ಒಂದಾನೊಂದು ಕಾಲಕ್ಕೆ ಇಡೀ ಮಾನವ ಕುಲವೇ ವಲಸೆ ಜೀವನವನ್ನು ಅವಲಂಬಿಸಿತ್ತು. ಮನುಷ್ಯ ಕೃಷಿಯನ್ನು ಕಂಡುಕೊಳ್ಳವುದಕ್ಕೆ ಮೊದಲು ಮೂರು ಆರ್ಥಿಕ ಹಂತಗಳನ್ನು ಗುರುತಿಲಾಗಿದೆ. ಮನುಷ್ಯನ ಆರ್ಥಿಕ ಚಟುವಟಿಕೆಯ ಮೊದಲ ಹಂತ ಆರಂಭವಾದದ್ದು ನೈಸರ್ಗಿಕವಾಗಿ ದೊರೆಯುತ್ತಿದ್ದ ಆಹಾರ ಪದಾರ್ಥಗಳ ಸಂಗ್ರಹದಿಂದ. ಎರಡನೆಯ ಹಂತ ಬೇಟೆ. ಮೂರನೆ ಹಂತ ಪಶುಸಂಗೋಪನೆ ಅರ್ಥಾತ್‌ ವಿವಿಧ ಪ್ರಾಣಿಗಳ ಸಾಕಾಣಿಕೆ. ಕೃಷಿ ಮನುಷ್ಯ ಕಂಡುಕೊಂಡ ಬಹುಮುಖ್ಯ ಆರ್ಥಿಕ ಹಂತ. ಕೃಷಿ ಬಳಕೆಗೆ ಬಂದ ನಂತರವೇ ಮನುಷ್ಯ ಸಮುದಾಯಗಳು ಒಂದು ಕಡೆ ನೆಲೆ ನಿಲ್ಲಲು ಆರಂಭಿಸಿದ್ದು. ಆನಂತರವೇ ಹಳ್ಳಿ, ಊರು, ಗ್ರಾಮ, ಪಟ್ಟಣ ಹಾಗೂ ಇವೆಲ್ಲವನ್ನೂ ಒಳಗೊಂಡ ಪಾಳೆಪಟ್ಟು ರಾಜ್ಯಗಳ ಉದಯ, ಚಕ್ರಾಧಿಪತ್ಯದ ಸ್ಥಾಪನೆ ಇತ್ಯಾದಿ ರಾಜಕೀಯ ವ್ಯವಸ್ಥೆ ಬೆಳೆದದ್ದು. ಆನಂತರವೇ ಜಮೀನುದಾರಿಕೆ, ಊಳೀಗಮಾನ್ಯತೆ ತಲೆದೋರಿದ್ದು ಜಾತಿ ವ್ಯವಸ್ಥೆ ಕೂಡ ಕೃಷಿ ಯುಗದ ಒಂದು ಕೆಟ್ಟ ಬಳುವಳಿ. ಆದರೆ ಇದು ಭಾರತಕ್ಕೆ ಮಾತ್ರ ವಿಶಿಷ್ಟವಾಗಲು ಪುರೋಹಿತಶಾಹಿ ಹಾಗೂ ಆಡಳಿತಶಾಹಿಗಳ ಕೈವಾಡವೂ ಇದೆ.

ಕುಣಬಿಯರು ಮೇಲೆ ನಾನು ಹೇಳಿದ ಯಾವ ಆರ್ಥಿಕ ಹಂತಕ್ಕೆ ಸಲ್ಲುತ್ತಾರೆ ಎಂಬುದರ ಜಿಜ್ಞಾಸೆಗಾಗಿ ಈ ಪೀಠಿಕೆ ಹಾಕಬೇಕಾಯಿತು ಅಷ್ಟೆ. ಕುಣಬಿಯರು ಪ್ರಧಾನವಾಗಿ ಕಾಡಿನಲ್ಲಿ ವಾಸ ಮಾಡುವ ಜನ. ಅವರು ತೀರಾ ಇತ್ತೀಚಿನವರೆಗೂ ಅರೆ ಅಲೆಮಾರಿಗಳು. ಕಾಡಿನ ನಿಸರ್ಗದತ್ತ ಆಹಾರ ಸಂಗ್ರಹಣೆ, ಲಭ್ಯವಿದ್ದ ಬೇಟೆ ಹಾಗೂ ಆ ನಂತರದಲ್ಲಿ ‘ಕುಮರಿ ಬೇಸಾಯ’ ಇವು ಇವರ ಇವತ್ತಿನ ಆರ್ಥಿಕತೆ ರೂಪಸಿರುವ ಅಂಶಗಳು.

ಮಲೆನಾಡಿನಲ್ಲಿ ವಾಸವಿರುವ ಹಲವು ಬುಡಕಟ್ಟುಗಳಲ್ಲಿ ಕೆಲವು ಇದೇ ನೆಲದ ಆದಿ ಸ್ವರೂಪದ ಆದಿವಾಸಿ ಗುಂಪುಗಳು. ಇನ್ನು ಕೆಲವು ಹೊರಗಿನಿಂದ ವಲಸೆ ಬಂದ ಬುಡಕಟ್ಟುಗಳು. ಕುಣಬಿಯರು, ಗೌಳಿಗರು, ಮರಾಠಿ ನಾಯ್ಕರು, ಸಿದ್ಧಿಯರು ಮುಂತಾದವರು ಹೊರಗಿನಿಂದ ಬಂದವರು ಎಂದು ಹೇಳಲಾಗುತ್ತದೆ. ಸಿ‌ದ್ಧಿಯರು ವಸಾಹತು ಕಾಲಘಟ್ಟದಲ್ಲಿ ಗುಲಾಮರಾಗಿ ಗೋವಾಕ್ಕೆ ಬಂದ ಆಫ್ರಿಕಾ ಮೂಲದ ಬುಡಕಟ್ಟುಗಳು. ಆನಂತರದಲ್ಲಿ ಗೋವಾ ಗುಜರಾತ್‌ ಮತ್ತು ಕರ್ನಾಟಕದ ಕಾಡುಗಳಲ್ಲಿ ಸಿದ್ಧಿಯರು ನೆಲೆ ನಿಂತರು. ಆದರೆ ಕುಣಬಿಯರು, ಕುಡಬಿಯರು, ಗೌಳಿಗರು ಹಾಗೂ ಮರಾಠಿ ನಾಯ್ಕರು ಯಾವ ಕಾರಣಕ್ಕಾಗಿ ವಲಸೆ ಬಂದರು? ಎಂಬುದು ಚರ್ಚೆಗೆ ಗ್ರಾಸವಾಗಬೇಕಾದ ವಿಚಾರ. ಅನೇಕರ ಪ್ರಕಾರ ಇವರೆಲ್ಲ ಪೋರ್ಚುಗೀಸರ ಆಡಳಿತ ಕಾಲದಲ್ಲಿ ಅವರು ಹೇರುತ್ತಿದ್ದ ಬಲವಂತ ಮತಾಂತರಕ್ಕೆ ಹದರಿ ಗೋವಾ ಮತ್ತು ಅದರ ಸುತ್ತಮುತ್ತಲ ಪ್ರದೇಶದಿಂದ ದೂರದ ಕಾಡುಗಳಿಗೆ ವಲಸೆ ಬಂದರು. ಇದು ಬಹುಸಂಖ್ಯೆಯ ತಜ್ಞರ ಅಭಿಮತ. ಇದು ಭಾಗಶಃ ಸತ್ಯವಿರಬಹುದು. ಆದರೆ ಇಲ್ಲಿ ಗಮನಿಸಬೇಕಾದ ಮತ್ತೊಂದು ಅಂಶವಿದೆ. ಅದೇನೆಂದರೆ, ಈ ಎಲ್ಲ ಬುಡಕಟ್ಟುಗಳು ಅವರ ಆಹಾರ ಸಂಗ್ರಹಣೆಯ ಹಂತದಲ್ಲಿ ಪೂರ್ಣ ಪ್ರಮಾಣದ ಅಲೆಮಾರಿಗಳಾಗಿದ್ದವರು. ಕುಮರಿ ಕೃಷಿ ಹಂತಕ್ಕೆ ತಲುಪಿದ ಮೇಲೆ ಅರೆ ಅಲೆಮಾರಿಗಳಾಗಿ ಪರಿವರ್ತಿತರಾದವರು. ಅದರಲ್ಲಿಯೂ ಇವರ ಕೃಷಿ ಪೂರ್ಣ ಪ್ರಮಾಣದ ಬೃಹತ್‌ ಕೃಷಿ ಅಲ್ಲ. ಒಂದು ರೀತಿಯಲ್ಲಿ ಇವರದು ನೈಸರ್ಗಿಕ ಕೃಷಿ, ಅಂದರೆ ‘ಕುಮರಿ ಬೇಸಾಯ’ ಅಥವಾ ‘ಕೆತ್ತು ಬೇಸಾಯ’ ಜಗತ್ತಿನಾದ್ಯಂತ ಅರೆ ಅಲೆಮಾರಿ ಜನರು ಕೈಗೊಳ್ಳುತ್ತಿದ್ದ ಈ ರೀತಿಯ ನೈಸರ್ಗಿಕ ಬೇಸಾಯಕ್ಕೆ Shifting Cultivation ಎಂದು ಕರೆಯುತ್ತಾರೆ. ಅಂದರೆ ಕಾಡಿನಿಂದ ಕಾಡಿಗೆ ವರ್ಗಾವಣೆಗೊಳ್ಳುತ್ತಾ ಕೃಷಿಯನ್ನು ಮುಂದುವರಿಸುವುದು. ಈ ವರ್ಗಾವಣೆ ಬೇಸಾಯದ ಜೊತೆಜೊತೆಗೆ ಅವರ ವಲಸೆಯೂ ಮುಂದುವರಿಯುತ್ತಿತ್ತು. ಆದರೆ ಅಂಥ ವಲಸೆಗೂ ಒಂದು ಮಿತಿ ಇರುತ್ತಿತ್ತು. ಅದಕ್ಕೂ ಅವರದೇ ಆದ ಸೀಮೆ ಅಥವಾ ವೃತ್ತದ ಕಲ್ಪನೆ ಇರುತ್ತಿತ್ತು. ಮಧ್ಯಭಾರತದ ಗೊಂಡರು, ಸಂತಾಲರು ಮುಂತಾದವರನ್ನು ಗಮನಿಸಿದಾಗ ಇದು ನಿಚ್ಚಳವಾಗುತ್ತದೆ. ವಿಂದ್ಯ ಪರ್ವತಗಳ ಕಾಡುಗಳನ್ನು ಅವಲಂಬಿಸಿ ಗುಜರಾತ್‌, ಮಹಾರಾಷ್ಟ್ರ, ಮಧ್ಯಪ್ರದೇಶ ಮತ್ತು ಒರಿಸ್ಸಾದವರೆಗೆ ಒಂದು ಪಯಣದ ಹಾದಿಯನ್ನು ಇಲ್ಲಿ ಗುರುತಿಸಲು ಸಾಧ್ಯ. ಹಾಗೆಯೇ ನಮ್ಮ ಪಶ್ಚಿಮಘಟ್ಟಗಳು ಕೂಡ. ಮಹಾರಾಷ್ಟ್ರ, ಗೋವಾ ಕರ್ನಾಟಕ ಹಾಗೂ ಕೇರಳದ ಉದ್ದಕ್ಕೆ ದೇಶದ ಪಶ್ಚಿಮದಲ್ಲಿ ಹಬ್ಬಿ ನಿಂತು ವೈವಿಧ್ಯಮಯ ಜೈವಿಕ ಅರಣ್ಯ. ಅಪಾರ ಪ್ರಮಾಣದ ಮಳೆಯನ್ನು ಆಕರ್ಷಿಸುವ ಪ್ರದೇಶ. ಸಮೃದ್ಧ ಅರಣ್ಯ, ತುಂಬಿ ಹರಿಯುವ ನದಿ ಹಾಗೂ ಅಪಾರ ನಿಸರ್ಗದತ್ತ ಆಹಾರ ಸಾಮಗ್ರಿಗಳನ್ನು ಒದಗಿಸಿದ ನಿತ್ಯ ಚೇತನ ನಿಬಿಡಾರಣ್ಯ ಅದು. ಇಂಥ ಅರಣ್ಯವನ್ನು ಆಶ್ರಯಿಸಿ ಬುಡಕಟ್ಟು ಸಮುದಾಯಗಳು ವಲಸೆಯ ರೂದಲ್ಲಿ ಬದುಕುತ್ತಿದ್ದವು. ಮಹಾರಾಷ್ಟ್ರದಿಂದ ಕೇರಳದವರೆಗೆ ಈ ವಲಸೆ ಒಂದು ನಿರಂತರ ಕಾಯಕವಾಗಿತ್ತು. ಆದ್ದರಿಂದ ಇಂದು ನೆಲೆನಿಂತಿರುವ ಕನ್ನಡೇತರವೆನಿಸಿದ ಹತ್ತಾರು ಬುಡಕಟ್ಟುಗಳೆಲ್ಲವೂ ಮತಾಂತರಕ್ಕೆ ಹೆದರಿ ಗೋವಾ ಮತ್ತು ಮಹಾರಾಷ್ಟ್ರದಿಂದ ಪಲಾಯನ ಮಾಡಿದವು ಎಂಬ ಒಂದೇ ತತ್ವಕ್ಕೇ ಅಂಟಿಕೊಳ್ಳುವ ಬದಲು ನಿಸರ್ಗದತ್ತವಾಗಿ ತಮ್ಮ ಕುಮರಿ ಬೇಸಾಯದ ವೃತ್ತಿಯನ್ನು ಅನುಸರಿಸುತ್ತಾ ಕ್ರಮೇಣ ಅಲ್ಲಲ್ಲಿ ನೆಲೆ ಕಂಡುಕೊಂಡವು ಎಂದು ಕೂಡ ಊಹಿಸಬಹುದಾಗಿದೆ ಆದ್ದರಿಂದಲೇ ಈ ಸಮುದಾಯಗಳು ಆಡುವ ಭಾಷೆ ಹಲವು ಭಾಷೆಗಳ ಮಿಶ್ರಣವಾಗಿ ಒಂದು ಉಪ-ಭಾಷೆಯ ಸ್ವರೂಪದಲ್ಲಿದೆ. ಕುಣಬಿಯರಲ್ಲಿ ಕೊಂಕಣಿ ಭಾಷೆಯೇ ಪ್ರಧಾನವಾದರೂ ಅದರಲ್ಲಿ ಮರಾಠಿ ಕೊಂಕಣಿ ಹಾಗೂ ದಕ್ಷಿಣ ಕನ್ನಡ ಭಾಗದಲ್ಲಿರುವ ಕುಡುಬಿಯರಲ್ಲಿ ತುಳು ಕೂಡ ಸೇರಿಕೊಂಡಿರುವುದು ಗಮನಿಸಬೇಕಾದ ಅಂಶವಾಗಿದೆ. ಹೀಗೆ ಬುಡಕಟ್ಟು ಸಮುದಾಯಗಳು ಸಮಾನ ವಾತಾವರಣ ಮತ್ತು ಸಾದೃಶ್ಯ ಸ್ಥಳಾವಕಾಶಗಳನ್ನು ಹುಡುಕಿಕೊಂಡು ಒಂದು ನಿರ್ದಿಷ್ಟ ಗಡಿಯೋಜನೆಯಲ್ಲಿ ಮುಂದಕ್ಕೆ – ಹಿಂದಕ್ಕೆ ಓಡಾಡುವ ಪರಿಪಾಠವನ್ನು ಇಟ್ಟುಕೊಂಡಿದ್ದವು ಎಂದು ಹೇಳಬಹುದು. ಈ ನನ್ನ ವಾದಕ್ಕೆ ಪೂರಕವಾಗಿ ೧೭೯೫ರಷ್ಟು ಹಿಂದೆಯೇ ಪಶ್ಚಿಮಘಟ್ಟಗಳನ್ನು ಸುತ್ತಾಡಿ ವರದಿ ಮಾಡಿದ ಫ್ರಾನ್ಸಿಸ್‌ ಬುಕಾನನ್‌ನ್ನು ಉದಾಹರಿಸಬಹುದು. ಬುಕಾನನ್‌ ಪ್ರಕಾರ “ಕುಣಬಿಗಳು ಕರ್ನಾಟಕ ಮೂಲ ಬುಡಕಟ್ಟು, ಆಗ ಉಂಟಾಗಿದ್ದ ಪ್ಲೇಗ್‌ ರೋಗದ ಕಾರಣ ಗೋವಾಗೆ ವಲಸೆ ಹೋಗಿ ಪೋರ್ಜುಗೀಸ್‌ ಕಾಲದಲ್ಲಿ ಪುನಃ ಕರ್ನಾಟಕದ  ಜೋಯಿಡಾ ಭಾಗಕ್ಕೆ ವಾಪಾಸಾಗಿದ್ದಾರೆ” ಎಂದು ಆತ ಹೇಳುತ್ತಾನೆ. (ಉಲ್ಲೇಖ: ಬುಡಕಟ್ಟು ಜನಾಂಗದಲ್ಲಿ ಸೀಮೆಯ ಪರಿಕಲ್ಪನೆ ಬಿ. ಪಿ. ಮಹೇಂದ್ರ ಕುಮಾರ್) ಬುಕಾನನ್‌ ಪ್ರಕಾರ ಇವರು ಕರ್ನಾಟಕ ಮೂಲದವರು ಎಂಬ ವಾದಕ್ಕೂ ಅಂಟಿಕೊಳ್ಳಬೇಕಾಗಿಲ್ಲ. ಅವರ ಅನುಕೂಲ – ಅನಾನುಕೂಲತೆಗಳನ್ನು ಆಧರಿಸಿ ಅವರು ತಮ್ಮ ನಿಶ್ಚಿತ ವಲಸೆ ಮಾರ್ಗಗಳಲ್ಲಿ ಸಂಚಾರ ಮಾಡುತ್ತಿದ್ದರು ಎಂದು ತಾರ್ಕಿಕವಾಗಿ ಊಹಿಸಬಹುದು.

ಹೀಗೆ ಅಲೆಮಾರಿಗಳಾಗಿ, ನಂತರ ಅರೆ – ಅಲೆಮಾರಿಗಳಾಗಿ ಇದೀಗ ಪಶ್ಚಿಮ ಘಟ್ಟಗಳ ಅಲ್ಲಲ್ಲಿ ನೆಲೆಯಲ್ಲಿರುವ ಕುಣಬಿಯರು ಇಂದಿಗೂ ವಿಶಿಷ್ಟವಾದ ಬದುಕನ್ನು ಬದುಕುತ್ತಾ ಬುಡಕಟ್ಟು ಸ್ವರೂಪವನ್ನು ಉಳಿಸಿಕೊಂಡಿದ್ದಾರೆ. ಗೋವಾ ಸುತ್ತಮುತ್ತಲ ಪ್ರದೇಶದಲ್ಲಿ ಈಗಲೂ ಕುಣಬಿಯರಿದ್ದಾರೆ. ಅಲ್ಲಿನ ಸರ್ಕಾರ ಅವರನ್ನು ‘ಬುಡಕಟ್ಟು ಸಮುದಾಯ’ ಎಂದು ಘೋಷಿಸಿದೆ ಗೋವಾ ಅಥವಾ ಕರ್ನಾಟಕ ಎಂಬ ರಾಜ್ಯಗಳು ಇಂದು ರಾಜಕೀಯ ವ್ಯವಸ್ಥೆಯ ಭಾಗಗಳು. ರಾಜ್ಯಗಳ ಗಡಿ ಬಾಂದು, ಸೀಮೆ, ರೇಖೆ ಎಲ್ಲವೂ ಆಧುನಿಕ ರಾಜಕೀಯ ವ್ಯವಸ್ಥೆ ರೂಪಿಸಿದ ಒಂದು ಆಡಳಿತಾನುಕೂಲ ಶಿಸ್ತು ಅಷ್ಟೆ. ಆದರೆ ಹಿಂದೆ ಅಂಥ ಗಡಿ-ನುಡಿಯ ಪ್ರಕ್ರಿಯೆ ಇಲ್ಲದಾಗ ಎಲ್ಲ ಅರಣ್ಯವೂ ಬುಡಕಟ್ಟುಗಳಿಗೆ ಒಂದೇ ಆದ್ದರಿಂದ ಗೋವಾದ ಕುಣಬಿಯರಿಗೂ ಕರ್ನಾಟಕದ ಕುಣಬಿಯರಿಗೂ ಯಾವುದೇ ವ್ಯತ್ಯಾಸವೂ ಇಲ್ಲ. ಆದರೂ ನಮ್ಮ ಸರ್ಕಾರಗಳು ಗೋವಾದಲ್ಲಿ ಇರುವವರು ‘ಬುಡಕಟ್ಟು’ ಎಂದು ಘೋಷಿಸಿ, ಕರ್ನಾಟಕ ಸೀಮೆಯಲ್ಲಿರುವ ಅದೇ ಜನರನ್ನು ಹಾಗೆ ಘೋಷಿಸದೇ ಇರುವುದು ಮಾತ್ರ ವಿಪರ್ಯಾಸವಾಗಿ ಕಾಣುತ್ತದೆ.

ಕರ್ನಾಟಕದ ಸಹ್ಯಾದ್ರಿಯ ಮಡಿಲಲ್ಲಿ ನೆಲೆನಿಂತಿರುವ ಕುಣಬಿಯರ ನೆಲೆಗಳನ್ನು ನಾನು ಕಂಡಷ್ಟರ ಮಟ್ಟಿಗೆ ಇಲ್ಲಿ ಗುರುತಿಸಬಯಸುತ್ತೇನೆ.

ಕುಣಬಿಯರು ಗೋವಾಗಕ್ಕೆ ಅತ್ಯಂತ ಹತ್ತಿರದಲ್ಲಿರುವ ಉತ್ತರಕನ್ನಡ ಜಿಲ್ಲೆಯ ಜೋಯಿಡಠ ತಾಲ್ಲೂಕಿನಲ್ಲಿ ಅತ್ಯಂತ ಸಾಂದ್ರವಾಗಿಯೂ, ಅಂಕೋಲಾ, ಯಲ್ಲಾಪುರ ಹಾಗೂ ಹೊನ್ನಾವರ ತಾಲ್ಲೂಕಿನ ಅಲ್ಲಲ್ಲಿಯೂ ಹಾಗೂ ಶಿವಮೊಗ್ಗ ಜಿಲ್ಲೆ ಸಾಗರ ಹಾಗೂ ತೀರ್ಥಹಳ್ಳಿ ತಾಲ್ಲೂಕುಗಳಲ್ಲಿ ಅತ್ಯಂತ ವಿರಳವಾಗಿಯೂ ಕಂಡು ಬರುತ್ತಾರೆ. ಅವರು ಕಂಡು ಬರುವ ಸ್ಥಳಗಳ ಹೆಸರುಗಳನ್ನು ಈ ಕೆಳಗೆ ನಮೂದಿಸಲಾಗಿದೆ.

ಉತ್ತರ ಕನ್ನಡ ಜಿಲ್ಲೆ

) ಜೋಯಿಡಾ ತಾಲ್ಲೂಕು

೦೧. ಅಣಶಿವಾಡಾ – ಆಪತರಣ ೦೨. ಅಲ್‌ಕುಂಬಿ
೦೩. ಅಸುಳ್ಳಿ ೦೪. ಅಂಬರ್ಡೆ
೦೫. ಅಂಬೋಳಿ ೦೬. ಆಂಬಟ್‌ಗಾಳಿ
೦೭. ಅಂಬಾಳಿ ೦೮. ಕಡಗರ್ಣಿ
೦೯. ಕಣ್ಣೆ ೧೦. ಕರಕಣೆ
೧೧. ಕರಂಬಾಳಿ – ಕರಂಜ ೧೨. ಕಳಣೆ – ಕಳಾವಳಿ
೧೩. ಕಾಜುವಾಡಾ ೧೪. ಕಾಟೇಲ್‌
೧೫. ಕಾರಟೋಳಿ ೧೬ ಕಾರ್ ಸಿಂಗಳ್‌
೧೭. ಕಾಳಸಾಯಿ ೧೮. ಕಿರವತ್ತಿ
೧೯. ಕಿಂದಳೆ ೨೦. ಕುರಾವಲಿ – ಶಾವನಾಗೆ
೨೧. ಕುಮ್‌ಗಾಳ್‌ ೨೨. ಕುಂಡಲ್‌
೨೩. ಕುಣ್ಣಂಗ್‌ ೨೪. ಕೇಲೋಲಿ
೨೫. ಕೊಂದೊರ್ ೨೬. ಖಾನ್‌ಗಾಂವ್‌
೨೬. ಗಾವಡೇವಾಡಾ ೨೮. ಗಾಳ್‌
೨೯. ಗಾಂಗೋಡಾ ೩೦. ಗುಂದ್‌
೩೧. ಗುಂದರೆ ೩೨. ಗುಂದಾಳಿ
೩೩. ಗೋಕರ್ಣ ೩೪. ಘಟ್ಟಾವ್‌
೩೫. ಚಾಪಾಳಿ – ಚರಗಾಳಿ ೩೬. ಚಾಪೇರ್
೩೭. ಚಾಪೋಲಿ (ಕಳಸಾಯಿ) ೩೮. ಚಾಪೋಲಿ
೩೯. ಚೌಕ್‌ನ್‌ಗಾಳಿ ೪೦. ಚಿಚೆನಾಡಿ – ಮಾಲೆ ಚಂದ್ರಾಳಿ
೪೧. ಝಾಮ್‌ಗಾಳಿ ೪೨. ಟಿಟಗಾಳಿ
೪೩. ಡಿಗ್ಗಿ ೪೪. ಡೇರಿಯಾ
೪೫. ತಾಡಶೇತ್‌ ೪೬. ತಿನೀಖಂಡ್‌
೪೭. ತೇಲೋಲಿ ೪೮. ದಾಡಸೇತ್‌
೪೯. ದಾತೋಡಿ ೫೦. ದಿಗಲಂಬ್‌
೫೧. ದುಧಮಾಳಾ ೫೨. ದುಧಮಳಾ ವೈಲವಾಡ
೫೩. ಧುಪೇವಾಡಿ – ದೇವಸ ೫೪. ನಗರಭಾವಿ
೫೫. ನಗರಿ ೫೬. ನವರ್
೫೭. ನುಜ್ಜಿಪಾಟ್ನೇ ೫೮. ಪಟ್ಟೇಗಾಳಿ – ಪಟ್ನೆ
೫೯. ಪತ್ರಿವಾಡಾ ೬೦. ಪಾತಾಗುಡಿ
೬೧. ಪಿಸೋಸಾ – ಪಿರೇಗಾಳಿ ೬೨. ಪುಶೇಲಿ
೬೩. ಪೋಟೋಳಿ ೬೪. ಪೋಸೋಲಿ
೬೫. ಬಾಕಿ – ಬಾರಲ್‌ಕೋಷ್‌ ಬಾಪೇಲಿ ೬೬. ಚಾಂದೇಗಾಳಿ
೬೭. ಬಿಡೋಲಿ ಪಾಟ್ನೆ ೬೮. ಬಿರೋಡಾ
೬೯. ಬೊಂಡೇಲಿ – ಬೋತಿ ೭೦. ಭಾಮಣೆ
೭೧. ಭಾರಾಡಿ – ಭೀಮಗಾಳಿ ೭೨. ಮಡಭಾವಿ – ಮದ್ಲವಾಡ್‌
೭೩. ಮಲಕರ್ಣಿ ೭೪. ಮಾತಕಣಿ
೭೫. ಮಾಟಗಾಂವ್‌ ೭೬. ಮಾತಕಣಿ
೭೭. ಮಾಯರೆ ೭೮. ಮಿರಾಸಕುಂಬೇಲಿ
೭೯. ಮುಡಿಯೇ ೮೦. ಮೈನೋಳ
೮೧. ರಾಮನಗರ ೮೨. ರಿಂಬುಡ್‌ಶೇತ್‌ – ರಿಟೈ
೮೩. ರುಂಡಾಳಿ ೮೪. ವಡಾಕಡೇ
೮೫. ವರಾಂಡ ೮೬. ವಾಗಬಂದ್‌ – ವಾಶಶೇಪಡಿ
೮೭. ವಾಗೇಲಿ ೮೮. ವಾಸ್‌ಪೋಡ್‌
೮೯. ವಿರಲ್‌ ೯೦. ಶಿರೋಳ್‌
೯೧. ಸಾಚ್ಚೇವಾಡಾ ೯೨. ಸಾಮ್‌ಜೋಯಿಡಾ
೯೩. ಸಿಟ್ಟೇಗಾಳಿ ೯೪. ಸಿತಾವಾಡಿ
೯೫. ಸಿಸಯಿ ೯೬ ಸಕ್‌ತರಿ
೯೭. ಸುಳಾವಳಿ ೯೮. ಸೊಲಿಯಾ
೯೯. ಹೆಣಕೋಳ ೧೦೦. ಹನುಲ್ಲೇ

) ಯಲ್ಲಾಪುರ ತಾಲ್ಲೂಕು

ಅಳ್ಳೆಮನೆ
ತಾರೆಮನೆ
ನೀರಕ್ಲು ತಿಮಾನಿ
ಬಂತೊಳ್ಳಿ
ಹೆಗ್ಗಾರಮನೆ

) ಕಾರವಾರ ತಾಲ್ಲೂಕು

ಕಡಜಿಮನೆ – ಗೋಪಶೆಚ್ಚಾ
ಕಬ್ಳ್ಯಾ
ಹರೂರು

) ಅಂಕೋಲಾ ತಾಲ್ಲೂಕು

ಲಕ್ಕೆಮನೆ
ಶೇಡಿಗುಳಿ

) ಶಿಮೊಗ್ಗ ಜಿಲ್ಲೆ : ಸಾಗರ ತಾಲ್ಲೂಕು

ನಾಗವಳ್ಳಿ
ಮೇಘಾನೆ
ಸಬನಮನೆ

) ಹೊನ್ನಾವರ ತಾಲ್ಲೂಕು

ಅಟಾರ
ಹಳಿಮಳ

ಕುಣಬಿಯರು – ಕುಡುಬಿಯರು

ಕುಣಬಿಯರು ಉತ್ತರ ಕನ್ನಡ ಮತ್ತು ಶಿವಮೊಗ್ಗ ಜಿಲ್ಲೆಯ ಘಟ್ಟದ ಮೇಲಿನ ದಟ್ಟಾರಣ್ಯಗಳಲ್ಲಿದ್ದರೆ, ಕುಡುಬಿಯರು ದಕ್ಷಿಣ ಕನ್ನಡ ಜಿಲ್ಲೆ ಘಟ್ಟದ ಕೆಳಗಿನ ಕರಾವಳಿ ಪ್ರದೇಶದಲ್ಲಿ ವಾಸವಾಗಿದ್ದಾರೆ. ಆಚಾರ – ವಿಚಾರ, ದೈಹಿಕ ಚಹರೆ ಹಾಗೂ ಸಾಂಸ್ಕೃತಿಕ ವಿವರಗಳನ್ನು ಸೂಕ್ಷ್ಮವಾಗಿ ಪರಿಶೀಲಿಸಿದರೆ ಕುಡುಬಿ ಮತ್ತು ಕುಣಬಿಯರಲ್ಲಿ ಅಂಥ ವ್ಯತ್ಯಾಸವೇನೂ ಕಾಣುವುದಿಲ್ಲ. ಬಹುಶಃ ಘಟ್ಟದ ಮೇಲೆ ಮತ್ತು ಘಟ್ಟದ ಕೆಳಗಿನ ಅಕ್ಷರ ಉಚ್ಛಾರದಲ್ಲಿ ಆಗಿರುವ ಅಕ್ಷರ ವ್ಯತ್ಯಾಸವೇ ಹೊರತು ಅದಕ್ಕಿಂತ ದೊಡ್ಡ ಕಾರಣವೇನೂ ಇರಲಾರದು. ಆದರೆ ಸಹಜವಾಗಿಯೇ ಘಟ್ಟದ ಮೇಲಿನ ಮತ್ತು ಘಟ್ಟದ ಕೆಳಗಿನ ಜನಜೀವನದಲ್ಲಿಯೇ ಸಾಕಷ್ಟು ಪ್ರಾದೇಶಿಕ ವ್ಯತ್ಯಾಸಗಳಿರುವುದರಿಂದ ಈ ಸಮುದಾಯಗಳಲ್ಲಿಯೂ ಅಷ್ಟರಮಟ್ಟಿನ ಪ್ರಾದೇಶಿಕ ವ್ಯತ್ಯಾಸವಿದೆ. ಘಟ್ಟದ ಮೇಲೆ ಕೊಂಕಣಿಗೆ ಕನ್ನಡ ಬೆರೆತಿರುವಂತೆ, ಘಟ್ಟದ ಕೆಳಗೆ ಕೊಂಕಣಿಗೆ ತುಳು ಬೆರತಿದೆ. ಕುಂದಾಪುರದ ಸುತ್ತಮುತ್ತಲ ಕುಡುಬಿಯರ ಕೊಂಕಣಿ ಕುಂದಾಪುರದ ಪ್ರಾದೇಶಿಕ ಕನ್ನಡವೂ ಬೆರತಿದೆ ಎನ್ನಬಹುದು. ಕುಡುಬಿಯರು ಕೂಡ ಗೋವಾದಿಂದ ವಲಸೆ ಬಂದವರು ಎಂದು ಹಲವು ವಿದ್ವಾಂಸರು ಅಭಿಪ್ರಾಯಪಟ್ಟಿದ್ದಾರೆ. ದಕ್ಷಿಣ ಕನ್ನಡದ ಕಾಡಿನಲ್ಲಿ ವಾಸಿಸುವ ಕುಡುಬಿಯರನ್ನು ಗೋವಾ ಕುಡುಬಿಯರು, ಕುಮ್ರಿ ಕುಡುಬಿಯರು ಎಂದು ಕರೆಯುತ್ತಾರೆ. ವಾಸ್ತವವಾಗಿ ಇವರೆಲ್ಲರೂ ಒಂದೇ ಗುಂಪಿನವರಾಗಿದ್ದು ಸ್ಥಳೀಯರು ಹೊರಗಿನವರನ್ನು ಗುರುತಿಸುವಾಗ ಒಂದೊಂದು ಹೆಸರು ಕೊಟ್ಟಂತೆ ಕಾಣುತ್ತದೆ. ಸಮುದ್ರದ ದಂಡೆಯಲ್ಲಿ ವಾಸಿಸುವ ಕುಡುಬಿಯರನ್ನು ಕೊಡಿಮೂಲ ಕುಡುಬಿಯರು ಮತ್ತು ಜೋಗಿ ಕುಡುಬಿಯರು ಎಂದೂ ಕರೆಯುತ್ತಾರೆ. ಇವರಿಗೆ ಕ್ರಮೇಣ ಕಾನನ ಸಂಪರ್ಕ ತಪ್ಪಿ ಸಮುದ್ರದ ಸಂಪರ್ಕ ಬಂದಿದೆ. ಸಮುದ್ರದಂಡೆಯ ಕೊಡಿಯಾಳ ಎಂಬಲ್ಲಿ ನೆಲೆ ನಿಂತ ಕಾರಣ ಆ ಸ್ಥಳನಾಮದ ಹೆಸರು ಅಂಟಿಕೊಂಡಿದೆ ಎಂಬುದು ಸ್ಪಷ್ಟ.

ದಕ್ಷಿಣ ಕನ್ನಡ ಕುಡುಬಿಯರ ಸಾಂಸ್ಕೃತಿಕ ನೆಲೆಗಳೆಲ್ಲವೂ ಉತ್ತರ ಕನ್ನಡ ಕುಣಬಿಯರ ಮುಂದುವರೆದ ರೂಪಗಳೇ ಆಗಿವೆ. ಇವೆಲ್ಲ ವಲಸೆ ಮುಂದುವರಿದ ರೂಪಗಳೇ ಆಗಿವೆ. ವಲಸೆ ಮುಂದುವರಿದಂತೆ ದಕ್ಷಿಣದ ಕಡೆಗೆ ಬಂದ ಇವರು ಕರಾವಳಿಯ ದಟ್ಟ ಕಾನನಗಳಲ್ಲಿ ತಮ್ಮ ನೆಲೆಕಂಡುಕೊಂಡರು. ಕುಂದಾಪುರ ಉಡುಪಿ ಹಾಗೂ ಮಂಗಳೂರು ತಾಲ್ಲೂಕುಗಳಿಗೆ ಸೇರಿದ ಬಾರ್ಕೂರು, ಮಂದರ್ತಿ, ಕೊಕ್ಕರ್ಣೆ, ಸುರಾಲು, ಬಿಲ್ಲಾಡಿ, ಹೆಸ್ಕುಂದ, ಹಾಲಾಡಿ, ಸಿರಯಾರ, ನೆಡೂರು, ಕೊಲ್ಲೂರು, ಬಜಪೆ ಮುಂತಾದ ಊರುಗಳಲ್ಲಿ ಹೆಚ್ಚಿನ ಸಂಖ್ಯೆಯ ಕುಡುಬಿಯರು ಕಂಡು ಬರುತ್ತಾರೆ. ಈ ಸ್ಥಳಗಳೆಲ್ಲವೂ ಕರಾವಳಿ ಪ್ರದೇಶದಲ್ಲಿದ್ದರೂ ಕಾಡಿನಿಂದ ಆವೃತ್ತವಾದ ಹಾಗೂ ಘಟ್ಟಗಳಿಗೆ ಸಮೀಪವಾದ ಸ್ಥಳಗಳು ಎಂಬುದನ್ನು ಗಮನಿಸಬೇಕು. ಒಂದು ಕಾಲಕ್ಕೆ ಕುಮರಿ ಬೇಸಾಯವೇ ಇವರಿಗೂ ಪ್ರಮುಖವಾಗಿದ್ದು, ಕಾಡಿನ ಕಾನೂನುಗಳು ಬಿಗಿಯಾದ ನಂತರ ಒಡೆಯರ ತೋಟಗಳಲ್ಲಿ ಕೆಲಸ ಮಾಡುವುದು ಇವರಿಗೆ ಅನಿವಾರ್ಯವಾಯಿತು. ಒಟ್ಟಿನಲ್ಲಿ ಕುಣಬಿಯರಿಗೂ ಕುಡುಬಿಯರಿಗೂ ಅನೇಕ ಸಮಾನ ಅಂಶಗಳಿವೆ. ಕುಮ್ರಿ ಬೇಸಾಯ, ಹೋಳಿಹಬ್ಬ ಗುಮಟೆ ವಾದನ, ಮತ್ತು ಕೊಂಕಣಿ ಕಥಾನಕಗಳು ಇವಿಷ್ಟೇ ಸಾಕು, ಈ ಎರಡು ಸಮುದಾಯಗಳೂ ಮೂಲದಲ್ಲಿ ಒಂದೇ ಎಂದು ತೀರ್ಮಾನಿಸುವುದಕ್ಕೆ.