ಬುಡಕಟ್ಟು ಮತ್ತು ಮಲೆನಾಡಿನ ಅರ್ಥ ವ್ಯವಸ್ಥೆ

ಯಾವಾಗ ವಾಸ್ಕೋಡಿಗಾಮ ಪಶ್ಚಿಮ ಕರಾವಳಿಯ ಕಲ್ಲಿಕೋಟೆಯಲ್ಲಿ ಕಾಲಿಟ್ಟನೋ ಅಂದಿನಿಂದಲೇ ಪಶ್ಚಿಮಘಟ್ಟದ ಕಾಡುಗಳಲ್ಲಿನ ಪರ್ಯಾಯ ಅರ್ಥ ವ್ಯವಸ್ಥೆ ರೂಪುಗೊಳ್ಳತೊಡಗಿತು ಅಥವಾ ಚುರುಕುಗೊಳ್ಳತೊಡಗಿತು. ಇಂಡಿಯಾದ ಸಾಂಬಾರ ಪದಾರ್ಥಗಳ ಆಸೆಯಿಂದ ಬರತೊಡಗಿದ ಯೂರೋಪಿಯನ್ನರು ತಮ್ಮ ವಸಾಹತುಗಳನ್ನು ಸ್ಥಾಪಸಿ ಆ ಮೂಲಕ ತಮ್ಮ ಆರ್ಥಿಕ ಹಿಡಿತವನ್ನು ಸ್ಥಾಪಿಸಿಕೊಳ್ಳಲು ಹೋರಾಡಿದ ಕಥೆ ನಮಗೆಲ್ಲ ಗೊತ್ತೇ ಇದೆ. ಅಂದರೆ ಈ ವಸಾಹತುಗಳ ತೀವ್ರ ವ್ಯಾಪಾರದ ಚಟುವಟಿಕೆಗಳ ನಡುವೆಯೇ ಪಶ್ಚಿಮಘಟ್ಟದ ಕಾಡುಗಳು ತೋಟಗಳಾಗಿ ಪರಿವರ್ತಿತವಾಗುತ್ತಿದ್ದವು ಎಂಬುದನ್ನು ಇಲ್ಲಿ ಮುಖ್ಯವಾಗಿ ಗಮನಿಸಬೆಕು.

ಇಂಥ ಸಂಕ್ರಮಣಾವಸ್ಥೆಯ ಆರ್ಥಿಕ ಚಟುವಟಿಕೆಗಳ ಸಂದರ್ಭದಲ್ಲಿಯೇ ಮಲೆನಾಡಿನ ಕೆಲವು ಆಯಕಟ್ಟಿನ ಜಾಗಗಳಿಗೆ ಭೂಮಾಲೀಕರು ಬರತೊಡಗಿದ್ದು ಅಥವಾ ಯೂರೋಪಿಯನ್ನರ ಬೆನ್ನ ಹಿಂದೆ ಬಿದ್ದು ಭೂಮಾಲೀಕರಾದದ್ದು ಇಲ್ಲಿ ಮುಖ್ಯ. ಈ ತೆರನಾಗಿ ಯಾವಾಗ ವ್ಯವಹಾರಿಗಳು ಮಲೆನಾಡಿಗೆ ಕಾಲಿಟ್ಟರೋ ಆಗಿನಿಂದಲೋ ಗಿರಿಜನರ ಸ್ವಚ್ಛಂದ ಜೀವನ ಅಸ್ಥಿರವಾಗತೊಡಗಿದ್ದು. ನಮ್ಮ ಆಧುನಿಕ ವಸಾಹತುಶಾಹಿ ಎಂದು ನಾನು ಈಗಾಗಲೇ ಹೇಳಿದ ನಮ್ಮ ಅರಣ್ಯ ಇಲಾಖೆಯ ಈಗಿನ ಚಟುವಟಿಕೆಗಳಿಗೆ ಪೂರ್ವದಲ್ಲಿ ನಡೆದ ಈ ಯೂರೋಪಿಯನ್‌ ವಸಾಹತುಶಾಹಿಯ ಪ್ರಭಾವವನ್ನು ನಾವು ಅರ್ಥಮಾಡಿಕೊಳ್ಳದೆ ಇವತ್ತಿನ ಗಿರಿಜನರ ಬದುಕನ್ನು ಅರ್ಥಮಾಡಿಕೊಳ್ಳಲು ಸಾಧ್ಯವಿಲ್ಲ.

ಗಿರಿಜನರ ಈ ಅಸ್ಥಿರತೆಯ ಭೀತಿ ನಿಜವಾಗತೊಡಗಿದ್ದು ಬ್ರಿಟಿಷರ ಕಾಲದಲ್ಲಿ. ಭಾರತದ ವ್ಯಾಪಾರ ವ್ಯವಹಾರದ ಏಕಸ್ವಾಮ್ಯವನ್ನು ಸ್ಥಾಪಿಸಿದ ಬ್ರಿಟಿಷರು ರಾಜಕೀಯವಾಗಿ ಭಾರತವನ್ನು ಹಿಡಿದುದರ ಜೊತೆಗೇ ತಮ್ಮ ಮೂಲೋದ್ದೇಶವಾದ ಸಾಂಬಾರ ಪದಾರ್ಥಗಳ ರಫ್ತಿಗೂ ಹೆಚ್ಚು ಗಮನಕೊಟ್ಟರು. ಇದರ ಪರಿಣಾಮವಾಗಿ ಕಾಡುಗಳು ಕಾಫಿ, ಟೀ, ಏಲಕ್ಕಿ, ಮೆಣಸು, ಕೋಕಾ ಹಾಗೂ ರಬ್ಬರ್ ತೋಟಗಳಾಗಿ ಪರಿವರ್ತಿತಗೊಳ್ಳತೊಡಗಿದವು. ಆದರೆ ಹೀಗೆ ಪರಿವರ್ತಿತಗೊಂಡ ತೋಟಗಳ ಇಡೀ ಮಾಲೀಕರಾಗಿಯೂ ಇದ್ದುದು ನಿಜವಾದರೂ ಹಲವಾರು ತೋಟಗಳಿಗೆ ನಮ್ಮವರೇ (ಅಂದರೆ ಮೇಲ್ವರ್ಗದವರು, ಶುಶಿಕ್ಷಿತರು ಮತ್ತು ವಿದ್ಯಾವಂತರೆನ್ನಿಸಿಕೊಂಡು ಬ್ರಿಟಿಷರ ಆಡಳಿತಕ್ಕೆ ಸಹಕಾರಿಯಾದ ನಮ್ಮವರು) ಮಾಲೀಕರಾದರು. ಹೀಗೆ ಪರಿವರ್ತಿತಗೊಂಡ ತೋಟಗಳಲ್ಲಿ ದುಡಿಯುವವರು ಯಾರು? ಅಮಾಯಕರಾದ ಗಿರಿಜನರು ಮಾತ್ರ ಹೀಗಾಗಿ ಭೂಮಿಯ ಸ್ವಾಧೀನವನ್ನು ಕೆಲವೇ ಕೆಲವರಿಗೆ ಒಪ್ಪಿಸುವ ಮೂಲಕ ಅದೇ ನೆಲದ ಮೂಲವಾಸಿಗಳನ್ನು ಅತಂತ್ರರನ್ನಾಗಿಸುವ ತಂತ್ರ ಬ್ರಿಟಿಷರ ಕಾಲದಲ್ಲಿ ನಡೆಯಿತು. ಈ ತಂತ್ರ ಅವರಿಗೆ ಎರಡು ರೀತಿಯ ಪ್ರಯೋಜನಕ್ಕೆ ಬಂತು. ಹೀಗೆ ಕೆಲವರನ್ನೇ ಭೂ ಒಡೆಯರನ್ನಾಗಿ ಮಾಡುವ ಮೂಲಕ ಅವರನ್ನು ತಮ್ಮ ಹಿಡಿತದಲ್ಲಿಟ್ಟುಕೊಂಡು ಕಾಡಿನ ಸ್ವಾಮ್ಯವನ್ನು ತಾವೇ ಹೊಂದುವುದು ಮೊದಲನೆಯ ಉದ್ದೇಶವಾದರೆ, ಈ ಮೂಲಕ ಭೂಮಿಯಿಂದ ಬೇರ್ಪಡಿಸಿ, ಕೂಲಿಯಾಳುಗಳನ್ನಾಗಿ ಪರಿವರ್ತಿಸಿದ ಗಿರಿಜನರನ್ನು ಮತಾಂತರಕ್ಕೆ ಪ್ರೇರೇಪಿಸುವುದು ಅವರ ಎರಡನೆಯ ಉದ್ದೇಶ. ಮತಾಂತರಕ್ಕೆ ಒಪ್ಪಿದವರಿಗೆ ಭೂಮಿ ನೀಡುತ್ತೇವೆ ಎಂಬ ಭರವಸೆ ನೀಡಿ ಅವರಲ್ಲಿ ಭ್ರಮೆಯನ್ನು ತುಂಬುವ ಕೆಲಸವೂ ನಡೆಯಿತು.

ಇಂಥ ಸ್ಥಿತಿಯ ನಂತರ ಕುಣಬಿಯರಂಥ ಸಮುದಾಯಗಳ ನೈಸರ್ಗಿಕ ಕೃಷಿಗೆ ಬಾರಿ ಪೆಟ್ಟು ಬಿದ್ದದ್ದಂತೂ ಸತ್ಯ. ಆಯಕಟ್ಟಿನ ಜಾಗಗಳನ್ನು ಭೂಮಾಲೀಕರು ಹಿಡಿದರು. ಈಗಾಗಲೇ ಹೇಳಿದಂತೆ ಅರಣ್ಯ ಇಲಾಖೆ ತನ್ನದೇ ಕಾನೂನುಗಳನ್ನು ಜಾರಿಗೊಳಿಸಿ ಅವರ ಸ್ಥಳಾಂತರ ಕೃಷಿಗೆ ಆಸ್ಪದವಿಲ್ಲದಂತೆ ಮಾಡಿತು. ಈ ಹಿನ್ನೆಲೆಯಲ್ಲಿ ಭೂಮಿ ಇರಲಿ, ಇಲ್ಲದಿರಲಿ ಒಂದು ಕಡೆ ನೆಲೆನಿಂತು ಜೀವನ ಅರಸಬೆಕಾದ ಅಭದ್ರ ಸ್ಥಿತಿ ಕುಣಬಿಯರಿಗೆ ಉಂಟಾಯಿತು. ತಲೆತಲಾಂತರದಿಂದ ಕುಮರಿ ಕೃಷಿ ಮಾಡುತ್ತಿದ್ದ ಅವರು ಗುಡ್ಡ ಬೆಟ್ಟಗಳಲ್ಲಿಯೇ ಅಲ್ಲಲ್ಲಿ ನೆಲೆ ನಿಂತರು. ಇದರಿಂದ ಅವರ ಸಾಮೂಹಿಕ ಕೃಷಿ ವಿಧಾನ ನಾಶವಾಯಿತು. ಕುಟುಂಬ ಕೇಂದ್ರಿತ ಕೃಷಿ ವಿಧಾನವನ್ನು ಅಳವಡಿಸಿಕೊಂಡು ಸಿಕ್ಕಷ್ಟು ಜಮೀನಿನಲ್ಲಿ ನೆಲೆನಿಂತರು. ಅದೂ ಸದಾ ಭಯದ ನೆರಳಿನಲ್ಲಿ ಜೀವನ. ಯಾವಾಗ ಪಟ್ಟಭದ್ರರು ತಮ್ಮನ್ನು ಒಕ್ಕಲೆಬ್ಬಿಸುತ್ತಾರೋ ಎಂಬ ಆತಂಕ. ಯಾವಾಗ ಅರಣ್ಯ ಇಲಾಖೆ ತಮ್ಮನ್ನು ಕಾಲಿ ಮಾಡಿಸಬಹುದೋ ಎಂಬ ಭೀತಿ. ಅಂತೂ ಇಂತೂ ಕುಮರಿ ಮಾಡುತ್ತಿದ್ದ ಅಲ್ಪಸ್ವಲ್ಪ ಜಮೀನನ್ನು ಪಟ್ಟು ಬಿಡದೆ ಹಿಡಿದು ನಿಂತಿದ್ದಾರೆ. ತಲೆತಲಾಂತರದಿಂದ ಅದೇ ಭೂಮಿಯನ್ನು ನಂಬಿ ಬಂದ ಅವರಿಗೆ ಕನಿಷ್ಟ ಅವರು ನೆಲೆನಿಂತಿರುವ ತುಂಡು ಜಮೀನನ್ನಾದರೂ ಸಕ್ರಮಗೊಳಿಸುವುದು ಪ್ರಜಾಪ್ರಭುತ್ವ ಸರ್ಕಾರಗಳ ಕರ್ತವ್ಯವಾಗಬೇಕು ಈ ಹಿನ್ನೆಲೆಯಲ್ಲಿ ಇತ್ತೀಚಿಗಿನ ವರ್ಷಗಳಲ್ಲಿ ಕೆಲವು ಹೋರಾಟಗಳೂ ನಡೆದಿವೆ.

ಕುಮರಿ ಹಾಗೂ ಮಿಸಲಾತಿ ಹೋರಾಟಗಳು

ಯಾವುದೇ ಸಮಾಜ ತೀರಾ ಅಭದ್ರತೆಯತ್ತ ಸಾಗಿದಾಗ ಅಥವಾ ನಿರಂತರ ಆತಂಕಗಳನ್ನು ಎದುರಿಸಿದಾಗ ಅನಿವಾರ್ಯವಾಗಿ ಪ್ರತಿಭಟನೆಯತ್ತ ಮುಖಮಾಡುತ್ತದೆ. ದಟ್ಟಾರಣ್ಯದ ಹಲವು ಕಡೆ ಚದುರಿದಂತೆ ವಾಸ ಮಾಡುವ ಕುಣಬಿ ಸಮುದಾಯದ ಸಂಘಟನೆ ಸುಲಭದ ಮಾತಲ್ಲ. ಆದರೆ ಅವರ ಅಸ್ತಿತ್ವದ ಉಳಿವಿಗಾಗಿ ಅದು ಅವರಿಗೆ ಅನಿವಾರ್ಯವಾಗಿತ್ತು.

ಕೆಲವು ಪ್ರಗತಿಪರ ಸಂಘಟನೆಗಳ ಹಾಗೂ ಸಮಾಜ ಚಿಂತಕರ ಸಣ್ಣ ಒತ್ತಾಸೆಯೂ ಕಾರಣವಾಗಿ ಕುಣಬಿ ಸುಮುದಾಯದಲ್ಲಿ ಸೌಮ್ಯ ಸ್ವರೂಪದ ಹೋರಾಟಗಳು ಆರಂಭವಾಗಿವೆ. ತಮ್ಮ ಹಕ್ಕನ್ನು ಇನ್ನೊಬ್ಬರು ನೀಡುವ ದಾನ ಎಂದು ತಿಳಿಯುತ್ತಿದ್ದ ಮುಗ್ದ ಕುಣಬಿ ಯುವಕರಲ್ಲಿ ಇದೀಗ ಎಚ್ಚರದ ಬೆಳ್ಳಿ ಕಿರಣಗಳು ಮೂಡಿವೆ. ದಿನಾಂಕ ೨೧-೧-೨೦೦೨ ರಲ್ಲಿ ಪ್ರಕಟವಾದ ವಿಜಯ ಕರ್ನಾಟಕ ಪತ್ರಿಕೆಯ ಲೇಖನ ಇಂಥ ಹೋರಾಟಗಳಿಗೆ ಒಂದು ಸಾಕ್ಷಿಯಂತಿದೆ. ಅದರ ವಿವರ ಈ ಕೆಳಗಿನಂತಿದೆ :

“ಅವನತಿಯತ್ತ ನೈಸರ್ಗಿಕ ಕುಮರಿ ಬೇಸಾಯ ಸಂಸ್ಕೃತಿ”

“ಬೆಟ್ಟಗಳ ಇಳಿಜಾರಿನ ಪ್ರದೇಶಗಳಲ್ಲಿ ನೆಲವನ್ನು ಊಳದೇ ಯಾವುದೇ ತರಹದ ನೇಗಿಲಿನಂತಹ ಸಲಕರಣೆಯನ್ನು ಭೂಮಿಯ ಎದೆಗೆ ಚುಚ್ಚದೇ ನೇರವಾಗಿ ರಾಗಿ, ನವಣೆ, ಸಜ್ಜೆಗಳನ್ನು ಮಳೆಗಾಲದಲ್ಲಿ ಚೆಲ್ಲಿ ಬೇರೆ ವಿವಿಧ ಇತರ ಕಳೆಗಳೊಂದಿಗೆ ಸಹಜವಾಗಿ ನೈಸರ್ಗಿಕವಾಗಿ ಬೆಳೆಯುವ ವಿಶಿಷ್ಟ ಬೇಸಾಯವೇ ಕುಂಬರಿ ಬೇಸಾಯ.

ದವಸ ಧಾನ್ಯಗಳಲ್ಲದೇ ಕಂದಮೂಲಗಳಾದ ಜಾಡ್‌ ಕಣಂಗ್‌, ನಾಗರಖೋನ್‌ ಹಾಗೂ ದನಕರುಗಳಿಗೆ ಮೇವನ್ನು ಸ್ವಲ್ಪ ಭಾಗಗಳಲ್ಲಿ ಬೆಳೆಸಿಕೊಳ್ಳುವ ಈ ಕೃಷಿ ಪದ್ಧತಿ ಬುಡಕಟ್ಟು ಜನಾಂಗಗಳ ಸಂಸ್ಕೃತಿಯನ್ನು ಬಿಂಬಿಸುವಂತಹದು. ಒಮ್ಮೆ ಇವರು ನಿರ್ಧಿಷ್ಟ ಜಾಗದಲ್ಲಿ ಒಂದು ಬೆಳೆ ಪಡೆದರೆ ಅದೇ ಜಾಗದಲ್ಲಿ ೩ ರಿಂದ ೫ ವರ್ಷಗಳವರೆಗೂ ಕೃಷಿ ಮಾಡುವುದಿಲ್ಲ. ಬದಲಾಗಿ ಪಕ್ಕದ ನಿರ್ದಿಷ್ಟ ಜಾಗದಲ್ಲಿ ಬೆಳೆ ತೆಗೆಯುತ್ತಾರೆ. ನಂತರ ಮೊದಲಿನ ಜಾಗದಲ್ಲಿ ಬೆಳೆದ ಗಿಡಗಂಟಿಗಳಿಗೆ ಪುನಃ ಬೆಂಕಿ ಕೊಟ್ಟು ಜಾಗ ಹದ ಮಾಡಿಕೊಳ್ಳುತ್ತಾರೆ. ಹೀಗಾಗಿ ಇದನ್ನು Shifting cultivation ಅಥವಾ Zoom cultivation ಎಂದೂ ಕರೆಯುತ್ತಾರೆ. ಯಾವುದೇ ಗೊಬ್ಬರ ಬಳಸದೇ ನೆಲವನ್ನು ತನ್ನಷ್ಟಕ್ಕೇ ನೈಸರ್ಗಿಕವಾಗಿ ಫಲವತ್ತುಗೊಳಿಸುವ ಸಹಜ ಕೃಷಿಯ ರೀತಿಯಿದು.

ಜೋಯಿಡಾ ತಾಲ್ಲೂಕಿನ ಕುಣಬಿಗಳು ಮತ್ತಿತರ ಬುಡಕಟ್ಟು ಜನಾಂಗದವರು ಈ ಬೇಸಾಯವನ್ನು ರೂಢಿಸಿಕೊಂಡಿರುವುದರ ಹಿನ್ನೆಲೆಗೆ ಭೌಗೋಳಿಕ ಕಾರಣಗಳೂ ಇವೆ. ಮೊದಲನೆಯದಾಗಿ ಸದಾ ಮಳೆಯಾಗುವ ದಟ್ಟ ಕಾಡಿನ ಭಾಗವಾದ ಡಿಗ್ಗಿ, ದೂದಮಳೆ, ಬಜಾರ್ ಕಣಂಗ್‌, ಸಿಸೈ, ಸಿರೋಳಿ, ಮಾಯಿರೇ, ಬೋಡೇಲಿ ಕಡೆಗಳಲ್ಲಿ ನೀರು ರಭಸವಾಗಿ ಹರಿಯುವುದರಿಂದ ನೆಲಮಟ್ಟದಲ್ಲಿ ಭತ್ತ ಬೆಳೆಯಲಾಗುವುದಿಲ್ಲ. ಈ ಕಾರಣದಿಂದ ಜನ ಬೆಟ್ಟದ ಇಳಿಜಾರಿನಲ್ಲಿ ಅನಿವಾರ್ಯವಾಗಿ ಈ ಬೇಸಾಯ ಪದ್ಧತಿಯನ್ನು ರೂಢಿಸಿಕೊಂಡು ಬಂದಿರಬಹುದು. ಈಗಲೂ ತಾವು ಬೆಳೆದ ರಾಗಿ, ನವಣೆ, ಸಜ್ಜೆ, ಗೆಡ್ಡೆ ಗೆಣಸುಗಳನ್ನು ಮಾರುವುದಿಲ್ಲ. ತಮ್ಮ ಹೊಟ್ಟೆ ಹೊರೆಯುವುದಕ್ಕೋಸ್ಕರ ಈ ಕೃಷಿಯನ್ನು ಅವಲಂಬಿಸುರುವುದು ಕಂಡು ಬರುತ್ತದೆ.

ಕುಮರಿ ಒಡೆತನ ಯಾರದು?

ಬ್ರಿಟಿಷರ ಕಾಲದಲ್ಲಿ ಈ ಜಮೀನುಗಳ ಮೇಲೆ ತೆರಿಗೆ ವಿಧಿಸುವ ಸಲುವಾಗಿ ೧೮೮೯ರಲ್ಲಿ Less Rent ತಿರ್ವೆ ತುಂಬಿಸಕೊಳ್ಳುವುದರ ಮೂಲಕ ಕುಂಬರಿ ಜಾಗ ದಾಖಲೆಗಳಿಗೆ ಒಳಪಟ್ಟಿತು. ಅಂದೇ ಬ್ರಿಟಿಷರು ಸರ್ವೆಮಾಡಿ ಜಮೀನಿನ ಸುತ್ತಲೂ ಬಂದಾರ ಕಲ್ಲುಗಳನ್ನು ನೆಟ್ಟಿದ್ದಾರೆಂದು ಈಗಲೂ ತಮ್ಮ ಜಮೀನುಗಳಲ್ಲಿ ಜನ ತೋರಿಸುತ್ತಾರೆ.

ಕುಂಬರಿ ಬೇಸಾಯದ ಮತ್ತೊಂದು ವೈಶಿಷ್ಟವೆಂದರೆ ರೈತರು ಇದನ್ನು ಸಾಮೂಹಿಕವಾಗಿ ಬೇಸಾಯ ಮಾಡಿ ಬಂದ ಫಸಲನ್ನು ಹಳ್ಳಿಯ ಎಲ್ಲರೂ ಹಂಚಿಕೊಳ್ಳುತ್ತಿದ್ದುದು. ಹೀಗಾಗಿ ಬ್ರಿಟಿಷರು ದಾಖಲೆಗಳನ್ನು ಸರಳಗೊಳಿಸುವ ಸಲುವಾಗಿಯೇ ಏನೋ ಜಮೀನಿನ ದಾಖಲೆಗಳನ್ನು ಹಳ್ಳಿಯ ಪ್ರಮುಖ ನಾಯಕನ ಹೆಸರಿಗೆ ಬರೆದಿದ್ದಾರೆ. ಅದರಂತೆ ಹಳ್ಳಿಯ ಮುಖ್ಯಸ್ಥನ ಹೆಸರಿನಲ್ಲಿ ತೆರಿಗೆಯನ್ನು ಪ್ರತಿ ವರ್ಷ ಕಟ್ಟಿಸಿಕೊಳ್ಳುತ್ತಾ ಬಂದಿದ್ದಾರೆ. ಬ್ರಿಟಿಷರ ನಂತರ ಭಾರತ ಸರಕಾರ ಆಡಳಿತ ಬಂದಾಗಿನಿಂದಲೂ ತೆರಿಗೆ ಕಟ್ಟುತ್ತಲೇ ಬಂದಿದ್ದಾರೆ. ತೆರಿಗೆ ತುಂಬಿದ ಪಾವತಿಗಳು ಈಗಲೂ ದಾಖಲೆಗಳಾಗಿ ಜನರಲ್ಲಿ ಇವೆ. ಹೀಗೆ ಒಂದು ಅಂದಾಜಿನ ಪ್ರಕಾರ ಇಡೀ ಜೋಯಿಡಾ ತಾಲ್ಲೂಕಿನಲ್ಲಿ ಸುಮಾರು ೮ ಸಾವಿರ ಎಕರೆ ಜಮೀನು ಕುಂಬರಿ ಬೇಸಾಯಕ್ಕೊಳಪಟ್ಟಿದೆ. ಇದರಲ್ಲಿ ಕುಂಡಳ ಗ್ರಾಮದ್ದೆ ಮೇಲುಗೈ. ಅಲ್ಲಿ ೮೦೦ ಎಕರೆ ಇದೆ. ಅಣಸಿಯ ಭಾಗದಲ್ಲಿ ೪೦೦ ಎಕರೆ, ವರಂಜೋಲ್‌ ಭಾಗದಲ್ಲಿ ೩೦೦ ಎಕರೆ, ಪಾಲ್ಡಿ ಭಾಗದಲ್ಲಿ ೪೦೦ ಎಕರೆ, ಅನಮೋಡ್‌ ಭಾಗದಲ್ಲಿ ೧೦೦ ಎಕರೆ, ಮೂಡಿಯೇ ಭಾಗದಲ್ಲಿ ೫೦ ಎಕರೆ, ದೂದಮೊಳೆ ೮೦, ಡಿಗ್ಗಿ ೧೦೦ ಹೀಗೆ ಪ್ರತಿ ಹಳ್ಳಿಗೆ ಕನಿಷ್ಟ ೫೦ ರಿಂದ ೧೦೦ ಎಕರೆಯಂತೆ ಒಟ್ಟು ೮ ಸಾವಿರ ಎಕರೆ ಜಾಗದಲ್ಲಿ ಜೋಯಿಡಾ ರೈತರು ಕುಂಬರಿ ಬೇಸಾಯ ನಡೆಸಿಕೊಂಡು ಬರುತ್ತಿದ್ದಾರೆ.

ಬ್ರಿಟಿಷರ ಕಾಲದಲ್ಲಿ ಉತ್ತರ ಕರ್ನಾಟಕ ಬಾಂಬೆಯ ಆಡಳಿತಕ್ಕೆ ಒಳಪಟ್ಟಿದ್ದರಿಂದ ಆಗಿನ ಎಲ್ಲಾ ದಾಖಲೆಗಳು ಹಳೆಯ ಮರಾಠಿ ಮೋಡಿ ಲಿಪಿಯಲ್ಲಿದೆ. ಈ ಕಾರಣ ಕರ್ನಾಟಕದ ಈಗಿನ ಅಧಿಕಾರಿಗಳಿಗೆ ಕುಂಬರಿ ಬಗ್ಗೆ ಇರುವ ಸ್ಪಷ್ಟ ದಾಖಲೆಗಳ ಅರಿವಿಲ್ಲ. ಮೇಲೆ ತಿಳಿಸಿದಂತೆ ಕುಂಬರಿ ಬೇಸಾಯ ಸಾಮೂಹಿಕವಾಗಿದ್ದು, ಅದರ ಒಡೆತನ ಹಳ್ಳಿಯ ನಾಯಕನ ಹೆಸರಲ್ಲಿ ಮಾತ್ರ ಇತ್ತು. ಉದಾ. ೧೯೮೧-೮೨ರಲ್ಲಿ ಅಖೇತಿಯ ನಾಗು ಲಕ್ಷಣ್‌ ತಮ್ಮ ೨೧ ಎಕರೆ ಕುಂಬರಿಗೆ ರೂ. ೫.೨೫. ತಿರ್ವೆ ಹಣವನ್ನು ಅರಣ್ಯ ಇಲಾಖೆಗೆ ತುಂಬಿರುವುದು ಕಚೇರಿಯ ಕಡತದಲ್ಲಿ ದಾಖಲಾಗಿದೆ.

ಈ ಬಗ್ಗೆ ಪತ್ರಿಕೆ ಹಳಿಯಾಲದ ಡಿ. ಎಫ್‌ ಓ. ಮಾಲ್ಕೇಡ್‌ರವರನ್ನು ಸಂದರ್ಶಿಸಿದಾಗ ಅವರ ಪ್ರಕಾರ ೧೯೮೬ರಲ್ಲಿ ಸರಕಾರ ಒಂದು ಹೊಸ ಆದೇಶ ಹೊರಡಿಸಿದೆ. ಈ ಆದೇಶದಂತೆ ೨೫.೬.೧೯೭೪ರಂದೇ ನಿರ್ಣಯವಾದರೂ ೧೯೮೬ರಂದು ಪ್ರಕಟಗೊಂಡು ಕಾರ್ಯಗತಗೊಳಿಸಿದೆ. ಈ ಆದೇಶದ ಪ್ರಕಾರ ಕುಂಬರಿ ರೈತ ಎಕರೆಗೆ ರೂ. ೨೫೦ ಕಟ್ಟಬೇಕಂತೆ. ಅದೂ ಅಲ್ಲದೇ ಈ ಅದೇಶದ ಪ್ರಕಾರ ಕುಂಬರಿ ರೈತ ಎಕರೆಗೆ ೭೪ರಲ್ಲೇ ತೆಗೆದುಕೊಂಡಿರುವುದರಿಂದ ೧೯೮೬ ರವರೆಗಿನ ೧೨ ವರ್ಷದ ಬಾಕಿಯನ್ನು ಎಕರೆಗೆ ವರ್ಷಕ್ಕೆ ೨೫೦ ರಂತೆ ಕಟ್ಟಿ ತೀರಿಸಬೇಕಂತೆ. ಈಗ ಕುಂಡಳ ಗ್ರಾಮದಲ್ಲಿ ಉದಾಹರಣೆಗೆ ೮೦೦ ಎಕರೆ ಕುಂಬರಿ ಇದೆ. ಈ ಹಿಂದೆ ಅಲ್ಲಿಯ ಜನ ೧೯೮೬ ರವರೆಗೆ ವರ್ಷಕ್ಕೆ ರೂ. ೨೦ ತೆರಿಗೆಯನ್ನು ಮಾತ್ರ ಪಾವತಿಸುತ್ತಾ ಬಂದಿದ್ದರು. ಈಗ ಏಕಾಏಕಿ ವರ್ಷಕ್ಕೆ ೨ ಲಕ್ಷ ತುಂಬಬೇಕು. ಅಲ್ಲದೇ ೧೨ ವರ್ಷದ ಬಾಕಿ ಎಂದು ೨೪ ಲಕ್ಷ ಒಟ್ಟಿಗೆ ತುಂಬಬೇಕು. ಈಗಲಾದರೂ ಇಲಾಖೆ ಕುಂಬರಿ ಜಾಗ ನಿಮ್ಮದೇ ಬಾಕಿ ಕಟ್ಟಿ ಜಾಗ ಸ್ವಾಧೀನಪಡಿಸಿಕೊಳ್ಳಿ ಎಂದಲ್ಲಿ ಸಂತೋಷಗೊಳ್ಳುವ ಹಾಗಿಲ್ಲ. ಏಕೆಂದರೆ ೨೦೦೨ನೇ ಇಸವಿವರೆಗಿನ ೧೬ ವರ್ಷದ ಬಾಕಿಯನ್ನು ಕಟ್ಟಬೇಕು.

೧೯೮೭ ರಿಂದಲೂ ಜೋಯಿಡಾದ ಕೆಲವು ಭಾಗದ ರೈತರು ಮತ್ತು ಕೆಲವು ರಾಜಕೀಯ ಮುಖಂಡರು ಕುಂಬರಿ ಹಕ್ಕಿಗಾಗಿ ಪ್ರತಿಭಟಿಸುತ್ತಲೇ ಬಂದಿದ್ದಾರೆ. ಆದರೆ ಅವರೆಲ್ಲರ ಹೋರಾಟಗಳು ಮಾಹಿತಿ ರಹಿತ ವಿಕೇಂದ್ರಿಕೃತ ಪ್ರತ್ಯೇಕ ಸಂಘಟನೆಗಳಾಗಿದ್ದವು. ೧೯೮೭ರಲ್ಲಿ ಈಗಿನ ಹಾಲಿ ತಾ. ಪಂ. ಅಧ್ಯಕ್ಷ ಕೃಷ್ಣ ದೇಸಾಯಿಯ ಅಧ್ಯಕ್ಷತೆಯಲ್ಲಿ ಅಖೇತಿ ಭಾಗದ ಕುಣಬಿಯರ ಮತ್ತು ಮರಾಠ ಜನಗಳಿಂದ ಸಂಘಟನೆಗೊಂಡು ಹೋರಾಟ ಪ್ರಾರಂಭವಾಗಿದ್ದರೂ, ತಾಲ್ಲೂಕಿನ ಪೂರ್ಣ ವ್ಯಾಪ್ತಿಗೆ ಒಳಪಡದ ಕಾರಣ ಗುರಿ ತಲುಪಲಾಗಲಿಲ್ಲ. ೧೯೯೨ರಲ್ಲಿ ಹಾಗೂ ೧೯೯೪ರಲ್ಲಿ ಆಗಿನ ರಾಜಕೀಯ ಧುರೀಣ ನಾಗೋಡ ದೇಸಾಯಿಯವರ ಮುಂಚೂಣಿಯಲ್ಲಿ ಅನಮೋಡ್‌ದಲ್ಲಿ ಆಗಿನ ಸಿ. ಸಿ. ಎಫ್‌ ಮಲ್ಲರೆಡ್ಡಿಯವರನ್ನು ಕರೆಸಿ ಚಳುವಳಿ ಮಾಡಿದ್ದಾರೆ. ಆಗ ಆಗಮಿಸಿದ್ದ ಮಲ್ಲರೆಡ್ಡಿಯವರು ಜನರ ಪ್ರಶ್ನೆಗೆ ಕುಂಬರಿ ಜಾಗವನ್ನು ನಾವೆಲ್ಲಿ ಕಸಿದುಕೊಂಡಿದ್ದೇವೆಂದು ಮರು ಪ್ರಶ್ನೆ ಹಾಕಿದ್ದನ್ನು ಜನರು ಈಗಲೂ ಜ್ಞಾಪಿಸಿಕೊಳ್ಳುತ್ತಾರೆ. ಈ ಬಗ್ಗೆ ಕೊನೆಯ ಪ್ರಯತ್ನ ಮತ್ತು ಹೋರಾಟವನ್ನು ನಡಸಿದವರು ಜೋಯಿಡಾದ ಹಿಂದುಳಿದವರಿಗಾಗಿ ದುಡಿದ, ವಿಶಿಷ್ಟ ವ್ಯಕ್ತಿತ್ವದ ದಿ. ವಸಂತ ಆಸ್ನೋಟಿಕರ್ ರವರು. ೧೯೯೯ರಲ್ಲಿ ತಿನ್ನೆಘಾಟ್‌ನಲ್ಲಿ ಇದೆ. ಹಳಿಯಾಳದ ಡಿ. ಎಫ್‌. ಓ. ಮಾಲ್ಕೇಡ್‌ರವರೊಂದಿಗೆ ದೀರ್ಘವಾಗಿ ಚರ್ಚಿಸಿ ಮಾಹಿತಿಗಳನ್ನು ಪಡೆದುಕೊಂಡು ಕುಂಬರಿ ಜಾಗ ಬಿಟ್ಟು ಕೊಡಲು ಆದೇಶಿಸಿದ್ದರು.

೧೯೮೬ರಿಂದಲೂ ಕೈಗೆ ನಿಲುಕದ ಕುಂಬರಿ ಕೈ ಬಿಟ್ಟಿತೆಂದು ನಿರಾಶರಾಗಿದ್ದ ಜೋಯಿಡಾದ ಜನರ ಆಸೆಗೆ ಚಿಗುರೊಡೆಯಲು ಕಾರಣವೆಂದರೆ ಆಗಿನ ಸಚಿವ ಆರ್. ವಿ. ದೇಶಪಾಂಡೆಯವರು ೨೫.೧.೨೦೦೧ ರಂದು ಅನಮೋಡದಲ್ಲಿ ಕುಂಬರಿ ಜಾಗ ನಿಮ್ಮದೇ, ಇದರಿಂದ ವಂಚಿತರಾದ ರೈತರು ನಾಳೆಯಿಂದಲೇ ತಮ್ಮ ದಾಖಲೆಗಳ ಸಮೇತ ಸ್ಥಳೀಯ ವಲಯ ಅರಣ್ಯ ಅಧಿಕಾರಿ ಕಚೇರಿಗೆ ಅರ್ಜಿ ಸಲ್ಲಿಸಿಕೊಳ್ಳಿ ಎಂಬ ಘೋಷಣೆ ಮಾಡಿದ್ದು. ಅಲ್ಲಿಂದ ಉಸ್ತುವಾರಿ ಸಚಿವರು ಪ್ರತಿಸಾರಿ ಜೋಯಿಡಾಗೆ ಬಂದಾಗಲೂ ಕುಂಬರಿಯ ಪ್ರಸ್ತಾಪ ಮಾಡುತ್ತಲೇ ಬಂದಿದ್ದಾರೆ.

ಈ ಘೋಷಣೆಯಿಂದ ಜಾಗೃತಗೊಂಡ ಕುಂಬರಿ ವಂಚಿತ ಬಡ ರೈತರು ಸ್ಥಳೀಯ ಗಿರಿಜನ ಅಭಿವೃದ್ಧಿ ಸ್ವಯಂ ಸೇವಾ ಸಂಸ್ಥೆಯಾದ ‘ಗ್ರೀನ್‌ ಇಂಡಿಯಾ’ ಸಹಾಯದೊಂದಿಗೆ ಕುಂಬರಿ ಒಡೆತನದ ಪಟ್ಟಿಯನ್ನು ದಾಖಲೆಗಳ ಸಮೇತ ಪ್ರತಿಜ್ಞಾ ಮೂಲಕ ಆರ್. ಎಫ್‌. ಓ. ಕಚೇರಿಗೆ ಸಲ್ಲಿಸಿದ್ದಾರೆ. ಅಲ್ಲಿಂದ ಇಲ್ಲಿಗೆ ಹಲವು ವರ್ಷಗಳೇ ಸಂದಿದೆ. ಯಾವುದೇ ಬದಲಾವಣೆಯಾಗಿಲ್ಲ. ಈ ಬಗ್ಗೆ ಸಂಬಂಧಪಟ್ಟ ಆರ್. ಎಫ್‌. ಓ. ಅವರುಗಳನ್ನು ವಿಚಾರಿಸಲಾಗಿ ನಮ್ಮಗ್ಯಾರಿಗೂ ಈ ವಿಚಾರದ ಬಗ್ಗೆ ಯಾವುದೇ ಆದೇಶಗಳು ಬಂದಿಲ್ಲ. ನೀವು ಅರ್ಜಿ ಕೊಟ್ಟರೆ ಸುಮ್ಮನೆ ಇಟ್ಟುಕೊಳ್ಳುತ್ತೇವೆಂದು ತಿಳಿಸಿದರಂತೆ. ಕಳೆದ ೧೮ ವರ್ಷಗಳಿಂದ ರೋಸಿ ಹೋದ ಕುಂಬರಿ ವಂಚಿತ ನೊಂದ ಜೋಯಿಡಾ ರೈತರುಗಳು ಮೂರು ವರ್ಷಗಳ ಹಿಂದೆ ಗ್ರೀನ್‌ ಇಂಡಿಯಾ ಸಂಸ್ಥೆಯ ಸಹಯೋಗದೊಂದಿಗೆ ಒಟ್ಟಿಗೆ ಸೇರಿ ಕುಂಬರಿ ಹಕ್ಕಿಗಾಗಿ ಹೋರಾಟ ಸಮಿತಿಯನ್ನು ರಚಿಸಿಕೊಂಡಿದ್ದಾರೆ. ೨೦೦೨ರ ನವೆಂಬರ್ ೨೯ರಂದು ಸುಮಾರು ೨-೩ ಸಾವಿರ ಜನರು ಒಟ್ಟಿಗೆ ಸೇರಿ ಬೃಹತ್‌ ಮೆರವಣಿಗೆ ನಡೆಸಿ ವಿಶಿಷ್ಟ ರೀತಿಯ ಮುಖಾಮುಖಿ ಕಾರ್ಯಕ್ರಮ ಹಮ್ಮಿ ಕೋಳ್ಳುವುದರ ಮೂಲಕ ಕುಂಬರಿ ಚಳವಳಿಗೆ ಹೊಸ ಚಾಲನೆ ನೀಡಿದ್ದಾರೆ.

ನವೆಂಬರ್ ೨೯ರ ಮುಖಾಮುಖಿ ಕಾರ್ಯಕ್ರಮದ ಚರ್ಚೆಯ ತೀರ್ಮಾನದಂತೆ ಹೋರಾಟ ಸಮಿತಿಯ ಪದಾಧಿಕಾರಿಗಳು, ಗ್ರೀನ್‌ ಇಂಡಿಯಾ ಸಂಸ್ಥೆ ಮತ್ತು ಜನಪ್ರತಿನಿಧಿಗಳು ಡಿಸೆಂಬರ್ ೪ರಂದು ಉಸ್ತುವಾರಿ ಸಚಿವ ಮತ್ತು ಜಿಲ್ಲಾಧಿಕಾರಿಗಳೊಟ್ಟಿಗೆ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ವಿಶೇಷ ಸಭೆ ಇಟ್ಟುಕೊಳ್ಳಲಾಗಿತ್ತು. ಸಚಿವರು ಮತ್ತು ಅರಣ್ಯ ಇಲಾಖೆಯ ಪರವಾಗಿ ಆಗಮಿಸಿದ್ದ ಹಳಿಯಾಳದ ಡಿ. ಎಫ್‌. ಓ. ಮಾಲ್ಕೇಡ್‌ರವರು ಅಂತಿಮವಾಗಿ ಕುಂಬರಿ ಜಮೀನು ರೈತರುಗಳದ್ದೇ, ಅದನ್ನು ಅವರಿಗೆ ಬಿಟ್ಟುಕೊಡಬೇಕು. ಹೋರಾಟ ಸಮಿತಿ ಕುಂಬರಿ ವಂಚಿತರ ಸರ್ವೆ ನಂಬರ್ ಹಾಗೂ ಯಾರ್ಯಾರು ಕುಂಬರಿ ಫಲಾನುಭವಿಗಳು ಇರುವರು ಅವರ ಕುಂಬರಿ ಪಟ್ಟಿಯನ್ನು ಪ್ರತಿಜ್ಞಾ ಪತ್ರದ ಮೂಲಕ ಸಲ್ಲಿಸಬೇಕೆಂದೂ ಅದರ ಪ್ರಕಾರ ೮ ಸಾವಿರ ಎಕರೆ ಕುಂಬರಿ ಜಮೀನನ್ನು ಜನಗಳಿಗೆ ಬಿಟ್ಟುಕೊಡಲಾಗುವುದೆಂದು ಪ್ರಕಟಿಸಿದ್ದಾರೆ.

೧೯೮೬ರ ಸರಕಾರದ ಆದೇಶದ ಪ್ರಕಾರ ಒಂದು ಸಾವಿರ ಪಟ್ಟು ಮಾಡಲಾಗಿದ್ದು ತಿರ್ವೆಯನ್ನು ಸರಕಾರ ಮನ್ನಾ ಮಾಡುವುದೆಂದು ಉಸ್ತುವಾರಿ ಸಚಿವರು ಸಭೆಯಲ್ಲಿ ತಿಳಿಸಿದರು. ತದನಂತರ ಜಗಲಪೇಟೆಯಲ್ಲಿ ಸ್ಥಳೀಯ ವಲಯ ಅರಣ್ಯ ಅಧಿಕಾರಿ ಮತ್ತು ಜಿಲ್ಲಾ ಪಂಚಾಯತ್‌ ಉಪಧ್ಯಕ್ಷ ವಿಲಾಸ ನಾಯ್ಕರವರ ಅಧ್ಯಕ್ಷತೆಯಲ್ಲಿ ಕುಂಬರಿ ಹಕ್ಕಿನ ಹೋರಾಟ ಸಮಿತಿ ಸಭೆ ಇಟ್ಟುಕೊಂಡಿದ್ದು ಕುಂಬರಿ ಜಾಗಗಳನ್ನು ವೀಕ್ಷಣೆ ಮಾಡಲಾಯಿತು.

ಡಿಸೆಂಬರ್ ೨೪ರಂದು ಮಾಜಿ ಸಂಸತ್‌ ಸದಸ್ಯ ಹಾಗೂ ರಾಷ್ಟ್ರೀಯ ಭಾ.ಜ.ಪ ಯುವಮೋರ್ಚಾ ಅಧ್ಯಕ್ಷ ಅನಂತಕುಮಾರ ಹೆಗಡೆಯವರ ನೇತೃತ್ವದಲ್ಲಿ ಅಣಸಿಯಲ್ಲಿ ಕುಂಬರಿ ಹಕ್ಕಿಗಾಗಿ ಮತ್ತೊಂದು ಹೋರಾಟವನ್ನು ಹಮ್ಮಿಕೊಳ್ಳಲಾಗಿತ್ತು.

೧೮ ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಕುಂಬರಿ ಸಮಸ್ಯೆ ಈ ಮೇಲಿನ ಹೋರಾಟಗಳಿಂದ ವಿಶೇಷ ತಿರುವನ್ನು ಪಡೆದುಕೊಂಡಿದ್ದು, ಜನಗಳಿಗೆ ಕಳೆದುಕೊಂಡ ೮ ಸಾವಿರ ಎಕರೆ ಕುಂಬರಿ ಜಮೀನನ್ನು ಮರಳಿ ಪಡೆಯುವ ಆಸೆ ಚಿಗರೊಡೆದಿದೆ”

ಮೇಲಿನ ಪತ್ರಿಕೆಯ ಲೇಕನದ ಪ್ರಕಾರ ಅಷ್ಟೆಲ್ಲ ಆಸೆಗಳನ್ನು ಇಟ್ಟುಕೊಂಡಿದ್ದ ಕುಣಬಿಯರಿಗೆ ಯಾವುದೂ ಫಲಿಸಿಲ್ಲ. ಭೂಮಿ ಪಡೆಯಬೇಕೆಂಬ ಚೋಮನ ಕನಸು ಹಾಗೇ ಉಳಿದಿದೆ. ದಿನಾಂಕ ೩೦-೧೦-೨೦೦೩ ರಂದು ಕುಣಬಿ ಸಮಾಜ ಅಭಿವೃದ್ಧಿ ಸಂಘದವರು ಸರ್ಕಾರಕ್ಕೆ ಸಲ್ಲಿಸಿರುವ ಅರ್ಜಿ ಅವರ ಮತ್ತಷ್ಟು ನಿರಾಸೆಯನ್ನು ಬೊಟ್ಟು ಮಾಡಿ ತೋರಿಸುತ್ತದೆ. ಆ ಅರ್ಜಿಗಳ ಉಲ್ಲೇಖ ಈ ಕೆಳಗಿನಂತಿದೆ:

ತಾಲ್ಲೂಕ ಕುಣಬಿ ಸಮಾಜ ಆಬಿವೃದ್ಧಿ ಸಂಘ (ರಿ), ಜೋಯಿಡಾ

ಮಾನ್ಯ ಶ್ರೀಮಾನ್‌ ಬಸವರಾಜ ಹೊರಟ್ಟಿ
ಪಂಚಾಯತ್‌ ರಾಜ್‌ ಮತ್ತು ಗ್ರಾಮೀಣಾಭಿವೃದ್ಧಿ ಸಚಿವರು
ಕರ್ನಾಟಕ ಸರ್ಕಾರ, ವಿಧಾನಸೌಧ
ಬೆಂಗಳೂರು

ವಿಷಯ : ಉ. ಕ. ಜಿಲ್ಲೆಯ ಕುಣಬಿ ಜನಾಂಗವನ್ನು ಪರಿಶಿಷ್ಟ ಪಂಗಡಕ್ಕೆ ಸೇರ್ಪಡೆಗೊಳಿಸುವ ಹಾಗೂ ಕುಂಬರಿ ಬೇಸಾಯದ ಜಮೀನನ್ನು ಬಿಟ್ಟುಕೊಡುವ ಕುರಿತು ಮನವಿ ಪತ್ರ.

ಮಾನ್ಯರೇ,

ಉ. ಕ. ಜಿಲ್ಲೆಯಲ್ಲೇ ಅತ್ಯಂತ ಹಿಂದುಳಿದ ಬುಡಕಟ್ಟು ಸಂಸ್ಕೃತಿಯನ್ನು ಹೊಂದಿರುವ ಜನಾಂಗ ಕುಣಬಿ ಜನಾಂಗವಾಗಿದೆ. ಕುಣಬಿಗಳ ಸಂಸ್ಕೃತಿಯು ನಡೆನುಡಿ, ಆಚರಣೆ, ಜಾನಪದ, ಸಂಪ್ರದಾಯ ಎಲ್ಲಾ ದೃಷ್ಟಿಕೋನದಲ್ಲಿ ನೋಡಿದರೂ ಕೂಡ ೧೦೦ಕ್ಕೆ ನೂರರಷ್ಟು ಬುಡಕಟ್ಟು ಸಂಸ್ಕೃತಿ ಹೊಂದಿದೆ. ಆದ್ದರಿಂದಲೇ ಪಕ್ಕದ ಗೋವಾ ರಾಜ್ಯದಲ್ಲಿ ೨೦೦೩ರಲ್ಲಿ ಕುಣಬಿಗಳನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಿದ್ದಾರೆ.

ಉತ್ತರ ಕನ್ನಡ ಜಿಲ್ಲೆಯಲ್ಲಿ ಒಟ್ಟು ೨೫,೦೦೦ ಸಾವಿರದಷ್ಟು ಜನಸಂಖ್ಯೆ ಹೊಂದಿರುವ ಈ ನಮ್ಮ ಜನಾಂಗವನ್ನು ಪರಿಶಿಷ್ಟ ಪಂಗಡಕ್ಕೆ ಸೇರ್ಪಡೆಗೊಳಿಸಬೇಕೆಂದು ಹಲವಾರು ವರ್ಷಗಳಿಂದ ನಾವುಗಳು ಸರ್ಕಾರವನ್ನು ವಿನಂತಿಸಿಕೊಳ್ಳುತ್ತಿದ್ದರೂ ಕೂಡ ನಮ್ಮನ್ನು ನಿರ್ಲಕ್ಷಿಸಲಾಗಿದೆ. ನಾವುಗಳು ಮಾಡಿಕೊಂಡ ಮನವಿ, ನಡೆಸಿದ ಹೋರಾಟಗಳನ್ನು ಕಡೆಗಣಿಸಲಾಗಿದೆ. ಆದ್ದರಿಂದ ಪಕ್ಕದ ಗೋವಾ ಸರ್ಕಾರದಲ್ಲಿ ೨೦೦೩ ಗೆಜೆಟ್‌ ೧೩-೧೪-೯೦ ಎಸ್‌. ಡಬ್ಲ್ಯೂ. ಡಿ. (Volume 111) ೧೯೦ ಪ್ರಕಾರ ಕುಣಬಿಗಳನ್ನು ಪರಿಶಿಷ್ಟ ಪಂಗಡಕ್ಕೆ ಸೇರ್ಪಡೆಗೊಳಿಸಿರುವ ಆದೇಶವನ್ನು ಅನುಸರಿಸಿ ನಮ್ಮ ಜನಾಂಗವನ್ನು ಪರಿಶಿಷ್ಟ ಪಂಗಡಕ್ಕೆ ಸೇರ್ಪಡೆಗೊಳಿಸಲು ಕೇಂದ್ರ ಸರ್ಕಾರಕ್ಕೆ ಒತ್ತಾಯ ತರುವ ಎಲ್ಲಾ ಕ್ರಮಗಳನ್ನು ಕೈಗೊಂಡು ನ್ಯಾಯ ಒದಗಿಸಬೇಕಾಗಿ ತಮ್ಮಲ್ಲಿ ವಿನಂತಿಸಿಕೊಳ್ಳುತ್ತಿದ್ದೇವೆ.

ಇದಲ್ಲದೆ ನಾವುಗಳು ಪೂರ್ವಕಾಲದಿಂದಲೂ ಸಾಗುವಳಿ ಮಾಡಿಕೊಂಡು ಬಂದಿದ್ದ ಕುಂಬರಿ ಜಾಗವನ್ನು ಸರ್ಕಾರದ ಆದೇಶ Go 74B3/A/GFL/72-7 ಪ್ರಕಾರ ನಮಗೆ ಹಕ್ಕು ನೀಡಿ ಕುಂಬರಿ ಜಾಗವನ್ನು ಬಿಟ್ಟು ಕೊಡಲು ನಾವು ಇಲ್ಲಿಯವರೆವಿಗೆ ಉಸ್ತುವಾರಿ ಸಚಿವರು ಹಾಗೂ ಅರಣ್ಯ ಇಲಾಖೆಗೆ ಮಾಡಿಕೊಂಡ ಮನವಿ ಹಾಗೂ ಹೋರಾಟಗಳನ್ನು ಕೂಡ ನಿರ್ಲಕ್ಷಿಸಿದೆ. ಕಾರಣ ಈ ಎರಡು ನಮ್ಮ ಬೇಡಿಕೆಗಳನ್ನು ತಕ್ಷಣವೇ ಮಾನ್ಯ ಮಾಡಿ ನ್ಯಾಯ ಒದಗಿಸಬೇಕಾಗಿ ತಮ್ಮಲ್ಲಿ ಈ ಮೂಲಕ ವಿನಂತಿಸಿಕೊಳ್ಳುತ್ತಿದ್ದೇವೆ.

ದಿನಾಂಕ : ೧೦-೧೧-೨೦೦೫

ಇಂತಿ ತಮ್ಮ ವಿಶ್ವಾಸಿ

ಅಧ್ಯಕ್ಷರು
ತಾಲ್ಲೂಕು ಕುಣಬಿಸಮಾಜ, ಜೋಯಿಡಾ

ಇದೇ ಸಂಘದವರು ಮತ್ತೊಬ್ಬ ಮಂತ್ರಿಗಳಿಗೆ ತಹಸಿಲ್ದಾರ್ ರವರ ಮೂಲಕ ನೀಡಿರುವ ಅಹವಾಲು ಎಷ್ಟು ವರ್ಷಗಳಾದರೂ ಈ ಸಮಸ್ಯೆ ಬಗೆಹರಿದಿಲ್ಲ ಎಂಬುದನ್ನು ಸಾಬೀತುಪಡಿಸುತ್ತದೆ :

ಮಾನ್ಯ ತಹಸೀಲ್ದಾರರು
ಜೋಯಿಡಾ ತಾಲ್ಲೂಕು

ಮಾನ್ಯರೇ,

. ಉತ್ತರ ಕನ್ನಡ ಜಿಲ್ಲೆಯ ಹರಿದ್ವರ್ಣ ಕಾಡಿನ ಮಧ್ಯದಲ್ಲಿ ನೆಲೆಸಿರುವ ನಮ್ಮ ಕುಣಬಿ ಸಮಾಜದವರು ಸಾಮಾಜಿಕವಾಗಿ ಆರ್ಥಿಕವಾಗಿ ಮತ್ತು ಶೈಕ್ಷಣಿಕವಾಗಿ ತೀರಾ ಹಿಂದುಳಿದ ಜನಾಂಗದವರಾಗಿರುತ್ತಾರೆ. ನಮ್ಮ ಜಿಲ್ಲೆಯ ಜೋಯಿಡಾ, ಕಾರವಾರ, ಯಲ್ಲಾಪುರ, ಹುಳಿಯಾಳ, ಅಂಕೋಲ, ಮತ್ತು ಬೆಳಗಾವಿ ಜಿಲ್ಲೆಯ ಖಾನಾಪುರ ತಾಲ್ಲೂಕುಗಳಲ್ಲಿ ವಾಸಿಸುವ ನಮ್ಮ ಜನಾಂಗದವರ ಸಮಗ್ರ ಅಭಿವೃದ್ಧಿಗಾಗಿ ಮತ್ತು ನಮ್ಮ ಜನಾಂಗವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸುವ ಬಗ್ಗೆ ಕಳೆದ ೧೨ ವರ್ಷಗಳಿಂದ ನಮ್ಮ ಸಂಘವು ಸರಕಾರದ ಜೊತೆ ಹೋರಾಟ ಮಾಡುತ್ತಾ ಬಂದಿರುತ್ತದೆ. ಅದರ ಪ್ರಯತ್ನದ ಫಲವಾಗಿ ಸರಕಾರವು ನಮ್ಮ ಜನಾಂಗವನ್ನು ಉತ್ತರ ಕನ್ನಡ ಜಿಲ್ಲೆಯಲ್ಲಿ ಅತ್ಯಂತ ಹಿಂದುಳಿದ ಜನಾಂಗವೆಂದು ಮಾತ್ರ ಗುರುತಿಸಿದೆ. ಆದರೆ ಬುಡಕಟ್ಟು (ಗಿರಿಜನ) ಜನಾಂಗದವರ ಎಲ್ಲಾ ಗುಣಲಕ್ಷಣಗಳನ್ನು ಹೊಂದಿರುವ ನಮ್ಮನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸದೇ ಸರಕಾರವು ತುಂಬಾ ಅನ್ಯಾಯ ಮಾಡಿದೆ. ಇದಕ್ಕೆ ಮುಖ್ಯ ಕಾರಣ ನಾವು ನಮ್ಮ ಪ್ರಯತ್ನದಲ್ಲಿ ಮತ್ತು ಹೋರಾಟದಲ್ಲಿ ಸೋತಿದ್ದೇವೆ. ಆದ್ದರಿಂದ ನಮ್ಮ ಜನಾಂಗವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಲು ನಾವು ಹೋರಾಟ ನಡೆಸುವುದು ತುಂಬಾ ಅವಶ್ಯಕವಾಗಿದೆ. ದಿನಾಂಕ ೨-೧೦-೨೦೦೩ ರಂದು ಸಂಘದ ಕಾರ್ಯಕಾರಿ ಸಮಿತಿ ಸಭೆ ಸೇರಿ, ಹಾಲಕ್ಕಿ ಸಮಾಜ, ಗೌಳಿ ಸಮಾಜ ಮತ್ತು ನಮ್ಮ ಸಮಾಜದವರು ಒಟ್ಟಿಗೆ ಸೇರಿ, ಪರಿಶಿಷ್ಟ ಪಂಗಡಕ್ಕೆ ಸೇರಿಸಲು ಸರಕಾರವನ್ನು ಒತ್ತಾಯಿಸಿ ಹೋರಾಟ ನಡೆಸಲು ಜಿಲ್ಲಾ ಮಟ್ಟದಲ್ಲಿ ಸಂಘಟನೆ ಮಾಡುವ ಕುರಿತು ಸಭೆಯಲ್ಲಿ ಚರ್ಚಿಸಿದ್ದು ಇರುತ್ತದೆ. ಆ ಪ್ರಕಾರ ಈ ದಿನ ದಿನಾಂಕ ೩೦-೧೦-೨೦೦೩ ರಂದು ನಮ್ಮ ಹೋರಾಟದ ಮೊದಲ ಹಂತವಾಗಿ ನಮ್ಮ ಕುಣಬಿ ಜನಾಂಗವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸುವ ಕುರಿತು, ಕುಂಬರಿ ಭೂಮಿ ಸಾಗುವಳಿ ಮತ್ತು ಅತಿಕ್ರಮ ಜಮೀನು ಸಕ್ರಮ ಈ ಬೇಡಿಕೆಗಳ ಕುರಿತು ಸರಕಾರವನ್ನು ಒತ್ತಾಯಿಸಲು ತಮ್ಮಲ್ಲಿ ಸಲ್ಲಿಸುತ್ತಿರುವ ಸಂಘದ ಬೇಡಿಕೆಯ ಮನವಿ ಪತ್ರ ಏನೆಂದರೆ –

. ನಮ್ಮ ಕುಂಬರಿ ಜಮೀನಿನ ಸಾಗುವಳಿ ಹಕ್ಕನ್ನು ನಮಗೆ ಬಿಟ್ಟು ಕೊಡುವುದು. ಆದಿ ಕಾಲದಿಂದಲೂ, ಪಾರಂಪರಿಕವಾಗಿ, ಆಹಾರ ಧಾನ್ಯ ಬೆಳೆಯನ್ನು ಬೆಳೆಯಿಸಿಕೊಂಡು ನೆಮ್ಮದಿಯಿಂದಿದ್ದ ನಮ್ಮ ಕುಣಬಿ ಜನಾಂಗದವರ ಸಾಂಪ್ರದಾಯಿಕ ಕುಂಬರಿ ಜಾಗವನ್ನು ೧೯೮೬ರಿಂದ ಅರಣ್ಯ ಇಲಾಖೆ ಕಸಿದುಕೊಂಡು ನಮ್ಮ ಬದುಕಿಗಿದ್ದ ಆಸರೆ, ಆಹಾರ ಮತ್ತು ಸಂಸ್ಕೃತಿಯನ್ನು ಕಸಿದುಕೊಂಡಿದೆ. ೧೯೮೯ರಲ್ಲಿ ಬ್ರಿಟಷ್ ಸರಕಾರದಿಂದ ಕಾನೂನು ಬದ್ಧವಾಗಿ ಮಾನ್ಯತೆ ಪಡೆದುಕೊಂಡಿದೆ. ನಮ್ಮ ಜಾಗೆಯನ್ನು ಅರಣ್ಯ ಇಲಾಖೆ ಕಿತ್ತುಕೊಂಡು ಬಡರೈತನ ಮೇಲೆ ಬರೆ ಎಳೆದಿದೆ. ದಿನಾಂಕ ೨೬-೦೧-೨೦೦೧ ರಂದು ಜೋಯಿಡಾದ ತಾಲ್ಲೂಕು ಕಛೇರಿ ಎದುರು, ಜೋಯಿಡಾ ಹಕ್ಕಲು ಹೋರಾಟ ಸಮಿತಿಯವರು ಈ ಕುಂಬರಿ ಜಮೀನಿನ ಹಕ್ಕನ್ನು ಕೇಳಲು ಮತ್ತು ಈ ಬಗ್ಗೆ ಚರ್ಚಿಸಲು ಜನಪ್ರತಿನಿಧಿಗಳು ಮತ್ತು ಅರಣ್ಯ ಮತ್ತು ರೆವಿನ್ಯು ಇಲಾಖೆಯ ಅಧಿಕಾರಿಗಳನ್ನು ಕರೆದು ಮುಖಾಮುಖಿ ಕಾರ್ಯಕ್ರಮ ಹಮ್ಮಿಕೊಂಡಿದ್ದು. ಆ ಸಭೆಯಲ್ಲಿ ನಿರ್ಣಯವಾದ ಪ್ರಕಾರ ತಿರ್ವೆ ಹಣ ಮನ್ನಾ ಮಾಡಿಸುವುದು ಮತ್ತು ಅರಣ್ಯ ಇಲಾಖೆಯ ಕಾಯ್ದೆ ಪ್ರಕಾರ ೧೯೭೮ರ ಒಳಗೆ ಅತೀಕ್ರಮಣ ಮಾಡಿದ ಜಮೀನನ್ನು ರೈತರಿಗೆ ಬಿಟ್ಟು ಕೊಡಬೇಕೆಂಬ ಅದೇಶದಂತೆ ಕುಂಬರಿ ಜಮೀನನ್ನು ನಮಗೆ ಬಿಟ್ಟು ಕೊಡದೇ ತುಂಬಾ ಅನ್ಯಾಯ ಮಾಡಿದೆ. ಈ ಬಗ್ಗೆ ನಮ್ಮ ಮಾನ್ಯ ಜಿಲ್ಲಾ ಉಸ್ತುವಾರಿ ಮಂತ್ರಿಗಳ ಜೊತೆ ಹಕ್ಕಲು ಹೋರಟ ಸಮಿತಿಯ ಅಧ್ಯಕ್ಷರು ಚರ್ಚಿಸಿದರೂ ಇನ್ನೂವರೆಗೆ ಕುಂಬರಿ ಸಮಸ್ಯೆಯು ಹಾಗೆಯೇ ಇದೆ. ಆದ್ದರಿಂದ ಆದಷ್ಟು ಬೇಗನೇ ಕುಂಬರಿ ಜಮೀನಿನ್ನು ನಮಗೆ ಬಿಟ್ಟು ಕೊಟ್ಟು, ಅನ್ಯಾಯವಾಗಿರುವ ನಮಗೆ ನ್ಯಾಯ ಒದಗಿಸುವುದು.

. ನಮ್ಮ ಜನಾಂಗದವರ ಅರಣ್ಯ ಅತೀಕ್ರಮಣ ಜಮೀನನ್ನು ಸಕ್ರಮಗೊಳಿಸುವುದು ಜೋಯಿಡಾ ತಾಲ್ಲೂಕು ರಾಜ್ಯದಲ್ಲಿಯೇ ಹಿಂದುಳಿದ ಅತೀ ಕಡಿಮೆ ಜನಸಂಖ್ಯೆ ಹೊಂದಿದೆ. ಶೇ. ೯೦ರಷ್ಟು ಭಾಗ ಅರಣ್ಯ ಪ್ರದೇಶದಿಂದ ಕೂಡಿದ್ದು. ಕೃಷಿ ಭೂಮಿ ಅತೀ ಕಡಿಮೆ ಪ್ರಮಾಣದಲ್ಲಿದೆ. ಈ ತಾಲ್ಲೂಕಿನ ಜನತೆ ಶೇ. ೯೦ರಷ್ಟು ಬಡವರಾಗಿದ್ದು ಇವರು ಸ್ವಲ್ಪ ಪ್ರಮಾಣ ಆಕ್ರಮಿತ ಜಮೀನಿನಲ್ಲೇ ಗುಡಿಸಲು ಕಟ್ಟಿಕೊಂಡು ಜೀವನ ಸಾಗಿಸುತ್ತಿದ್ದಾರೆ. ಈಗಾಗಲೇ ಸೂಪಾ ಮುಳಗಡೆಯಿಂದಾಗಿ ಬಹಳಷ್ಟು ಜಮೀನು ಕಳೆದುಕೊಂಡಿರುವ ನಮ್ಮ ತಾಲ್ಲೂಕಿನ ರೈತರು ಸದ್ಯಕ್ಕೆ ಅರಣ್ಯ ಇಲಾಖೆಯ ರಾಷ್ಟ್ರೀಯ ಉದ್ಯಾನವನ, ವನ್ಯಜೀವಿ ಅಭಯಾರಣ್ಯಗಳ ಒತ್ತಡಗಳಿಂದ ನಲುಗುತ್ತಿದ್ದಾರೆ. ಜಮೀನಿನಲ್ಲಿ ಭತ್ತ ಬಿಟ್ಟು ಈ ತಾಲ್ಲೂಕಿನಲ್ಲಿ ಜೀವನ ನಡೆಸಲು ಬೇರೆ ಯಾವುದೇ ಉಪಜೀವನದ ಅವಕಾಶ ಮಾರ್ಗಗಳಿಲ್ಲದ ಸ್ಥಿತಿ ಇದ್ದು, ಇರುವ ಸ್ವಲ್ಪ ಅತೀಕ್ರಮಣ ಜಾಗ ಕಿತ್ತು ಕೊಂಡರೆ ಜೋಯಿಡಾದಲ್ಲಿ ಜನಜೀವನವೇ ಇಲ್ಲವಾಗುತ್ತದೆ. ಕೊನೆಗೆ ಕೂಲಿಗಾಗಿ ವಲಸೆ ಇಲ್ಲ ಆತ್ಮಹತ್ಯೆಯೊಂದೇ ದಾರಿಯಾಗುತ್ತದೆ. ಆದ್ದರಿಂದ ನಮ್ಮ ಕುಣಬಿ ಜನಾಂಗದವರಲ್ಲಿ ಕೆಲ ಬಡವರು ಹೊಟ್ಟೆ ಪಾಡಿಗಾಗಿ ಅರಣ್ಯದಲ್ಲಿ ಕೆಲವು ಕಡೆ, ಅತಿಕ್ರಮಣ ಮಾಡಿ, ಭತ್ತ ಬೆಳೆದು, ಜೀವನ ಮಾಡುತ್ತಿದ್ದ, ಅಂಥವರ ಜಮೀನನ್ನು ಸರ್ಕಾರವು ಕೂಡಲೇ ಸಕ್ರಮಗೊಳಿಸುವುದು. ಮತ್ತು ೧೯೭೮ರ ನಂತರ ಅತೀಕ್ರಮಣ ಮಾಡಿರುವ ರೈತರುಗಳ ಜಮೀನನ್ನು ಖುಲ್ಲಾಗೊಳಿಸಲು ನೀಡಿರುವ ನ್ಯಾಯಲಯದ ಅದೇಶವನ್ನು ಕೂಡಲೇ ಹಿಂತೆಗೆದುಕೊಳ್ಳುವುದು.

ನಮ್ಮ ಸಂಘದ ಈ ಬೇಡಿಕೆಗಳ ಬಗ್ಗೆ ಮಾನ್ಯರು ಆದಷ್ಟು ಬೇಗನೇ ಕ್ರಮಕೈಗೊಂಡು ಅನ್ಯಾಯವಾಗಿರುವ ನಮಗೆ ನ್ಯಾಯ ನೀಡಬೇಕೆಂದು ತಮ್ಮಲ್ಲಿ ಈ ಮೂಲಕ ಸಂಘದ ಕಾರ್ಯಕಾರಿ ಸಮಿತಿಯ ಪರವಾಗಿ ವಿನಂತಿಸುತ್ತೇವೆ.

ಇಂತಿ ತಮ್ಮ ವಿಶ್ವಾಸಿಕರು

 

ಇದೀಗ ಈ ವರದಿಯ ಸಿದ್ಧತೆಗಾಗಿ ಕ್ಷೇತ್ರಕಾರ್ಯ ನಡೆಸುತ್ತಿರುವ ೨೦೦೬ನೇ ವರ್ಷವೂ ಪರಿಸ್ಥಿತಿ ಯಥಾಸ್ಥಿತಿಯಲ್ಲಿ ಮುಂದುವರೆದಿದೆಯೇ ಹೊರತು ಒಂದು ಸಣ್ಣ ಆಶಾದಾಯಕ ಬೆಳವಣೆಗೆಯೂ ಆಗಿಲ್ಲ. ಕುಣಬಿಯರ ಭೂಮಿಯ ಕನಸು ಹಾಗೂ ಅರಣ್ಯದಲ್ಲಿ ಮತ್ತೆ ಸ್ವಚ್ಛಂದವಾಗಿ ಓಡಾಡುವ ಕನಸು ಎರಡೂ ಮಡುಗಟ್ಟಿ ಕುಳಿತಿವೆ. ಅದು ಸ್ಪೋಟವಾಗಿ ಆಸ್ಪೋಟನೆಗೊಂಡರೆ ಆಶ್ಚರ್ಯವಲ್ಲ ಎಂಬ ಸ್ಥಿತಿಯೂ ನಿರ್ಮಾಣಗೊಂಡಿದೆ. ಈ ಸಂಬಂಧದಲ್ಲಿ ಸರ್ಕಾರ ತಕ್ಷಣವೇ ಸ್ಥಳೀಯರನ್ನೊಳಗೊಂಡ ಉನ್ನತ ಸಮಿತಿಯೊಂದನ್ನು ರಚಿಸಿ ನಿಷ್ಪಕ್ಷಪಾತ ಕ್ರಮಕೈಗೊಳ್ಳುವ ಮೂಲಕ ಶೀಘ್ರವಾಗಿ ಕುಣಬಿಯರ ಈ ಸಮಸ್ಯೆಗಳನ್ನು ಬಗೆಹರಿಸುವ ಅಗತ್ಯವಿದೆ. ಈ ಹಿನ್ನೆಲೆಯಲ್ಲಿ ಪ್ರಾತಿನಿಧಿಕವಾಗಿ ಸಿದ್ಧಪಡಿಸಿರುವ ಈ ಕೋಷ್ಠಕಗಳನ್ನು ಗಮನಿಸಬಹುದು :

ಕುಣಬಿಯರ ಜಿಲ್ಲಾ ಮತ್ತು ತಾಲ್ಲೂಕೂವಾರು ಜನಸಂಖ್ಯೆ (ಆಧ್ಯಯನಕ್ಕೊಳಪಡಿಸಿದ ಪ್ರದೇಶದ ಸರಾಸರಿ ಮಾತ್ರ)

ಕ್ರ. ಸಂ. ಜಿಲ್ಲೆ ತಾಲ್ಲೂಕು ಅಧ್ಯಯನ ಕ್ಕೊಳಪಡಿಸಿದ ಕುಟುಂಬಗಳ ಸಂಖ್ಯೆ ಒಟ್ಟು ಜನ ಸಂಖ್ಯೆ ಗಂಡು ಹೆಣ್ಣು
೧. ಉತ್ತರ ಕನ್ನಡ ಜೋಯಿಡಾ ೩೫೨ ೧೯೩೪ ೯೨೬ ೧೦೦೮
೨. ಉತ್ತರ ಕನ್ನಡ ಯಲ್ಲಾಪುರ ೪೩ ೧೭೯ ೯೪ ೮೫
೩. ಉತ್ತರ ಕನ್ನಡ ಅಂಕೋಲ ೨೧೪ ೧೨೪ ೯೦
೪. ಉತ್ತರ ಕನ್ನಡ ಕಾರವಾರ ೧೧ ೬೨ ೩೦

 

ಕುಣಬಿಯರ ತಾಲ್ಲೂಕೂವಾರು ವಸತಿ ಮಾದರಿಗಳು

ಕ್ರ. ಸಂ. ಜಿಲ್ಲೆ ತಾಲ್ಲೂಕು ಅಧ್ಯಯನ ಕ್ಕೊಳಪಡಿಸಿದ ಕುಟುಂಬಗಳ ಸಂಖ್ಯೆ ಗುಡಿಸಲುಗಳ ಸಂಖ್ಯೆ ಹೆಂಚಿನ ಮನೆಗಳು
೧. ಉತ್ತರ ಕನ್ನಡ ಜೋಯಿಡಾ ೩೫೨ ೧೧೦ ೨೩೦
೨. ಉತ್ತರ ಕನ್ನಡ ಯಲ್ಲಾಪುರ ೪೩ ೧೧ ೨೦
೩. ಉತ್ತರ ಕನ್ನಡ ಅಂಕೋಲ ೧೫ ೦೪
೪. ಉತ್ತರ ಕನ್ನಡ ಕಾರವಾರ ೧೧ ೦೩ ೦೮

 

ಕುಣಬಿಯರ ಭೂ ಹಿಡುವಳಿ

ಕ್ರ. ಸಂ. ಜಿಲ್ಲೆ ತಾಲ್ಲೂಕು ಅಧ್ಯಯನಕ್ಕೊಳಪಡಿಸಿದ ಕುಟುಂಬಗಳ ಸಂಖ್ಯೆ ಹೊಂದಿರುವ ಕೃಷಿ ಭೂಮಿ ಎಕರೆಗಳಲ್ಲಿ
ಒಣ ನೀರಾವರಿ ಒಟ್ಟು ಭೂರ ಹಿತರು
೧. ಉತ್ತರ ಕನ್ನಡ ಜೋಯಿಡಾ ೩೫೨ ೧೧೦ ೪೦೩ ೬೭೮ ೧೦೩
೨. ಉತ್ತರ ಕನ್ನಡ ಯಲ್ಲಾಪುರ ೪೩ ೨೪ ೦೩ ೩೭ ೧೩
೩. ಉತ್ತರ ಕನ್ನಡ ಅಂಕೋಲ ೦೯ ೮೮ ೮೮ ೦೩
೪. ಉತ್ತರ ಕನ್ನಡ ಕಾರವಾರ ೧೧ ೧೨ ೦೨ ೧೪ ೦೪
ಒಟ್ಟು     ೪೧೫ ೪೦೮ ೪೦೯ ೮೧೭ ೧೨೩

ಉಲ್ಲೇಖ : ಡಾ. ಆರ್. ಇಂದಿರಾ ಅವರ ‘ಕುಣಬಿಯರು’ ಎಂಬ ಸಮೀಕ್ಷಾ ಗ್ರಂಥ

ಕುಣಬಿಯವರು ಅವಲಂಬಿಸಿರುವ ವೃತ್ತಿಗಳು

ಕ್ರ. ಸಂ. ಜಿಲ್ಲೆ ತಾಲ್ಲೂಕು ಅಧ್ಯಯನಕ್ಕೊಳಪಡಿಸಿದ ಕುಟುಂಬಗಳ ಸಂಖ್ಯೆ ಕೃಷಿ ಕೂಲಿ ಸರ್ಕಾರಿ ನೌಕರಿ ಖಾಸಗಿ
ಗಂಡು ಹೆಣ್ಣು ಒಟ್ಟು ಗಂಡು ಹೆಣ್ಣು ಒಟ್ಟು ಗಂಡು ಹೆಣ್ಣು ಒಟ್ಟು ಗಂಡು ಹೆಣ್ಣು ಒಟ್ಟು
೧. ಉತ್ತರ ಕನ್ನಡ ಜೋಯಿಡಾ ೩೫೨ ೧೨೪ ೧೦ ೧೩೪ ೪೪೫ ೪೬೯ ೯೧೪
೨. ಉತ್ತರ ಕನ್ನಡ ಯಲ್ಲಾಪುರ ೪೩ ೪೮ ೪೮ ೨೦ ೬೧ ೮೧
೩. ಉತ್ತರ ಕನ್ನಡ ಅಂಕೋಲ ೪೧ ೩೨ ೭೩
೪. ಉತ್ತರ ಕನ್ನಡ ಕಾರವಾರ ೧೧ ೨೨ ೨೬ ೪೮
    ಒಟ್ಟು ೪೧೫ ೧೭೨ ೧೦ ೧೮೨ ೫೨೮ ೫೮೮ ೧೧೧೬