‘ಕುಣಬಿ’ ಸಮುದಾಯ ಸಹ್ಯಾದ್ರಿಯ ವಿವಿಧ ಭಾಗಗಳಲ್ಲಿ ನೆಲೆನಿಂತಿದೆಯಾದರೂ ಸಾಂದ್ರವಾಗಿ ಬದುಕುತ್ತಿರುವುದು ಉತ್ತರ ಕನ್ನಡದಲ್ಲಿ. ಅದರಲ್ಲಿಯೂ ಜೋಯಿಡಾ ತಾಲ್ಲೂಕಿನಲ್ಲಿ. ಈ ಹಿನ್ನೆಲೆಯಲ್ಲಿ ಉತ್ತರಕನ್ನಡ ಜಿಲ್ಲೆಯ ಪರಿಸ್ಥಿತಿ ಬಗೆಗೆ ಒಂದು ಟಿಪ್ಪಣಿ ನೀಡುವುದು ಸೂಕ್ತ ಎಂದು ನಾನು ಭಾವಿಸಿದ್ದೇನೆ.

ಉತ್ತರ ಕನ್ನಡದ ಭೌಗೋಳಿಕ ಹಾಗೂ ನೈಸರ್ಗಿಕ ಸಂಪತ್ತಿನ ವಿವರಗಳನ್ನು ‘ಕರ್ನಾಟಕ ಪರಿಸರ ಪರಿಸ್ಥಿತಿ ಅಧ್ಯಯನ ವರದಿ’ (೧೯೮೫ – ೮೬) ಯಲ್ಲಿ ಈ ರೀತಿಯಾಗಿ ನೀಡಲಾಗಿದೆ.

ಕರ್ನಾಟಕದ ಉತ್ತರ ತುತ್ತತುದಿಯ ಕರಾವಳಿ ಜಿಲ್ಲೆಯಾದ ಉತ್ತರ ಕನ್ನಡ, ಗೋವಾದ ದಕ್ಷಿಣಕ್ಕೆ, ಧಾರವಾಡದ ಪೂರ್ವಕ್ಕೆ ಹಾಗೂ ದಕ್ಷಿಣ ಕನ್ನಡದ ಉತ್ತರಕ್ಕೆ, ಉತ್ತರ ಆಕ್ಷಾಂಶ ೧೩ ‘೫೫’ ಮತ್ತು ೧೫೩೧’ ಹಾಗೂ ಪೂರ್ವರೇಖಾಂಶ ೭೪೦೯ ಮತ್ತು ೭೫೦೦ ನಡುವೆ ಇದೆ (ಕರ್ನಾಟಕ ರಾಜ್ಯ ಗ್ಯಾಸೆಟೆಯರ್, ೧೯೮೩), ನವಿರಾಗಿ ಏರಿಳಿಯುವ ಈ ಪ್ರಾಂತದ ಗುಡ್ಡಗಳು ಪೂರ್ವಕ್ಕೆ ೫೦೦ ಮೀಟರ್ ಎತ್ತರದ  ದಕ್ಷಿಣ ಪ್ರಸ್ಥಭೂಮಿಯೊಂದಿಗೆ ವಿಲೀನವಾಗುತ್ತವೆ. ಗುಡ್ಡಗಾಡುಗಳ ಶೃಂಗಭಾಗ ೬೦೦ ಮೀಟರ್ ಗಿಂತ ಎತ್ತರಕ್ಕೇರುತ್ತವೆ. ಗುಡ್ಡಗಳು ಸಮುದ್ರದವರೆಗೂ ಚಾಚಿಕೊಂಡಿದ್ದು, ಕರಾವಳಿಯ ಬಳಿ ಚಿಕ್ಕ ಪಟ್ಟಿಯೊಂದಕ್ಕೆ ಮಾತ್ರ ಅವಕಾಶವಿತ್ತಿವೆ. ಒಟ್ಟು ೧೧ ತಾಲ್ಲೂಕುಗಳು ಹಾಗೂ ೧೩,೦೩೮ ಹಳ್ಳಿಗಳಿರುವ ಈ ಜಿಲ್ಲೆಯ ವಿಸ್ತೀರ್ಣ ೧೦,೨೨೦ ಚದರ ಕಿಲೋಮೀಟರ್ ಗಳಷ್ಟಿದೆ. ಭೌಗೋಳಿಕವಾಗಿ ಈ ಜಿಲ್ಲೆಗೆ ಮೂರು ವಲಯಗಳಿವೆ: ಕಾರವಾರ, ಅಂಕೋಲಾ, ಕುಮುಟಾ, ಹೊನ್ನಾವರ ಮತ್ತು ಭಟ್ಕಳ ತಾಲ್ಲೂಕುಗಳ ಕರಾವಳಿ ವಲಯ ಸೂಪಾ, ಯಲ್ಲಾಪುರ, ಶಿರಸಿ ಹಾಗೂ ಸಿದ್ದಾಪುರ ತಾಲ್ಲೂಕುಗಳ ಶೃಂಗವಲಯ ಹಾಗೂ ಹಳಿಯಾಳ ಮತ್ತು ಮುಂಡಗೋಡು ತಾಲ್ಲೂಕುಗಳ ಮೈದಾನ ವಲಯ.

೩೩೦೦ ಚದರ ಕಿಲೋಮೀಟರ್ ವಿಸ್ತೀರ್ಣದ ಕರಾವಳಿ ಪಟ್ಟಿಯಲ್ಲಿ ವರ್ಷಕ್ಕೆ ೩೫೦ ಸೆಂಟಿಮೀಟರ್ ಮಳೆ ಬೀಳುತ್ತದೆ. ಈ ಪಟ್ಟಿಯ ಶೇ. ೭೬ ರಷ್ಟು ಭೂಭಾಗ ಅರಣ್ಯ ಇಲಾಖೆಯ ವಶದಲ್ಲಿದೆ. ಶೇ. ೨.೮೪ ರಷ್ಟು ನೀರಾವರಿ ಕ್ಷೇತ್ರವಿರುವ ಇಲ್ಲಿ ಶೇ. ೧೨.೩ ರಷ್ಟು ಭೂಮಿಯನ್ನು ಸಾಗುವಳಿ ಮಾಡಲಾಗುತ್ತದೆ. ಭತ್ತ, ತೆಂಗು ಮತ್ತು ಶೇಂಗಾ ಇಲ್ಲಿಯ ಮುಖ್ಯ ಬೆಳೆಯಾಗಿದ್ದು ಇಲ್ಲಿ ೧.೮ ಲಕ್ಷ ದನಕರುಗಳೇ ಪ್ರಮುಖ ಸಾಕು ಪ್ರಾಣಿಗಳು. ಮೀನುಗಾರಿಕೆ ಸಮೃದ್ಧವಾಗಿದೆ. ಕಾರವಾರ ಮುಖ್ಯ ಪಟ್ಟಣವಾಗಿರುವ ಈ ಕರಾವಳಿ ಪಟ್ಟಿಯೇ ಜಿಲ್ಲೆಯ ಅತ್ಯಂತ ಹೆಚ್ಚಿನ ಜನಸಾಂದ್ರತೆ (ಪ್ರತಿ ಚದರ ಕಿ.ಮೀ. ಗೆ ೧೭೧) ಇರುವ ಪ್ರದೇಶವಾಗಿದೆ. ಕಾರವಾರದ ಬಳಿ ಒಂದು ಕಾಷ್ಟಿಕ್‌ ಸೋಡಾ ಫ್ಯಾಕ್ಟರಿ ಹಾಗೂ ಕರಾವಳಿ ತೀರದುದ್ದಕ್ಕೂ ಅನೇಕ ಇಟ್ಟಿಗೆ ಮತ್ತು ಹೆಂಚಿನ ಕಾರ್ಖಾನೆಗಳಿವೆ. ಅಲ್ಲಲ್ಲಿ ಸಿಂಪಿ-ಮೀನು-ಶೀಗಡಿಗಳನ್ನು ಡಬ್ಬಿ ತುಂಬುವ ಹಾಗೂ ಶೈತ್ಯ ಶೇಖರಣೆ ಮಾಡುವ ಫ್ಯಾಕ್ಟರಿಗಳೂ ಇವೆ. ಕರಾವಳಿ ಪಟ್ಟಿಯಿಂದ ಸುಶೀಕ್ಷಿತರು ಭಾರೀ ಪ್ರಮಾಣದಲ್ಲಿ ನಗರಗಳಿಗೆ ವಲಸೆ ಹೋಗುತತಿದ್ದು, ವರ್ಷದ ಕೆಲವು ಕಾಲದಲ್ಲಿ ಕೂಲಿಕಾರರು ಘಟ್ಟದ ಮೇಲೆ ರೈತಾಪಿ ಕೆಲಸಕ್ಕೆಂದು ತಾತ್ಕಾಲಿಕವಾಗಿ ವಲಸೆ ಬರುತ್ತಾರೆ.

ಕರ್ನಾಟಕದ ಸುಂದರ ಜಿಲ್ಲೆಗಳಲ್ಲಿ ಒಂದಾದ ಉತ್ತರ ಕನ್ನಡ ಕಡಲು ಮತ್ತು ಕಾಡುಗಳ ಸಂಗಮ ಸ್ಥಾನ. ಅತಿ ಎತ್ತರದ ಬೆಟ್ಟ ಪ್ರದೇಶ, ನಾನಾ ವಿಧವಾದ ಸಸ್ಯಸಂಕುಲ, ಪ್ರಾಣಿಪಕ್ಷಿಗಳು, ಹತ್ತಾರು ನದಿಗಳು ಮುಂತಾಗಿ ಪ್ರಕೃತಿಯ ಎಲ್ಲ ಸೊಬಗನ್ನು ಮೈಗೂಡಿಸಿಕೊಂಡ ವಿಶಿಷ್ಟ ಸ್ಥಾನ ಇದು. ಇಂಥ ಸೊಬಗಿನ ಈ ರಮ್ಯ ತಾಣದಲ್ಲಿ ವಾಸವಾಗಿರುವ ವಿವಿಧ ಜನ ವರ್ಗಗಳ ಸಂಸ್ಕೃತಿ ಸೊಗಡು ಕೂಡ ಅಷ್ಟೇ ವೈಶಿಷ್ಟ್ಯಪೂರ್ಣವಾದುದು.

ಘಟ್ಟದ ಮೇಲಿನ ಶಿರ್ಶಿ, ಯಲ್ಲಾಪುರ, ದಾಂಡೇಲಿ, ಹಳಿಯಾಳ ಮತ್ತು ಖಾನಾಪುರಗಳ ಜೀವನ ವಿಧಾನಕ್ಕೂ ಘಟ್ಟದ ಕೆಳಗಿನ ಸಮುದ್ರದಂಚಿನ ಕಾರವಾರ, ಅಂಕೋಲ, ಕುಮಟಾ, ಗೋಕರ್ಣ, ಹೊನ್ನಾವರಗಳ ಜೀವನ ವಿಧಾನಕ್ಕೂ ಅಷ್ಟೇ ವ್ಯತ್ಯಾಸ. ತುಂಬಿ ಹರಿಯುವ ಕಾಳಿ, ಗಂಗೊಳ್ಳಿ, ಅಘನಾಶಿನಿ, ಬೇಡ್ತಿ, ಶರಾವತಿಯ ಒಂದೊಂದು ದಂಡೆಯೂ ಒಂದೊಂದಕ್ಕೆ ವಿಶೇಷ. ಈ ನದಿಗಳು ಸಂಗಮಿಸುವ ಸಮುದ್ರದ ರೇವುಗಳು ವ್ಯಾಪಾರ ವ್ಯವಹಾರಗಳನ್ನು ಹೊತ್ತು ಮರೆಯುವ ತಾಣಗಳು. ಇಂಥ ವೈವಿಧ್ಯದ ಉತ್ತರ ಕನ್ನಡದಲ್ಲಿ ಅದರ ಪ್ರಕೃತಿಯ ವಿಶೇಷದಂತೆಯೇ ಅದರೊಡಲಿನ ವಿವಿಧ ಜನವರ್ಗಗಳ ಸಂಸ್ಕೃತಿಗಳೂ ಅಷ್ಟೇ ಭಿನ್ನವಾಗಿ ಕಾಣಿಸಿಕೊಳ್ಳುತ್ತವೆ. ಕಾಡನ್ನೇ ಅವಲಂಬಿಸಿದ ಸಿದ್ಧಿಯರು, ಗೌಳಿಗರು, ಕುಡುಬಿಯರು; ಕಾಡು ಮತ್ತು ನಾಡಿನ ಸಂಬಂಧ ಇಟ್ಟುಕೊಂಡು ತೋಡ ತುಡಿಕೆಗಳಿಗೆ ಒಲಿದು ಹವ್ಯಕರು, ಹಸಲರು; ಕಾಡಿನ ನಡುವೆ ಕೃಷಿಯನ್ನೇ ಆಧಾರ ಮಾಡಿಕೊಂಡ ಗೊಂಡರು. ನದಿದಂಡೆಯ ಫಲವತ್ತು ನೆಲ ಹಿಡಿದು ಮಣ್ಣಿನ ಮಕ್ಕಳಾದ ನಾಡವರು, ನಾಮಧಾರಿಗಳು; ಭೂಮಿಯ ಅಭಾವದಿಂದಾಗಿ ಅತ್ತ ಸಂಪೂರ್ಣ ಕೃಷಿಯೂ ಅಲ್ಲದೆ, ಇತ್ತ ಕಾಡಿನ ಉತ್ಪನ್ನವೂ ಇಲ್ಲದೆ ಕಾಡು ಮತ್ತು ನಾಡಿನ ನಡುವೆ ಇನ್ನೂ ಹೋರಾಟದ ಬದುಕು ನಡೆಸುತ್ತಿರುವ ಬಹುಸಂಖ್ಯಾತರಾದ ಹಾಲಕ್ಕಿ ಒಕ್ಕಲಿಗರು; ಮಣ್ಣು ಮತ್ತು ಹೊನ್ನಿನ ಭಾಗ್ಯವೇ ಇಲ್ಲದ ಮುಕ್ರಿಯರು ಈ ಜಿಲ್ಲೆಯ ಮುಖ್ಯ ಜನವರ್ಗಗಳು. ಇವರಲ್ಲದೆ ಗಾಮೊಕ್ಕಲಿಗರು, ಕೊಟ್ಟೆ ಒಕ್ಕಲಿಗರು, ಕರೆ ಒಕ್ಕಲಿಗರು, ಕೊಮಾರಪಂತರು, ಗುಡಿಗಾರರು, ಗಾಣಿಗರು, ಸಾರಸ್ವತರು, ನವಾಯತರು ಮುಂತಾದ ಅನೇಕ ಜನವರ್ಗಗಳು ಈ ಜಿಲ್ಲೆಯಲ್ಲಿವೆ. ಸಮುದ್ರವನ್ನೇ ನಂಬಿ ಬದುಕುವ ಬೆಸ್ತರ ವಿವಿಧ ಪಂಗಡಗಳ ಜನರೂ ಬಹುಸಂಖ್ಯೆಯಲ್ಲಿದ್ದಾರೆ.

ಘಟ್ಟದ ಮೇಲಿನ ತಾಲ್ಲೂಕುಗಳ ಒಟ್ಟೂ ವಿಸ್ತೀರ್ಣ ೫೪೦೦ ಚದರ ಕಿ. ಮೀ. ಗಳಷ್ಟಿದ್ದು, ಇಲ್ಲಿ ವರ್ಷಕ್ಕೆ ೨೦೦ ರಿಂದ ೫೦೦ ಸೆಂ. ಮೀ. ಮಳೆ ಬೀಳುತ್ತದೆ. ಈ ಭಾಗದ ಜನ ಸಾಂದ್ರತೆ ಪ್ರತಿ ಕಿ. ಮೀ. ಗೆ ೬೩ರಷ್ಟಿದೆ. ಇಲ್ಲಿ ಕಾನೂನು ಪ್ರಕಾರ ಶೇ. ೮೬ರಷ್ಟು ಭೂಭಾಗ ಅರಣ್ಯ ಇಲಾಖೆಯ ವಶದಲ್ಲಿದೆ. ಶೇ. ೭೨ ರಷ್ಟು ಪ್ರದೇಶದಲ್ಲಿ ಸಾಗುವಳಿಯಾಗಿದ್ದು ಇಲ್ಲಿ ಕೇವಲ ೦.೯೩ ರಷ್ಟು ಪ್ರದೇಶಕ್ಕೆ ನೀರಾವರಿ ವ್ಯವಸ್ತೆಯಿದೆ. ಭತ್ತ, ಅಡಿಕೆ ಮತ್ತು ಬಾಳೆ ಇಲ್ಲಿಯ ಪ್ರಮುಖ ಬೆಳೆಯಾಗಿದ್ದು, ಜಾನುವಾರುಗಳ ಸಂಖ್ಯೆ ೨.೩೪ ಲಕ್ಷದಷ್ಟಿದೆ. ಇಲ್ಲಿ ಅನೇಕ ಮ್ಯಾಂಗನೀಸ್‌ ಗಣಿಗಳೂ ಇವೆ. ಪೇಪರ್, ಪ್ಲೈವುಡ್‌ ಹಾಗೂ ಫೆರೋಮ್ಯಾಂಗನೀಸ್‌ ಉದ್ದಿಮೆಗಳಿರುವ ದಾಂಡೇಲಿ ಇಲ್ಲಿನ ಪ್ರಮುಖ ಕೈಗಾರಿಕಾ ಪಟ್ಟಣ. ದಾಂಡೇಲಿಯ ಬಹುಪಾಲು ಕಾರ್ಮಿಕ ಜನಸ್ತೋಮ ಹೊರಗಿನಿಂದಲೇ ಬಂದವರಾಗಿದ್ದಾರೆ ಈ ಭಾಗದಲ್ಲಿ ಬುಟ್ಟಿ ಹೆಣೆಯುವವರೂ ಗಣನೀಯ ಸಂಖ್ಯೆಯಲ್ಲಿ ಇದ್ದಾರೆ.

ದಕ್ಷಿಣದ ಪ್ರಸ್ಥಭೂಮಿಯೊಂದಿಗೆ ವಿಲೀನವಾದ ಹಳಿಯಾಳ ಮತ್ತು ಮುಂಡಗೋಡ ತಾಲ್ಲೂಕುಗಳಲ್ಲಿ ವರ್ಷಕ್ಕೆ ೧೨೦ ಸೆಂಟಿಮೀಟರ್ ಮಳೆಯಾಗುತ್ತದೆ. ೧೫೦೦ ಚದರ ಕಿಲೋಮೀಟರ್ ವಿಸ್ತೀರ್ಣವಿರುವ ಈ ಪ್ರದೇಶದ ಶೇ. ೭೦ರಷ್ಟು ಭಾಗ ಅರಣ್ಯ ಇಲಾಖೆಯ ನಿಯಂತ್ರಣದಲ್ಲಿದೆ. ಶೇ. ೧೯ರಷ್ಟು ಭೂಮಿಯಲ್ಲಿ ಸಾಗುವಳಿ ಮಾಡಲಾಗಿದ್ದು ಒಟ್ಟೂ ಶೇ. ೪ ರಷ್ಟು ಕ್ಷೇತ್ರಕ್ಕೆ ನೀರಾವರಿ ವ್ಯವಸ್ಥೆಯಿದೆ. ಭತ್ತ, ಬೇಳೆಕಾಳು. ಕಬ್ಬು ಮತ್ತು ಜೋಳ ಇಲ್ಲಿಯ ಪ್ರಮುಖ ಬೆಳೆಗಳು. ಸುಮಾರು ೯೫ ಸಾವಿರ ಸಾಕುಪ್ರಾಣಿಗಳಲ್ಲಿ ದನಕರುಗಳೇ ಮುಖ್ಯವಾಗಿವೆ. ಯಾವ ಪ್ರಮುಖ ಉದ್ದಿಮೆಗಳಾಗಲೀ ಪಟ್ಟಣಗಳಾಗಲೀ ಇಲ್ಲದ ಈ ತಾಲ್ಲೂಕುಗಳ ಜನ ಸಾಂದ್ರತೆ ಪ್ರತಿ ಕಿಲೋಮೀಟರ್ಗೆ ೧೦೭ ರಷ್ಟಿದೆ.

ಉತ್ತರ ಕನ್ನಡವನ್ನು ಅರಣ್ಯ ಜಿಲ್ಲೆಯೆಂದು ಪರಿಗಣಿಸಲಾಗಿದೆ. ಒಟ್ಟೂ ೧೦,೩೦೦ ಚದರ ಕಿಲೋಮೀಟರ್ನ ಈ ಭೂಪ್ರದೇಶದ ೮,೩೦೦ ಚ.ಕಿ.ಮೀ. ಭಾಗ ಒಂದು ಕಾಲದಲ್ಲಿ (ಈಗಲೂ ಕಾನೂನಿನ ಪ್ರಕಾರ) ಅರಣ್ಯ ಇಲಾಖೆಯ ನಿಯಂತ್ರಣದಲ್ಲಿತ್ತು. ಆದರೆ ಈಗ ಇದರಲ್ಲಿ ಜಲವಿದ್ಯುತ್‌ ಯೋಜನೆಗೆ, ವಿದ್ಯುತ್‌ ಸಾಗಣೆ ಮಾರ್ಗಕ್ಕೆ ಗಣಿ ಕೆಲಸಕ್ಕೆ, ನಗರ ನಿರ್ಮಾಣಕ್ಕೆ, ಇಲ್ಲಿಯದೇ ಯೋಜನೆಗಳಿಂದ ಮತ್ತು ಟಿಬೇಟಿನಿಂದ ಬಂದ ನಿರಾಶ್ರಿತರ ಪುನರ್ವಸತಿಗೆ ಹಾಗೂ ಅತಿಕ್ರಮ ಬೇಸಾಯವನ್ನು ಕಾನೂನುಬದ್ಧಗೊಳಿಸಲಿಕ್ಕೆಂದು ಇದರಲ್ಲಿ ೧೦೫೦ ಚದರ ಕಿಲೋಮೀಟರ್ ಗಳಷ್ಟು ವಿಶಾಲ ಪ್ರದೇಶವನ್ನು ಬಿಡುಗಡೆ ಮಾಡಲಾಗಿದೆ. ಅರಣ್ಯ ಇಲಾಖೆಯ ವಶದಲ್ಲಿ ಈಗಲೂ ಉಳಿದಿರುವ ೭ ಸಾವಿರ ಚ.ಕಿ.ಮೀ. ಪ್ರದೇಶದಲ್ಲಿ ೫ ಸಾವಿರ ಚ.ಕಿ.ಮೀ ಸಂರಕ್ಷಿತ ಅರಣ್ಯ, ೧.೫ ಸಾವಿರ ಚ.ಕಿ.ಮೀ ಕಿರು ಅರಣ್ಯ ಹಾಗೂ ೫ ಸಾವಿರ ಪ್ರದೇಶ ಸೊಪ್ಪಿನ ಬೆಟ್ಟ, ಈ ಅರಣ್ಯದ ಇಂದಿನ ಗತಿಸ್ಥಿತಿಯ ಬಗ್ಗೆ ಅರಣ್ಯ ಇಲಾಖೆ ಉತ್ತಮ ವರದಿಯೊಂದನ್ನು ಸಿದ್ಧಪಡಿಸಿದೆ (ರೆಡ್ಡಿ ಮತ್ತಿತರರು ೧೯೮೬). ಈ ವರದಿಯ ಪ್ರಕಾರ ಸಂರಕ್ಷಿತ ಅರಣ್ಯದ ಸುಮಾರು ಶೇ. ೨೦ ಭಾಗ ದುಸ್ಥಿತಿಯಲ್ಲಿದ್ದು, ಜನವಸತಿಯ ಸಮೀಪದಲ್ಲಿರುವ ಶೇ. ೪೦ ಭಾಗ ದುಸ್ಥಿತಿಯಲ್ಲಿದ್ದು, ಜನವಸ್ತಿಯ ಸಮೀಪದಲ್ಲಿರುವ ಶೇ. ೪೦ ಭಾಗ ಸರಿಸುಮಾರಾಗಿ ಉತ್ತಮ ಸ್ಥಿತಿಯಲ್ಲಿ ಹಾಗೂ ಜನವಸತಿಯಿಂದ ದೂರವಾಗಿ ತೀವ್ರ ಇಳಿಜಾರಿನಲ್ಲಿರುವ ಶೇ. ೪೦ ಭಾಗ ಉತ್ತಮ ಸ್ಥಿತಿಯಲ್ಲಿ ಕಿರು ಅರಣ್ಯ ಹಾಗೂ ಸೊಪ್ಪಿನಬೆಟ್ಟಗಳ ಶೇ. ೭೦ರಷ್ಟು ಭಾಗ ಜೀರ್ಣಾವಸ್ಥೆಯಲ್ಲಿದ್ದು, ಇನ್ನುಳಿದ ಶೇ. ೩೦ ಭಾಗ ಮಾತ್ರ ಸುಮಾರಾಗಿ ಉತ್ತಮ ಸ್ಥಿತಿಯಲ್ಲಿದೆ.

ರಾಷ್ಟ್ರೀಯ ದೂರ ಸಂವೇದಿ ನಿಗಮ (೧೯೮೩, ೧೯೮೫) ಹಾಗೂ ದಿ. ಫ್ರೆಂಚ್‌ ಇನ್‌ಸ್ಟಿಟ್ಯೂಟ್‌ (ಬೆಲ್ಲನ್‌, ೧೯೮೫) ಇವರು ವಿಶ್ಲೇಷಿಸಿರುವ ದೂರ ಸಂವೇದಿ ಚಿತ್ರಣಗಳಲ್ಲಿ ಉತ್ತರ ಕನ್ನಡ ಜಿಲ್ಲೆ ಹೇಗೆ ಕಾಣುತ್ತದೆಂಬುದನ್ನು ನಾವು ಅಭ್ಯಾಸಿಸಿದ್ದೇವೆ. ಈ ವಿಶ್ಲೇಷಣೆಯ ಪ್ರಕಾರ ಒಟ್ಟೂ ೭,೧೦೦ ಚ. ಕಿ. ಮೀ ಪ್ರದೇಶದಲ್ಲಿ ದುಸ್ಥಿತಿಯ ವಿವಿಧ ಅವಸ್ಥೆಗಳಲ್ಲಿರುವ ಅರಣ್ಯ ಹಾಗೂ ಅಡಿಕೆ-ತೆಂಗುಗಳಂಥ ತೋಟದ ಬೆಳೆಗಳಿವೆ. ಇದರಲ್ಲಿ ತೋಟದ ಬೆಳೆಗಳ ೧೩೦ ಚ. ಕಿ. ಮೀ. ಪ್ರದೇಶ ಈಗಲೂ ಅರಣ್ಯ ಇಲಾಖೆಗೆ ಒಳಪಟ್ಟಿದ್ದಾಗಿದೆ. ಇದರ ಬಹಳಷ್ಟು ಭಾಗ ಕನಿಷ್ಟ ಪಕ್ಷ ಗಿಡ ಗಂಡಿಗಳಿಂದಾದರೂ ಆವೃತ್ತವಾಗಿದೆ. ಇದೇ ದೂರ ಸಂವೇದಿ ಚಿತ್ರಣದಲ್ಲಿ ೨೦೦ ಚ. ಕಿ. ಮೀ. ಕಲ್ಲು ಮಣ್ಣುಗಳ ಖಾಲಿ ಪ್ರದೇಶವಾಗಿದ್ದು, ಇನ್ನುಳಿದ ೧೭೯೦ ಚ. ಕಿ. ಮೀ. ಭಾಗ ಕಂದಾಯ ಇಲಾಖೆಯ ದಾಖಲೆಗಳ ಪ್ರಕಾರ ಬೇಸಾಯ ಯೋಗ್ಯ ಬಂಜರು ಭೂಮಿ ಇಲ್ಲವೇ ನಿರುಪಯೋಗಿ ಪಾಳು ಭೂಮಿಯಾಗಿದೆ.

ಸ್ಕಂದ ಪುರಾಣದ ಸಹ್ಯಾದ್ರಿ ಖಂಡದಲ್ಲಿ ‘ಹೈಗದೇಶ’ ಎಂದು ಹೆಸರಿಲಸಾದ ಉತ್ತರ ಕನ್ನಡ ಜಿಲ್ಲೆ ಈ ಹಿಂದೆ ಬನವಾಸಿ ಕದಂಬರ, ವಿಜಯ ನಗರ ಅರಸರ, ವಿಜಾಪುರ ಸುಲ್ತಾನರ, ಸೋಂದಿ ರಾಜರ ಹಾಗೂ ಟಿಪ್ಪೂ ಸುಲ್ತಾನರೇ ಮುಂತಾದ ಹಲವು ರಾಜವಂಶಗಳ ಆಳ್ವಿಕೆಗೆ ಒಳಪಟ್ಟಿತ್ತು. ಮಧ್ಯಕಾಲೀನ ಚರಿತ್ರೆಯಲ್ಲಿ ಈ ಪ್ರಾಂತವು ಕಾಳು ಮೆಣಸಿನ ಬೆಳೆಗೆ ಅದೆಷ್ಟು ಪ್ರಖ್ಯಾತವಾಗಿತ್ತೆಂದರೆ ಡಚ್ಚರೂ, ಬ್ರಿಟೀಷರೂ ಮೆಣಸು ಖರೀದೆಗೆ ಕಾರವಾರಕ್ಕೆ ಬಂದರು ಮೂಲಕ ಬಂದಿಳಿದು ಕೋಟೆ ಕೊತ್ತಲ ನಿರ್ಮಿಸಿದರು. ಅವರ ವರ್ಣನೆಯ ಪ್ರಕಾರ ಇದೊಂದು ಗೊಂಡಾರಣ್ಯಗಳ ಪ್ರದೇಶವಾಗಿತ್ತು. ಮರಾಠಾ ದೊರೆಗಳು ದಾಳಿಯ ಕಾಲದಲ್ಲಿ ಬೆಟ್ಟದ ತಪ್ಪಲು ಪ್ರದೇಶದ ಅರಣ್ಯಗಳನ್ನು ಕಡಿದು ಸುಟ್ಟಿರಬಹುದಾದರೂ, ಕರಾವಳಿಯ ಬಯಲು ಪ್ರದೇಶವೊಂದನ್ನು ಬಿಟ್ಟರೆ ಉಳಿದೆಲ್ಲವೂ ದಟ್ಟ ಅರಣ್ಯಗಳಿಂದ ಆವೃತ್ತವಾಗಿತ್ತೆಂಬುದು ಪರಕೀಯರ ದಾಖಲೆಗಳಿಂದ ತಿಳಿದು ಬರುತ್ತದೆ. ಆಗಿನ ಕಾಲದಲ್ಲಿ ಜನಸಂಖ್ಯೆ ಕಡಿಮೆ ಇತ್ತಾದ್ದರಿಂದ ಸಂಪನ್ಮೂಲಗಳ ಬೇಡಿಕೆಯೂ ಕಡಿಮೆಯೇ ಇದ್ದು, ಅವೆಲ್ಲ ನಶಿಸಿಹೋಗುವ ಭೀತಿಯಿರಲಿಲ್ಲ. ಹೀಗಿದ್ದರೂ ಅಂದಿನ ಸಮಾಜದಲ್ಲಿ ಪವಿತ್ರ ವನ ನಿರ್ಮಾಣವೇ ಮುಂತಾದ ನಿಸರ್ಗ ಸಂರಕ್ಷಣೆಯ ಕ್ರಮ ಜಾರಿಯಲ್ಲಿತ್ತು. ೧೮೦೨ ರಲ್ಲಿ ಈ ಜಿಲ್ಲೆಗುಂಟ ಸಂಚರಿಸಿದ ಬ್ರಿಟಿಷ್‌ ಪ್ರವಾಸಿ ಫ್ರಾನ್ಸಿಸ್‌ ಬುಕಾನನ್‌ ಬರೆದ ಟಿಪ್ಪಣಿಗಳಲ್ಲಿ ಇಲ್ಲಿನ ಪವಿತ್ರ ವನಗಳ ರಕ್ಷಣೆಗೆ ಬಿಗಿಯಾದ ಕ್ರಮ ಕೈಗೊಳ್ಳಲಾದ ಧಾಖಲೆಯಿದೆ (ಬುಕಾನನ್‌, ೧೮೭೦). ಅದರ ಮುಂದಿನ ವಾಕ್ಯದಲ್ಲೇ ಆತ ಹೇಳುವುದೇನೆಂದರೆ, ಇಂಥ ಸಾಂಪ್ರದಾಯಿಕ ನಿಯಮಗಳೆಲ್ಲ ತಮ್ಮ ಹಕ್ಕಿನ ಆಸ್ತಿಗಳನ್ನು ಪಡೆಯದಂತೆ ಬ್ರಿಟೀಷರನ್ನು ದೂರವಿಡುವ ತಂತ್ರವೇ ಆಗಿತ್ತು!

ಬ್ರಿಟಿಷರಿಗೆ ನಿಜಕ್ಕೂ ಇಲ್ಲಿನ ಸಮೃದ್ಧ ಸಂಪನ್ನೂಲಗಳನ್ನು ಬಿಟ್ಟರೆ ಬೇರೇನೂ ಆಸಕ್ತಿ ಇರಲಿಲ್ಲ. ಅಪಾರ ಸಂಪನ್ಮೂಲಗಳನ್ನು ಬೇಡುವ ತಮ್ಮ ಅರ್ಥ ವ್ಯವಸ್ಥೆಯ ಹೊಟ್ಟೆ ಭರ್ತಿ ಮಾಡಲು ಉತ್ತರ ಕನ್ನಡ ಜಿಲ್ಲೆ ಆಧರ್ಶಪ್ರಯಾಯವಾಗಿ ಕಂಡಿರಬೇಕು ಈ ಹಿಂದೆ ಸಾರ್ವಜನಿಕರದೆಂದು ಪ್ರತ್ಯೇಕವಾಗಿಟ್ಟಿದ್ದ ಅರಣ್ಯ ಆಸ್ತಿಯನ್ನೆಲ್ಲ ಅವರು ತಮ್ಮದೆಂದು ಘೊಷಿಸಿಕೊಂಡರು. ನಂತರ ತ್ವರಿತವಾಗಿ ೧೮೬೦ರ ವೇಳೆಗೆ ಅಲ್ಲಿನ ಬೆಲೆಬಾಳುವ ದಿಮ್ಮಿ ಹೆಮ್ಮರಗಳೆಲ್ಲ ಕಣ್ಮರೆಯಾದವು. ಉತ್ತರ ಕನ್ನಡದ ಮೊಟ್ಟ ಮೊದಲ ಬ್ರಿಟಿಷ್‌ ಅರಣ್ಯಾಧಿಕಾರಿ ಕ್ಲೆಗ್‌ ಹಾರ್ನ್‌ (೧೮೮೧), ಇಲ್ಲಿನ ನೈಸರ್ಗಿಕ ಸಾಗವಾನಿ ಮರಗಳೆಲ್ಲ ೧೮೫೦ರ ವೇಳೆಗಾಗಲೇ ಹೇಗೆ ಬಹುಪಾಲು ನಶಿಸಿ ಹೋದುವೆಂದೂ, ದಕ್ಷಿಣ ಭಾರತದ ವಿವಿಧ ಕಡೆಗಳಲ್ಲಿ ರೈಲು ಮಾರ್ಗಗಳು ನಿರ್ಮಾಣದಿಂದಾಗಿ ಇಲ್ಲಿನ ಅರಣ್ಯಗಳಿಗೆ ಎಂಥ ದುರ್ಗತಿ ಬಂತೆಂದೂ ಬರೆದು ದಾಖಲಿಸಿದ್ದಾನೆ. ಜತೆ ಜತೆಗೇ, ಅಡಿಕೆ ಬೆಳೆಗಾರರು ತಮ್ಮ ತೋಟಕ್ಕೆ ಬೇಕಾದ ಹಸಿರು ಗೊಬ್ಬರಕ್ಕೆಂದು ಸೊಪ್ಪಿನ ಬೆಟ್ಟಗಳನ್ನು ಅದೆಷ್ಟು ಸೊಂಪಾಗಿ ಸಂರಕ್ಷಿಕೊಂಡಿದ್ದಾರೆಂಬುದನ್ನು ಕ್ಲೆಗ್‌ ಹಾರ್ನ್‌ ವಿವರಿಸಿದ್ದಾನೆ. ಆತರ ಅಧಿಕಾರದ ಅವಿಧಿಯಲ್ಲೇ ಬ್ರಿಟೀಷರು ಅರಣ್ಯವನ್ನು ಜೋಪಾನವಾಗಿ ಸಂರಕ್ಷಿಬೇಕಾದ ಅಗತ್ಯವನ್ನು ಮನಗಂಡು, ಮರ ಕಡಿಯುವ ವ್ಯವಸ್ಥಿತ ವಿಧಾನಗಳನ್ನು ಜಾರಿಗೆ ತಂದರು. ಆಗಲೂ ಅರಣ್ಯ ಕಾರ್ಯಾಚರಣೆಯ ಮುಖ್ಯ ಉದ್ದೇಶ ಬ್ರಿಟಿಷರ ನೌಕಾ ನಿರ್ಮಾಣಕ್ಕೆಂದು, ಸೇನಾ ಶಿಬಿರಬಳಿಗೆಂದು ಹಾಗೂ ನಗರ ಕೇಂದ್ರಗಳ ಬೇಡಿಕೆ ಪೂರೈಸಲೆಂದು ಮರಗಳನ್ನು ಅದರಲ್ಲೂ ವಿಶೇಷವಾಗಿ ಸಾಗವಾನಿ ಮರಗಳನ್ನು ಕಡಿದು ಸಾಗಿಸುವುದೇ ಆಯಿತು. ಹಳ್ಳಿಗರು ಸೌದೆ ಮೇವು ಮುಂತಾದ ದಿನನಿತ್ಯದ ಬೇಡಿಕೆಗಳಿಗಾಗಲಿ, ಗ್ರಾಮೀಣ ಕುಶಲ-ಕರ್ಮಿಗಳೂ ಬುಟ್ಟಿ ಹೆಣೆಯುವ ಬಿದಿರು ಬೆತ್ತಗಳಿಗಾಗಲೀ ಅರಣ್ಯ ಪ್ರವೇಶಿಸುವುದನ್ನು ಬ್ರಿಟಿಷರು ಕಾಯಿದೆ ಬಾಹಿರವೆಂದೇ ಪರಿಗಣಿಸಿ, ಮನಸ್ಸಿಲ್ಲದ ಮನಸ್ಸಿನಿಂದ ಪರವಾನಿಗೆ ಕೊಡುತ್ತಿದ್ದರು. ಆಗಲೂ ಅರಣ್ಯ ಸಂಪನ್ಮೂಲ ಹಳ್ಳಿಗರ ಹಕ್ಕೆಂಬುದನ್ನು ಮಾನ್ಯ ಮಾಡುವ ಬಲದಾಗಿ, ಅವರಿಗೆ ಅದು ತಾವು ನೀಡುವ ವೇಶ ಸವಲತ್ತುಗಳೆಂದೇ ಭಾವಿಸಿದ್ದರು (ಸಿಂಗ್‌, ೧೯೮೬). ಅರಣ್ಯದ ಕೆಲವು ಭಾಗ ಕಿರು ಅರಣ್ಯಗಳನ್ನು ಸೊಪ್ಪಿನ ಬೆಟ್ಟಗಳನ್ನೂ ಈ ಉದ್ದೇಶಕ್ಕೆಂದೇ ಪ್ರತ್ಯೇಕವಾಗಿರಿಸಲಾಯಿತು. ಆದರೆ (ಸ್ವಾತಂತ್ರ್ಯಾ ನಂತರ) ಈ ಭೂ ಪ್ರದೇಶವೆಲ್ಲ ಸರಕಾರದ ವಶಕ್ಕೆ ಬಂದುದರಿಂದ ಹಳ್ಳಿಗರು ಅದರ ಬಳಕೆಯನ್ನು ನಿಯಂತ್ರಿಸುವ ಅಧಿಕಾರವನ್ನೆಲ್ಲ ಕಳೆದುಕೊಂಡರು. ದಿನದಿನವೂ ಆರ್ಥಿಕವಾಗಿ ಸೊರಗುತ್ತ ಬಂದ ಅಸಂಘಟಿತ ರೈತರು ಈ ಹಸಿರು ವನದ ಅತಿಬಳಕೆಯಲ್ಲಿ ತೊಡಗಿ, ಅದರ ಬಹುಭಾಗವೆಲ್ಲ ದುಸ್ಥಿತಿಗೆ ಬರಲು ಕಾರಣರಾದರು. (ಕರ್ನಾಟಕ ಪರಿಸರ ಪರಿಸ್ಥಿತಿ ವರದಿ-ಮಾಧವ ಗಾಡ್ಗೀಲ್‌, ಕೆ. ಎಂ. ಹೆಗಡೆ, ಕೆ. ಎ. ಭೋಜಶೆಟ್ಟಿ).

ಉತ್ತರ ಕನ್ನಡದ ಅದೃಷ್ಟವೋ (?) ಎಂಬಂತೆ ಅಭಿವೃದ್ಧಿ ಹೆಸರಿನ ನಾನಾ ಯೋಜನೆಗಳು ಜಿಲ್ಲೆಯಲ್ಲಿ ತಳವೂರಿವೆ. ಕಾಳಿ ಜಲ ವಿದ್ಯುತ್‌ ಯೋಜನೆಯ ವಿವಿಧ ಆಣೆಕಟ್ಟುಗಳು, ಕೈಗಾ ಅಣು ವಿದ್ಯುತ್‌ ಯೋಜನೆ, ಕೊಂಕಣ ರೈಲ್ವೆ ಯೋಜನೆ, ಸೀಬರ್ಡ್‌ ನೌಕಾನೆಲೆ ಯೋಜನೆ, ಇದೀಗ ತದಡಿ ವಿದ್ಯುತ್‌ ಯೋಜನೆ ಇವೆಲ್ಲವೂ ನಿಸರ್ಗ ಸಂಪನ್ನ ಉತ್ತರ ಕನ್ನಡದಲ್ಲಿಯೇ ನೆಲೆಕಂಡುಕೊಂಡಿವೆ. ದೇಶದ ಒಟ್ಟಾರೆ ದೃಷ್ಟಿಯಿಂದ ಇವು ಅತ್ಯಾವಶ್ಯಕ ಯೋಜನೆಗಳು ಅನ್ನುವುದೇನೋ ನಿಜ. ಆದರೆ ಯೋಜನೆಗಳಿಗೆ ತಮ್ಮ ವಾಸಸ್ಥಳಗಳನ್ನೂ, ಕೃಷಿ ಭೂಮಿಯನ್ನು ಜೀವನಾಧಾರವಾದ ಕಾಡನ್ನು ತ್ಯಾಗ ಮಾಡಿದ ಜನರಿಗೆ ಯಾವ ರೀತಿಯಲ್ಲಿ ಬದುಕು ನೀಡಲಾಗಿದೆ ಎಂಬ ವಿಚಾರ ಬಂದಾಗ ಉತ್ತರ ಕನ್ನಡದ ಆಧುನಿಕ ಬದುಕಿನಾಳದ ತಲ್ಲಣಗಳು ಅರ್ಥವಾಗುತ್ತವೆ. ನಿಸರ್ಗದತ್ತವಾಗಿ ಅರಣ್ಯ ತಮ್ಮದು ಎಂದು ಬದುಕುತ್ತಿದ್ದ ಬುಡಕಟ್ಟುಗಳು ತಮ್ಮ ಭೂಮಿಗೆ ಖಾತೆ-ಕಂದಾಯಗಳನ್ನು ಇಟ್ಟುಕೊಳ್ಳಬೇಕೆಂಬ ಪ್ರಜ್ಞೆಯೂ ಇದ್ದವರಲ್ಲ. ಸರ್ಕಾರದ ‘ಪರಿಹಾರ’ ಎಂಬ ತಾಂತ್ರಿಕ ಆಡಳಿತ ಪದ ಅವರಿಂದ ಸದಾ ಒಂದು ವೇಳೆ ಪರಿಹಾರ ದೊರೆತರೂ ಅದು ತಾತ್ಕಾಲಿಕ. ಪರಿಹಾರದಿಂದ ಸಮುದಾಯಗಳನ್ನು ಅಭಿವೃದ್ಧಿ ಪಡಿಸಲು ಸಾಧ್ಯವಿಲ್ಲ. ದೂರದೃಷ್ಟಿ ಮತ್ತು ಮಾನವೀಯತೆ ಇಲ್ಲದ ಕಾನೂನುಗಳು ಬಡವರಿಗೆ ಎಂದೂ ಉಪಕಾರಿಯಲ್ಲ. ಇಡೀ ಉತ್ತರ ಕನ್ನಡದ ಶ್ರಮಜೀವಿ ವರ್ಗ ಅಂಥ ಒಂದು ಮಾನವೀಯ ಆಡಳಿತಕ್ಕಾಗಿ, ಒಳಗಣ್ಣಿನ ಅಂತಃಕರಣದ ಕಾನೂನಿಗಾಗಿ ಕಾಯುತ್ತಿದೆ ಎಂದರೆ ತಪ್ಪಲ್ಲ. ಅವರ ಸಾಮಾಜಿಕ ಭದ್ರತೆ ಕಾಪಾಡುವ, ಆರ್ಥಿಕ ಸಂಕಷ್ಟ ಪರಿಹರಿಸುವ, ಸಾಂಸ್ಕೃತಿಕ ಅನನ್ಯತೆಯನ್ನು ಕಾಪಾಡುವ ಅಖಂಡ ಅಭಿವೃದ್ಧಿಯ ನೀಲನಕ್ಷೆ ಸಿದ್ಧಗೊಳ್ಳಬೇಕಿದೆ. ಇದು ಕೇವಲ ಉತ್ತರ ಕನ್ನಡ ಜಿಲ್ಲೆಗೆ ಮಾತ್ರ ಅನ್ವಯಿಸುವ ಮಾತಲ್ಲ. ಇಡೀ ನಾಡಿನ ಶ್ರಮಿಕ ಜನವರ್ಗದ ಸರ್ವತೋಮುಖ ಅಭಿವೃದ್ಧಿಗೆ ಅನ್ವಯಿಸುವ ಮಾತು. ಆದರೆ ಎಲ್ಲ ಸಮಸ್ಯೆಗಳ ಮಾತೃವಾದ ಉತ್ತರ ಕನ್ನಡದಿಂದ ಈ ಅಭಿವೃದ್ಧಿಯ ನೀಲನಕ್ಷೆ ಆರಂಭವಾದರೆ ಒಳ್ಳೆಯದು.