ಅಧ್ಯಯನದ ಉದ್ದೇಶ

ನಾನು ಈ ಹಿಂದೆಯೇ ಪ್ರಸ್ತಾಪಿಸಿದಂತೆ ಕರ್ನಾಟಕದ ಬುಡಕಟ್ಟುಗಳ ಸಮಗ್ರ ಸಮೀಕ್ಷೆಯಾಗಲೀ, ಸೂಕ್ತ ಅಧ್ಯಯನವಾಗಲೀ ಆಗಿಲ್ಲ. ಪ್ರಮುಖ ಬುಡಕಟ್ಟುಗಳನ್ನು ಕುರಿತಂತೆ ಅಲ್ಲಲ್ಲಿ ಸ್ಥಳೀಯ ಮಟ್ಟದ ಅಧ್ಯಯನಗಳೂ ಕೆಲವು ಸಮುದಾಯಗಳ ಬಗ್ಗೆ ಪಿ. ಎಚ್‌ ಡಿ. ಅಧ್ಯಯನಗಳೂ ಆಗಿವೆ. ಆದರೆ ಅಲೆಮಾರಿ ಮತ್ತು ಅರೆ-ಅಲೆಮಾರಿ ಸ್ವರೂಪದ ಸಮುದಾಯಗಳು ಎಲ್ಲ ವಿಚಾರಗಳ್ಲೂ ನಿರ್ಲಕ್ಷ್ಯಕ್ಕೆ ಒಳಗಾಗಿವೆ. ಸಮಾಜಿಕವಾಗಿ ಕೂಡ ಅಭದ್ರತೆಯಿಂದ ಬಳಲುತ್ತಿರುವ ಇಂಥ ಸಣ್ಣ ಸಮುದಾಯಗಳು ಆತ್ಮವಿಶ್ವಾಸವಿಲ್ಲದ ದೀನ ಬದುಕನ್ನು ಬದುಕುತ್ತಿವೆ ಸೋಜಿಗವೆಂದರೆ, ಇಂಥ ನಿರ್ಲಕ್ಷಿತ ಸಣ್ಣ ಸಮುದಾಯಗಳು ಕೂಡ ಸಾಂಸ್ಕೃತಿಕವಾದ ಅನನ್ಯತೆಯನ್ನು ಕಾಪಾಡಿಕೊಂಡು ಬಂದಿವೆ ಎಂಬುದು. ತಮ್ಮದೇ ಆದ ಭಾಷೆ ಸಂಸ್ಕೃತಿ ಮತ್ತು ಸಾಮಾಜಿಕ ಪದ್ಧತಿಗಳನ್ನೂ, ಪರಂಪರೆಯಿಂದ ಬಂದ ವೃತ್ತಿಪರತೆಯನ್ನು, ಸ್ಥಳೀಯವಾದ ಜ್ಞಾನ ಪರಂಪರೆಯನ್ನು ರಕ್ಷಿಕೊಂಡು ಬಂದಿದೆ. ಇಂಥ ಅಪೂರ್ವ ಜ್ಞಾನವಾಹಿನಿಗಳ ಮೂಲ ಜನಕರೆನಿಸಿದ ಅಲೆಮಾರಿ ಮತ್ತು ಅರೆ ಅಲೆಮಾರಿ ಸಮುದಾಯಗಳ ಬಗೆಗೆ, ಅಧ್ಯಯನಕಾರರು, ಸಾಮಾಜಿಕ ಚಿಂತಕರು ಹಾಗೂ ಸರ್ಕಾರ ಮತ್ತು ಅದರ ಆಡಳಿತ  ವ್ಯವಸ್ಥೆ ಹೆಚ್ಚಿನ ಗಮನ ನೀಡಬೇಕಾದ ಅಗತ್ಯವಿದೆ. ಅದರಲ್ಲೂ ಆರ್ಥಿಕ ಸಂಕಷ್ಟ, ಸಾಮಾಜಿಕ ಅಭದ್ರತೆ, ಹಾಗೂ ಆಧುನಿಕತೆಯ ಸಮಕಾಲೀನ ಸವಾಲುಗಳನ್ನು ಎದುರಿಸಬೇಕಾದ ಅನಿವಾರ್ಯತೆಗಳಿಗೆ ಒಳಗಾಗಿರುವ ಇಂಥ ಸಮುದಾಯಗಳ ಬಿಕ್ಕಟ್ಟುಗಳಿಗೆ ಎಲ್ಲ ರೀತಿಯ ಪರಿಹಾರ ಕಂಡುಕೊಳ್ಳಬೇಕಾದ ಜವಾಬ್ದಾರಿ ಸರ್ಕಾರದ್ದು. ಜೊತೆಗೆ, ಈ ರೀತಿಯ ಸವಾಲುಗಳನ್ನು ಎದುರಿಸುತ್ತಿರುವ ಸಮುದಾಯಗಳು ಸಾಮಾಜಿಕವಾಗಿ ಯಾವ ಗುಂಪಿಗೆ ಸೇರುತ್ತವೆ, ಅವುಗಳ ಸಾಂಸ್ಕೃತಿಕ ಪರಂಪರೆ ಯಾವುದು, ಸರ್ಕಾರ ಯಾವ ಮಾನದಂಡಗಳ ಅಡಿಯಲ್ಲಿ ಸೂಕ್ತ ಸವಲತ್ತುಗಳನ್ನು ನೀಡಬೇಕು ಎಂಬಿತ್ಯಾದಿ ಸಂಗತಿಗಳು ನಿರ್ಧಾರವಾಗಬೇಕಾದ ಸಂದರ್ಭ ಇದು. ಈ ಅಂಶವನ್ನು ಮನಗಂಡು ಕರ್ನಾಟಕ ಸರ್ಕಾರದ ಹಿಂದುಳಿದ ವರ್ಗಗಳ ಇಲಾಖೆಯ ಶ್ರೀ ದೇವರಾಜ ಅರಸು ಸಂಶೋಧನಾ ಸಂಸ್ಥೆ ಕರ್ನಾಟಕದಲ್ಲಿ ಅತ್ಯಂತ ಹಿಂದುಳಿದ ಮತ್ತು ಸಾಮಾಜಿಕವಾಗಿ ಶೋಷಣೆಗೆ ಒಳಪಟ್ಟ ಅಲೆಮಾರಿ ಮತ್ತು ಅರೆ ಅಲೆಮಾರಿ ಸ್ವರೂಪದ ಸಮುದಾಯಗಳ ಅಧ್ಯಯನ ವರದಿ ಸಿದ್ಧಪಡಿಸುವ ಕೆಲಸಕ್ಕೆ ಕೈ ಹಾಕಿದೆ. ಕನ್ನಡ ವಿಶ್ವವಿದ್ಯಾಲಯದ ಬುಡಕಟ್ಟು ಅಧ್ಯಯನ ವಿಭಾಗ ಕಳೆದ ೧೨ ವರ್ಷಗಳಿಂದ ಶೋಷಿತ ಸಮುದಾಯಗಳ ಸಾಂಸ್ಕೃತಿಕ, ಸಾಮಾಜಿಕ ಮತ್ತು ಆರ್ಥಿಕ ಮುಖಗಳನ್ನು ಅಧ್ಯಯನ ಮಾಡುತ್ತಾ ಬರುತ್ತಿರುವ ಒಂದು ಸಂಶೋಧನಾ ವಿಭಾಗ. ಶ್ರೀ ದೇವರಾಜ ಅರಸು ಸಂಶೋಧನಾ ಸಂಸ್ಥೆಯ ಆಶಯದ ಮೇರೆಗೆ ಪ್ರಸ್ತುತ ವರ್ಷ ಐದು ಅಲೆಮಾರಿ ಮತ್ತು ಅರೆ ಅಲೆಮಾರಿ ಸಮುದಾಯಗಳ ಅಧ್ಯಯನ ಕೈಗೊಂಡಿದೆ. ಈ ಸಮುದಾಯಗಳಲ್ಲಿ ಅರೆ ಅಲೆಮಾರಿ ಎನಿಸಿದ ಕುಣಬಿ ಸಮುದಾಯವೂ ಒಂದು.

ದುರ್ಗಮವಾದ ಅರಣ್ಯಗಳಲ್ಲಿ ವಾಸಿಸುತ್ತಾ ಕುಮರಿ ಬೇಸಾಯವನ್ನು ತನ್ನ ಪಾರಂಪರಿಕ ಕಸುಬನ್ನಾಗಿ ಪೋಷಿಸಿಕೊಂಡು ಬಂದಿದ್ದ ಈ ಸಮುದಾಯ ನಿಸರ್ಗದ ಬಗೆಗೆ ಅಪಾರವಾದ ತಿಳುವಳಿಕೆಯನ್ನು ಇಟ್ಟುಕೊಂಡಿರುವಂಥದ್ದು. ಆದರೆ ಈ ಸಮುದಾಯ ಪ್ರಸ್ತುತದಲ್ಲಿ ಎದರಿಸುತ್ತಿರುವ ಸವಾಲುಗಳು ಹಲವಾರು. ಕುಣಬಿ ಜನ ಸಮುದಾಯ ಇಂದು ಎದರಿಸುತ್ತಿರುವ ಭೂಮಿ ಸಮಸ್ಯೆ, ಅರಣ್ಯದ ಸಮಸ್ಯೆ, ಸಮಾಜಿಕ ದಬ್ಬಾಳಿಕೆ, ವ್ಯವಸ್ಥೆಯ ನಿರ್ಲಕ್ಷ್ಯ, ಶೈಕ್ಷಣಿಕ ಹಿನ್ನಡೆ ಹಾಗೂ ಸಾಂಸ್ಕೃತಿಕ ಶಿಥಿಲತೆಗಳನ್ನು ಅಧ್ಯಯನ ಮಾಡುವ ಮೂಲಕ ನಿಜವಾದ ಸಮಸ್ಯೆಗಳನ್ನು ಮನಗಾಣಿಸುವುದಲ್ಲದೆ, ಅವುಗಳಿಗೆ ಪರಿಹಾರೋಪಾಯಗಳನ್ನು ಸೂಚಿಸುವುದು ಈ ಅಧ್ಯಯನದ ಪ್ರಮುಖ ಉದ್ದೇಶವಾಗಿದೆ.

ಅಧ್ಯಯನದ ವ್ಯಾಪ್ತಿ

ಈಗಾಗಲೇ ನಾನು ಸ್ಪಷ್ಟಪಡಿಸುರವಂತೆ ಕುಣಬಿ ಸಮುದಾಯ ಉತ್ತರ ಕನ್ನಡ ಜಿಲ್ಲೆಯ ಜೋಯಿಡಾ ತಾಲ್ಲೂಕಿನಲ್ಲಿ ಸಾಂದ್ರವಾಗಿ ಕಾಣಿಸಿಕೊಳ್ಳುತ್ತದೆ. ಆದ್ದರಿಂದ ನನ್ನ ಅಧ್ಯಯನಕ್ಕೆ ಇಡೀ ತಾಲ್ಲೂಕನ್ನು ಆರಿಸಿಕೊಂಡಿದ್ದೇನೆ. ಉಳಿದ ಭಾಗಗಳಿಗೆ ಭೇಟಿ ನೀಡಿದ್ದೇನಾದರೂ ಅಂಕಿ ಅಂಶ ಇತ್ಯಾದಿ ಮಾಹಿತಿಗಳಿಗೆ ಜೋಯಿಡಾ ತಾಲ್ಲೂಕಿನ ಕುಣಬಿ ವಾಸ್ಥಳಗಳನ್ನು ಮಾತ್ರ ಆಧಾರವಾಗಿಟ್ಟುಕೊಂಡಿದ್ದೇನೆ. ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕಿನ ಗೋವರ್ಧನಗಿರಿ ತಪ್ಪಲಿನ ನಾಗವಳ್ಳಿ ಹಾಗೂ ನಾಲ್ಕು ಸಾವಿರ ಅಡಿ ಎತ್ತರದ ಪರ್ವತ ಪ್ರದೇಶವಾದ ಮೇಘಾನೆಗಳನ್ನು ಸಮಾರು ೧೯ ವರ್ಷಗಳಷ್ಟು ಹಿಂದೆಯೇ ಸಂದರ್ಶಿಸಿ ಅಲ್ಲಿನ ಕುಣಬಿಯರ ಬಗ್ಗೆ ಡೆಕ್ಕನ್‌ ಹೆರಾಲ್ಡ್‌ ಮತ್ತು ಜಾಪದ ಗಂಗೋತ್ರಿಯಲ್ಲಿ ಲೇಖನ ಬರೆದಿದ್ದೆ. ಆದರೂ ಈ ಸಂದರ್ಭದಲ್ಲಿ ಮತ್ತೊಮ್ಮೆ ಹೋಗಿ ಅಲ್ಲಿನ ಬದಲಾವಣೆಗಳನ್ನು ಗಮನಿಸಿದ್ದೇನೆ. ಇಲ್ಲಿನ ನನ್ನ ಅಧ್ಯಯನಕ್ಕೆ ವಿಶಿಷ್ಟ ಕುಣಬಿ ತಾಣಗಳನ್ನು ತೌಲನಿಕವಾಗಿ ಉಲ್ಲೇಖಿಸಿದ್ದೇನೆ.

ಜೋಯಿಡಾ ತಾಲ್ಲೂಕನ್ನೇ ಆಯ್ಕೆ ಮಾಡಿಕೊಳ್ಳಲು ಬಲವಾದ ಕಾರಣಗಳು ಇವೆ. ಈ ಕಾರಣಗಳೆಂದರೆ :

. ಜೋಯಿಡಾ ತಾಲ್ಲೂಕಿನ ಕುಣಬಿ ಜನಸಂಖ್ಯೆ ಅತಿ ಹೆಚ್ಚಾಗಿದೆ.
೨. ಕುಮರಿ ಬೇಸಾಯದ ವ್ಯಾಪಕತೆ ಇಲ್ಲಿ ಹೆಚ್ಚು.
೩. ಅನೇಕ ರಾಷ್ಟ್ರೀಯ ಅಭಿವೃದ್ಧಿ ಯೋಜೆಗಳಿಗೆ ನೆಲೆ ಒದಗಿಸಿದ ತಾಲ್ಲೂಕು ಇದು.
೪. ಇಂದಿಗೂ ದಟ್ಟಾರಣ್ಯ ಉಳಿದಿದ್ದು ಜೀವ ವೈವಿಧ್ಯ ಹಾಗೂ ಜೀವನ ವೈವಿಧ್ಯವನ್ನು ಕಾಪಾಡಿಕೊಂಡಿರುವ ಪ್ರದೇಶ ಇದಾಗಿದೆ.

ಈ ಎಲ್ಲ ಅಂಶಗಳು ಒಂದು ಸಮುದಾಯದ ಜೀವನ ವಿಧಾನವನ್ನು ರೂಪಿಸುವ ಹಾಗೂ ಸ್ಥಿತ್ಯಂತರಗಳಿಗೆ ಒಳಪಡಿಸುವ ಅಂಶಗಳಾಗಿದ್ದು ಅಧ್ಯಯನಕ್ಕೆ ಸೂಕ್ತವಾದ ಪ್ರದೇಶ ಇದಾಗಿದೆ.

ಅಧ್ಯಯನ ವಿಧಾನ

ಜೋಯಿಡಾ ತಾಲ್ಲೂಕಿನಲ್ಲಿ ಕುಣಬಿಯರು ವಾಸಿಸುವ ಪ್ರತಿ ಹಳ್ಳಿ (ಹಳ್ಳಿಯನ್ನು ಇವರು ‘ಕುಳಾವಿ’ ಎಂದು ಕರೆಯುತ್ತಾರೆ.) ಯನ್ನು ಸಮೀಕ್ಷಿಸಲಾಗಿದೆ. ಅಲ್ಲಿನ ಶಿಕ್ಷಣದ ಮಟ್ಟ, ಇರುವ ಸವಲತ್ತುಗಳು, ಕುಮ್ರಿ ಭೂಮಿ, ಅರಣ್ಯ ಒತ್ತುವರಿ ಭೂಮಿ ಇತ್ಯಾದಿ ವಿವರಗಳನ್ನು ಸಂಗ್ರಹಿಸಲಾಗಿದೆ. ಪ್ರಶ್ನಾವಳಿಗಳ ಮೂಲಕ ಮಾಹಿತಿ ಸಂಗ್ರಹಿಸಿ ವಿವರಣಾ ಪಟ್ಟಿಯ ಆದರ ಮೂಲಾಂಶಗಳನ್ನು ಕ್ರೋಡೀಕರಿಸಲಾಗಿದೆ. ಸಾಂಸ್ಕೃತಿಕ ಮಹತ್ವವನ್ನು ಮನಗಾಣಿಸುವ ಮೂಲಕ ಕುಣಬಿಯರು ‘ಒಂದು ಬುಡಕಟ್ಟು’ ಎಂಬ ಅಂಶವನ್ನು ಸೂಕ್ತವಾಗಿ ಅರ್ಥೈಸಿಕೊಳ್ಳಲಾಗಿದೆ. ಶೈಕ್ಷಣಿಕ, ಆರ್ಥಿಕ ಹಾಗೂ ಸಾಮಾಜಿಕ ಸಂಗತಿಗಳನ್ನು ವಿವರವಾಗಿ ಅಧ್ಯಯನ ಮಾಡುವ ಮೂಲಕ ಇದೊಂದು ತೀರಾ ಹಿಂದುಳಿದ ಪ್ರದೇಶ ಹಾಗೂ ಕುಣಬಿಯರು ಸರ್ಕಾರ ಅಥವಾ ಆಡಳಿತ ವ್ಯವಸ್ಥೆಯಿಂದ ನಿರ್ಲಕ್ಷಿತರು ಎಂಬುದನ್ನು ಗುರುತಿಸುವ ಪ್ರಯತ್ನ ಮಾಡಲಾಗಿದೆ.

ಆಧುನಿಕ ಯೋಜನೆಗಳು ನಾಡಿನ ಬಹುಸಂಖ್ಯಾತರಿಗೆ ಅನುಕೂಲ ಕಲ್ಪಿಸಿಕೊಟ್ಟರೂ ಸ್ಥಳೀಯ ಅಲ್ಪಸಂಖ್ಯಾತರಿಗೆ ಯಾವ ಸವಾಲುಗಳನ್ನು ಒಡ್ಡಿವೆ ಎಂಬುದನ್ನು ಮಾಹಿತಿಗಳ ಮೂಲಕವೇ ಮನಗಾಣಿಸುವ ಪ್ರಯತ್ನ ಮಾಡಲಾಗಿದೆ.

ಅಧ್ಯಯನ ಮಿತಿ

ಇದೊಂದು ತತ್ಕಾಲದ ಅಧ್ಯಯನ ವರದಿ. ಕುಣಬಿ ಸಮುದಾಯ ಪ್ರಸ್ತುತದಲ್ಲಿ ಎದುರಿಸುತ್ತಿರುವ ಕಷ್ಟ ಕಾರ್ಪಣ್ಯಗಳ ಕಡೆಗೆ ಗಮನ ಸೆಳೆವ ವರದಿ. ಅತ್ಯಂತ ಕಡಿಮೆ ಅವಧಿಯಲ್ಲಿ ಪೂರ್ಣಗೊಳಿಸಲಾಗಿದೆಯಲ್ಲದೆ. ಈ ಹಿಂದೆ ಹೇಳಲಾದ ಉದ್ದೇಶಗಳಿಗೆ ಮಾತ್ರ ಸೀಮಿತವಾಗಿದೆ.

ಮಲೆನಾಡಿನ ವಿವಿಧ ಭಾಗಗಳಲ್ಲಿ ಚದುರಿಹೋಗಿರು ಕುಣಬಿಯರನ್ನು ಸಮಗ್ರ ಸಮೀಕ್ಷೆ ಮೂಲಕ ಗುರುತಿಸುವ ಅಗತ್ಯವಿದೆಯಾದರೂ ಇಲ್ಲಿ ಅದು ಸಾಧ್ಯವಾಗಿಲ್ಲ. ಕುಣಬಿ – ಕುಡುಬಿ ಈ ರೀತಿಯ ಸಾಮ್ಯತೆ ಇರುವ ಜನವರ್ಗಗಳ ತೌಲನಿಕ ಅಧ್ಯಯನದ ಅಗತ್ಯವೂ ಇದೆ. ಅದು ಕೂಡ ಇಲ್ಲಿ ಸಾಧ್ಯವಾಗಿಲ್ಲ.

ಸಾಂಸ್ಕೃತಿಕ, ಶೈಕ್ಷಣಿಕ, ಸಾಮಾಜಿಕ ಹಾಗೂ ಆರ್ಥಿಕ ಅಂಶಗಳಿಗೆ ಈ ಅಧ್ಯಯನದಲ್ಲಿ ಒತ್ತು ಕೊಡಲಾಗಿದೆಯಾದರೂ ಪರಿಪೂರ್ಣ ಎನ್ನುವ ಮಟ್ಟಿಗೆ ವಿವಿಧ ಕಾಲ ಘಟ್ಟಗಳ ಹಾಗೂ ಎಲ್ಲ ಪ್ರದೇಶಗಳನ್ನೊಳಗೊಂಡ ಸಮಗ್ರ ಅಧ್ಯಯನ ಇಲ್ಲಿ ಸಾಧ್ಯವಾಗಿಲ್ಲ. ಆದರೆ ಕುಣಬಿ ಜನಸಾಂದ್ರತೆ ಇರುವ ವಿಶಿಷ್ಟ ಪ್ರದೇಶಗಳನ್ನು ಅಧ್ಯಯನಕ್ಕೆ ಆಯ್ಕೆ ಮಾಡಿಕೊಳ್ಳುವ ಮೂಲಕ ಕುಣಬಿಯರ ಒಟ್ಟು ಜನಜೀವನ್ನು ಸಾಂಕೇತಿಕವಾಗಿ ಅರಿಯಲು ಸಾಧ್ಯವಾಗಿದೆ. ಎಂಬುದು ಈ ಅಧ್ಯಯನಕಾರನ ನಂಬಿಕೆ. ಸೀಮಿತ ಪ್ರದೇಶವನ್ನು ಒಳಗೊಂಡರೂ ಕುಣಬಿಯರ ಪಾರಂಪರಿಕ ಜೀವನ ವಿಧಾನ ಹಾಗೂ ಆಧುನಿಕತೆಯ ಪ್ರಭಾವವನ್ನು ಅರಿಯುವ ನಿರ್ದಿಷ್ಟ ಪ್ರದೇಶವನ್ನಾಗಿ ಜೋಯಿಡಾ ತಾಲ್ಲೂಕನ್ನು ಆಯ್ಕೆ ಮಾಡಿಕೊಂಡಿರುವುದರಿಂದ ಅಲ್ಲಿನ ಬಹುಸಂಖ್ಯಾತ ಕುಣಬಿಯರ ಆಶೋತ್ತರಗಳನ್ನು ಹಾಗೂ ಅಳಲುಗಳನ್ನು ಇಲ್ಲಿ ದಾಖಲಿಸಲು ಸಾಧ್ಯವಾಗಿದೆ ಎಂಬ ಸಮಾಧಾನವು ಇದೆ.