ಕುಣಬಿಯರು ಬುಡಕಟ್ಟು ಲಕ್ಷಣಗಳನ್ನು ಹೋಂದಿದ್ದಾರೆಯೇ? ಅವರನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಬೇಕೆ? ಎಂಬುದು ನಮ್ಮ ಮುಂದಿರು ಮಹುಮುಖ್ಯ ಪ್ರಶ್ನೆ. ಕುಣಬಿ ಸಮಾಜದ ಸಂಘಟಕರು ಕೂಡ ಅಂಥ ಹಕ್ಕೊತ್ತಾಯಗಳನ್ನು ಮಾಡುತ್ತಲೇ ಬಂದಿದ್ದಾರೆ. ಈ ಹಿನ್ನೆಲೆಯಲ್ಲಿ ಕುಣಬಿಯರ ಬುಡಕಟ್ಟು ಲಕ್ಷಣಗಳನ್ನು ಚರ್ಚಿಸಬೇಕಾದದ್ದು ಇಂದಿನ ತುರ್ತು ಎಂದು ನನ್ನ ಭಾವನೆ.

ಕುಣಬಿಯರು ವಾಸಿಸುವ ನೆಲೆಗಳು, ಅವರಿಗೂ ಮತ್ತು ಕಾಡಿಗೂ ಇರುವ ಸಂಬಂಧಗಳು, ಆಹಾರ ಸಂಗ್ರಹಣೆ, ಬೇಟೆ ಮತ್ತು ಕುಮ್ರಿ ಬೇಸಾಯದಂಥ ಆದಿಮ ಪದ್ಧತಿಗಳು, ಸಮೂಹ ಜೀವನ ಕ್ರಮ, ಪ್ರತ್ಯೇಕ ಭಾಷೆ ಹಾಗೂ ಅವರ ವಿಶಿಷ್ಟವಾದ ಸಾಂಸ್ಕೃತಿಕ ವಿಶಿಷ್ಟತೆಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ ಅವರು ಖಂಡಿತವಾಗಿಯೂ ‘ಬುಡಕಟ್ಟು’ ಸಮುದಾಯ ಎಂಬುದರಲ್ಲಿ ಎರಡು ಮಾತಿಲ್ಲ.

೧೮೯೩ ರಲ್ಲಿ ಪ್ರಕಟವಾದ ಮುಂಬಯಿ ಇಲಾಖೆಗೆ ಸೇರಿದ ಕರ್ನಾಟಕ ಭಾಗದ ಗೆಝೆಟೆಯರ್ (ಭಾಷಾಂತರ ವೆಂಕಟ ರಂಗೋಕಟ್ಟಿ)ನಲ್ಲಿ ಕುಣಬಿಯರನ್ನು ಕುರಿತ ವಿವರಗಳು ಹೀಗೆವೆ. ‘ಕೊಂಕಣೀ’ ಕುಣಬಿಗಳಿಗೆ ಕಾಳೆಕುಣಬೀ ಯೆಂತಲೂ ಅನ್ನುವರು. ಅವರು ನಡಾವಳಿಗಳು ಬಹುತರ ಮರಾಠೀ ಕುಣಬಿಗಳಂತೆಯೇ ಇರುತ್ತವೆ. ಭೇದವೇನೆಂದರೆ ಇವರು ಕೊಂಕಣೀ ಭಾಷೆಯನ್ನಾಡುವರು; ಬಿರಾಮಣಿ, ಪಂಚಮಾಯಾ, ಸಾತೆರಿ ಎಂಬ ದೇವತೆಗಳಿಗೆ ನಡಕೊಳ್ಳುವರು. ಇವರದೊಂದು ಕುಟುಂಬದಲ್ಲಿ ೧೦೦, ೧೫೦ರ ವರೆಗೆ ಜನರಿರುವರ; ಆದುದರಿಂದ ಇವರ ಮನೆಗಳು ಬಹಳ ದೊಡ್ಡವಿರುತ್ತವೆ. ಕುರಿ, ಕೋಳಿ, ಕೋಳಿಯ ತತ್ತಿ, ಇಷ್ಟು ಹೊರ್ತಾಗಿ ಮರಾಠೀ ಕುಣಬಿಗಳು ತಿನ್ನುವ ಎಲ್ಲ ಬಗೆಯ ಮಾಂಸವನ್ನು ಇವರು ತಿನ್ನುವರು; ಆದರೆ ಮದ್ಯ ಮುಟ್ಟುವುದಿಲ್ಲ. ಇವರ ಹೆಂಗಸರು ಕುಬ್ಬಸ ತೊಡುವುದಿಲ್ಲ. ಇವರಲ್ಲಿ ಕೆಲವರಿಗೆ ಗುರುಗೋಸಾವಿ ಇರುತ್ತಾನೆ, ಕೆಲವರಿಗೆ ಇರುವುದಿಲ್ಲ; ಇಲ್ಲದವನು ಬೇಕಾದಾಗ ಗುರುವನ್ನು ಮಾಡಿಕೊಳ್ಳಬಹುದು. ಕಾಳೇ ಕುಣಬಿಗಳಲ್ಲಿ ವಿಧವೆಗಳಿಗೆ ಲಗ್ನವಿಲ್ಲ. ಮಾಲೆ ಏರಿಸುವ ವಿಧಾನವು ಇವರಲ್ಲಿಯೂ ಆಗುತ್ತದೆ.

ಕಾನಡಾ ಜಿಲ್ಲೆಯ ಕಾಳೆ ಕುಣಬಿಗಳು ಉಳವಿಯ ಬಸವಣ್ಣನಿಗೆ ನಡಕೊಳ್ಳುವರು. ಅವರಲ್ಲಿಯ ಕಾರ್ಯಗಳನ್ನು ಮಾಡಿಸುವವರು ಜಂಗಮರೇ. ಆದರೂ ಅವರು ಲಿಂಗಧಾರಣ ಮಾಡುವುದಿಲ್ಲ; ಅಡವಿಯ ಪಶುಗಳ ಮಾಂಸ ತಿನ್ನುವರು. ಸಾಕಿದ ಪಶುಗಳ ಮಾಂಸ ತಿನ್ನುವವನನ್ನು ಕುಲದಿಂದ ಹೊರಗೆ ಇಡುವರು. ಇವರ ಹಳ್ಳಿಗಳು ಅಡವಿಯ ನೆರೆಯಲ್ಲಿ ಇರುತ್ತವೆ. ಹಳ್ಳಿಗೆ ಹಿರಯನಾದವನ ಮನೆಯಲ್ಲಿ ಮಾತ್ರ ತುಳಸೀ ಗಿಡವಿರತಕ್ಕದ್ದು. ಕುಲದೇವತೆಯ ಮೂರ್ತಿಯಾದರೂ ಅವನ ಮನೆಯಲ್ಲಿಯೇ ಇರುವದು. ಇವರ ಹಣೆಯ ಮೇಲೆ ಹಾಲಕ್ಕೀ ವೊಕ್ಕಲಿಗರಂತೆ ನಾಮವಿರುತ್ತದೆ. ಮತ್ತೂ ಹೆಂಗಸರು ಕರೆಮಣೆಯ ಸರಗಳನ್ನು ಕೊರಳಲ್ಲಿ ಹಾಕಿಕೊಳ್ಳುವರು ಅವರಿಗೆ ಕುಬಸವಿಲ್ಲ. ಈ ಕುಣಬಿಗಳು ಮೊದಲು ಕುಮ್ರಿ ಕಡಿಯಗೊಡುವುದಿಲ್ಲಾದ ಕಾರಣ ಇವರು ಕೂಲಿಯಿಂದ ಹೊಟ್ಟೆ ತುಂಬಿಕೊಳ್ಳುವರು; ಹೆಂಗಸರು ಚಾಪೀ ಹೆಣೆಯುವರು. ಈ ಕೊಂಕಣರು ಹಾಲಕ್ಕೀ ವೊಕ್ಕಲಿಗರಂತೆ ಸೊಪ್ಪು ಸುಲಿಯದಿದ್ದ ತೆಂಗಿನ ಕಾಯಿಯನ್ನು ಮೆನೆಯಲ್ಲಿ ಇಟ್ಟು ಹಿರಿಯರ ಮೂರ್ತಿಯೆಂದು ಅದನ್ನು ಪೂಜಿಸುವರು. ಇವರು ಹಡಿಯುವ ಹೆಂಗಸಿಗಾಗಿ ಪಡಸಾಲೆಯಲ್ಲಿ ತಟ್ಟೀಕಟ್ಟೆ ಸ್ಥಳ ಮಾಡುವರು. ಹಡಿದ ನಾಲ್ಕನೇ ದಿವಸ ಅಗಸನು ಬಂದು ಯಾವತ್ತು ಮನೆಗೂ ಮನೆಯೊಳಗಿನ ಜನರಿಗೂ ಬೂದಿ ಕೂಡಿದ ನೀರು ಶಿಡಿಸಿ ಶುದ್ಧ ಮಾಡುವನು. ಐದನೇ ದಿವಸ ಮರದೊಳಗೆ ಅಕ್ಕೀ ಹರವಿ ತೆಂಗಿನ ಕಾಯಿ ವೀಳ್ಯಗಳನ್ನು ಇಟ್ಟ ಬಳಿಕ ಬಾಣಂತಿಯು ಅದಕ್ಕೆ ನಮಸ್ಕಾರ ಮಾಡಿ ಆ ಮೊರದೊಳಗೆ ಕೂಸು ಮಲಗಿಸುವಳು. ಬಳಿಕ ಇಬ್ಬರು ಮುತ್ತೈದಿತರು ಮರದ ಎರಡೂ ಮಗ್ಗಲಿಗೆ ನಿಂತು ಕೂಸನ್ನು ನಾಲ್ಕಾರು ಸಾರಿ ಯೆತ್ತೆತ್ತಿ ತಾಯಿಯ ತೊಡೆಯ ಮೇಲೆ ಹಾಕಿದನಂತರ ಆ ಕೂಸಿಗೆ ಹೆಸರಿಡುವರು. ಮರದೊಳಗಿನ ಅಕ್ಕಿಯನ್ನು ಜೋಗಿಗಳಿಗೆ ಕೊಟ್ಟು ಕರೆಮಣಿಗಳನ್ನು ಕೊಂಡು ಕೂಸಿನ ಕೊರಳೊಳಗೆ ಕಟ್ಟುವರು. ಕೂಸುಗಳಿಗೆ ಹಲ್ಲು ಬರುವಾಗ ಮೇಲಿನ ಹಲ್ಲು ಮೊದಲು ಮೂಡಿದರೆ, ಸೋದರ ಮಾವನಿಗೂ ಚಿಕ್ಕ ದೊಡ್ಡಪ್ಪಗಳಿಗೂ ವೊಳಿತಲ್ಲ. ಈ ಗಂಡಾಂತರವನ್ನು ನೀಗುವುದಕ್ಕೋಸ್ಕರ ಸೋದರ ಮಾವನು ಕೂಸಿನ ಮೋರೆಯ ಮೇಲೆ ಅರಿವೇ ಹೊಚ್ಚಿ. ಅದರ ಹೆಣೆಗೆ ಸೂಜೀ ಚುಚ್ಚಿ ರಕ್ತ ತೆಗಿಯುವನು. ಮಕ್ಕಳು ಹೆಣ್ಣಾಗಲಿ ಗಂಡಾಗಲಿ ಮೂರು ವರ್ಷದವಾದವೆಂದರೆ ಅವುಗಳ ತಲೆ ಬೋಳಿಸಿ, ಗಂಡು ಮಕ್ಕಳ ಕೂದಲನ್ನು ಹಲಸಿನ ಮರದ ಬೊಡ್ಡಿಗೆ, ಹೆಣ್ಣು ಮಕ್ಕಳ ಕೂದಲನ್ನು ಬಾಳೇ ಗಿಡದ ಬೊಡ್ಡೆಗೆ ಚೆಲ್ಲುವರು. ಲಗ್ನದಲ್ಲಿ ಮದುಮಕ್ಕಳ ನಡುವೆ ಅಂತಃಪಟ ಹಿಡಿದು ಅವರನ್ನು ಎದರು ಬದರಾಗಿ ನಿಲ್ಲಿಸಿದ ಬಳಿಕ ಜಂಗಮನು ಬಂದು ಅವರಿಬ್ಬರ ಕೈಗಳನ್ನು ಹೊಂದಿಸಿ ನೀರೆರಚುವನು, ಮತ್ತೂ ದೇವಳೀ ಕುಲದ ಮುತ್ತೈದಿಯ ಮದಿಮಕ್ಕಳ ಕೊರಳಲ್ಲಿ ಮಂಗಳಸೂತ್ರ ಕಟ್ಟುವಳು. ತರುವಾಯ ಮದಿಮಗಳ ವೊಡ ಹುಟ್ಟಿದವನು ಆ ಗಂಡ ಹೆಂಡರ ಶರಗುಗಳಿಗೆ ಗಂಟು ಹಾಕಿದ ಬಳಿಕ ನೆರೆದ ಜನರು ಮದಿಮಕ್ಕಳ ಮೇಲೆ ಅಕ್ಕಿಕಾಳು ಹಾಕುವರು, ಮತ್ತೂ ಹೆಂಗಸರು ಕೊಂಕಣೀ ನಿಯಮವಿಲ್ಲ, ವಿಧವೆಗಳಿಗೆ ಲಗ್ನ ಉಂಟು. ಈ ಕೊಂಕಣಿಗರು ಹೆಣಗಳನ್ನು ಹುಗಿಯುವರು. ಮರಣದ ಸೂತಕ ಮೂರೇ ದಿವಸ; ಅಗಸನ ನೀರಿನಿಂದ ಶುದ್ಧಿ, ಈ ಕಾಳೇ ಕುಣಬಿಗಳು ಇರುವ ಹಳ್ಳಿಯಲ್ಲಿ ಬುದ್ಧಿವಂತನೆಂಬವನೊಬ್ಬ ಅಧಿಕಾರಿ ಇರುವನು. ಇದಲ್ಲದೆ ಕೆಲವು ಹಳ್ಳಿಗೆ ಕೂಡಿ ಮಹಾಲೆಂಬ ಹೆಸರಿಟ್ಟು, ಆ ಮಹಾಲಿನ ಮುಖ್ಯ ಸ್ಥಳದಲ್ಲಿ ಮಹಾನಿನ ಬುದ್ಧಿವಂತನನ್ನು ಗೊತ್ತು ಮಾಡುವರು. ಊರ ಬುದ್ಧಿವಂತರು ಮಹಾಲಿನ ಬುದ್ಧಿವಂತನ ಕೈಕೆಳಗಿನವರು. ಈ ಯಾವತ್ತು ಬುದ್ಧಿವಂತರ ಮೇಲಾಧಿಕಾರಿಯು ಪೋಂಡಿಯನೆಂಬವನು ಗೋವೆಯಲ್ಲಿ ಇರುತ್ತಾನೆ. ಬೇರೆ ಜಾತಿಯವರ ಸಂಗಡ ಬಳಿಕೆ, ಹೆಂಗಸರ ಹಾದರ, ಮುಂತಾದ ತಪ್ಪುಗಳಿಗಾಗಿ ಊರ ಬುದ್ಧಿವಂತನು ಬೇಕಾದವರನ್ನು ಕುಲದಿಂದ ಹೊರಗೆ ತೆಗೆಯುವನು. ತಪ್ಪುಗಾರನನ್ನು ಕಡೆಗೇ ಕುಲದಿಂದ ಹೊರಗೆ ತೆಗಿಯುವ ಅಧಿಕಾರವು ಮಹಾಲಿನ ಬುದ್ಧಿವಂತನಿಗೆ ಇರುತ್ತದೆ. ಈ ಪ್ರಕಾರ ಬಹಿಷ್ಕೃತರಾದವರನ್ನು ಕುಲದೊಳಗೆ ತಕ್ಕೊಳ್ಳುವ ಅಧಿಕಾರವು ಫೊಂಡಿಯನಿಗೆ ಮಾತ್ರ ಇರುತ್ತದೆ. ಊರ ಬುದ್ಧಿವಂತನು ನೂರು ರೂಪಾಯಿಯವರೆಗೆ ದಂಡ ಮಾಡಬಹುದು. ಫೊಂಡಿಯನು ಪ್ರತಿ ವರ್ಷ ಈ ಕುಣಬಿಗಳ ಕೈಯಿಂದ ಮನೆಗೆ ನಾಲ್ಕರಿಂದ ಎಂಟು ಆಣೆಯ ವರೆಗೆ ಕಪ್ಪವೆತ್ತುವನು. ಈ ಕಪ್ಪವನ್ನು ಮೂರು ವರ್ಷಕ್ಕೊಂಮೆ ಯೆತ್ತುವರು. ಆಗ ಜಾತಿ ಸಂಬಂಧದ ದೊಡ್ಡ ದೊಡ್ಡ ಸಂಗತಿಗಳಿಗಾಗಿ ದೊಡ್ಡ ದೊಡ್ಡ ಸಭೆಗಳು ಕೂಡುವವು ಆ ಸಭೆಗಳ ವೆಚ್ಚವನ್ನು ವಂತಿಗೆಯಿಂದ ಮಾಡುವರು. ಇದಿಷ್ಟು ವೆಂಕಟರಂಗೋ ಕಟ್ಟಿ ಅವರು ಹೇಳುವ ಮಾತು.

ನನ್ನ ಕ್ಷೇತ್ರಕಾರ್ಯದ ಸಂದರ್ಭದಲ್ಲಿ ನಾನು ಗುರುತಿಸಿದ ಸಾಮಾಜಿಕ ವಿಚಾರಗಳನ್ನು ಇನ್ನು ಮುಂದೆ ಪ್ರಸ್ತುತಪಡಿಸುತ್ತೇನೆ.

ಕುಳಾವಿ : ಮೇಲಿನ ಗ್ಯಾಝೆಟಿಯರ್ ನಲ್ಲಿ ತಿಳಿಸಿರುವಂತೆ ಒಂದು ಕಾಲಕ್ಕೆ ಕುಣಬಿಯರದ್ದು ಕೂಡು ಕುಟುಂಬ. ನೂರಾರು ಜನರು ಒಂದೇ ಸೂರಿನಡಿಯಲ್ಲಿ ವಾಸ ಮಾಡುತ್ತಿದ್ದರು. ದಕ್ಷಿಣ ಕನ್ನಡದಲ್ಲಿ ಕುಡುಬಿಯರ ಇಂಥ ಕೂಡು ಕುಟುಂಬಗಳು ಇತ್ತೀಚೆಗಿನವರೆಗೂ ಇದ್ದುದನ್ನು ನಾವು ಕಾಣಬಹುದಾಗಿತ್ತು. ಕ್ರಮೇಣ ಕುಟುಂಬಗಳು ವಿಘಟನೆಗೆ ಒಳಗಾದರೂ ಸಾಮೂಹಿಕ ಬೇಸಾಯ ಕ್ರಮ ಹಾಗೇ ಉಳಿದಿತ್ತು. ಇವರು ಮಾಡುತ್ತಿದ್ದ ಕುಮರಿ ಬೇಸಾಯ ಇಡೀ ಕುಳಾವಿಯ ಊರೊಟ್ಟಿನದ್ದಾಗಿರುತ್ತಿತ್ತು. ಅದೊಂದು ರೀತಿಯಲ್ಲಿ ಅದು ಆದಿಮ ಸಮಾಜವಾದ. ಎಲ್ಲರೂ ಕೂಡಿ ದುಡಿಯುವುದು, ಎಲ್ಲರೂ ಸಮಾನವಾಗಿ ಹಂಚಿಕೊಳ್ಳುವುದು. ಒಂದು ಬೇಟೆ ಆದರೂ ಅಷ್ಟೆ, ಕುಣಬಿಯ ದೈವದ ಮುಂದೆ ಅದರ ಸಮಪಾಲು ಆಗಿ ಎಲ್ಲರಿಗೂ ಹಂಚಿಕೆಯಾಗುತ್ತಿತ್ತು.

ಇದೀಗ ಕುಟುಂಬಗಳು ಬಿಡಿಬಿಡಿಯಾಗಿ ವಾಸಿಸುತ್ತಿದ್ದರೂ ಕುಣಬಿಯರು ಒಗ್ಗಟ್ಟು ಎಂದೂ ಮುರಿಯುವುದಿಲ್ಲ. ಯಾವುದೇ ಕುಟುಂಬದ ಕಷ್ಟ ಇಡೀ ಕುಳಾವಿಯದ್ದು. ಒಂದು ಕುಟುಂಬದ ಮದುವೆ ಅಥವಾ ಒಂದು ಸಾವು ಇಡೀ ಊರಿನದ್ದು. ಆ ಕೂಡ ಕುಟುಂಬದ ಅನೇಕ ಆಶಯಗಳು ಈ ರೀತಿಯಲ್ಲಿ ಇಂದಿಗೂ ಉಳಿದಿವೆ. ಒಂದು ಹಳ್ಳಿ ಅಥವಾ ಕುಳಾವಿ ಎಂದರೆ ಅಲ್ಲಿ ಸುಮಾರು ೧೦ ರಿಂದ ೪೬ ರವರೆಗೆ ಮನೆಗಳು ಇರುತ್ತವೆ. ಮೊದಲಿಗೆ ಹುಲ್ಲಿನ ಗುಡಿಸಲುಗಳ ಸಮೂಹ ಮಾತ್ರ ಇರುತ್ತಿದ್ದವು. ಆಧುನಿಕ ಸಂಪರ್ಕ ಹಾಗೂ ಇತರ ಸಮುದಾಯಗಳ ಪ್ರಭಾವದಿಂದಾಗಿ ಇಂದು ಹೆಂಚುಗಳು ಅಲ್ಲಲ್ಲಿ ಕಾಣಿಸಿಕೊಂಡಿವೆ. ಕುಣಬಿಯರು ಅತಿ ಹೆಚ್ಚು ಮಳೆ ಬೀಳುವ ದಟ್ಟ ಕಾನನದ ಘಟ್ಟ ಪ್ರದೇಶಗಳಲ್ಲಿ ವಾಸ ಮಾಡುವುದರಿಂದ ಅವರ ಮನೆಗಳು ಎತ್ತರದ ಸೂರಿನಿಂದ ನೀಳವಾಗಿ ನಿರ್ಮಾಣವಾಗಿರುತ್ತವೆ. ರಭಸದಿಂದ ಬೀಳುವ ಮಳೆ ಹನಿ ಕ್ಷಣಾರ್ಧದಲ್ಲಿ ಜಾರಿ ಬೀಳುವಂತೆ ಅದರ ವ್ಯವಸ್ಥೆ. ಈಗಿನ ಹೆಂಚಿನ ಮನೆಗಳೂ ಅಷ್ಟೆ. ಆಕಾಶದ ಕಡೆಗೆ ಮುಖಮಾಡಿ ನಿಂತ ನೀಳ ಕೊಕ್ಕಿನ ಹಕ್ಕಿಯಂತೆ ಅವು ಲಂಬಾಕೃತಿಯ ಕಲಾಕೃತಿಗಳು ಎನ್ನಬಹುದು.

ಕುಳಾವಿಯ ಒಟ್ಟಾರೆ ಮನೆಗಳ ಸುತ್ತ ರಕ್ಷಣೆಗಾಗಿ ಕಾವಲು ಬೇಲಿ. ಇದು ಒಂದು ರೀತಿಯಲ್ಲಿ ಬೇಲಿಯ ಕೋಟೆ. ದಟ್ಟ ಕಾನನದ ಕಾಡು ಮೃಗಗಳಿಂದ ತಮ್ಮನ್ನೂ ತಮ್ಮ ದನಕರುಗಳನ್ನೂ ರಕ್ಷಿಸುವ ಮರಮಟ್ಟುಗಳ ಕೋಟೆ ಅದು. ಆ ಬೇಲಿಯ ಬಲೆಯೊಳಗೆ ಪ್ರತಿ ಮನೆಯ ಆಸುಪಾಸಿನಲ್ಲಿ ಗೆಡ್ಡೆ, ಗೆಣಸು, ಕೆಸವು, ಬಾಳೆ, ಹಾಗೂ ವಿವಿಧ ಬಳ್ಳಿಗಳ ಹಸಿರು ವನಗಳು. ಕಾಡಿನಲ್ಲಿಯೂ ಕಾಣಸಿಗದ ಎಷ್ಟೋ ವಿಧವಾದ ವನಮೂಲದ ಗೆಡ್ಡೆಗೆಣಸುಗಳು ಕುಣಬಿಗಳ ಈ ಹಸಿರು ತೋಟಗಳಲ್ಲಿ ಸಜೀವವಾಗಿವೆ. ಕೋನ, ಮೂಡ್ಲಿ, ನಾಗರಕೋಣ, ಮುಳ್ಳಿ, ಧವೆ ಆಳು, ಗಾವಾ, ತಾರೋಬಿಕೊನೆ, ಪಿರಸೆ, ಗೊಮಾಟೆ, ಝರಿಬೊಳೆ – ಇವೇ ಮುಂತಾದ ವನಮೂಲದ ಗೆಡ್ಡೆಗಳು ಮತ್ತೆಲ್ಲೂ ಲಭ್ಯವಿಲ್ಲ. ಕುಣಬಿಗಳು ಉಪಯೋಗಿಸುವ ಕಾಡಿನಲ್ಲಿಯೇ ಸಹಜವಾಗಿ ಬೆಳೆಯುವ ಅಣಬೆಗಳೂ ಅಷ್ಟೆ. ಬಣ್ಣ ಬಣ್ಣದ ಅಣಬೆಗಳು. ವಿಚಿತ್ರ ಆಕಾರದ ಗೆಣಸುಗಳು, ರುಚಿಯೂ ಅಷ್ಟೆ.

ಇವರ ಮನೆಗಳು ಅರಣ್ಯದ ಭಾಗವೋ ಅಥವಾ ಅರಣ್ಯವೇ ಇವರ ಮನೆಗಳ ಒಂದು ಭಾಗವೋ ಎಂಬಂತೆ ನಿಸರ್ಗದೊಡನೆ ಇವರದು ಅವಿನಾಭಾವ ಸಂಬಂಧ.

ಇಂಥ ಸಸ್ಯಸಮೃದ್ಧ ಕುಳಾವಿಗಳಿಗೆ ವಿವಿಧ ದೈವಗಳ ಕಾವಲು, ದೈವಗಳೆಂದರೆ ಆಕಾರವೇ ಇಲ್ಲದ ಉರುಟು ಕಲ್ಲುಗಳು. ಅದು ನಿಜಕ್ಕೂ ಆದಿವಾಸಿಗಳ ಸಹಜ ಕಲ್ಪನೆ.

ಸ್ಥಳೀಯ ಆಡಳಿತ

ಕುಳಾವಿಗಳ ಆಡಳಿತ ನೋಡಿಕೊಳ್ಳಲು ಅಧಿಕೃತ ಜನರಿರುತ್ತಾರೆ. ಒಂದೇ ಕುಲಕ್ಕೆ ಸೇರಿದ ವಿವಿಧ ಕುಟುಂಬಗಳ ಆಡಳಿತ ನೋಡಿಕೊಳ್ಳಲು ‘ಬುದ್ಧಿವಂತ’ ಎಂಬ ಹಿರಿಯನಿರುತ್ತಾನೆ. ಕುಟುಂಬಗಳ ನಡುವಿನ ಯಾವುದೇ ವ್ಯವಹಾರ. ತಂಟೆ-ತಕರಾರು, ವ್ಯಾಜ್ಯಗಳಿದ್ದಲ್ಲಿ ಬುದ್ಧಿವಂತ ಹೇಳಿದ ತೀರ್ಮಾನವೇ ಅಂತಿಮ. ವಿವಿಧ ಕುಳಾವಿಗಳ ನಡುವಿನ ವ್ಯವಹಾರಗಳನ್ನು ‘ಗಾವಡೆ’ಗಳು ನೋಡಿಕೊಳ್ಳುತ್ತಾರೆ. ಗಾವಡೆ ಬುದ್ಧಿವಂತನಿಗಿಂತ ಮೇಲಿನ ಸ್ಥಾನದಲ್ಲಿರುತ್ತಾನೆ. ಒಟ್ಟಾರೆ ಕುಣಬಿ ಸಮುದಾಯದ ಹಬ್ಬ ಹರಿದಿನ ಹಾಗೂ ಜಾತ್ರೆ ಉತ್ಸವಗಳ ಉಸ್ತುವಾರಿ ಮತ್ತು ಇತರೆ ತೀರ್ಮಾನಗಳನ್ನು ಬುದ್ಧಿವಂತರು ಮತ್ತು ಗಾವಡೆಗಳು ಒಟ್ಟಾಗಿ ಸೇರಿ ತೀರ್ಮಾನಿಸುತ್ತಾರೆ. ವರ್ಷದಲ್ಲಿ ಒಂದೆರಡು ಬಾರಿ ಈ ರೀತಿಯ ಅಂತರ ಕುಳಾವಿಗಳ ಅಂದರೆ ಇಡೀ ಸೀಮೆಯ ಸಮೂಹಸಭೆ ನಡೆಯುವುದುಂಟು. ಕುಣಬಿಗಳ ದೈವಪೂಜೆ ಮತ್ತು ದೇವಸ್ಥಾನಗಳ ಉಸ್ತುವಾರಿಯನ್ನು ‘ಮಿರಾಶಿ’ಗಳು ನೋಡಿಕೊಳ್ಳುತ್ತಾರೆ. ಮಿರಾಶಿ ಪೂಜಾರಿಯೂ ಹೌದು. ಉಸ್ತುವಾರಿಯ ಮುಖಂಡನೂ ಹೌದು-ಸೀಮೆಗಳ ಸಭೆಗಳಿಗೆ ಮಿರಾಶಿಗಳನ್ನು ಗೌರವ ಸದಸ್ಯರನ್ನಾಗಿ ಕರೆಸಲಾಗುತ್ತದೆ.

ಸೀಮಾ ಪದ್ಧತಿ

ಕುಣಬಿಯರ ಅನೇಕ ಕುಳಾವಿಗಳು ಸೇರಿದ ‘ಸೀಮೆ’ ಒಂದು ವಿಶಿಷ್ಟವಾದ ರೇಖೆ ಹಾಗೂ ವಿವಿಧ ಗಡಿಗಳನ್ನು ಒಳಗೊಂಡಿರುತ್ತದೆ. ಅವರ ಬೇಟೆ, ಕುಮರಿ ಬೇಸಾಯ, ಅವರನ್ನು ಕಾಯುವ ವಿವಿಧ ದೈವಗಳ ವ್ಯಾಪ್ತಿಗಳನ್ನು ಈ ಸೀಮೆ ನಿರ್ದಿಷ್ಟಪಡಿಸುತ್ತದೆ. ಶ್ರೀ ಬಿ. ಪಿ. ಮಹೇಂದ್ರ ಕುಮಾರ್ ಅವರು ‘ಬುಡಕಟ್ಟು ಅಧ್ಯಯನದ ಸಂಚಿಕೆ – ೪’ ರಲ್ಲಿ ಈ ಬಗ್ಗೆ ಬರೆದ ಬರಹದ ಒಂದು ಭಾಗವನ್ನು ಇಲ್ಲಿ ಉಲ್ಲೇಶಿಸ ಬಯುಸತ್ತೇನೆ.

ಯಾವುದೇ ಬುಡಕಟ್ಟು ಜನಾಂಗ ತಾವು ತಲತಲಾಂತರಗಳಿಂದ ಜೀವಿಸಿದ ಪರಿಚಿತ ಪರಿಸರದಲ್ಲಿ ತಮ್ಮ ಪೂರ್ಣಮಟ್ಟದ ಬುಡಕಟ್ಟು ಸಂಸ್ಕೃತಿಯ ನೆಮ್ಮದಿಯ ಬದುಕಿನ ಚಟುವಟಿಕೆಗಳಿಗಾಗಿ ತಮಗೆ ಬೇಕಾದಷ್ಟು ಸಂಪನ್ಮೂಲಾಧಾರಿತ ಕಾಡನ್ನು ಹಳ್ಳಿಯ ಸುತ್ತಲು ಸಾಂಪ್ರದಾಯಿಕವಾಗಿ ಗುರುತಿಸಿಕೊಂಡ ಸಾಂಸ್ಕೃತಿಕ ಗಡಿರೇಖೆಯನ್ನು ಸೀಮಾ/ ಜಮ್ಮಾ /ಎಲ್ಲೆ ಗಡಿ ಎಂದು ಕರೆಯಲಾಗುತ್ತದೆ. ಹೀಗೆ ಸಾವಿರಾರು ವರ್ಷಗಳಿಂದಲೂ ನಿರ್ಮಿಸಿಕೊಂಡ ಈ ಗಡಿರೇಖೆಯ ಒಳಗೆ ನಿರ್ದಿಷ್ಟ ಬುಡಕಟ್ಟು ಸಮುದಾಯ ತನ್ನ ಬದುಕಿಗಾಗಿ ಕಾಡಿನ ಉತ್ಪನ್ನ, ಆಹಾರಕ್ಕಾಗಿ ಬೇಸಾಯ ಹಾಗೂ ಇಡೀ ಬುಡಕಟ್ಟು ಜನಾಂಗದ ಸಾಂಸ್ಕೃತಿಕ ಬದುಕಿನ ಅವಿಚ್ಛಿನ್ನ ಚಟುವಟಿಕೆಯ ಭಾಗವಾಗಿರುತ್ತದೆ. ಇದನ್ನೆ ಸೀಮಾ ಪದ್ಧತಿಯೆಂದು ಕರೆಯಲಾಗುತ್ತದೆ ತಲೆತಲಾಂತರಗಳಿಂದ ಮಡಿದ ಬುಡಕಟ್ಟು ಪೂರ್ವಜರ ಆತ್ಮಗಳು ಈ ಸೀಮಾರೇಖೆಯ ಒಳಗಿನ ಕ್ಷೇತ್ರದಲ್ಲಿ ನೆಲೆಸಿದ್ದು, ಕಾಡನ್ನು ಮತ್ತು ಕಾಡಿನ ಸಂಪನ್ಮೂಲಗಳನ್ನು ಬುಡಕಟ್ಟು ಹಳ್ಳಿಯವರಿಗಾಗಿ ರಕ್ಷಿಸುತ್ತಾ ಸಂಚರಿಸುತ್ತಿರುತ್ತವೆ. ಇವರ ಆತ್ಮಗಳು ಹಳ್ಳಿಯ ಗಡಿ ರೇಖೆಯ ಅಂಚುಗಳಲ್ಲಿ ಕಲ್ಲಿನ ಗುಂಡಿನ ರೂಪದಲ್ಲಿಯೂ, ಮರಗಳಲ್ಲಿಯೂ ಇದ್ದು ಸೀಮೆಯನ್ನು ರಕ್ಷಿಸಿರುತ್ತಾರೆಂಬ ಗಾಢವಾದ ನಂಬಿಕೆಯಿಂದಾಗಿ ಆ ಬುಡಕಟ್ಟು ಜನಾಂಗಕ್ಕೆ ಗಡಿಯ ವ್ಯಾಪ್ತಿಯ ಒಳಗಿನ ಬದುಕು ನಿಶ್ಚಿಂತೆಯಿಂದಿರುತ್ತದೆ. ಹೀಗೆ ಮಡಿದವರ ಆತ್ಮಗಳಲ್ಲದೆ ಆತ್ಮಗಳನ್ನು ರಕ್ಷಿಸುವ ದೇವತೆಗಳು, ರಕ್ಷಣಾ ದೇವರುಗಳು ಬೇರೆ ಬೇರೆಯವೆಯಿದ್ದು, ಒಂದಕ್ಕೊಂದು ಪರಸ್ಪರ ಪೂರಕವಾಗಿ ಸೀಮಾ ಕ್ಷೇತ್ರದ ವ್ಯಾಪ್ತಿಯ ಜವಾಬ್ದಾರಿಯನ್ನು ಹೊಂದಿರುತ್ತವೆ.

ಯಾವುದೇ ಕುಳಾವಿಯ ಸೀಮೆಯೊಳಗೆ ಬೇರೆ ಸೀಮೆ ಪ್ರವೇಶ ನಿಶಿದ್ಧವಾಗಿರುತ್ತದೆ. ಒಂದು ಕುಳಾವಿಗೆ ಸಂಬಂಧಪಟ್ಟ ಕಾಡಿನ ಸೀಮಾ ಕಾರ್ಯಕ್ಷೇತ್ರ ೨-೫ ಮಿ. ರೇಡಿಯೆಸ್‌ನಿಂದ ಹಿಡಿದು ೫-೬ ಕಿ.ಮೀ. ವ್ಯಾಪ್ತಿಯವರೆಗೂ ಆಗಿರಬಹುದಾಗಿದ್ದು, ಅದರ ವ್ಯಾಪ್ತಿ ಒಳಗೆ ಸಂಬಂಧಪಟ್ಟ ಕುಳಾವಿಯ ಅಷ್ಟು ಬುಡಕಟ್ಟು ಸಮುದಾಯದ ಜೀವನ ನೆಮ್ಮದಿಯಿಂದ ನಡೆಯುತ್ತಿರುತ್ತದೆ. ನಿರ್ದಿಷ್ಟ ಕುಳಾವಿಯ ಕಿರು ಅಣ್ಯ ಉತ್ಪನ್ನಗಳ ಒಡೆತನ ನಿರ್ದಿಷ್ಟ ಕುಳಾವಿಗೆ ಮಾತ್ರ ಮೀಸಲಿರುತ್ತದೆ. ಅಲ್ಲಿ ಸಿಗುವ ಸೀಗೆ ಜೇನು ಮುರಗಲು, ಅಮಸೋಲ್‌, ಅಂಟುವಾಳ, ಔಷಧಿ ಸಸ್ಯಗಳು ಕಾಡಮೃಗ ಬೇಟೆ ಹಾಗೂ ಅಪಾರ ಕಾಡಿನ ಉತ್ಪನ್ನಗಳನ್ನು ಬೇರೆ ಕುಳಾವಿಯರು ಪಡೆಯುವ ಹಕ್ಕಿರುವುದಿಲ್ಲ ಹಾಗೂ ಆಕ್ರಮಿಸುವಂತಿಲ್ಲ. ಹಾಗೊಂದು ವೇಳೆ ನಿರ್ದಿಷ್ಟ ಹಳ್ಳಿಗೆ ಸೇರಿದ ಕಾಡಿನ ಗಡಿವ್ಯಾಪ್ತಿಯಲ್ಲಿ ಬೇರೆ ಕುಳಾವಿಯವರಾಗಲೀ ಅಥವಾ ಬೇರೆಯವರಾಗಲೀ ಅತಿಕ್ರಮಣಮಾಡಿ ಸಂಪನ್ಮೂಲ ಪಡೆದವರಾದರೆ ಸಂಬಂಧಪಟ್ಟ ಆತ್ಮಗಳು, ಗಡಿದೇವತೆಗಳು ಸಂಬಂಧಪಟ್ಟವರನ್ನು ಸುಮ್ಮನೆ ಬಿಡುವುದಿಲ್ಲವೆಂಬ ನಂಬಿಕೆಗಳು ಅವರಲ್ಲಿ ಗಾಢವಾಗಿವೆ. ಈ ಗಡಿಯೊಳಗಿನ ಸೀಮಾ ಕ್ಷೇತ್ರಗಳಲ್ಲಿ ಸಂಬಂಧಪಟ್ಟ ಕುಳಾವಿಯರಾದರು ಆತ್ಮಗಳಿಗೆ ದೇವತೆಗಳಿಗೆ ಕೇಳದೆ ಕಾಡಿನ ಯಾವುದೇ ಉತ್ಪನ್ನ ತೆಗೆಯುವ ಹಾಗಿಲ್ಲ. ಒಂದು ಸಣ್ಣ ಸಸಿಯಿರಲಿ ಒಣಗಿದ ಮರ ಕಡಿಯಬೇಕಾದರೂ ಸಂಬಂಧಪಟ್ಟ ಆತ್ಮಗಳಿಗೆ ಕೇಳಿ ಪೂಜೆಮಾಡಿ ಅನುಮತಿ ಪಡೆದ ನಂತರವೇ ಮಾಡಬೇಕಾಗುತ್ತದೆ. ಸಂಬಂಧಪಟ್ಟ ಪೂರ್ವಜರ ಆತ್ಮಗಳು ಗಡಿದೇವತೆಗಳು ಕುಳಾವಿಯ ಸಮುದಾಯವನ್ನು ಯಾವತ್ತು ಕಾಯುತ್ತಿರುತ್ತಾರೆ. ಹಾಗಾಗಿ ಗಡಿ ವ್ಯಾಪ್ತಿಯ ಕ್ಷೇತ್ರದಲ್ಲಿ ಕುಣಬಿ ಬುಡಕಟ್ಟು ಜನಾಂಗ ಯಾವುದೇ ಭೂತ ಪ್ರೇತಗಳ, ಕಾಡಿನ ಕೆಟ್ಟ ಮೃಗಗಳ ಭಯವಿಲ್ಲದೆ ನೆಮ್ಮದಿಯಿಂದ ರಾತ್ರಿಯ ವೇಳೆಯಲ್ಲೂ ಸಂಚರಿಸುತ್ತಾರೆ. ಇವರ ಕಾಡನ್ನಷ್ಟೆ ಅಲ್ಲ, ಇವರು ವ್ಯವಸಾಯ ಮಾಡಿರುವ ಕೃಷಿ ಜಮೀನನ್ನು ಕೂಡ ದನಕರು ಇತರ ಕಾಡು ಮೃಗಗಳಿಂದ ಆತ್ಮಗಳು, ವಾಗ್ರೋಗಳು ಕಾಪಾಡುತ್ತವೆ. ಗಡಿರೇಖೆ ಅಂಚುಗಳಲ್ಲಿ ಬೇರೆ ಬೇರೆ ಆತ್ಮಗಳ ಕಲ್ಲುಗಳನ್ನು ಇಟ್ಟು ಗಡಿರೇಖೆಯನ್ನು ಗುರುತಿಸಿರುತ್ತಾರೆ. ಕಾಡಿನಲ್ಲಿ ಕುಣಬಿಯ ಪ್ರತಿಯೊಂದು ಹಳ್ಳಿಗಳಿಗೆ ಪ್ರತ್ಯೇಕವಾದ ಗಡಿ ವ್ಯಾಪ್ತಿಯ ಪ್ರದೇಶವನ್ನು ರಕ್ಷಿಸುತ್ತಿರುತ್ತವೆ. ಇವುಗಳಿಗೆ ನಿರ್ದಿಷ್ಟ ಪ್ರದೇಶಗಳಿದ್ದು ಪ್ರತಿ ಹಳ್ಳಿಗಳಿಗೂ ವಿಭಿನ್ನವಾದ ಆತ್ಮಗಳು, ದೇವತೆಗಳು ಗಡಿ ವ್ಯಾಪ್ತಿ ಪ್ರದೇಶವನ್ನು ರಕ್ಷಿಸುತ್ತಿರುತ್ತವೆ. ಇವುಗಳಿಗೆ ಪ್ರದೇಶಗಳಿದ್ದು ಪ್ರತಿ ಹಳ್ಳಿಯ ಸಮುದಾಯ ಪೂಜೆಗಳನ್ನು ಹಾಗೂ ಜಾತ್ರೆಗಳನ್ನು ನಡೆಸುತ್ತಿರುತ್ತಾರೆ. ಉದಾಹರಣೆಗೆ ಜೋಯಿಡಾ ತಾಲ್ಲೂಕಿನಲ್ಲಿ ವರ್ಷಕ್ಕೊಮ್ಮೆ ಪ್ರಮುಖವಾಗಿ ಜರುಗಿಸಲ್ಪಡುವ ಜಾತ್ರೆಗಳಾದ ಕಾಪ್ರಿ, ಗಾಂಗೋಡಕಾಳ, ಗಾವಳಾದೇವಿ ಜಾತ್ರೆಗಳು ಸೀಮಾ ಪದ್ಧತಿಯ ಗಡಿದೇವತೆಗಳ ಜಾತ್ರೆಗಳಾಗಿವೆ.

ಕಾಪ್ರಿ ಜಾತ್ರೆಯ ಗಾವಡೆವಾಡಾ ಹಳ್ಳಿಯಲ್ಲಿ ನಡೆಯುತ್ತದೆ. ತುಳಸಿ ಹಬ್ಬದ ಮಾರನೆಯ ದಿನ ನಡೆಯುವ ಅಂದರೆ ದ್ವಾದಶಿ ಕಾರ್ತಿಕ ಪೂರ್ಣಿಮೆಯ ಮಾರನೆಯ ದಿನ ನಡೆಯುವ ಜಾತ್ರೆಗೆ ಕುಣಬಿ ಬುಡಕಟ್ಟುಗಳಲ್ಲದೆ ತಾಲ್ಲೂಕಿನ ಎಲ್ಲರೂ ಸಾವಿರಾರು ಸಂಖ್ಯೆಯಲ್ಲಿ ಸೇರಿರುತ್ತಾರೆ. ಕಾಪ್ರಿ ದೇವತೆಗೆ ಹರಕೆ ಹೊತ್ತವರು ಕಂಬಳಿಗಳನ್ನು ದೇವರಿಗೆ ಅರ್ಪಿಸಿರುತ್ತಾರೆ. ಕಾಪ್ರಿ ದೇವರೆಂದರೆ ಗಾಂಗೋಡಾದ ಪೂರ್ವಜರ ಆತ್ಮಗಳು. ಇವುಗಳು ವರ್ಷಾದ್ಯಂತ ಗಾಂಗೋಡಾ ಹಳ್ಳಿಗೆ ಸಂಬಂಧಪಟ್ಟ ಕಾಡಿನ ಇಡೀ ಕ್ಷೇತ್ರದ ವ್ಯಾಪ್ತಿಯನ್ನು ಮತ್ತು ಬೆಳೆದ ಪೈರನ್ನು ರಕ್ಷಿಸುತ್ತಿರುತ್ತವೆ. ಕಾಪ್ರಿಗಳಲ್ಲಿ ಎರಡಿದ್ದು ಒಂದು ಹೆಣ್ಣು ಒಂದು ಗಂಡಾಗಿದೆ. ಒಂದು ಕಾಡಿನ ಗಡಿಯನ್ನು, ಇನ್ನೊಂದು ಹಳ್ಳಿಯನ್ನು ರಕ್ಷಿಸುತ್ತಿರುತ್ತದೆ. ಆದರೆ ತುಳಸಿ ಹಬ್ಬದ ಮಾರನೆಯ ದಿನ ಈ ಎರಡು ಕಾಪ್ರಿಯ ಆತ್ಮಗಳು ಮನುಷ್ಯನ ಮೇಲೆ ಬಂದು ಹಳ್ಳಿಯ ಬುದ್ಧಿವಂತನ ತುಳಸಿಕಟ್ಟಿಯ ಸುತ್ತು ನರ್ತಿಸತೊಡಗುತ್ತವೆ. ಹಳ್ಳಿಯ ಬುದ್ಧಿವಂತನ (ನಾಯಕ) ಗುಡಿಸಲು ಮುಂದಿನ ತುಳಸಿಕಟ್ಟೆಯ ಆವರಣ ಜಾತ್ರೆಯ ಕೇಂದ್ರ ಬಿಂದುವಾಗುತ್ತದೆ. ಮೊದಮೊದಲು ಕುಣಬಿ ಬುಡಕಟ್ಟಿಗೆ ಸೀಮಿತವಾಗಿದ್ದ ಈ ಜಾತ್ರೆ, ಈಗೀಗ ಹೆಚ್ಚು ಜನಪ್ರಿಯವಾಗುತ್ತಿದ್ದು ಜಿಲ್ಲೆಯ ವಿವಿಧ ಭಾಗಗಳಿಂದ ಇತರ ಸಹಸ್ರಾರು ಜನ ಈ ಜಾತ್ರೆಗೆ ಆಗಮಿಸಿ ನಡೆದುಕೊಳ್ಳಲು ಶುರುಮಾಡಿದ್ದಾರೆ.

ಜಾತ್ರೆಯ ಸಮಯದಲ್ಲಿ ಕುಣಬಿಗಳ ಮೈಮೇಲೆ ಬರುವ ಕಾಪ್ರಿ ಆತ್ಮಗಳ ದೇಹವನ್ನು ಎಲ್ಲಿಯೂ ಜಾಗ ಬಿಡದಂತೆ ಕಂಬಳಿಯಿಂದ ಪೂರ್ಣವಾಗಿ ಸುತ್ತಿ ಹೂವಿನಿಂದ ವಿಶೇಷವಾಗಿ ಅಲಂಕರಿಸಲಾಗಿರುತ್ತದೆ. ನಿಗದಿತ ವೇಳೆಗೆ ಒಂದು ಕಾಪ್ರಿ ಕಾಡಿನ ಗಡಿ ಭಾಗದಿಂದಲೂ ಮತ್ತೊಂದು ಹಳ್ಳಿಗಳಿಂದಲೂ ಪ್ರತ್ಯೇಕವಾಗಿ ತುಳಸಿಕಟ್ಟೆಯ ಸುತ್ತ ಕುಣಿಯಲು ಆರಂಬಿಸುತ್ತವೆ. ಆಗ ಗಾವಡೆವಾಡದ ಬುದ್ದಿವಂತ ಹಳ್ಳಿಯ ಇತರ ಬುಡಕಟ್ಟುಗಳೊಂದಿಗೆ ಕಾಪ್ರಿಗಳ ಜೊತೆ ಗುಮಟೆ ವಾದ್ಯಗಳ ತಾಳಕ್ಕೆ ತಕ್ಕಂತೆ ನರ್ತಿಸುತ್ತ “ಸಾಹೇಬ ಖಾತಾ ದೊನಗೊಟೆ ಸಾಹಿತಬಿಣಿಚೆ ಖಲೆ ಮ್ಹಟೆ” ಹೀಗೆ ಜನಪದ ಗೀತೆ ಹೇಳುತ್ತ ತುಳಸಿ ಕಟ್ಟೆ ಸುತ್ತುತ್ತಾರೆ. ಈ ಜನಪದ ಗೀತೆ ಗಾವಡೆವಾಡದಲ್ಲಿ ನಡೆದ ಪ್ರಮುಖ ಘಟನೆಗಳು. ಜನರ ಮೇಲೆ ನಡೆದ ಶೋಷಣೆಗಳು, ಅನುಭವಿಸಿದ ಯಾತನೆ ದುಃಖಗಳು, ಅವರ ಪೂರ್ಣ ಹೋರಾಟದ ಇತಿಹಾಸದ ಬದುಕನ್ನು ಕಾಪ್ರಿಗಳ ಮೂಲಕ ಕೊಂಕಣಿ ಮಿಶ್ರಿತ ಕುಣಬಿ ಭಾಷೆಯಲ್ಲಿ ಹಾಡುತ್ತ ಕುಣಿಯುತ್ತಾರೆ. ಈ ಜನಪದ ಗೀತೆಯಲ್ಲಿ ಬ್ರಿಟಿಷರು ಆಳಿದ್ದು, ಇವರನ್ನು ಹಿಂಸಿಸಿದ್ದು, ಬ್ರಿಟಿಷರ ಬಣ್ಣ ನಡುವಳಿಕೆಗಳನ್ನು ಕೂಡ ಲೇವಡಿ ಮಾಡಿ ಹಾಡುವುದು ಇದರಲ್ಲಿದೆ. ಈ ಹಿಂದೆ ಕಾಪ್ರಿಗಳಿಗೆ ಕೋಣಗಳ ಬಲಿ ನೀಡಲಾಗುತ್ತಿತ್ತು. ಈಗ ಅದು ನಿಂತಿದೆ.

ಹೀಗೆ ಎರಡು ದಿನ ನಡೆಯುವ ಜಾತ್ರೆಯ ಸಮುದಾಯದಲ್ಲಿ ಜಾತ್ರೆಗೆ ಆಗಮಿಸಿದ ಯಾವುದೇ ಕುಣಬಿಗಳ ಹಳ್ಳಿಯ ಗದ್ದೆಗಳಲ್ಲಿರುವ ಬೆಳೆಗಳನ್ನು ಯಾರೂ ಕಳುವು ಮಾಡುವುದಿಲ್ಲ. ಹಾಗೂ ಯಾವುದೇ ಕಾಡುಕೋಣ ಹಂದಿಗಳು ತಿಂದು ಹಾಳುಮಾಡುವುದಿಲ್ಲವೆಂಬ ಪ್ರತೀತಿ ಇದ್ದು, ಆ ಎರಡು ದಿನ ಯಾರು ತಮ್ಮ ಹೊಲಗಳನ್ನು ಕಾಯದೇ ಜಾತ್ರೆಗೆ ಹಾಜರಾಗುತ್ತಾರೆ. ಇಲ್ಲಿಯವರೆಗೂ ಯಾರ ಬೆಳೆಗೂ ಧಕ್ಕೆ ಆಗಿಲ್ಲವೆಂದು ಅವರು ಹೇಳಿರುತ್ತಾರೆ. ಯಾವುದೇ ಆಕಾರಗಳಲ್ಲಿದ್ದ ಕಾಪ್ರಿಯ ಆತ್ಮಗಳು ಜಾತ್ರೆಯ ನಂತರ ಹಳ್ಳಿಯ ಹತ್ತಿರದ ಕಾಡಿನ ಪಿಡುಗುಸ (ಗೌಳಿಮರ) ದಲ್ಲಿ ನೆಲೆಸಿರುತ್ತವೆಂದು ೯೯ ವರ್ಷದ ಹಳ್ಳಿಯ ಅತ್ಯಂತ ಹಿರಿಯ ಮಾಂಡಿ ಸಡಿಗಾವಡ ತಿಳಿಸಿರುತ್ತಾರೆ.

ಕುಣಬಿಗಳಲ್ಲಿ ನಡೆಯುವ ಮತ್ತೊಂದು ಪ್ರಸಿದ್ಧ ಜಾತ್ರೆ ಗಾಂಗೋಡ ಕಾಳ ಜಾತ್ರೆ, ಜೋಯಿಡಾದಿಂದ ೧೫ ಕಿ. ಮೀ. ದೂರದ ದಟ್ಟ ಹರಿದ್ವರ್ಣ ಕಾಡಿನಲ್ಲಿರುವ ಗಾಂಗೋಡದಲ್ಲಿ ಸೋಮನಾಥ ದೇವಸ್ಥಾನವಿದೆ. ಅದರ ಮುಂದೆ ಮರದ ಕೆಳಗೆ ೭ ಪುಟ್ಟಪುಟ್ಟ ಗುಂಡು ಕಲ್ಲುಗಳು ಜೊತೆಯಾಗಿದ್ದು, ಇವುಗಳನ್ನು ಕಾಳ ಸತ್ಪುರಷರೆಂದು ಕರೆಯುತ್ತಾರೆ. ಇವರುಗಳೂ ಈ ಹಿಂದೆ ಮಡಿದ ಪೂರ್ವಜರ ಆತ್ಮಗಳೆಂದು ನಂಬಲಾಗಿದೆ. ಇವು ಗಾಂಗೋಡಾ ಸೀಮಾ ಕ್ಷೇತ್ರ ವ್ಯಾಪ್ತಿಯ ೭-೮ ಕಿ. ಮೀ. ಗಡಿಕ್ಷೇತ್ರವನ್ನು ರಕ್ಷಿಸುತ್ತಿರುತ್ತವೆ. ಯಾವುದೇ ಹೊರಗಿನ ಜನಶಕ್ತಿಗಳು ಈ ಸತ್ಪುರಷರನ್ನು ಮೀರಿ ಒಳಬರುವ ಹಾಗಿಲ್ಲ. ಬಂದರೂ ಅವರು ಉಳಿಯಲಾರರು. ಈ ಸತ್ಪುರಷ ಕಾಳರುಗಳಿಗೆ ಬೆಂಬಲವಾಗಿ ಜಲ್ಮಿ ದೇವರು (ಹಳೇ ಹುತ್ತ) ಹತ್ತಿರದಲ್ಲಿದೆ. ಇವೆರಡಕ್ಕೆ ಪೂರಕವಾಗಿ ಗಡಿ ಕ್ಷೇತ್ರದ ವ್ಯಾಪ್ತಿಯ ವೃತ್ತದ ಪರಧಿಗಳಲ್ಲಿ ಮಾಲಜನಿ, ಜಾಡ್ದೋಜನ್ಮಿ, ಭಯಜೋಜನ್ಮಿ, ಪ್ರಾಯಕ, ಭಯಚೋನಶ, ಸಾತೆರಿದೇವಿ, ಬೈರೋರಾಮಲಿಂಗ ದೇವತೆಗಳು ವಿವಿಧ ಸಣ್ಣ, ದಪ್ಪ, ಉದ್ದ ಗುಂಡುಕಲ್ಲಿನ ರೂಪದಲ್ಲಿ ಗಡಿ ಪ್ರದೇಶದ ವೃತ್ತದೊಳಗೆ ಪ್ರತಿಷ್ಠಾಪಿಸಲ್ಪಟ್ಟಿವೆ. ಇವುಗಳು ಒಂದಕ್ಕೊಂದು ಪೂರಕವಾಗಿ ಗಡಿ ಪ್ರದೇಶದ ವ್ಯಾಪ್ತಿಯಲ್ಲಿರುವ ಕಾಡನ್ನು, ಜನರ ಬೆಳೆಯನ್ನು ಸಂರಕ್ಷಿಸುತ್ತಿರುತ್ತವೆ. ಇದಲ್ಲದೇ ಕಾಡಿನ ಮಧ್ಯಭಾಗದ ಕೆಳಗೆ ನೂರಾರು ವರ್ಷಗಳ ಹಳೆಯದಾದ ಲೋಹದಿಂದ ಮಾಡಿದ ಹುಲಿಯ ಆಕೃತಿಯ ವಾಗ್ರೋ ದೇವರನ್ನು ಪ್ರತಿಷ್ಠಾಪಿಸಲಾಗಿದೆ. ವಾಗ್ರೋ ಹುಲಿಯ ಆತ್ಮವಾಗಿದ್ದು ಇದು ದುಷ್ಟ ಮೃಗಗಳನ್ನು, ಕಾಡನ್ನು, ಬೆಳೆಯನ್ನು, ಹಳ್ಳಿಯ ಜನರನ್ನು ಸಂರಕ್ಷಿಸುತ್ತದೆ.

ಇವಕ್ಕೆಲ್ಲಾ ಬೆಂಗಾವಲಾಗಿ ಸೋಮನಾಥನಿರುತ್ತಾನೆ. ಆದರೆ ಎಲ್ಲಕ್ಕಿಂತ ಪ್ರಮುಖವಾದ ಪಾತ್ರ ಗಾಂಗೋಡಕಾಳ ೭ ಸತ್ಪುರಷಗಳದ್ದಾಗಿರುತ್ತದೆ. ಜಾತ್ರೆಯ ಸಮಯದಲ್ಲಿ ಕುರಿಕೋಳಿಗಳ ಬಲಿಯನ್ನು ಸತ್ಪುರುಷಕಾಳರಿಗೆ ನೀಡಿ ಹರಕೆ ಮಾಡಿಕೊಳ್ಳಲಾಗುತ್ತದೆ. ಕುರಿಕೋಳಿಗಳನ್ನು ಬಲಿಗಾಗಿ ಕಡಿಯುವ ಹಾಗೂ ಅವುಗಳನ್ನು ಬಳಸುವ ಕೆಲಸ ಹಳ್ಳಿಯ ಇನ್ನೊಂದು ಜನಾಂಗದ ದೇವಳಿಗಳು ಮಾಡುತ್ತಾರೆ.

ಈ ಗಡಿ ವ್ಯಾಪ್ತಿ ಪ್ರದೇಶದೊಳಗಿರುವ ಕಾಡಿನ ಉತ್ಪನ್ನಗಳನ್ನು ಬೇರೆ ಯಾರೂ ತೆಗೆಯುವ ಹಾಗಿಲ್ಲ. ಖುದ್ಧು ಗಾಂಗೋಡ ಕುಣಬಿಗಳು ಕೂಡ ಕಾಡಿನ ಕಾಳುಮೆಣಸು, ಜೇನುತುಪ್ಪ, ಸೀಗೆ, ವಾಟೆಹುಳಿ, ಮುರುಗಲಿ, ತೆಗೆಯುವ ಮೊದಲು ಗಾಂಗೋಡವಾಳ ಸತ್ಪುರಷರುಗಳಿಗೆ ‘ಮಾತನ್‌’ ಪೂಜೆಯನ್ನು ಬುದ್ದಿವಂತನ ಮೂಲಕ ನೆರೆವೇರಿಸಿ ಅನುಮತಿ ಪಡೆದ ನಂತರವಷ್ಟೇ ಸಂಗ್ರಹಿಸಬಹುದು. ಅಲ್ಲದೆ ಅವರು ಬೆಳೆದ ವರ್ಷದ ಮೊದಲ ಬೆಳೆಯನ್ನು ಕೂಡ ಈ ರೀತಿ ‘ಮಾತನ್‌’ ಪೂಜೆ ನೆರವೇರಿಸಿ ಅನುಮತಿ ಪಡೆದ ಮೇಲೆ ಬಳಸಬಹುದು. ಸೀಮಾರೇಖೆಯ ಒಳಗಿನ ವ್ಯಾಪ್ತಿ ಪ್ರದೇಶದ ಕಾಡಲ್ಲಿ ಯಾರೇ ಕಳ್ಳತನ ಮಾಡಲಿ, ಪ್ರಾಣಿಗಳನ್ನು ಬೇಟೆಮಾಡಲಿ ಅವರನ್ನು ಏಳುಕಾಳ ಸತ್ಪುರಷರು ಇಲ್ಲಿಯ ವರೆವಿಗೂ ಬಿಟ್ಟಿಲ್ಲ. ಸತ್ಪುರುಷರು ಕಳ್ಳರನ್ನು ಬಿಡುವುದಿಲ್ಲವೆಂಬುದು ಹಳ್ಳಿಯ ಜನರ ಗಾಢವಾದ ನಂಬಿಕೆ. ಗಾಂಗೊಡ ಕುಣಬಿ ಕುಳಾವಿಯ ಬುದ್ಧಿವಂತ ರಾಯಸೂಕ್ಟೋ ಮಿರಾಶಿಯ ಹೇಳಿಕೆ ಪ್ರಕಾರ ಈಗಲೂ ಅರಣ್ಯ ಇಲಾಖೆಯವರೂ ಕೂಡ ಯಾವುದೇ ಮರವನ್ನು ಕಡಿಯಬೇಕಾದರೂ ಕೂಡ ಕಾಳ ಸತ್ಪುರಷರಿಗೆ ಪೂಜೆ ಸಲ್ಲಿಸಿ ಹೇಳಿಕೆ ಪಡೆದೇ ಮರ ಕಡಿಯಬೇಕಾಗುತ್ತದೆ. ಈ ಸಂಪ್ರದಾಯ ಇಂದಿಗೂ ಚಾಲ್ತಿಯಲ್ಲಿದೆ. ಹಾಗಾಗಿ ಇಲ್ಲಿಯವರೆವಿಗೂ ಯಾರೂ ಈ ನಿಯಮ ಮೀರಿ ದೇವರನ್ನು ಕೇಳದೆ ಮರ ಇರಲಿ ಒಂದು ಕಡ್ಡಿಯನ್ನು ಕಾಡಿನಿಂದ ತೆಗೆದು ಕೊಂಡು ಹೋಗುವುದಿಲ್ಲ. ಹೀಗೆ ದೇವರ ಅನುಮತಿ ಪಡೆಯದೇ ಮರಗಳ್ಳತನ ಹಾಗೂ ಕಾಡಿನ ಉತ್ಪನ್ನ ಕದ್ದವರು ಬೇರೆ ಬೇರೆ ರೀತಿ ಶಿಕ್ಷೆಗೊಳಗೊಂಡು ನಾಶವಾದ ಬಗ್ಗೆ ಇಲ್ಲಿ ದಂತ ಕಥೆಗಳೇ ಇವೆ.

ಹೀಗೆಯೇ ತಾಡಸೇತ, ಕೊಂದರು, ಲಿಂಬುಡಸೇತ್‌, ಹಳ್ಳಿಗಳಲ್ಲಿ ಸವಡಿನಾಸ, ಮಡೆನಾಸ, ಅಣ್ಣ ತಮ್ಮಂದಿರ ಪೂರ್ವಜರ ಆತ್ಮಗಳು, ಮಲಕರ್ಣಿ ಹಳ್ಳಿಯಲ್ಲಿ ಕಡಂನಾಥ ದೇವರು, ಭಯಚೋನಾಸ, ಜನ್ಮಿಗಳು, ಕಾಟೇಲ, ತೆಲೂಲಿ ಹಳ್ಳಿಗಳಲ್ಲಿ ಪಂಚಕಾಳಾ ಭೈರವರುಗಳು ಹಾಗೂ ವಾಗ್ರೋಗಳು, ಮಾತಕರ್ಣ ಹಳ್ಳಿಯಲ್ಲಿ ಗಂಗೇಶ್ವರ, ಜನ್ಮಿ, ಸೆಳಪಯಕ, ಡಿಗ್ಗಿ ಹಳ್ಳಿಯಲ್ಲಿ ನಡೆಯುವ ಗಾವಳಾದೇವಿ ಜಾತ್ರೆ ಹೀಗೆ ಎಲ್ಲಾ ಕುಣಬಿ ಹಳ್ಳಿಯಲ್ಲಿ ನಡೆಯುವ ಗಾವಳಾದೇವಿ ಜಾತ್ರೆ ಹೀಗೆ ಎಲ್ಲಾ ಕುಣಬಿ ಹಳ್ಳಿಗಳಲ್ಲೂ ಕೂಡ ಆಯಾ ಹಳ್ಳಿಗಳಿಗೆ ಸೀಮಿತ ವ್ಯಾಪ್ತಿ ಪ್ರದೇಶದ ಗಡಿ ರಕ್ಷಕ ಆತ್ಮಗಳು, ದೇವರು ದೇವತೆಗಳು ಈ ಜನಾಂಗದ ಕಾಡನ್ನು, ಫೈರನ್ನು, ಸಂರಕ್ಷಿಸುತ್ತಿರುತ್ತವೆ. ಈ ಎಲ್ಲೆ/ ಗಡಿ / ಸೀಮಾ ಪದ್ಧತಿ ಮತ್ತು ಅದರ ಪರಿಕಲ್ಪನೆ ಬುಡಕಟ್ಟು ಸಂಸ್ಕೃತಿಯ ಅವಿಭಾಜ್ಯ ಅಂಗವಾಗಿದ್ದು, ತಮ್ಮ ಸಮುದಾಯದ ಬೆಳೆದ ಉತ್ಪನ್ನಗಳನ್ನಷ್ಟೇ ಅಲ್ಲ, ಸುತ್ತಲ ಕಾಡನ್ನೂ ಕಾಡಿನ ಸಕಲ ಜೀವಿಗಳನ್ನೂ ಸಂರಕ್ಷಿಸುವ ಅಲ್ಲದೆ ಕರಾರುವಕ್ಕಾಗಿ ತಮ್ಮ ಮುಂದಿನ ಪೀಳಿಗೆಗಳಿಗೆ ಸಂಪನ್ಮೂಲಗಳನ್ನು ಉಳಿಸಿ ಬೆಳೆಸಿ ಕಾಪಾಡಿಕೊಳ್ಳುವ ಮಹತ್ತರ ಸಿದ್ಧಾಂತವನ್ನು ಈ ಸೀಮಾ ಪದ್ಧತಿ ಮೌಲ್ಯಗಳನ್ನು ಪ್ರತಿಪಾದಿಸುತ್ತವೆ.

ಪ್ರಪಂಚಕ್ಕೆ ಮಾದರಿಯಾಗಬಲ್ಲ, ಸಂಪನ್ಮೂಲ ರಕ್ಷಣೆಗಳ ಸಿದ್ಧಾಂತಗಳಿಗೆ ಉತ್ತಮ ಬುನಾದಿಯಾಗಬಲ್ಲ ಒಂದು ಜನಪದ ಸಂಸ್ಕೃತಿಯ ಆಚರಣೆ ಎಲ್ಲರ ದಿವ್ಯ ನಿರ್ಲಕ್ಷ್ಯಕೊಳಗಾಗಿ ಜೀವ ಕಳೆದುಕೊಳ್ಳುತ್ತಿದೆ. ವಿನಾಶದ ಅಂಚಿಗೆ ಬಂದು ನಿಂತಿದೆ.

ಬುಡಕಟ್ಟು ಜನಾಂಗಗಳಲ್ಲಿರುವ ಇಂತಹ ಶ್ರೇಷ್ಠ ಮೌಲ್ಯಾಚರಣೆಗಳೇ ಇಂದಿಗೂ ಪ್ರಪಂಚದಲ್ಲೆಡೆ, ಎಲ್ಲೆಲ್ಲಿ ಬುಡಕಟ್ಟು ಸಮುದಾಯಗಳು ನೆಲೆಸಿವೆಯೋ ಅಲ್ಲಲ್ಲಿ ಮಾತ್ರ ಕಾಡು ಉಳಿದಿರುವುದಕ್ಕೆ ಸೀಮಾಪದ್ಧತಿಯ ಶ್ರೇಷ್ಠ ಆಚರಣೆ ಕಾರಣ ಎಂದು ಸಂಶೋಧನೆಗಳಿಂದ ದೃಢಪಟ್ಟಿದೆ.

ಚಾರಿತ್ರಿಕ ಊಹೆಗಳು

ಕುಣಬಿಯರು ಅಭಿಮಾನದಿಂದ ಒಬ್ಬ ವ್ಯಕ್ತಿಯನ್ನು ನೆನೆಯುತ್ತಾರೆ. ಆತನ ಹೆಸರು ‘ಕುಂಬೀರಾಯ’. ಅವರ ಪ್ರಕಾರ ಕುಂಬಿರಾಯ ಐತಿಹಾಸಿಕ ವ್ಯಕ್ತಿ. ಹನ್ನೆರಡನೇ ಶತಮಾನದಲ್ಲಿ ಇವನು ಬಿದಿರುವಳ್ಳಿ (ದಾಂಡೇಲಿ)ಯ ಸಾಮಂತನಾಗಿದ್ದ ಎಂಬುದು ಅವರ ವಾದ. ಕಲ್ಯಾಣದಲ್ಲಿ ವಚನಕಾರರ ಕ್ರಾಂತಿಯ ನಂತರ, ಅಲ್ಲಿನ ವಿಪ್ಲವದ ಕಾರಣ ಉತ್ತರ ಕನ್ನಡದ ಕಾಡಿಗೆ ಧಾವಿಸಿ ಬಂದ ಚನ್ನಬಸವಣ್ಣನನ್ನು ಶತೃಗಳಿಂದ ಪಾರುಮಾಡಿ ಆಶ್ರಯ ಕೊಟ್ಟವ ಈ ಕುಂಬಿರಾಯ ಎಂಬುದ ಅವರ ನಂಬಿಕೆ. ಕುಂಬಿರಾಯ ಚನ್ನಬಸವಣ್ಣನಿಗೆ ಉಳಿಯಲು ಕೊಟ್ಟ ಜಾಗವೇ ಇಂದಿನ ‘ಉಳವಿ’ ಎಂಬುದು ಅವರ ಊಹೆ. ಬಿಜ್ಜಳನ ಸಮೀಪವರ್ತಿಗಳು ಚೆನ್ನಬಸವಣ್ಣನನ್ನು ಅಟ್ಟಿಸಿಕೊಂಡು ಬಂದು ಜೋಯಿಡ ಹತ್ತಿರದ ಒಂದು ಒಂದು ಹಳ್ಳಿಯಲ್ಲಿ ಅವನ ಸಹವರ್ತಿಗಳಾಗಿದ್ದ ಕೆಲವರನ್ನು ಕೊಂದರು. ಆದ್ದರಿಂದ ಆ ಜಾಗಕ್ಕೆ ‘ಕೊಂದರ್’ ಎಂಬ ಹೆಸರು ಬಂತಂತೆ. ಕೊಂದರ್ ಈಗಲೂ ಸಂಪೂರ್ಣವಾಗಿ ಕುಣಬಿಗಳೇ ಇರುವ ಹಳ್ಳಿ. ಬಿಜ್ಜಳನ ಕಡೆಯವರು ತಾವು ಕೊಂದ ಹೆಣಗಳನ್ನು ಮುಂದೆ ಒಂದು ಜಾಗದಲ್ಲಿ ಎಸೆದರು. ಈಗ ಅದು ‘ಹೆಣಕೋಳ್‌’ ಆಗಿದೆಯಂತೆ. ಇದು ಕೂಡ ಕುಣಬಿ ಹಳ್ಳಿ ಈ ಎಲ್ಲ ಪಲಾಯನದಲ್ಲಿ ಅಳಿದುಳಿದವರಿಗೆ ಕುಂಬಿರಾಯ ತನ್ನ ಆಡಳಿತದ ಪರದಿಯಲ್ಲಿ ಇದ್ದ ವಿವಿಧ ಗುಹೆಗಳಲ್ಲಿ ಉಳಿಯಲು ಅವಕಾಶ ಮಾಡಿಕೊಟ್ಟ. ಆದ್ದರಿಂದ ಅದೇ ಇಂದಿನ ಉಳವಿಯಾಯಿತು.

ಕುಣಬಿಯರು ಹೆಚ್ಚಾಗಿ ವಾಸಿಸುವ ಇನ್ನೂ ಅನೇಕ ಸ್ಥಳಗಳಿಗೆ ಕುತೂಹಲಭರಿತ ಐತಿಹ್ಯಗಳಿವೆ. ಇವತ್ತಿನ ಕೈಗಾರಿಕಾ ನಗರ ದಾಂಡೇಲಿ ಅಭಿವೃದ್ಧಿ ಹೊಂದಿದ್ದು ಬ್ರಿಟಿಷ್‌ ವಸಾಹತುವಿನ ನಂತರ. ಮೂಲದಲ್ಲಿ ದಾಂಡೇಲಿ ಕುಣಬಿಯರ ವಾಸಸ್ಥಾನ. ಮೊದಲು ಇದಕ್ಕೆ ಬಿದುರವಳ್ಳಿ ಕೋಟಿ ಎಂಬ ಹೆಸರಿತ್ತು. ಕದಂಬರು. ಪೇಶ್ವೆಗಳು ಮತ್ತು ಮರಾಠರು ಕೂಡ ಇಲ್ಲಿ ಆಳಿದ್ದಾರೆ. ದಾಂಡೇಲಿ ಬಿದಿರಿಗೆ ಪ್ರಸಿದ್ಧವಾದದ್ದು. ಆದ್ದರಿಂದಲೇ ಇಲ್ಲಿ ಕಾಗದದ ಕಾರ್ಖಾನೆಯೂ ಇದೆ. ಆದ್ದರಿಂದ ದಾಂಡೇಲಿಯ ಮೂಲ ಹೆಸರು ಬಿದಿರುವಳ್ಳಿ. ಮರಾಠಿಯಲ್ಲಿ ಬಿದಿರುಗಳುವಿಗೆ ದಂಡ ಎಂದು ಕರೆಯುತ್ತಾರೆ. ಮರಾಠಿ ರೂಪಾಂತರದಲ್ಲಿ ಬಿದಿರುವಳ್ಳಿ ದಂಡವಳ್ಳಿ ಆಗಿ ಮುಂದೆ ‘ದಾಂಡೇಲಿ’ ಆಯಿತು ಎನ್ನುವುದು ಕೆಲವರ ಊಹೆ. ಒಂದು ಕಾಲಕ್ಕೆ ಬಿಲ್ಲಬಾಣಗಳ ಶಸ್ತ್ರಾಗಾರವಾಗಿದ್ದ ಚಾಪದಲ್ಲಿ ಇಂದು ‘ಚಾಪೋಲಿ’ ಆಗಿದೆ. ಕುಣಬಿಯರು ಒಂದು ಕಾಲಕ್ಕೆ ಒಳ್ಳೆಯ ಬೇಟೆಗಾರರು. ಬಿಲ್ಲುವಿದ್ಯೆಯ ನಿಪುಣರು, ಬಿಲ್ಲುಬಾಣಗಳ ವಿದ್ಯೆಯಲ್ಲಿ ಅಪಾರ ಪಾಂಡಿತ್ಯ ಪಡೆದಿದ್ದ ಕುಣಬಿಯರು ಕುಂಬೀರಾಯನ ಕಾಲಕ್ಕೆ ಒಂದು ಸೈನ್ಯವನ್ನೇ ಕಟ್ಟಿಕೊಂಡಿದ್ದರು. ತಮ್ಮ ಸೀಮೆ ಹಾಗೂ ಸೀಮೆಯ ಒಳಗಿನ ಜನ, ಜಾನುವಾರು, ಅರಣ್ಯ ಇತ್ಯಾದಿ ಎಲ್ಲವನ್ನೂ ಒಂದು ಪಾಳೆಪಟ್ಟುವಿನಂತೆಯೇ ಇವರು ಕಾಯುತ್ತಿದ್ದರು. ಹಾಗೆ ನೋಡಿದರೆ ಕುಂಬೀರಾಯ ಒಬ್ಬ ಪ್ರಬಲ ಬುಡಕಟ್ಟು ನಾಯಕ. ಅವನದು ಪುಟ್ಟ ಪ್ರದೇಶವಾದರೂ ಅದೊಂದು ಸ್ವಂತ ಆಢಳಿತ ಸ್ವಾಭಿಮಾನದ ಪಾಳೆಯ ಪಟ್ಟಾಗಿತ್ತು. ಎಂಬುದು ಕೆಲವು ಹಿರಿಯರ ಹೇಳಿಕೆ. ಇಂಥ ಬುಡಕಟ್ಟು ರಾಜ್ಯದ ಪಾರಂಪರಿಕ ಬಿಲ್ಲುವಿದ್ಯೆಗೆ ಪೂರಕವಾದ ಬಿಲ್ಲುಬಾಣಗಳ ಶಸ್ತ್ರಾಗಾರವೇ ಅಂದಿನ ಚಾಪವಲ್ಲಿ, ಅದು ಈಗ ಚಾಪೋಲಿ ಯಾಗಿದೆ. ಇದು ಕೂಡ ಇಂದು ಸಂಪೂರ್ಣವಾಗಿ ಕುಣಬಿಯರ ಹಳ್ಳಿಯಾಗಿಯೇ ಉಳಿದಿದೆ. ಕದಂಬರ ಕಾಲದ ಆಳ್ವಿಕೆಯಲ್ಲಿ ಜಯಂತಿಪುರ ಆಗಿದ್ದುದು ಆನಂತರ ಪೇಶ್ವೆಗಳ ಕಾಲದಲ್ಲಿ ಅವರ ಉಚ್ಛಾರಕ್ಕನುಸಾರವಾಗಿ ‘ಜೋಯಂತಿ’ ಆಗಿ, ಕ್ರಮೇಣ ‘ಜೋಯಿಡಾ’ ಆಯಿತು ಎಂಬ ಅಭಿಪ್ರಾಯಗಳೂ ಇವೆ. ಬಿದುರವಳ್ಳಿ ಕೋಟೆಯ ಹೆಗ್ಗಡೆ ಇದ್ದ ಜಾಗವೇ ಇಂದಿನ ‘ಪ್ರಧಾನಿ’. ಹೆಗ್ಗಡೆ ಎಂಬ ನಾಮಾಂಕಿತ ವ್ಯಕ್ತಿ ಅಂದಿನ ಸಾಮಂತನಿಗೆ ಪ್ರಧಾನಿ ಸ್ವರೂಪದಲ್ಲಿ ಕಾರ್ಯ ನಿರ್ವಹಿಸುತ್ತಿದ್ದ. ಅವನ ವಾಸಸ್ಥಳವನ್ನು ಪ್ರಧಾನಿ ಎಂದು ಕರೆಯಲಾಯಿತು. ದಾಂಡೇಲಿ ಈಗಲೂ ತನ್ನ ಸುತ್ತಣ ಪ್ರದೇಶದಲ್ಲಿ ಅಭೇಧ್ಯವಾದ ಕಾಡನ್ನು ಹೊಂದಿದೆ. ಆದರೆ ಅಂದಿನ ಕಾಲಕ್ಕೆ ಇನ್ನೆಂಥ ಕಾಡು ಇದ್ದಿರಬಹುದು? ಬಿದಿರುವಳ್ಳಿ ಕೋಟೆಗೆ ಹೋಗುವ ಮಾರ್ಗ ಸೂಚಿಸಲು ಒಂದು ಕಡೆಗೆ ಪಟವನ್ನು ಕಟ್ಟಲಾಗುತ್ತಿತ್ತು. ಅಂದರೆ ಪಟವನ್ನು ಹಾರಿಸಲಾಗುತ್ತಿತ್ತು. ಅದು ಅಂದಿನ ಪಟದವಳ್ಳಿ ಈಗ ಅದು ‘ಪಟೋಲಿ’ ಆಗಿದೆ. ಈ ಎಲ್ಲ ಊರು ಹಳ್ಳಿಗಳು ಇಂದಿಗೂ ಬಹುತೇಕ ಕುಣಬಿಯರೇ ವಾಸಿಸುವ ಹಳ್ಳಿಗಳಾಗಿವೆ ಎಂಬುದು ಇಲ್ಲಿ ಗಮನಿಸಬೇಕಾದ ಅಂಶ.