಲ್ಲಿ ದೇಶದಲ್ಲಿಯೇ ವಿವಾದ ಹುಟ್ಟಿ ಹಾಕಿರುವ ‘ನರ್ಮದಾ ಯೋಜನೆ’ ಯ ನೆನಪು ಬರುತ್ತಿದೆ. ಆದರೆ ಅದಕ್ಕಿಂತ ನಮಗೆ ಮುಖ್ಯವಾಗುವುದು ನಮ್ಮ ಕರ್ನಾಟಕದಲ್ಲಿ ಇದೇ ರೀತಿ ಆಗಿರುವ ಮತ್ತು ಆಗುತ್ತಿರುವ ದೃಷ್ಟಾಂತಗಳು. ಅಣೆಕಟ್ಟು ನಮಗೆ ವಿದ್ಯುತ್‌ ಒದಗಿಸುತ್ತಿದೆ ಎಂಬ ಮಾತನ್ನು ಅಲ್ಲಗಳೆಯುವಂತಿಲ್ಲ. ಆದರೆ ಆ ಅಣೆಕಟ್ಟು ಎಷ್ಟೊಂದು ಬೃಹತ್‌ ಅರಣ್ಯವನ್ನು ಭಕ್ಷಿಸಿತು ಹಾಗೂ ಎಷ್ಟೆಲ್ಲ ಜೀವ ಚರಗಳನ್ನು ಬಲಿ ತೆಗೆದುಕೊಂಡಿತು ಮತ್ತು ಆ ಮೂಲಕ ಪಶ್ಚಿಮಘಟ್ಟದ ಏನೆಲ್ಲ ವೈಶಿಷ್ಟ್ಯಗಳು ಏಕಾಏಕಿ ನಾಶವಾದವು ಎಂಬುದನ್ನು ಯೋಚಿಸಿಲ್ಲ ಅಲ್ಲದೆ ಆ ಬೃಹದಾರಣ್ಯದಲ್ಲಿ ನೆಲೆಯೂರಿಕೊಂಡಿದ್ದ ಹಲಸರು, ಕುಣಬಿಯರು ಮುಂತಾದ ಜನಾಂಗಗಳು ಯಾವ ರೀತಿಯಲ್ಲಿ ಇಟ್ಟಾಡಿ ಹೋದವು ಎಂಬುದನ್ನು ಯೋಚಿಸಲೇ ಇಲ್ಲ. ಅಂದು ನೆಲೆ ಕಳೆದುಕೊಂಡ ಬುಡಕಟ್ಟುಗಳು ಇಂದಿಗೂ ಅದೇ ರೀತಿಯ ಡೋಲಾಯಮಾನದಲ್ಲಿಯೇ ಬುದುಕುತ್ತಿರುವುದನ್ನು ಕಂಡಾಗ ದುಃಖವಾಗುತ್ತಿವೆ. ನಾಗರಿಕ ಜಗತ್ತಿಗೆ ಬೆಳಕು ಹರಿಸಲು, ಪಟ್ಟಣಗಳ ಕಾರ್ಖಾನೆಗಳನ್ನು ನಡೆಸಲು ಒಟ್ಟಾರೆ ಯಂತ್ರ ಜಗತ್ತು ಮುಂದುವರಿಯಲು ಇಷ್ಟೆಲ್ಲ ಮಾಡಿದ ಸ್ವತಂತ್ರ ಭಾರತದ ನಾವು ಅದಕ್ಕಾಗಿ ತ್ಯಾಗ ಮಾಡಿದ ಬುಡಕಟ್ಟುಗಳಿಗೆ ಏನು ಮಾಡಿದೆವು? ಎಂದು ಒಮ್ಮೆಯೂ ಪ್ರಶ್ನಿಸಿಕೊಳ್ಳಲಿಲ್ಲ.

ಇದೇ ರೀತಿ ನಿರ್ಮಾಣ ಮಾಡಲಾಗಿರುವ ಕಾಳಿ ಯೋಜನೆಯ ಪ್ರದೇಶದಲ್ಲಿ ವಾಸವಿರುವ ಗೌಳಿಗರು, ಸಿದ್ದಿಯರು, ಕುಣಬಿಯರು ಇದಕ್ಕಿಂತ ಭಿನ್ನ ಪರಿಸ್ಥಿತಿಯಲ್ಲೇನೂ ಇಲ್ಲ. ಶರಾವತಿ ಟೇಲರೇಸ್‌, ಬೇಡ್ತಿ, ಚಕ್ರಾ ಮುಂತಾದ ಕಡೆಗಳಲ್ಲೂ ಇದೇ ಪರಿಸ್ಥಿತಿ ಇದೆ.