ಕುಣಬಿಯರು ಸಂಪೂರ್ಣವಾಗಿ ದಟ್ಟಾರಣ್ಯದಲ್ಲಿ ವಾಸ ಮಾಡುತ್ತಿದ್ದವರಾದ ಕಾರಣ ಆದಿಯಲ್ಲಿ ಅವರಿಗೆ ನಿಸರ್ಗವೇ ಜೊತೆಗಾರ. ಪ್ರಾಣಿ ಪಕ್ಷಿ ಮರಗಿಡಗಳೇ ಅವರ ಸಹ ಜೀವಿಗಳಾಗಿದ್ದವು. ಒಂದು ಕಾಲಕ್ಕೆ ಅಲೆಮಾರಿಗಳಾಗಿ ಇವರಂತೆಯೇ ಇದ್ದ ಹಾಲಕ್ಕಿ ಒಕ್ಕಲಿಗರು, ಗೌಳಿಗರು ‘ಗೊಂಡರು’ ಮುಕ್ರಿಯರು, ಹಸಲರು ಮುಂತಾದ ಬುಡಕಟ್ಟುಗಳು ಆಕಸ್ಮಿಕವಾಗಿ ಮುಖಾಮುಖಿ ಆಗುತ್ತಿದ್ದಿರಬಹುದು. ನಾಗರಿಕತೆ ಬೆಳೆದಂತೆ ಕಾಡಿನ ಒಳಗೂ ಇತರೆ ಜನ ಬರತೊಡಗಿದರು. ಅದರಲ್ಲಿಯೂ ಬ್ರಿಟೀಷ್‌ ಅಥವಾ ಯುರೋಪಿಯನ್‌ ವಸಾಹತು ಕಾಲಕ್ಕೆ ಕಾಡಿನ ಆಯಕಟ್ಟು ಜಾಗಗಳು ತೋಟಗಳಾಗಿ ಪರಿವರ್ತನೆ ಹೊಂದತೊಡಗಿದವು.

ಹೀಗೆ ಭೂ ಒಡೆಯರ ಮರ್ಜಿಯಲ್ಲಿ ಬಾಳಬೇಕಾದ ಪರಿಸ್ಥಿತಿಯನ್ನು ವಸಾಹತುಶಾಹಿ ವ್ಯವಸ್ಥೆ ತಂದೊಡ್ಡಿತು ಎಂಬುದು ಈಗ ಇತಿಹಾಸ. ಈ ಹಿಂದೆಯೇ ಈ ವಿಷಯವನ್ನು ಪ್ರಸ್ಥಾಪಿಸಿದ್ದೇನೆ. ಆದರೆ ಸ್ವಾತಂತ್ರ್ಯಾನಂತರ ನಮ್ಮನು ನಾವೇ ಆಳಿಕೊಳ್ಳುವ ಹೊಸ ವ್ಯವಸ್ಥೆ ಇಂಥ ಬಿಕ್ಕಟ್ಟುಗಳಿಂದ ಗಿರಿಜನರನ್ನು ರಕ್ಷಿಸಿತೇ ಎಂದರೆ ಅದೂ ಇಲ್ಲ. ಆಗಿನ ಬ್ರಿಟೀಷ್‌ ಸರ್ಕಾರ ರೂಪಿಸಿದ ನೀತಿಯನ್ನೇ ಇನ್ನೊಂದು ರೀತಿಯಲ್ಲಿ ಅನುಸರಿಸುತ್ತಿರುವ ವ್ಯವಸ್ಥೆ ಬ್ರಿಟಿಷ್‌ ಆಡಳಿತಶಾಹಿಗೆ ಪರ್ಯಾಯವಾಗಿ ಅರಣ್ಯ ಇಲಾಖೆಯನ್ನು ತಂದಿಟ್ಟಿದೆ. ಗಿರಿಜನರನ್ನು ಹೊರತುಪಡಿಸಿ ಅಥವಾ ಅವರನ್ನು ಹೊರಹಾಕಿ ಅರಣ್ಯ ಬೆಳೆಸುವ ಅಥವಾ ಸಂರಕ್ಷಿಸುವ ಇವರ ನೀತಿಯೇ ಇಂದು ಹಾಸ್ಯಾಸ್ಪದ. ಈ ವಿಚಾರವಾಗಿ ಮುಂದೆ ಇನ್ನಷ್ಟು ಚರ್ಚೆ ಇದೆಯಾದ್ದರಿಂದ ಇಲ್ಲಿ ಈ ವಿಷಯಕ್ಕೆ ಕಡಿವಾಣ ಹಾಕಬಯಸುತ್ತೇನೆ.

ಇಲ್ಲಿ ನಾವು ಚಿಂತಿಸಬೇಕಾದ ವಿಚಾರವೆಂದರೆ ಒಂದು ಕಾಲಕ್ಕೆ ಸ್ವಚ್ಛಂದವಾಗಿ ನಮ್ಮದು ಈ ಕಾಡು ಎಂಬ ಸ್ವಾಭಿಮಾನದಲ್ಲಿ ಆತ್ಮಸ್ಥೈರ್ಯದಿಂದ ಬದುಕುತ್ತಿದ್ದ ಕುಣಬಿಯರು ವಸಾಹತುಶಾಹಿ ಕಾಲದಲ್ಲಿ ಬ್ರಿಟಿಷರ ತಂತ್ರಕ್ಕೆ ಮತ್ತು ಇದೀಗ ನವ ವಸಾಹತುಶಾಹಿ ಎಂದೇ ಕರೆಯಬಹುದಾದ ಅರಣ್ಯ ಇಲಾಖೆಯ ಕಿರುಕುಳಕ್ಕೆ ನಿರಂತರವಾಗಿ ಒಳಗಾದನಂತರ ಸಾಮಾಜಿಕವಾದ ಇವರ ಸ್ಥಾನಮಾನ ಏನು ಎಂಬುದು ಚರ್ಚೆಗೆ ಗ್ರಾಸವಾಗಿದೆ. ಅವರ ಭೂಮಿಯನ್ನು ಕಿತ್ತುಕೊಂಡು ಅವರ ಕುಮರಿ ಕೃಷಿ ವೃತ್ತಿಯಿಂದ ವಂಚಿಸಲಾಯಿತು. ಅನೇಕ ಹೊಸ ಯೋಜನೆಗಳಿಗಾಗಿ ಇದ್ದ ಭೂಮಿಯನ್ನೂ ಆಕ್ರಮಿಸಿಕೊಂಡದ್ದು ದೊಡ್ಡ ಆಘಾತವೇ ಸರಿ. ಕಾಡಿನಲ್ಲಿ ಸ್ವಚ್ಛಂದವಾಗಿ ಮಾಡುತ್ತಿದ್ದ ಆಹಾರ ಸಂಗ್ರಹಣೆ, ಬೇಟೆ ಇತ್ಯಾದಿಯಾಗಿ ಇದ್ದ ಉಪವೃತ್ತಿಗಳನ್ನು ಅರಣ್ಯ ಇಲಾಖೆಯ ಕಾನೂನುಗಳ ಮೂಲಕ ನಾಶಪಡಿಸಲಾಯಿತು. ಹೀಗೆ ಎಲ್ಲವನ್ನೂ ಕಿತ್ತುಕೊಂಡ ಬಳಿಕ ಅವರನ್ನು ಭೂಮಾಲಿಕರ, ವ್ಯಾಪಾರಿಗಳ ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳ ಮರ್ಜಿಯಲ್ಲಿ ಬದುಕಬೇಕಾದ ಅನಿವಾರ್ಯತೆಯನ್ನು ಉಂಟು ಮಾಡಲಾಯಿತು. ಕುಣಬಿಗಳ ಪರಂಪರಾಗತ ಹಕ್ಕಿನ ವೃತ್ತಿಗಳೆಲ್ಲ ಬಿಕ್ಕಟ್ಟಿಗೆ ಸಿಲುಕಿದ ಪರಿಣಾಮವಾಗಿ ಸಾಮಾಜಿಕ ಸ್ಥಾನಮಾನವೂ ಕುಂದಿಹೋಯಿತು.

ವಾಸ್ತವವಾಗಿ ಕುಣಬಿ ಸಮುದಾಯಕ್ಕೆ ಅಸ್ಪೃಶ್ಯತೆಯ ಸಮಸ್ಯೆ ಇಲ್ಲ. ಆದರೆ ನಿರ್ಗತಿಕರಾದ ಈ ಕಾಡಿನ ಮಕ್ಕಳಿಗೆ ಸಮಾಜದಲ್ಲಿ ಸ್ಥಾನಮಾನ ಇಲ್ಲ. ಉಳ್ಳವನು ಹೇಳಿದಂತೆ ಕೇಳಬೇಕಾದ ಪರಿಸ್ಥಿತಿ ಕೂಡ ಅಸ್ಪೃಶ್ಯತೆಗಿಂತ ಕಡಿಮೆಯಾದುದಲ್ಲ. ಅದರಲ್ಲೂ ಈಗಿನ ಕಾಲದಲ್ಲಿ ಉಳ್ಳವನು ಎಲ್ಲ ಸ್ಥಾನಮಾನಗಳನ್ನೂ ಪಡೆಯುತ್ತಾನೆ. ಇಲ್ಲದವನು ಅಪಮಾನಕರ ಸನ್ನಿವೇಶಗಳಿಗೆ ಪದೇ ಪದೇ ಒಳಗಾಗುತ್ತಾನೆ. ತಮ್ಮ ಸುತ್ತಲ ಪರಿಸರದ ಭಟ್ಟರು, ಮರಾಠಿ ದೇಸಾಯರು, ಶೆಟ್ಟರು (ವಾಣಿಸಮಾಜ) ಮುಂತಾದ ಬಲಿಷ್ಠ ವರ್ಗಗಳಲ್ಲಿ ಬಡ್ಡಿಗೆ ಹಣ ಪಡೆದು ಸತತವಾಗಿ ಶೋಷಣೆಗೆ ಒಳಪಟ್ಟ ಎಷ್ಟೋ ಘಟನೆಗಳು ಸಿಕ್ಕುತ್ತವೆ. ಈ ಹಿನ್ನೆಲೆಯಲ್ಲಿ ಕುಣಬಿಯರು ತಮ್ಮ ಸುತ್ತ ಇರುವ ಇತರೇ ಬಹುಸಂಖ್ಯಾತ ಹಾಗೂ ಮೇಲು ವರ್ಗಗಳಿಂದ ಸಾಮಾಜಿಕವಾದ ಅಭದ್ರತೆಯನ್ನು ಎದುರಿಸುವುದು ಅನಿವಾರ್ಯವಾಗಿದೆ. ಭೂಮಾಲೀಕರಿಂದ, ಪುರೋಹಿತಶಾಹಿಗಳಿಂದ, ಸರ್ಕಾರಿ ಯಂತ್ರಗಳ ಅಧಿಕಾರಶಾಹಿ ಧೋರಣೆಯಿಂದ ಸತತವಾಗಿ ಶೋಷಣೆಗೆ ಒಳಾಗಾಗುತ್ತಿರುವ ಈ ಅಸಲ್ಪಸಂಖ್ಯಾತ, ಅನಾಥ ಸಮುದಾಯಕ್ಕೆ ಆತ್ಮ ವಿಶ್ವಾಸ ತುಂಬುವ ಸಾಮಾಜಿಕ ಯೋಜನೆಗಳ ಅಗತ್ಯವೂ ಇದೆ.

ಆದರೆ ಇತ್ತೀಚಿಗಿನ ದಿನಗಳಲ್ಲಿ ಕುಣಬಿಯರು ಸಂಘಟಿತರಾಗಿ ಇಂಥ ಶೋಷಣೆಗಳ ವಿರುದ್ಧ ದನಿ ಎತ್ತತೊಡಗಿದ್ದಾರೆ. ೧೯೯೯ ರಲ್ಲಿ ಕುಣಬಿ ಸಮುದಾಯದ ಒಬ್ಬ ಯುವತಿಯ ಕೊಲೆಯೂ ಆಯಿತು. ಅಷ್ಟೇ ಅಲ್ಲದೆ ನ್ಯಾಯ ಕೇಳಲು ಹೋದ ತಂದೆಗೆ ಕೈಕಾಲು ಮುರಿಯಲಾಯಿತು. ಆದರೆ ಇದರಿಂದ ರೊಚ್ಚಿಗೆದ್ದ ಕುಣಬಿ ಯುವಜನರ ನಿರಂತರ ಹೋರಾಟದಿಂದಾಗಿ ತಪ್ಪಿತಸ್ಥರು ಜೈಲು ಸೇರಬೇಕಾಯಿತು. ಈ ಘಟನೆ ಅವರೆಲ್ಲರಲ್ಲಿ ಒಂದು ಆತ್ಮ ವಿಶ್ವಾಸವನ್ನು ಹುಟ್ಟಿಸಿದೆ. ಇದೀಗ ಕುಣಬಿಯರೆಲ್ಲ ಒಂದಾಗಿ ಸಮುದಾಯದ ಸಂಘಟನೆಯನ್ನು ಮಾಡಿದ್ದಾರೆ. ಬಹುತೇಕ ಯುವ ಜನರೇ ಸದಸ್ಯರಾಗಿರುವ ಈ ಸಂಘಕ್ಕೆ ಸ್ಥಳೀಯ ಪ್ರಗತಿಪರರ ಬೆಂಬಲವೂ ದೊರೆತಿದೆ.

ಕುಣಬಿಯರ ಕೌಟುಂಬಿಕ ಪದ್ಧತಿಗಳು

ಮದುವೆ

ಒಂದು ಕಾಲಕ್ಕೆ ಮಾತೃಮೂಲ ಕುಟುಂಬವಾಗಿದ್ದಿರಬಹುದಾದ ಕುಣಬಿ ಸಮುದಾಯ ಈಗ ಪೂರ್ಣವಾಗಿ ಪಿತೃಪ್ರಧಾನ ಕುಟುಂಬ ವ್ಯವಸ್ಥೆ ಹೊಂದಿದೆ. ಹಾಗಾಗಿ ಮದುವೆ ಗಂಡಿನ ಮನೆಯಲ್ಲಿಯೇ ನಡೆಯುತ್ತದೆ. ಆದರೆ ಇಡೀ ಕುಳಾವಿಯ ಸಾಮೂಹಿಕ ಜವಾಬ್ದಾರಿ ಇಲ್ಲಿ ಗಮನಸಿಬೇಕಾದ ಅಂಶ. ಮೊದಲು ಹೆಣ್ಣು ನೋಡಲು ಹೋಗುವವನು ಗಂಡಿನ ತಂದೆಯಲ್ಲ. ಕುಳಾವಿಯ ಹಿರಿಯನೊಬ್ಬ ಹೆಣ್ಣಿನ ಮನೆಗೆ ರಾಯಬಾರಿಯಂತೆ ಹೋಗುತ್ತಾನೆ. ಅವನು ಹೋಗಿ ಗಂಡು ಮತ್ತು ಹೆಣ್ಣಿನ ಬಳಿಗಳು ಬೇರೆ ಬೇರೆ ಎಂದು ಖಚಿತಪಡಿಸಿಕೊಂಡ ನಂತರ ಗಂಡಿನ ಕಡೆಯವರಿಗೆ ಹಸಿರು ನಿಶಾನೆ ತೋರುತ್ತಾನೆ. ಒಂದೇ ಬಳಿಯಲ್ಲಿ ಮದುವೆ ನಿಷಿದ್ಧ. ಹೀಗೆ ಮೊದಲಿಗೆ ಹೋದ ಹಿರಿಯ ರಾಯಭಾರಿ ತನಗೆ ಒಪ್ಪಿಗೆಯಾದಲ್ಲಿ ಗಂಡಿನ ಕಡೆಯವರ ಜೊತೆ ಸೇರಿ, ಎಣ್ಣೆ ಮತ್ತು ಹರಿಶಿನ ತೆಗೆದುಕೊಂಡು ಹೋಗಿ ಹೆಣ್ಣಿನ ಮನೆಯ ಐದು ಜನ ಮುತ್ತೈದೆಯರು ಹಾಗೂ ಹೆಣ್ಣಿಗೆ ಎಣ್ಣೆ, ಹರಿಶಿನ ಹಚ್ಚಬೇಕು. ಹಾಗೆಯೇ ಹನ್ನೆರಡುವರೆ ರೂಪಾಯಿಗಳ ಗಂಡಿನ ಕಡೆಯ ತೆರವನ್ನು ಹೆಣ್ಣಿನ ಕಡೆಯವರಿಗೆ ಒಪ್ಪಿಸಬೇಕು. ಹೀಗೆ ಒಪ್ಪಿಗೆ ಶಾಸ್ತ್ರವಾದ ನಂತರ ಹೆಣ್ಣಿನ ಕಡೆಯವರು ಎಲ್ಲರಿಗೆ ಎಲೆ ಅಡಿಕೆ ಕೊಟ್ಟು ತಮ್ಮ ಒಪ್ಪಿಗೆಯನ್ನು ಸೂಚಿಸುತ್ತಾರೆ. ರಾಯಬಾರಿ ಮತ್ತು ಅವರ ಜೊತೆ ಹೋದ ಗಂಡಸರು ಹೆಂಗಸರು ಹೆಣ್ಣನ್ನು ಕರೆದುಕೊಂಡು ಮಾರನೇ ಬೆಳಿಗ್ಗೆ ಸೂರ್ಯ ಹುಟ್ಟುವ ಮೊದಲೇ ಗಂಡಿನ ಮನೆಗೆ ಹೊರಡಬೇಕು. ಅಷ್ಟರಲ್ಲಾಗಲೇ ಗಂಡಿನ ಮನೆಯಲ್ಲಿ ಮದುವೆಯ ಸಿದ್ಧತೆ ನಡೆದಿರುತ್ತದೆ. ಈಗಾಗಲೇ ಬಂಧು ಬಳಗದವರಿಗೆಲ್ಲಾ ವರ್ತಮಾನ ಕೊಟ್ಟಿರುತ್ತಾರದ್ದರಿಂದ ಹಿಂದಿನ ಸಂಜೆಯಿಂದಲೇ ಅವರೆಲ್ಲ ನೆರೆದಿರುತ್ತಾರೆ. ಗಂಡಿನ ಮನೆಯ ಮುಂದಿನ ವಿಶಾಲ ಅಂಗಳವೇ ಮದುವೆ ಮಂಟಪ. ಮೇಲೆ ಮಾವಿನ ಸೊಪ್ಪಿನ ಹಸಿರು ಚಪ್ಪರ. ಚಪ್ಪರದ ಕೆಳಗಿನ ವಿಶಾಲ ಅಂಗಳವೇ ಮದುವೆ ಮಂಟಪ. ಮೇಲೆ ಮಾವಿನ ಸೊಪ್ಪಿನ ಹಸಿರು ಚಪ್ಪರ. ಚಪ್ಪರದ ಕೆಳಗೆ ವಿಶಾಲ ಅಂಗಳದಲ್ಲಿ ಲಕ್ಕಿ ಸೊಪ್ಪಿನ ಹಸಿರು ಆವರಣ ನಿರ್ಮಿಸುತ್ತಾರೆ. ಆಚರಣೆಗಳೂ ಈ ಹಸಿರು ಆವರಣದ ಒಳಗೇ ನಡೆಯಬೇಕು. ಮದುವೆಯ ಹಿಂದಿನ ದಿನ ಸಂಜೆ ಮದುವೆ ಚಪ್ಪರದಲ್ಲಿ ಬೂರುಗದ ಮರದ ಕಾಂಡವನ್ನು ತಂದು ನೆಡುತ್ತಾರೆ. ಅದನ್ನು ನೆಟ್ಟ ನಂತರವೇ ಮದುವೆಯ ಕಾರ್ಯಾಚರಣೆ ಆರಂಭವಾಗುವುದು. ಹೆಣ್ಣಿನ ಮನೆಯಿಂದ ರಾಯಬಾರಿ ಮತ್ತು ಇತರರು ಹೆಣ್ಣು ಕರೆದುಕೊಂಡು ಬಂದಾಗ ಗಂಡು ಹೆಣ್ಣಿನ ಕಡೆಯವರು ಪರಸ್ಪರ ತೆಂಗಿನಕಾಯಿ ಬದಲಾಯಿಸಿಕೊಳ್ಳುತ್ತಾರೆ. ಇದರ ಬೆನ್ನೆಲ್ಲೇ ಮಹಿಳೆಯರು ಮದುವೆ ಪದಗಳನ್ನು ಹಾಡುತ್ತಾರೆ. ಇದೇ ಸಂದರ್ಭದಲ್ಲಿ ಚಪ್ಪರದ ಅಡಿಯಲ್ಲಿ ಕುಲದೇವರ ಹೆಸರಿನಲ್ಲಿ ಮತ್ತು ಪ್ರದೇಶದ ಮುಖ್ಯ ದೈವವಾದ ‘ಜನ್ಮಿ’ ದೇವರ ಹೆಸರಿನಲ್ಲಿ ತೆಂಗಿನಕಾಯಿ ಕಳಸ ಮಾಡಿ ಪೂಜಿಸುತ್ತಾರೆ. ಹೆಣ್ಣು ಮತ್ತು ಗಂಡು ಇಬ್ಬರನ್ನು ಅವರವರ ಸೋದರ ಮಾವಂದಿರು ಎತ್ತಿಕೊಂಡು ಬಂದು ಹಸೆಯ ಮೇಲೆ ನಿಲ್ಲಿಸುತ್ತಾರೆ. ನಂತರ ಗಂಡು ಹೆಣ್ಣಿಗೆ ಮತ್ತು ಹೆಣ್ಣು ಗಂಡಿಗೆ ಬಕುಳದ ಹೂವಿನ ಮಾಲೆಯನ್ನು ಹಾಕಿ, ಬದಲಾಯಿಸಿಕೊಳ್ಳುವ ಮೂಲಕ ವಿವಾಹ ಬಂಧನವಾಗುತ್ತದೆ. ‘ಮಾತ್ಯಾವಳಿ ಜಾಣ’ ಎಂಬ ಕುಣಬಿ ಸಮುದಾಯದ ಹಿರಿಯ ಪೂಜಾರಿ ಮದುವೆಯ ಪೂಜಾವಿಧಿಗಳನ್ನು ನೆರೆವೇರಿಸುತ್ತಾನೆ. ಇತ್ತೀಚೆಗೆ ಕೆಲವಡೆ ಬ್ರಾಹ್ಮಣ ಭಟ್ಟರು ಮಾತ್ಯಾವಳಿ ಜಾಣನ ಸ್ಥಾನವನ್ನು ಆಕ್ರಮಿಸಿರುವುದು ಕಂಡುಬಂದಿದೆ. ವಿವಾಹ ಬಂಧನದ ನಂತರ ಗಂಡು ಹೆಣ್ಣಿನ ಕಡೆಯವರು ಸೋಬಾನ ಪದಗಳನ್ನು ಹಾಡುತ್ತಾರೆ. ಈ ಎಲ್ಲ ವಿಧಿಗಳ ನಂತರ ಸಂಜೆಗೆ ಬಕುಳದ ಹೂವಿನ ಮಾಲೆಗಳನ್ನು ತೆಗೆದು ದಿಮ್ಮಿ ಗಿಡಕ್ಕೆ ಹಾಕುತ್ತಾರೆ. ರಾತ್ರಿಗೆ ಕುಲದೇವರ ಪೂಜೆ ನಡೆಯುತ್ತದೆ.

ಗಂಡು ಹೆಣ್ಣುಗಳು ಕುಳಾವಿಯ ಒಂದು ನಿರ್ಧಿಷ್ಟ ಸ್ಥಳದಲ್ಲಿರುವ ಒರಟು ಕಲ್ಲಿನ ರೂಪದ ಕುಲದೇವರುಗಳನ್ನು ಅಪ್ಪಕೊಂಡು ಪೂಜಿಸುತ್ತಾರೆ. ಈ ಸಂದರ್ಭದಲ್ಲಿಯೂ ಸೋಬಾನೆ ಹಾಡುಗಳನ್ನು ಹಾಡಲಾಗುತ್ತದೆ. ಮದುವೆಯ ಮಾರನೆ ಬೆಳಿಗ್ಗೆ ಹೆಣ್ಣಿನ ಕಡೆಯವರು ಗಂಡಿನ ಮನೆಯವರಿಗೆ ವೀಳ್ಯೆದ ಸಮೇತ ಹೆಣ್ಣನ್ನು ಒಪ್ಪಿಸಿಕೊಡುತ್ತಾರೆ. ನಂತರ ಗಂಡು ಹೆಣ್ಣುಗಳು ಹೆಣ್ಣಿನ ಮನೆಗೆ (ಅತ್ತೆ ಮನೆ) ಹೋಗುತ್ತಾರೆ. ಇದನ್ನು ‘ಕಳಮಳ’ ಎನ್ನುತ್ತಾರೆ. ಅತ್ತೆಮನೆಯಲ್ಲಿ ಗಂಡು ಹೆಣ್ಣಿಗೆ ಅರಿಸಿನ ಎಣ್ಣೆ ಹಚ್ಚಿ ಸ್ನಾನ ಮಾಡಿಸುತ್ತಾರೆ. ಮದುವೆಗೆ ಮೊದಲ ದಿನ ಕಾಲಿಂದ ಆರಂಭಿಸಿ ಕೆಳಮುಖವಾಗಿ ಎಣ್ಣೆ ಹಚ್ಚುತ್ತಾರೆ. ಇದನ್ನು ಎಣ್ಣೆ ಇಳಿಸುವುದು ಎನ್ನುತ್ತಾರೆ. ಅವರ ಭಾಷೆಯಲ್ಲಿ ತೇಲು ಉತ್ರಣೇ ಎನ್ನುತ್ತಾರೆ. ಹೀಗೆ ಮಾರನೆಗೆ ಮತ್ತೆ ಗಂಡಿನ ಮನೆಗೆ ಬಂದು ಎಣ್ಣೆ ಸ್ನಾನ ನಡೆಯುತ್ತದೆ. ಇದು ಮದುವೆಯ ಕೊನೆ ಆಚರಣೆ.

ಕುಣಬಿಯರ ಮದುವೆ ಎಷ್ಟು ಸರಳವೋ ಅವರ ಮದುವೆ ಊಟವೂ ಅಷ್ಟೇ ಸರಳ. ಮದುವೆಯ ದಿನ ಅವರೇ ಬೆಳೆಯುವ ವಿವಿಧ ಗೆಡ್ಡೆ ಗೆಣಸುಗಳ ಪಲ್ಯೆ, ಸಾರು, ಅನ್ನ ಹಾಗೂ ಕುಳ್ಳಾಣಿ ಪಾಯಸ, ಇದಿಷ್ಟೇ ಅಂದಿನ ಊಟ. ರಾತ್ರಿಗೂ ಹೆಚ್ಚು ಕಡಿಮೆ ಇದೇ ಊಟ. ಆದರೆ, ಹೆಣ್ಣಿನ ಮನೆಯ ಶಾಸ್ತ್ರದ ದಿನ ಬೇರೆಯದೇ ಊಟದ ಸಂಪ್ರದಾಯವಿದೆ. ಅಂದು ದೊಡ್ಡ ವಡೆ ಮಾಡಿ, ವಡೆಯಲ್ಲಿ ನಾಣ್ಯ ಇಟ್ಟು ಬೇಯಿಸುತ್ತಾರೆ. ಆ ವಡೆಗೆ ‘ಅತ್ತೆ’ ಎನ್ನುತ್ತಾರೆ. ಪವಿತ್ರವಾದ ಅನ್ನ ಮಾಡಿ ಅದನ್ನೂ ವಡೆಯನ್ನೂ ಮಿಶ್ರಮಾಡಿ ಬೆರೆಸಿ ಇಡುತ್ತಾರೆ.

ಆ ವಡೆಯನ್ನೇ ಅತ್ತೆ ಎಂದು ಹೇಳಿ ಗಂಡಿಗೆ ಪರಿಚಯಿಸುತ್ತಾರೆ. ಕುಣಬಿಯರ ವಿಶೇಷ ನಿಷೇಧವೆಂದರೆ ಮದುವೆಗೆ ಅತ್ತೆ ಅಂದರೆ ಹೆಣ್ಣಿನ ತಾಯಿ ಬರದಿರುವುದು. ಅಂದರೆ ಮದುವೆ ನಂತರದ ಹೆಣ್ಣಿನ ಮನೆಯ ಶಾಸ್ತ್ರದವರೆಗೆ ಅತ್ತೆಯನ್ನು ಅಳಿಯ ನೋಡುವ ಹಾಗಿಲ್ಲ. ಈ ಶಾಸ್ತ್ರದ ವಡೆಯ ಮೂಲಕ ಅವನು ಅತ್ತೆಯನ್ನು ಸಾಂಕೇತಿಕವಾಗಿ ನೋಡಬೇಕು. ವಡೆ ಅನ್ನವನ್ನು ಬೆರೆಸಿ ಅದನ್ನು ಗಂಡಿಗೆ ಬಡಿಸುವ ಮಹಿಳೆಯೇ ಅತ್ತೆ. ಆಕೆ ಬಡಿಸಲು ಬಂದಾಗ ಈಕೆಯೇ ತನ್ನ ಅತ್ತೆ ಎಂದು ಗಂಡು ಖಾತ್ರಿಮಾಡಿಕೊಳ್ಳಬೇಕು. ಈ ಶಾಸ್ತ್ರದ ನಂತರ ಹೆಣ್ಣು ಮಾತ್ರ ತನ್ನ ತೌರುಮನೆಗೆ ಹಿಂತಿರುಗಿ ಐದು ದಿನ ಇರಬೇಕು. ನಂತರ ಗಂಡ ಒಬ್ಬನೇ ಹೋಗಿ ಹೆಂಡತಿಯನ್ನು ಕರೆತರುತ್ತಾನೆ. ಹಾಗೆ ಬಂದವಳು ಗಂಡನ ಮನೆಯಲ್ಲಿ ಒಂಬತ್ತು ದಿನ ಇರಬೇಕು. ಇದನ್ನು ‘ನೌಪತ್ರ’ ಎಂದು ಕರೆಯುತ್ತಾರೆ. ಆ ನಂತರ ದೀಪಾಳಿ ಆದ ಮೇಲೆ ಅಥವಾ ಸುಗ್ಗಿ ಮುಗಿದ ನಂತರ ಪ್ರಸ್ತದ ಕಾರ್ಯ ನಡೆಯುತ್ತದೆ. ಅಲ್ಲಿಯವರೆಗೆ ಗಂಡು ಹೆಣ್ಣು ಸೇರುವ ಹಾಗಿಲ್ಲ. ಹಾಗೇನಾದರೂ ಅವರಿಬ್ಬರೂ ಸೇರಿ ಹೆಚ್ಚು ಕಡಿಮೆ ಆದರೆ ಹುಡುಗ ಕುಳಾವಿಯ ಬುದ್ಧಿವಂತನಿಗೆ ಐದು ತೆಂಗಿನ ಕಾಯಿಯ ದಂಡ ಕಟ್ಟಬೇಕಾಗುತ್ತದೆ. ಅಲ್ಲದೆ ಹುಡುಗರ ಹಾಗೂ ಸಮುದಾಯದ ಹೀಯ್ಯಾಳಿಕೆಗೂ, ಅಪಹಾಸ್ಯಕ್ಕೂ ಒಳಗಾಗುತ್ತಾನೆ. ಪ್ರಸ್ತದ ದಿನ ಮದುವೆ ಆಗದಿರುವ ಹುಡುಗರು ಪ್ರಸ್ತದ ಗಂಡಿಗೆ ಟವೆಲ್‌ನಿಂದ ಹೊಡೆದು ಈಗಾಗಲೇ ಮದುವೆ ಆದವರ ಕಡೆಗೆ ಓಡಿಸುತ್ತಾರೆ. ಅಂದು ಗಂಡು ಹೆಣ್ಣು ಇಬ್ಬರಿಗೂ ಹೊಸ ಬಟ್ಟೆ ಮತ್ತು ಹೊಸ ಚಾಪೆ ಕೊಟ್ಟು ಹಿರಿಯರ ಸಮ್ಮುಖದಲ್ಲಿ ಮಲಗುವ ಕೋಣೆಗೆ ಕಳಿಸುತ್ತಾರೆ. ಪ್ರಸ್ತದ ಕೋಣೆಗೆ ಹೋಗುವ ಮೊದಲು ಗಂಡು ಹೆಣ್ಣು ದೀಪ ಬೆಳಗಿಸುತ್ತಾರೆ. ಇಲ್ಲಿಗೆ ಮದುವೆ ಮತ್ತು ಪ್ರಸ್ತದ ಕಾರ್ಯ ಮುಗಿಯುತ್ತದೆ.

ಸಾವು ಮತ್ತು ತಿಥಿ

ಕುಣಬಿಯರ ಸಾವು ಮತ್ತು ತಿಥಿಯ ಸಂದರ್ಭಗಳು ಕೂಡ ಅವರದೇ ಆದ ಆಚರಣೆಗಳಿಂದ ಕೂಡಿವೆ. ಯಾವುದೇ ವ್ಯಕ್ತಿ ತೀರಿಕೊಂಡಾಗ ಅವರ ಮನೆಯ ತುಳಸಿ ಕಟ್ಟೆಯ ಮುಂದೆ ಕಂಬಳಿಹಾಸಿ ಹೆಣವನ್ನು ಮಲಗಿಸುತ್ತಾರೆ. ಹೊಸ ಮಡಿಕೆಯಲ್ಲಿ ಅನ್ನಮಾಡಿ ಅದನ್ನು ಅಡಿಕೆ ಪಟ್ಟೆಯಲ್ಲಿ ಹಾಕಿಕೊಂಡು ಹೆಣ ಎತ್ತಿಕೊಂಡು ಹೊರಡುತ್ತಾರೆ. ಹೆಂಗಸರು ಹೆಣದ ಜೊತೆ ಬರುವುದಿಲ್ಲ. ಗಂಡಸರು ಮಾತ್ರ ಹೆಣದ ಜೊತೆ ಹೊರಡುತ್ತಾರೆ. ಕುಣಬಿಯರಲ್ಲಿ ಸುಡುವ ಕ್ರಮವಿಲ್ಲ. ಗುಂಡಿ ತೋಡಿ ಉತ್ತರಕ್ಕೆ ತಲೆ ಇರುವಂತೆ ಗುಂಡಿಯಲ್ಲಿ ಮಲಗಿಸುತ್ತಾರೆ. ತಲೆ, ಹೊಟ್ಟೆ, ಮತ್ತು ಕಾಲಿಗೆ ಹೊಂದಿಕೊಂಡಂತೆ ಕಲ್ಲು ಇಡುತ್ತಾರೆ. ನಂತರ ಮಣ್ಣು ಮುಚ್ಚುತ್ತಾರೆ. ಮಡಿಕೆಯಲ್ಲಿನ ಇನ್ನಷ್ಟು ಅನ್ನವನ್ನು ಅಡಿಕೆ ಹಾಳೆಯಲ್ಲಿ ಕಲೆಸಿ ತಲೆಯ ನೇರಕ್ಕೆ ಇಡುತ್ತಾರೆ. ದೇಹದ ಮೇಲೆ ಮುಳ್ಳಿನ ಗಿಡವನ್ನು ನೆಡುತ್ತಾರೆ.

ಸತ್ತ ಮೂರನೇ ದಿನಕ್ಕೆ ತಿಥಿ ಶಾಸ್ತ್ರ. ಸತ್ತ ವ್ಯಕ್ತಿ ಇಷ್ಟಪಡುತ್ತಿದ್ದ ಎಲ್ಲ ತಿಂಡಿ, ತಿನಿಸುಗಳನ್ನು ಮಾಡಿಕೊಂಡು ಹೋಗಿ ಅಲ್ಲಿ ಇಟ್ಟು ಬರುತ್ತಾರೆ. ಸತ್ತ ದಿನ ಅಗೆಯುವ ಒಂದು ಗುದ್ದಲಿ ಅಥವಾ ಪಿಕಾಸಿಯನ್ನು ತಲೆಯ ಬಳಿ ಉಲ್ಟಾ ಇಟ್ಟು ಬಂದಿರುತ್ತಾರೆ. ತಿಥಿಯ ದಿನ ಅದನ್ನು ಸರಿಪಡಿಸುತ್ತಾರೆ.

ಸತ್ತವರು ದೆವ್ವ ಆಗಿ ಬರುವ ನಂಬಿಕೆ ಕುಣಬಿಯವರಲ್ಲಿಯೂ ಇದೆ. ಹೆಂಗಸರು ದೆವ್ವ ಆಗುವುದಿಲ್ಲ ಎಂಬುದು ಬಹುತೇಕ ಕುಣಬಿಯರ ನಂಬಿಕೆ, ಗಂಡಸರೇ ಹೆಚ್ಚು ದೆವ್ವ ಆಗುತ್ತಾರೆ ಎಂದು ನಂಬುವ ಇವರು ಅದರ ನಿಯಂತ್ರಣಕ್ಕೆ ಹಲವು ಬಗೆಯ ವಿಧಿ ನಿಷೇಧಗಳನ್ನು ಅನುಸರಿಸುತ್ತಾರೆ. ಹಾಗೆ ಸತ್ತವ ಒಂದು ವೇಳೆ ದೆವ್ವ ಆಗಿ ಒಬ್ಬನ ಮೈಮೇಲೆ ಬಂದರೆ “ರೌದ್ರಿ ತೋಡ್‌ ಚಲೋ” ಎಂಬ ಗಾಳಿ ಬಿಡಿಸುವ ಆಚರಣೆ ಮಾಡುತ್ತಾರೆ. ಮೈಮೇಲೆ ಬಂದವನನ್ನು ಸ್ಮಶಾನಕ್ಕೆ ಕರೆದುಕೊಂಡು ಹೋಗಿ ಹಿತ್ತಾಳೆಯ ಒಂದು ಸಾಮಾನನ್ನು ಕೈಯಲ್ಲಿ ಹಿಡಿಸಿ, ಮಣ್ಣಿನ ಉಂಡೆ ಮತ್ತು ಹಿತ್ತಾಳೆಯನ್ನು ಒಂದು ಮರದ ಮೇಲೆ ಇಟ್ಟು ಒಂದು ವರ್ಷ ಕಾಯುತ್ತಾರೆ. ಒಂದು ವರ್ಷದ ಒಳಗೆ ಸತ್ತವನು ಒಳ್ಳೆಯವನಾಗಿ ನಡೆದುಕೊಂಡಲ್ಲಿ ಅವನ ಒಂದು ಮೂರ್ತಿಯನ್ನು ಮಾಡಿಸಿ ಪೂಜಿಸುವುದು ಉಂಟು. ಆದರೆ ಆತ್ಮಹತ್ಯೆ ಅಥವಾ ಆಕಸ್ಮಿಕ ಮರಣ ಸಂಭವಿಸಿದ್ದರೆ, ಆ ಹಿತ್ತಾಳೆಯನ್ನು ಮರದ ಮೇಲಿಂದ ತೆಗೆಯುವುದಿಲ್ಲ. ಆ ನಂತರದಲ್ಲಿ ತಮ್ಮ ಗಡಿ ದೇವರು ಆ ಅತೃಪ್ತ ಆತ್ಮವನ್ನು ತನ್ನ ವಶಕ್ಕೆ ತೆಗೆದುಕೊಳ್ಳುತ್ತದೆ ಎಂಬ ನಂಬಿಕೆ ಅವರದ್ದು. ಗಂಡ ಸತ್ತಾಗ ಹೆಂಡತಿಯ ಮಂಗಳ ಸೂತ್ರ ತೆಗೆಯುತ್ತಾರೆ. ಆದರೆ ಹಣೆ ಕುಂಕುಮ ತೆಗೆಯುವುದಿಲ್ಲ. ಹದಿಹರೆಯದ ಹೆಣ್ಣು ಮಕ್ಕಳು ಅಥವಾ ಗಂಡು ಮಕ್ಕಳು ತೀರಿಕೊಂಡಲ್ಲಿ ಸೀಮೆಯ ಹೊರಗೆ ತೆಗೆದುಕೊಂಡು ಹೋಗಿ ಹೂಳುವುದೂ ಉಂಟು.

ನಿಸರ್ಗದತ್ತ ದೈವರಾಧನೆ

ದೈವ ಎಂಬುದು ತೋರಿಕೆಯ ವಸ್ತುವಲ್ಲ. ಅದೊಂದು ಆತ್ಮದಲ್ಲಿ ಇರಬೇಕಾದ ಅಂತರಂಗದ ಸಂಗತಿ. ಹೆಚ್ಚೆಂದರೆ ಅದನ್ನು ಸಾಂಕೇತಿಕವಾದ ಸರಳ ರೂಪದಿಂದ ಗ್ರಹಿಸಬಹುದು. ಯಾವುದೇ ಬುಡಕಟ್ಟು ಸಮುದಾಯಕ್ಕೆ ಈ ಮಾತು ಅನ್ವಯಿಸುತ್ತದೆ. ಬುಡಕಟ್ಟುಗಳು ತಮ್ಮ ದೈವಗಳನ್ನು ಎಂದಿಗೂ ವೈಭವೀಕರಿಸುವುದಿಲ್ಲ. ಭೌತಿಕವಾದ ಒಂದು ರೂಪವನ್ನು ಅದಕ್ಕೆ ಕೊಡುತ್ತಾರಾದರೂ ಅದು ನಿಸರ್ಗದ ಒಂದು ಭಾಗವಾಗಿ ಮಾತ್ರ ನಮಗೆ ಗೋಚರವಾಗುತ್ತದೆ. ಹಾಗೆ ನೋಡಿದರೆ ನಿಸರ್ಗದ ಸಚರಾಚರ ವಸ್ತುಗಳೂ ಅವರಿಗೆ ದೈವವೇ. ಹಾಗಾಗಿಯೇ ಪ್ರಕೃತಿಯಲ್ಲಿನ ಕಲ್ಲು, ಮಣ್ಣು, ಮರ, ಗಿಡ, ಬೆಟ್ಟ, ಗುಡ್ಡ ಇವೆಲ್ಲವೂ ಅವರ ದೈವ ರೂಪಗಳೇ. ಕುಣಬಿ ಸಮುದಾಯ ಇದಕ್ಕೆ ಹೊರತೇನಲ್ಲ.

ಕುಣಬಿಯರಿಗೆ ಅನೇಕ ದೈವಗಳಿವೆ. ಅವುಗಳಲ್ಲಿ ದಾಂಡೇಲಪ್ಪ, ಸಿದ್ಧನಾಥ, ಮಲ್ಲಿಕಾರ್ಜುನ, ಮಹಾದೇವ, ಮಾಬಳೇಶ್ವರ, ಸೋಮನಾಥ, ಕಾಲಬೈರವ ಇವು. ಅವೆಲ್ಲ ಶಿವ ಸ್ವರೂಪಿಯಾದ ದೈವಗಳು. ಆದರೆ, ನಾಡಿನ ಇತರೆಡೆಗಳಂತೆ ಇವಕ್ಕೆ ನಿರ್ಧಿಷ್ಟ ಭೌತಿಕ ರೂಪಗಳೇನೂ ಇಲ್ಲ. ಒಂದು ಉರುಟು ಕಲ್ಲು, ಅದರ ಪಕ್ಕಕ್ಕೊಂದು ತ್ರಿಶೂಲ ಇದ್ದರೆ ಅದು ಸಿದ್ಧನಾಥ ಅಥವಾ ಕಾಲಭೈರವ. ಮಾದೇವ ಅಥವಾ ಸೋಮನಾಥನೂ ಅಷ್ಟೇ. ಅವು ಒರಟು ಕಲ್ಲಿನ ರೂಪಗಳೇ. ಕೆಲವು ಭಾಗಗಳಲ್ಲಿ ನೆಟ್ಟಗೆ ಭೂಮಿಯಿಂದ ಮೇಲೆದ್ದು ಬರುವಂತೆ ಕಾಣುವ ಆರು ಕಲ್ಲಿನ ಸಮೂಹವಿರುತ್ತದೆ. ಅದಕ್ಕೆ ‘ಸಾತ್‌ ಪುರುಷ’ ಎಂದು ಕರೆಯಲಾಗುತ್ತದೆ. ಅವು ತೀರಿಹೋದ ಹಿರಿಯರ ಆತ್ಮಗಳನ್ನು ಸಂಕೇತಿಸುವ ದೇವರು. ಹಾಗೆಯೇ ಇತರೆ ವಿವಿಧ ಕಲ್ಲಿನ ರೂಪಗಳನ್ನೇ ‘ಕಾಪ್ರಿ’ ದೇವರು ಎಂದು ಕರೆಯುತ್ತಾರೆ. ಇವು ಗಡಿಗಳನ್ನು ಕಾಯುವ ದೇವರುಗಳಾದುದರಿಂದ ಗಡಿಯಲ್ಲಿ ಇರುತ್ತವೆ ಅಷ್ಟೇ. ಹಾಗೆಯೇ ‘ಜನ್ಮೀ’ ಎಂಬ ದೈವ ಆಯಾ ಊರಿನ ಅರ್ಥಾತ್‌ ಕುಳಾವಿಯ ಹಿತ ಕಾಯುವ ಸ್ಥಳೀಯ ದೈವ. ಈ ಜನ್ಮಿ ಹುತ್ತದ ರೂಪದಲ್ಲಿ ಇರುವುದೂ ಉಂಟು. ಸೋಮನಾಥ ಒಂದು ರೀತಿಯಲ್ಲಿ ಇವರ ಸೂಪರ್ ನ್ಯಾಚುರಲ್‌ ದೈವ. ಮರಗಿಡಗಳ ರೂಪದಲ್ಲಿಯೂ ಅದನ್ನು ಕಾಣಬಹುದು. ಕಾಫ್ರಿ ದೈವ ಗಡಿಯನ್ನು ಕಾಯುವಂತೆಯೇ ಕುಣಬಿಗಳ ಕಾಡನ್ನು ಕಾಯುತ್ತದೆ ಎಂಬ ನಂಬಿಕೆ ಅವರದ್ದು. ಮತ್ತೊಂದು ದೈವ ‘ವಾಗ್ರೋ’ ಅಂದರೆ ವ್ಯಾಘ್ರ, ಹುಲಿ ದೈವ. ತಮ್ಮ ಕಾಡು ಮತ್ತು ಪ್ರಾಣಿಗಳನ್ನು ಈ ಹುಲಿದೈವವೇ ಕಾಪಾಡಬೇಕು ಎಂದು ಅದನ್ನು ಪ್ರಾರ್ಥಿಸುತ್ತಾರೆ. ಯಾವುದು ಪ್ರಾಣಿಗಳನ್ನು ಆಹಾರವನ್ನಾಗಿ ಮಾಡಿಕೊಂಡಿದೆಯೋ ಅಂಥ ವ್ಯಾಘ್ರನನ್ನೇ ಪೂಜಿಸುವ ಮೂಲಕ ಪ್ರಾಣಿಗಳನ್ನು ಕಾಪಾಡುವ ಒಂದು ಆಶಯ ಈ ದೈವದ ಹಿಂದಿದೆ.

ಸ್ಥಳೀಯ ಪ್ರದೇಶದ ಗುಡ್ಡ ಬೆಟ್ಟಗಳನ್ನೂ ಇವರು ದೈವವೆಂದು ಪೂಜಿಸುತ್ತಾರೆ. ದುರ್ಗಾ, ಅಗಡೋ ದರೋ, ಗುರುತಿಂಜ್‌ ಎಂಬ ಗುಡ್ಡಗಳನ್ನು ಇವರ ರಕ್ಷಕ ದೈವಗಳಿರುವ ಪವಿತ್ರ ಜಾಗವೆಂದು ನಂಬಿ ಪೂಜಿಸುತ್ತಾರೆ. ರಾಮಲಿಂಗಕೊಂಡ, ಸಾಕಳಕೊಂಡ ಹಾಗೂ ನಾಗಿನದಿಕೊಂಡ ಎಂಬ ಕಾಳಿ ನದಿಯ ಉಪನದಿಯ ನೀರಿನ ತಾಣಗಳನ್ನು ಅವರು ಪವಿತ್ರ ಸ್ಥಳಗಳೆಂದು ನಂಬುತ್ತಾರೆ. ಮುಂಗಾರಿನ ಹೊಸನೀರು ಬಂದ ಸಂದರ್ಭದಲ್ಲಿ ಅಲ್ಲಿ ವಿಶೇಷ ಪೂಜೆ ನಡೆಯುತ್ತದೆ.

ಅತ್ತಿ, ಅಲ, ಬನ್ನಿ, ಗೋಳಿ ಮತ್ತು ಮಾವು ಇವರ ಪವಿತ್ರ ಮರಗಳು, ಮದುವೆ ಮಂಟಪಕ್ಕೆ ಬೂರಗದ ಮರ ಇರಲೇಬೇಕು. ಈ ಮರವನ್ನು ಅವರು ‘ಸಾವುದ್‌’ (ಶಾಲ್ಮಲೀ) ಎಂದು ಕರೆಯುತ್ತಾರೆ. ಗೋಳಿ ಮರದಲ್ಲಿ ಕಾಫ್ರಿ ವಾಸಮಾಡುತ್ತಾನೆ ಎಂದೂ ನಂಬುತ್ತಾರೆ. ಚಾಂದನಿ, ಚಿಡ್ಡೋ, ಶಂಕರ್, ದಾಸವಾಳ, ಗೊಡೆ ಹಾಗೂ ತುಂಬೆ ಹೂಗಳನ್ನು ಪೂಜೆಗಾಗಿ ಬಳಸುತ್ತಾರೆ.

ದಾಂಡೇಲಿಯಲ್ಲಿ ದಾಂಡೇಲಪ್ಪನ ಎರಡು ದೇವಸ್ಥಾನಗಳಿವೆ. ಈ ಹಿಂದೆಯೇ ನಿರೂಪಿಸಿರುವಂತೆ ಕುಣಬಿ ಮನೆಯೊಂದರಲ್ಲಿ ದಾಂಡೇಲಪ್ಪ ಎಂಬ ಒಬ್ಬ ಅಸ್ಪೃಶ್ಯ ದಲಿತ ಕೆಲಸಕ್ಕಿದ್ದ. ಅವನು ಕುಣಬಿ ಕುಂಟುಂಬದ ಹೆಣ್ಣು ಮಗಳ ಜೊತೆ ಅನೈತಿಕ ಸಂಬಂಧ ಹೊಂದಿದ. ಇದು ಗೊತ್ತಾಗಿ ಕುಣಬಿಗಳು ಅವನನ್ನು ಎರಡು ತುಂಡಾಗಿ ಕತ್ತರಿಸಿದರು. ಆಗ ಅವನ ರುಂಡ ಒಂದು ಕಡೆ ಮುಂಡ ಒಂದು ಕಡೆ ಬಿತ್ತು. ಆ ಎರಡೂ ಸ್ಥಳಗಳಲ್ಲಿ ಈಗ ದಾಂಡೇಲಪ್ಪನ ದೇವಸ್ಥಾನಗಳಿವೆ. ಇವೆರಡಕ್ಕು ಒಂದು ಕಿ. ಮೀ. ಅಂತರವಿದೆ. ಒಂದು ದೇವಸ್ಥಾನದಲ್ಲಿ ಕೇವಲ ಪಾದಗಳನ್ನು ಪೂಜಿಸಲಾಗುತ್ತಿದ್ದರೆ ಇನ್ನೊಂದು ದೇವಸ್ಥಾನದಲ್ಲಿ ತಲೆಯನ್ನು ಪೂಜಿಸಲಾಗುತ್ತಿದೆ. ದಾಂಡೇಲಪ್ಪ ಸಜ್ಜನ ಎಂದು ತಿಳಿದ ಮೇಲೆ ಪಶ್ಚಾತ್ತಾಪದಿಂದ ಅವನ ರುಂಡ ಮುಂಡವನ್ನು ಕುಣಬಿಗಳು ಪೂಜಿಸತೊಡಗಿದರು ಎಂಬುದು ಸ್ಥಳೀಯರ ನಂಬಿಕೆ. ಈ ಎರಡೂ ದೇವಸ್ಥಾನಗಳ ಪೂಜಾರಿಗಳು ಈಗಲೂ ಕುಣಬಿಗಳೇ, ಪ್ರಸ್ತುತ ಕುಣಬಿ ಸಂಘದ ಅಧ್ಯಕ್ಷರಾದ ಶ್ರೀ ಗುರುದತ್‌ ಮಿರಾಶಿ ಕುಟುಂಬದ ಸದಸ್ಯರೇ ಈಗಿನ ಪೂಜಾರಿಗಳು. ಕಾಲಕ್ರಮೇಣ ದಾಂಡೇಲಿ ಸುತ್ತಮುತ್ತಲಿನ ಎಲ್ಲ ಸಮುದಾಯಗಳೂ ದಾಂಡೇಲಪ್ಪನ ಭಕ್ತರಾಗಿ ಪೂಜೆ ಸಲ್ಲಿಸುತ್ತಿದ್ದಾರೆ.

ಹಬ್ಬ – ಕಲೆ

ಕುಣಬಿ ಸಮುದಾಯಕ್ಕೆ ವಿಶಿಷ್ಟವಾದ ಹಬ್ಬ ಜಾತ್ರೆಗಳೂ ನಡೆಯುತ್ತಿವೆ. ದಸರಾ ಸಮಯದಲ್ಲಿ ದಾಂಡೇಲಪ್ಪನ ದೊಡ್ಡ ಜಾತ್ರೆ ನಡೆಯುತ್ತದೆ. ಕುಣಬಿಗಳು ಹಾಗೂ ಇತರರು ದಾಂಡೇಲಪ್ಪನಿಗೆ ಹರಕೆ ಹೊತ್ತು ಕುರಿ ಕೋಳಿ ಬಲಿ ಕೊಡುತ್ತಾರೆ. ಆದರೆ ಅದನ್ನು ತಿನ್ನುವುದಿಲ್ಲ. ದೇವಸ್ಥಾನದ ದೇವಳಿಗರಿಗೆ ಅದನ್ನು ಒಪ್ಪಿಸಲಾಗುತ್ತದೆ. ಕುಣಬಿಗಳು ದಾಂಡೇಲಪ್ಪನಿಗೆ ಅನೇಕ ಹರಕೆಗಳನ್ನು ಹೊರತ್ತಾರೆ.

ಕಾಫ್ರಿ ದೇವರಿಗೆ ಜೋಯಿಡಾ ಹತ್ತಿರ ದೊಡ್ಡ ಜಾತ್ರೆ ಆಗುತ್ತದೆ. ಹಾಗೆಯೇ ಕುಣಬಿಗಳ ಸ್ತ್ರೀ ದೇವತೆಯಾದ ‘ಗೌಳಾ ದೇವಿ’ ಜಾತ್ರೆ ಸುಗ್ಗಿಯಲ್ಲಿ ನಡೆಯುತ್ತದೆ. ಈ ಕಾಫ್ರಿ ಅಥವಾ ಗೌಳಾದೇವಿ ಜಾತ್ರೆಗಳು ಸಂಪೂರ್ಣವಾಗಿ ಕುಣಬಿ ಸಮುದಾಯಕ್ಕೆ ಮೀಸಲಾದವುಗಳಾಗಿವೆ. ಕಾರ್ತಿಕ ಹುಣ್ಣಿಮೆ ದಿನ ನಡೆಯುವ ಕಾಫ್ರಿ ಜಾತ್ರೆಯಲ್ಲಿ ಕಾಫ್ರಿ ದೇವರಿಗೆ ಕಂಬಳಿ ಹೊದೆಸುವ ಸಂಪ್ರದಾಯವಿದೆ. ಅಂದು ಅನೇಕಾನೇಕ ಭಕ್ತರು ದೇವರಿಗೆ ಕಂಬಳಿ ದಾನ ಮಾಡುತ್ತಾರೆ.

ಹೋಳಿ ಕುಣಬಿಯರ ಸಡಗರ ಸಂಭ್ರಮದ ಹಬ್ಬ. ಇದನ್ನು ಅವರು ‘ಮಾಳ್‌’ ಎಂದೂ ಕರೆಯುತ್ತಾರೆ. ಮಾಳ್‌ ಅಂದರೆ ತಮ್ಮ ಪಿತೃಗಳನ್ನು ಆರಾಧಿಸುವ ಹಬ್ಬ. ಹೋಳಿ ಹಬ್ಬದಲ್ಲಿ ‘ಹೋಳಿಸಿಗ್ಮ’ ಕುಣಿತ ಅತ್ಯಂತ ವಿಶಿಷ್ಟವಾದದ್ದು. ಬಿಳಿಯ ಬಣ್ಣದ ನಿಲುವಂಗಿ, ತಲೆಗೆ ಬಿಳಿಯ ಮುಂಡಾಸು ದರಿಸಿದ ಹಾಡುಗಾರರು ಮದ್ದಲೆ ಬಾರಿಸುತ್ತಾ ಹಾಡುಗಳನ್ನು ಆರಂಭಿಸುತ್ತಿದ್ದಂತೆ ಮೂವರು ಸ್ತ್ರೀ ವೇಷದಾರಿಗಳು ಕುಣಿತಕ್ಕೆ ಮೊದಲು ಮಾಡುತ್ತಾರೆ. ಬಣ್ಣ ಬಣ್ಣದ ಸೀರೆ ಉಟ್ಟು, ತಲೆಯ ಹಿಂಭಾಗದಿಂದ ಸೆರಗನ್ನು ಎಳೆದು ಕಟ್ಟಿದ ಗಂಡು ವೇಷದಾರಿಗಳು ಕಾಲಿಗೆ ಗೆಜ್ಜೆಕಟ್ಟಿ ತೀವ್ರಗತಿಯಲ್ಲಿ ಸುತ್ತು ಕುಣಿತ ಮಾಡುತ್ತಾರೆ. ತಾಲ ಮತ್ತು ಮದ್ದಲೆಯ ಸದ್ದು ತೀವ್ರಗೊಳ್ಳುತ್ತಿದ್ದಂತೆ ನೃತ್ಯದ ಗತಿಯು ರಬಸಗೊಳ್ಳುತ್ತದೆ. ವೈವಿಧ್ಯಮಯ ಹಾಡುಗಳ ರಸದೌತಣವೂ ನಡೆಯುತ್ತದೆ. ಹಾಡುಗಾರರು ಮೊದಲು ಊರ ಪ್ರಮುಖನ ಮನೆಯಲ್ಲಿ ಆರಂಭಿಸಿ ನಂತರ ಪ್ರತಿ ಮನೆಗೂ ಹೋಗಿ ಕುಣಿಯುತ್ತಾರೆ. ತಮ್ಮ ಊರಿನ ನಂತರ ತಮ್ಮ ಸಮುದಾಯಗಳು ನೆಲೆಗೊಂಡಿರುವ ಇತರೆ ಊರುಗಳಿಗು ಮೇಳ ಹೋಗುತ್ತದೆ. ಕಾಮನನ್ನು ಸುಡುವವರೆಗೆ ಈ ಮೇಳ ಮುಂದುವರೆದು ಕಾಮನ ಹುಣ್ಣಿಮೆಯಂದು ತಮ್ಮ ಊರಿನಲ್ಲಿಯೇ ಆಚರಣೆ ಮುಕ್ತಾಯಗೊಳ್ಳುತ್ತದೆ.

ಈ ಹಬ್ಬದ ಸಂದರ್ಭದಲ್ಲಿ ಅನೇಕ ರಾತ್ರಿಗಳ ಕಾಲ ‘ಮಾಳ್‌ – ಕೇಳ್‌’ ಎಂಬ ರಾಮಾಯಣ ಮಹಾಭಾರತದ ಸುದೀರ್ಘ ಹಾಡುಗಾರಿಗಕೆಯೂ ನಡೆಯುತ್ತದೆ. ಇದನ್ನು ರಾಮಾಯಣ ಕೇಳ್‌ ಮತ್ತು ಭಾರತ ಕೇಳ್‌ ಎಂದೂ ಕರೆಯುತ್ತಾರೆ. ತಮ್ಮದೇ ಆದ ಶೈಲಿ ಮತ್ತು ತಮ್ಮದೇ ಆದ ಕಥಾ ಸ್ವರೂಪದ ಈ ಮೌಖಿಕ ಕಾವ್ಯಗಳು ಸಿದ್ಧ ಮಾದರಿ ಪುರಾಣಕ್ಕಿಂತ ತೀರಾ ಭಿನ್ನವಾದುವುಗಳು.

ದೀಪಾವಳಿ ಕೂಡ ಕುಣಬಿಯರಿಗೆ ತುಂಬ ಮುಖ್ಯವಾದ ಹಬ್ಬ. ಈ ಹಬ್ಬದಲ್ಲಿ ಗಂಡಸರು ಗುಮಟೆ ಬಾರಿಸಿದರೆ ಹೆಂಗಸರು ಆ ಗುಮಟೆ ಸದ್ದಿಗೆ ತಕ್ಕಂತೆ ‘ದೀವಾಳಿ ಚೋಕೇಳ್‌’ ಎಂಬ ದೀಪಾವಳಿ ನೃತ್ಯ ಪ್ರದರ್ಶಿಸುತ್ತಾರೆ. ಹೋಳಿಯಲ್ಲಿ ಗಂಡಸರು ಊರೂರಿಗೆ ಹೋಗಿ ಹೋಳಿಸಿಗ್ಮ ಪ್ರದರ್ಶಿಸುವಂತೆ ದೀಪಾವಳಿಯಲ್ಲಿ ಹೆಂಗಸರು ಊರೂರಿಗೆ ಹೋಗಿ ಈ ದಿವಾಳಿ ಚೋಕೇಳ್‌ ಪ್ರದರ್ಶಿಸುತ್ತಾರೆ.

ಚೌತಿ ಕುಣಬಿಯರ ಮತ್ತೊಂದು ಪ್ರಮುಖ ಹಬ್ಬ. ಈ ಸಂದರ್ಭದಲ್ಲಿ ಗಂಡಸರು ಮತ್ತು ಹೆಂಗಸರು ಪ್ರತ್ಯೇಕವಾಗಿ ಪುಗಡಿ ಕುಣಿತ ನಡೆಸಿಕೊಡುತ್ತಾರೆ. ಕೈಯಲ್ಲಿ ಮಣ್ಣಿನ ಕೊಡಗಳನ್ನು ಹಿಡಿದು ವೃತ್ತಾಕಾರವಾಗಿ ಸುತ್ತುತ್ತಾ ಕುಣಿಯುವ ಈ ನೃತ್ಯ ಕೂಡ ತುಂಬಾ ಆಕರ್ಷಕವಾದದ್ದು.

ಕುಣಬಿಯರಲ್ಲಿ ಈಗಾಗಲೇ ಹೇಳಿದಂತೆ ರಾಮಾಯಣ ಮಹಾಭಾರತ ಕತೆಗಳನ್ನು ಹಾಡುವ ಅರ್ಥಾತ್‌ ‘ಕೇಳ್‌’ ಕಲೆಯನ್ನು ಪ್ರದರ್ಶಿಸುವ ಹಲವಾರು ಹಿರಿಯ ಕಲಾವಿದರು ಈಗಲೂ ಇದ್ದಾರೆ. ಇತ್ತೀಚೆಗಷ್ಟೇ ತೀರಿಕೊಂಡ ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕಿನ ಮೇಘಾನೆ ಬೆಟ್ಟದ ಗಣೇಶ ಎಂಬ ಹಿರಿಯ ಕಲಾವಿದ ತಮ್ಮ ಅಪೂರ್ವ ಕಲೆಗಾಗಿ ಜಾನಪದ ಅಕಾಡೆಮಿ ಪ್ರಶಸ್ತಿ ಪಡೆದಿದ್ದರು. ಕುಂಬಾರವಾಡ ಹತ್ತಿರದ ತೆವಾಲಿ ಗ್ರಾಮದ ೬೫ ವರ್ಷ ವಯಸ್ಸಿನ ಕೃಷ್ಣಾ ಮಾಡುಗಾವಡ ಎಂಬ ಕಲಾವಿದ ‘ಜಾಂಬೂ’ ಎಂಬ ಮಳೆ ಕರೆಯುವ ಹಾಡನ್ನು ವಿಶಿಷ್ಟ ಶೈಲಿಯಲ್ಲಿ ಹಾಡುತ್ತಾರೆ. ಇವರು ಸಿಗ್ಮ ಹಾಗೂ ಮಾಳ್‌ ಮತ್ತು ಕೇಳ್‌ಗಳಲ್ಲಿ ಪ್ರಸಿದ್ಧ ಕಲಾವಿದರು. ಹಾಗೆಯೇ ಕಾರಸಿಂಗಳ ಗ್ರಾಮದ ೭೫ ವರ್ಷ ವಯಸ್ಸಿನ ಗೋವಿಂದ ಗಣೇಶ್‌ ವೆಳಿಪು ರಾಮಾಯಣದ ಕೇಳ್‌ ನಡೆಸಿಕೊಡುತ್ತಾರೆ. ನಾಗೋಡ ಪಂಚಾಯಿತಿ ವ್ಯಾಪ್ತಿಯ ಮಾರ್ಲಿ ಗ್ರಾಮದ ೮೦ ವರ್ಷ ವಯಸ್ಸಿನ ಸಾತುಗಾವ್‌ಡ ಮತ್ತೊಬ್ಬ ಪ್ರಸಿದ್ಧ ಕಲಾವಿದ. ಕುಣಬಿ ಸಮುದಾಯದಲ್ಲಿ ಅನೇಕಾನೇಕ ಸಿಗ್ಮ ಹಾಗೂ ಪುಗಡಿ ಕಲಾ ತಂಡಗಳಿದ್ದು ಹಬ್ಬ ಜಾತ್ರೆಗಳಲ್ಲಿ ಸಾಮೂಹಿಕವಾದ ಪ್ರದರ್ಶನ ನಡೆಸುವುದೂ ಉಂಟು.